ಕನ್ನಡಿಯೊಳಗಿನ ಗಂಟು

ಮೊನ್ನೆ ವಾಟ್ಸಾಪಿನಲ್ಲಿ ಒಂದು ವಿಡಿಯೋ ನೋಡುತ್ತಿದ್ದೆ. ಕಪಿಯೊಂದು ತನ್ನೆದುರಿದ್ದ ಕನ್ನಡಿಯೊಳಗಿದ್ದ ಕಪಿಯಿಂದ ಅದರ `ಕೈಯಲ್ಲಿದ್ದ’ ಆಹಾರ ಕಸಿಯಲು ಹರಸಾಹಸ ಪಡುತ್ತಿದ್ದ ವಿಡಿಯೋ ಅದು. ಆ ಮರ್ಕಟದ ಮತಿಗೇಡಿತನಕ್ಕೆ ಮನಸಾರೆ ನಕ್ಕಿದ್ದೇ ನಕ್ಕಿದ್ದು. ಆದರೆ ನಿಧಾನದಲ್ಲಿ ಯೋಚಿಸಿದಾಗ, ನನಗನ್ನಿಸಿತು – ನಾವೇನು ಅದಕ್ಕಿಂತ ಭಿನ್ನವೇ? ಕಿಂಚಿತ್ತೂ ಇಲ್ಲ. ಅದಕ್ಕೇ ಅಲ್ಲವೇ ಡಾರ್ವಿನ್ ಹೇಳಿದ್ದು – `ಮಂಗನಿಂದ ಮಾನವ’ ಎಂದು! ಕನ್ನಡಿಯೊಳಗಿನ ಗಂಟು, ನಮ್ಮೆದುರೇ ತೋರಿದರೂ, ಎಂದಿಗೂ ಸಿಗದು, ಅದು ಬರೀ ಭ್ರಾಮಕ ಎಂಬ ಪ್ರಾಥಮಿಕ ಅರಿವಿದ್ದರೂ, ನಿಜ ಜೀವನದಲ್ಲಿ ನಾವು ಕನ್ನಡಿಯೊಳಗಿನ ಗಂಟನ್ನು ಪಡೆಯಲು ಹರಸಾಹಸ ಪಡುವ ಮಂದಿಯೇ ಸೈ.

ಚಿಕ್ಕವರಿದ್ದಾಗ ನಾವು, ಮೂಳೆ ಕಚ್ಚಿಕೊಂಡ ನಾಯಿಯೊಂದು, ನದಿಯಲ್ಲಿ ತನ್ನದೇ ಬಿಂಬ ನೋಡಿ, `ಅಲ್ಲಿರುವ’ ನಾಯಿಯ ಮೂಳೆಯ ಮೇಲೆ ದುರಾಸೆಪಟ್ಟು, ಬೊಗಳಿ ನಿರಾಸೆ ಹೊಂದಿದ ಕಥೆಯನ್ನು ಕೇಳಿಯೇ ಇರುತ್ತೇವೆ. ಆದರೆ ಪಾಠ ಕಲಿತೇವೇ? ಖಂಡಿತಾ ಇಲ್ಲ, ಹರಿದ ಪಾಟೀ ಚೀಲದಿಂದ ಬಳಪ ಬೀಳುತ್ತಿದ್ದಂತೆ, ದೊಡ್ಡವರಾದಂತೆ, ನೀತಿಬೋಧಗಳೂ ನಮ್ಮಿಂದ ದೂರವಾಗುತ್ತವೆ. (ಆದರೆ, ಬಾಲ್ಯದಲ್ಲಿ ಕಲಿತ ಕೆಟ್ಟ ಚಟಗಳಾವುವೂ ನಮ್ಮನ್ನು ಬಿಡುವುದಿಲ್ಲ ನೋಡಿ – ಎಂಥ ಜೀವಕ್ಕಂಟಿದ ಗೆಳೆತನ!) ದುರಾಸೆಯಿಂದ, ಕನ್ನಡಿಯೊಳಗಿನ ಗಂಟನ್ನು ಪಡೆದೇ ತೀರಬೇಕೆಂಬ ಜಿದ್ದಿನಿಂದ ಹೋರಾಡುತ್ತೇವೆ ನಾವು.

ಆಧ್ಯಾತ್ಮಿಕವಾಗಿ ಯೋಚಿಸಿದರೂ, ನಮ್ಮ ಜೀವನವೇ ಒಂದು ಕನ್ನಡಿಯೊಳಗಿನ ಗಂಟು. ನಮ್ಮ ಭಾಗ್ಯ (ಕ್ಷಮಿಸಿ, ಸಿದ್ರಾಮಣ್ಣನ ಭಾಗ್ಯಗಳ ಬಗ್ಗೆ ಇಲ್ಲಿ ಮಾತಾಡುತ್ತಿಲ್ಲ!) ನಮ್ಮ ಮುಂದಿದ್ದರೂ, ನಮ್ಮ ಕರ್ಮಗಳಿಂದ ಅವು ನಮಗೆ ಕನ್ನಡಿಯ ಗಂಟಾಗುತ್ತವೆ. ದೈವ ಸಾಕ್ಷಾತ್ಕಾರದಲ್ಲಿ ನಮ್ಮ ನಿಜಭಕ್ತಿ ಹಾಗೂ ತೋರಿಕೆ ಭಕ್ತಿಗಳ ವ್ಯತ್ಯಾಸ ತಿಳಿಸಲು ಪುರಂದರದಾಸರು ಇದನ್ನೇ ಉಪಮೆಯಾಗಿ ಬಳಸಿದ್ದಾರೆ –

`ಕನ್ನಡಿಯೊಳಗಿನ ಗಂಟು ಕಂಡು ಕಳ್ಳ
ಕನ್ನವಿಕ್ಕುವನ ವಶವಹುದೇ?’

ಆದರೆ, ಈ ಕನ್ನಡಿಯ ಗಂಟೇ ನಮ್ಮ ಜೀವನದ ಚಾಲಕ ಶಕ್ತಿ ಎನ್ನುವುದೂ ಅಷ್ಟೇ ಸತ್ಯ. ಕನ್ನಡಿಯ ಗಂಟನ್ನು ನೋಡುತ್ತ, ಅದನ್ನು ಪಡೆಯಲು ಓಡುತ್ತ, ಸವೆಸುವ ದಾರಿಯೇ ನಮ್ಮ ಜೀವನ. ನಾಯಿಯ ಬಾಲಕ್ಕೊಂದು ಕೋಲು ಕಟ್ಟಿ ಅದರ ಮುಂತುದಿಗೆ ಮೂಳೆಯನ್ನು ಕಟ್ಟಿ ನೇತು ಬಿಟ್ಟಲ್ಲಿ, ಆ ನಾಯಿಯು ತನ್ನ ಕಣ್ಣ ಮುಂದೆಯೇ ಇರುವ ಮೂಳೆಯನ್ನು ಪಡೆಯಲು ಓಡುತ್ತದೆ. ಸಹಜವಾಗಿ ಮೂಳೆಯೂ ಅಷ್ಟೇ ಮುಂದೆ `ಹೋಗು’ತ್ತದೆ! ಹೀಗೆ ಆ ನಾಯಿ ಮೂಳೆಗೋಸ್ಕರ, ಓಡುತ್ತಲೇ ಇರುತ್ತದೆ – Duracel ನ ಜಾಹೀರಾತಿನಂತೆ – ಓಡುತ್ತಲೇ ಇರುವುದು, ನಿಲ್ಲದು ! (ನನ್ನನ್ನು ಕ್ಷಮಿಸಿ, ಮಾನವನನ್ನು ನಾಯಿಯೊಂದಿಗೆ ಹೋಲಿಸಿದ್ದಕ್ಕಾಗಿ ಮತ್ತು ತನ್ಮೂಲಕ ನಾಯಿಯ ಮರ್ಯಾದೆಗೆ ಧಕ್ಕೆ ತಂದಿದ್ದಕ್ಕಾಗಿ!!) ನಾವೂ ಹಣ, ಅಧಿಕಾರ, ಬಡ್ತಿ ಇತ್ಯಾದಿ ಕನ್ನಡಿಯೊಳಗಿನ ಗಂಟಿಗಾಗಿ ನಮ್ಮಿಡೀ ಜೀವನವನ್ನು ಸವೆಸುತ್ತೇವೆ – ಅದೇ ಜೀವನವಾಗಿ ಬಿಡುತ್ತದೆ. ಈ ಮತಿಗೆಟ್ಟ ಓಟದಲ್ಲಿ ಬುದ್ಧಿಪೂರ್ವಕವಾಗಿ ಓಡಿದ್ದೇ ಆದಲ್ಲಿ, ಜೀವನದಲ್ಲಿ ಸಾರ್ಥಕ್ಯ ಸಿಕ್ಕೀತು.

ನಮ್ಮ ಜೀವನವೆಂಬ ಪ್ರಯಾಣದಲ್ಲಿ ನಾವು ಬೇಕೆಂದು ಬಯಸುವ ಆದರೆ ಸಾಮಾನ್ಯತಃ ನಮಗೆ ಸಿಗದ `ಹಣ್ಣು’ಗಳನ್ನು ನಾವು ಕನ್ನಡಿಯೊಳಗಿನ ಗಂಟು ಎಂದೆನ್ನಬಹುದು. (ಆದರೆ ನಾವು ಬಯಸದ, ಬೇಡದ ಹಣ್ಣುಗಳು ಹಾರಿ ಹಾರಿ ಬಂದು ನಮ್ಮ ತೆಕ್ಕೆಯಲ್ಲಿ ಬೀಳುತ್ತವೆ!ಆ ವಿಷಯ ಬೇರೆ) ಉದಾಹರಣೆಗೆ, ಸುಖದಾಂಪತ್ಯವನ್ನೇ ತೆಗೆದುಕೊಳ್ಳಿ. ಜಗದಲ್ಲಿನ ಎಲ್ಲ ವಿವಾಹಿತರನ್ನು ಒಟ್ಟು ಸೇರಿಸಿ, `ಸುಖದಾಂಪತ್ಯ’ವೆನ್ನುವುದು ‘ಲಭ್ಯವೋ ಇಲ್ಲಾ ಕನ್ನಡಿಯೊಳಗಿನ ಗಂಟೋ?’ ಎಂಬುದರ ಬಗ್ಗೆ Opinion Poll ನಡೆಸಿದಲ್ಲಿ – ದೇವರಾಣೆಯಾಗೂ ಹೇಳುತ್ತೇನೆ – `ಲಭ್ಯ’ ಅನ್ನುವ ಅಭಿಪ್ರಾಯಕ್ಕೆ ಒಂದು ಓಟೂ ಬೀಳದು! ಎಲ್ಲರ ಅನುಭವದ ಪ್ರಕಾರ ಸುಖದಾಂಪತ್ಯವೆನ್ನುವುದು ಪುಣ್ಯವಂತರಿಗಷ್ಟೇ ಲಭ್ಯ. ದುರದೃಷ್ಟವಶಾತ್, ಅಂಥ ಪುಣ್ಯಾತ್ಮರು ಇದುವರೆಗೂ ಹುಟ್ಟಿಲ್ಲ ! ಹಾಗಾಗಿ, ಸುಖ ದಾಂಪತ್ಯವೆನ್ನುವುದು ಕನ್ನಡಿಯೊಳಗಿನ ಗಂಟೇ ಸೈ. ಒಬ್ಬ ಗ್ರಂಥಾಲಯಕ್ಕೆ ಹೋಗಿ ಕೇಳಿದನಂತೆ – `ಇಲ್ಲಿ “ಸುಖಸಂಸಾರಕ್ಕೆ 12 ಸೂತ್ರಗಳು” ಅನ್ನುವ ಪುಸ್ತಕ ಎಲ್ಲಿದೆ?’ ಅಂತ. ಲೈಬ್ರರಿಯವನು ಹೇಳಿದನಂತೆ – ‘ನೋಡಿ, ಅಲ್ಲಿ `ಹಾಸ್ಯ ಪುಸ್ತಕಗಳ’ ವಿಭಾಗದಲ್ಲಿ ಇಟ್ಟಿದ್ದೇವೆ!’. ಎಷ್ಟಂದ್ರೂ ಅನುಭವಸ್ಥನಲ್ಲವೇ?

ಹೀಗೆಯೇ, ಒಳ್ಳೆಯ ಹೆಂಡತಿ/ ಒಳ್ಳೆಯ ಗಂಡ ಅನ್ನುವ ವಿಚಾರ ಕೈಗೆತ್ತಿಕೊಂಡರೆ, ಮೊದಲಿಗೆ ನಮಗೆ `ಇದೇನಿದು ವಿರೋಧಾಭಾಸ / Oximorn ಅನ್ನಿಸದೇ ಇರದು! ಇದರಲ್ಲಿ ನಮ್ಮ ತಪ್ಪೇನಿಲ್ಲ ಬಿಡಿ. ನಂನಮ್ಮ ಅನುಭವವಷ್ಟೇ! ಡೈನೋಸಾರಿನಂತೆ ಇದೂ ಒಂದು extinct spicies. ವಿವಾಹಿತರಲ್ಲಿ ಯಾರನ್ನಾದರೂ ಕೇಳಿ, `ನಿನ್ನ ಗಂಡ/ಹೆಂಡತಿ ಒಳ್ಳೆಯವನೇ/ಳೇ, ಅನುರೂಪನೇ/ಳೇ?’. ಅವರಿಂದ ಬರುವ ನಿಟ್ಟುಸಿರೇ ನಿಮ್ಮ ಪ್ರಶ್ನೆಗೆ ಉತ್ತರವನ್ನೀಯುತ್ತದೆ. ಅಷ್ಟೇಕೆ, ಈಗಿನ ಒಪ್ಪಿತ ಸಂಗತಿಯಾಗಿರುವ live-in relationship ನಲ್ಲಿಯೂ ದೀರ್ಘಾವಧಿಯಲ್ಲಿ ಇದೇ ಕಥೆ! (`ಕಾಮ’ಕ್ಕೆ ಕಣ್ಣಿಲ್ಲ ಅಂತ, `full stop’ ಹಾಕೋದು ಬೇಡವೇ?!!) ಒಟ್ಟಿನಲ್ಲಿ ಅನುರೂಪ ಸಂಗಾತಿ ಕನ್ನಡಿಯೊಳಗಿನ ಗಂಟು ಎಂಬುದು ನನ್ನ ಅನುಭವಾಮೃತದ ಖಚಿತ ಅಭಿಪ್ರಾಯ. ನೀವೇನಂತೀರಿ?

ನನ್ನ ಮೇಲೆ ನಂಬಿಕೆಯಿಲ್ಲದಿದ್ದಲ್ಲಿ, ಪ್ರಾಯದಲ್ಲೇ ಇರುವವರನ್ನು ಕೇಳಿ. ತಾನು ಅಷ್ಟಾವಕ್ರನ ಅಕ್ಷರಶಃ ಕುಲಸ್ಥನಾದರೂ, ಗಂಡಿಗೆ ತನ್ನ ಸಂಗಾತಿಯಾಗಿ ಕತ್ರೀನಾ ಕೈಫೇ ಬೇಕು! ಶೂರ್ಪನಖಿಯ ಅಪರಾವತಾರವಾದರೂ, ಹೆಣ್ಣಿಗೆ ಶಾರುಖ್ ಖಾನೇ ಬೇಕು! ಬೇಕು ಸರಿ, ಆದರೆ ಸಿಕ್ಕಾರೆಯೇ? ಇದನ್ನೇ ನಾವು ಹೇಳುವುದು ಕನ್ನಡಿಯೊಳಗಿನ ಗಂಟೆಂದು. ನಂತರ ಅವರಿಗೆ ನಿಜ ಜೀವನದಲ್ಲಿ, ಚಂದ್ರನ ಬದಲು ಗ್ರಹಣಕ್ಕೊಳಗಾದ ಚಂದ್ರ ಹಾಗೂ ಜೀವನದಲ್ಲಿ ವೈರಾಗ್ಯ ತರಿಸೋ ಪಡಪೋಶಿಗಳು ಸಿಗುತ್ತಾರೆ, ಆ ವಿಷಯ ಬೇರೆ ಬಿಡಿ!

ಕನ್ನಡಿಯ ಗಂಟಿಗೆ ಇನ್ನೊಂದು ಉದಾಹರಣೆ – ಒಳ್ಳೆಯ ಬಾಸು ! ಇಡೀ ಭೂಮಂಡಲದಲ್ಲಿ, ಕಛೇರಿಯಲ್ಲಿ ಅಥವಾ ಕಛೇರಿ ಮಾದರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದುವರೆಗೂ ಒಳ್ಳೆಯ ಬಾಸು ಸಿಕ್ಕಿಲ್ಲ ಎನ್ನುವುದು ದಾಖಲೆಯಾಗಿಯೇ ಉಳಿದಿದೆ. ಹಾಗಾಗಿಯೇ ಇದೂ ಕನ್ನಡಿಯೊಳಗಿನ ಗಂಟು! ಅಬ್ಬಾ ಅಂತೂ ಮುಗೀತು ಅಂತ ನೀವು ನಿಮ್ಮ ಸೀಟು ಬಿಟ್ಟೇಳುವಷ್ಟರಲ್ಲಿ – ಅದಕ್ಕಾಗೇ ಕಾಯುತ್ತಿದ್ದನೇನೋ ಎಂಬಂತೆ – ನಿಮ್ಮ ಬಾಸ್ ಪ್ರತ್ಯಕ್ಷವಾಗಿ, ದನಕ್ಕೆ ರೈತ ಮೇವು ಹಾಕಿದಂತೆ – ನಿಮ್ಮ ಮುಂದೆ ಒಂದಿಷ್ಟು ಫೈಲು ಹಾಕಿ “ಅರ್ಜೆಂಟ್ ಇರುವುದರಿಂದ ಇವತ್ತೇ ಮುಗಿಸಬೇಕು” ಅಂತ ಹೇಳಿದರೆ, ನಿಮಗೆ ಯಾವ ಭಾವನೆ ಮೂಡೀತು? ನನಗಂತೂ, ಜೈಲಿಗೆ ಹೋದರೂ ಅಡ್ಡಿಯಿಲ್ಲ, ಏಕೆ 47 ತೆಗೆದುಕೊಂಡು, 47 ಗುಂಡುಗಳಿಂದ ಬಾಸ್ನ ದೇಹವನ್ನು ಛಿದ್ರಛಿದ್ರಗೊಳಿಸಬೇಕೆಂಬ ಅದಮ್ಯ ಬಯಕೆ ಮೂಡುತ್ತದೆ. ಆದರೇನು ಮಾಡಲಾದೀತು, ಅದು ಕೂಡ `ಕನ್ನಡಿಯೊಳಗಿನ ಗಂಟು’!

ಕನ್ನಡಿಯೊಳಗಿನ ಗಂಟಿನಷ್ಟೇ ಅಲಭ್ಯವಾದ ಮತ್ತೊಂದು ವಿಚಾರವೆಂದರೆ, “ನಿಷ್ಠಾವಂತ ರಾಜಕಾರಣಿ”. ರಾಜಕಾರಣಿ ಎಂಬ ಹೆಸರೆತ್ತಿದರೇ ವಾಕರಿಕೆ ಬರುವ ಈ ಸಂದರ್ಭದಲ್ಲಿ, ಅವರು ಹಾಗೆ ಆಗಲು ನಾವೂ ಸಮವಾಗಿ ಕಾರಣರು ಎನ್ನುವುದನ್ನು ಜಾಣತನದಿಂದ ಮರೆತುಬಿಡುತ್ತೇವೆ! ಈ ಕಾರಣಕ್ಕಾಗಿಯೇ ಚರ್ಚಿಲ್ನ ಈ ಮಾತು ನಮಗೆ ಅಪಥ್ಯವಾದರೂ ಸತ್ಯ ಎನಿಸಿಬಿಡುತ್ತದೆ. ಚರ್ಚಿಲ್ ಅಂದಿದ್ದ – “Indians are not fit to rule. Power will go to the hands of rascals, rogues and freebooters’ ಹಾಗಾಗಿ, ಒಳ್ಳೆಯ ರಾಜಕಾರಣಿ, ಭಾರತೀಯರ ಪಾಲಿಗೆ ಕನ್ನಡಿಯೊಳಗಿನ ಗಂಟು! ಅಲಭ್ಯ!!

ರಾಜಕಾರಣದ ಈಗಿನ ವಿದ್ಯಮಾನದಲ್ಲಿ, ನಮ್ಮ ಮಾನ್ಯ ಮುಖ್ಯಮಂತ್ರಿಯವರ `ಸಾಲಮನ್ನಾ’ ಘೋಷಣೆಯೂ ಕೂಡ ರೈತರಿಗೆ ಇದುವರೆಗೂ ‘ಕನ್ನಡಿಯೊಳಗಿನ ಗಂಟಾ’ಗೇ ಉಳಿದಿದೆ. `ಸಾಲಮನ್ನಾ’ ಘೋಷಣೆಯಾಗಿ 3 ತಿಂಗಳಾದರೂ, ಅದರ ಫಲ ಇನ್ನೂ ರೈತರ ಕೈ ಸೇರಿಲ್ಲ. ರಾಜಕಾರಣಿಗಳ ಎಂದಿನ ಆಶ್ವಾಸನೆಗಳಂತೆ, ಈ `ಸಾಲಮನ್ನಾ’ ಕೂಡ ರೈತರಿಗೆ ಕನ್ನಡಿಯ ಗಂಟಾಗದಿರಲಿ ಅಂತ ನನ್ನ ಆಶಯ.

ಕನ್ನಡಿಯ ಗಂಟು ಅಲಭ್ಯವಾದರೂ, ಅದನ್ನು ಉಪಯೋಗಿಸಿಕೊಳ್ಳುವ ವರ್ಗವೊಂದಿದೆಯೆಂದರೆ ನಿಮಗೆ ಅಚ್ಚರಿಯಾಗುತ್ತದಷ್ಟೇ? ಇವರೇ ನಮ್ಮ ಸಾಹಿತಿಗಳು. ಹೇಗಂತೀರೋ? ಸಿಗಲಾರದ ಕನ್ನಡಿಯ ಗಂಟು, ಅಕಸ್ಮಾತ್ ಸಿಕ್ಕೇ ಬಿಟ್ಟರೆ ಏನಾದೀತೆಂಬ ಭರ್ಜರಿ ಕಲ್ಪನೆಯೇ ಸಾಹಿತ್ಯದ ಮೂಲಬೀಜ. ಈ ಬೀಜವನ್ನು ಸಾಹಿತಿಗಳು ತಮ್ಮ ಅನುಭವದ ಮೂಸೆಯಲ್ಲಿ ಎರಕ ಹೊಯ್ದು ಸಾಹಿತ್ಯ ಕೃಷಿ ಮಾಡುತ್ತಾರೆ. ಕಲ್ಪನೆಯೆಂಬ ಕುದುರೆಯ ಬೆನ್ನೇರಿ ಹೊರಟ ಶೂರರಿವರು. ಸಾಹಿತಿಗಳು, ಜೀವನ ಬರೀ ಕನ್ನಡಿಯೊಳಗಿನ ಗಂಟು ಎಂದುಕೊಂಡು ಜೋಲು ಮೋರೆ ಹಾಕಿ ಕುಳಿತಿದ್ದರೆ, ನಮಗೆ ಕಾಳಿದಾಸ, ಭಾಸ, ಬಾಣಭಟ್ಟ, ಶೇಕ್ಸ್ಪಿಯರ್, ಮಾಸ್ತಿ, ಕಾರಂತರು, ಮತ್ತಿತರ ದಿಗ್ಗಜರು ದೊರಕುತ್ತಿರಲಿಲ್ಲ. ಅಭಾವದಲ್ಲೂ ಭಾವವನ್ನು ಕಾಣುವ ಚೈತನ್ಯ ಅವರಲ್ಲಿ ಇದ್ದುದಕ್ಕೇ ಅವರು ಮಹಾನ್ ಸಾಹಿತಿಗಳಾದರು. ಇಲ್ಲವಾದಲ್ಲಿ, ನಾವಿಲ್ಲವೇ?! ಕನ್ನಡಿಯ ಗಂಟು ಎಂದಿಗೂ ಅಲಭ್ಯವೆಂದು ಚಿಂತಿಸದೇ ಸಕಾರಾತ್ಮಕವಾಗಿ ಯೋಚಿಸಿ ಇವರು ಮೇರು ಮನುಜರಾದರು. ನಾವೂ ಕನ್ನಡಿಯ ಗಂಟಿನ ಬಗ್ಗೆ ಸಕಾರಾತ್ಮಕವಾಗಿದ್ದಲ್ಲಿ, ನಮಗೇ ಲಾಭವಿದೆ.

ಜೀವನದಲ್ಲಿ ನಮಗೆ `ಸಿಗುವ’ ಕನ್ನಡಿಯೊಳಗಿನ ಗಂಟುಗಳ ಬಗ್ಗೆ ನಾವು ಸಕಾರಾತ್ಮಕವಾಗಿರದಿದ್ದಲ್ಲಿ, ಅದು ನಮ್ಮ ಅರಿಷಡ್ವರ್ಗಗಳ ಪೋಷಣೆಗೆ ಕಾರಣವಾಗುತ್ತದೆ. ಒಬ್ಬನನ್ನು ತುಳಿದು, ಮೇಲೇರುವ ಹುಚ್ಚು ರೇಸಿಗೆ ಬಲಿ ಬೀಳುತ್ತೇವೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದರಿಯದೇ, ಅವನೆತ್ತರಕ್ಕೇರುವ ಧಾವಂತ. ಕೈಗೆ ಸಿಕ್ಕಿದ್ದಕ್ಕೆ ತೃಪ್ತಿಪಡದೇ, ಕೈಗೆಟುಕದ ಗಂಟಿನಾಶೆಯಲ್ಲಿ, ಅಧಿಕಾರದ ಏಣಿಯಲ್ಲಿ ಮತ್ತಷ್ಟು ಏರಲು ಪ್ರಯತ್ನಿಸುತ್ತಲೇ ಇರುತ್ತಾರೆ. ಇದಕ್ಕೆ ಕೊನೆಯೇ ಇರದು. ನನ್ನ ಜಮಾನದ ಹಿಂದಿಯ ಚಲನಚಿತ್ರವಾದ `ದೋ ಬೀಘಾ ಜಮೀನ್’ನಲ್ಲಿ ನಾಯಕ ಬಾಲರಾಜ್ ಸಾಹ್ನಿ ತನ್ನ ದುರಾಸೆಗೆ, ತನ್ನ ಪ್ರಿಯವಾದ ಕುದುರೆಯನ್ನು ಕಳೆದುಕೊಳ್ಳುತ್ತಾನೆ. ನಾವೂ ಅಷ್ಟೇ ಅಲ್ಲವೇ? ಬಡ್ತಿಗಾಗಿ ದುಡಿಯುತ್ತ `ಇಂದಿನ’ ಜೀವನವನ್ನು ಕಳೆದುಕೊಳ್ಳುತ್ತಿದ್ದೇವೆ! ನಮಗೆ ಸುಖಜೀವನ / ತೃಪ್ತ ಜೀವನವೇ ಕನ್ನಡಿಯ ಗಂಟಾಗಿ ಬಿಟ್ಟಿದೆ! ಅದಕ್ಕೇ ಸುಭಾಷಿತವೊಂದು ಹೇಳಿದ್ದು – “ಮನಸಿ ತು ಪರಿತುಷ್ಟೇ | ಕೋsರ್ಥವಾನ್ ಕೋ ದರಿದ್ರಃ||” ತೃಪ್ತಿಯೊಂದಿದ್ದಲ್ಲಿ ಬಡತನದಲ್ಲಿಯೂ ಸಾರ್ಥಕ ಜೀವನ ಸಾಧ್ಯ ಅಂತ.

ನಮ್ಮೀ ಮನಸ್ಥಿತಿಯನ್ನೇ ಗೋಪಾಲಕೃಷ್ಣ ಅಡಿಗರು ತಮ್ಮ ಪ್ರಸಿದ್ಧ ಗೀತೆಯಾದ `ಯಾವ ಮೋಹನ ಮುರಲಿ ಕರೆಯಿತು’ ಪದ್ಯದಲ್ಲಿ ತೋರಿದ್ದಾರೆ.
`ಇರುವುದೆಲ್ಲವ ಬಿಟ್ಟು |
ಇರದುದರೆಡೆಗೆ ತುಡಿವುದೇ ಜೀವನ||’

ಕನ್ನಡಿಯೊಳಗಿನ ಗಂಟಿನ ಆಶೆಯಲ್ಲಿ ನಮ್ಮಲ್ಲಿರುವ ಗಂಟನ್ನೂ ಅನುಭವಿಸದೇ ಜೀವನವನ್ನು ನಾವು ವ್ಯರ್ಥಗೊಳಿಸುತ್ತಿದ್ದೇವೆ. A bird in hand is better than two in the bush. ಸಂತೃಪ್ತ ಭಾವವಿದ್ದಲ್ಲಿ ಕನ್ನಡಿಯ ಗಂಟನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಲು ಸಾಧ್ಯ.

ಆದರೆ, ಇದು ಹೇಳಲು ಸುಲಭ. ನನ್ನಂಥ ಹುಲುಮಾನವಿಗೆ ಆಚರಣೆಗೆ ಕಷ್ಟ. ಬ್ಯಾಂಕ್ ನೌಕರರಾದ ನಮಗೆ `ವೇತನ ಪರಿಷ್ಕರಣೆ’ ಎಂಬುದು `ಕನ್ನಡಿಯೊಳಗಿನ ಗಂಟಾ’ಗಿ ಪರಿಣಮಿಸಿದೆ! ನಾವೆಲ್ಲರೂ ಒಂದು ವರ್ಷದಿಂದ ಇದಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದೇವೆ. ಏನೇ ಹೇಳಿ, ನಮ್ಮ ಕಷ್ಟ ನಮಗೆ!! ಏನಂತೀರಾ?!

————–

Advertisements

ಕನ್ನಡದ ಉಳಿವು – ಕನ್ನಡ ಚಳುವಳಿ

“ಕನ್ನಡದ ಉಳಿವಿಗೆ ಕನ್ನಡ ಚಳುವಳಿಯು ಹೊಸದಾಗಿ ಆವಿಷ್ಕರಿಸಿಕೊಳ್ಳಬೇಕಾಗಿದೆ” –

ನಿಜ, ಇದು ಇಂದಿನ ಅತ್ಯಗತ್ಯ. ಇದರ ಅಗತ್ಯತೆ ಬಗ್ಗೆ ಹೇಳಲು ಕಾರಣಗಳಿವೆ –

ಸುಮಾರು ಅರ್ಧವರ್ಷದ ಹಿಂದೆ `ನಮ್ಮ ಮೆಟ್ರೋ’- ನಲ್ಲಿ ಹಿಂದೀ ಅತಿಕ್ರಮಣದ ಬಗ್ಗೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯಿತು. ಕನ್ನಡ ಚಳುವಳಿಯ ಉತ್ತುಂಗವಿದೆಂದು ಜನರು ಭಾವಿಸಲೆಂದು ಕ.ರ.ವೇ. ಮತ್ತಿತರ ಕನ್ನಡ ಪರ ಚಳುವಳಿಗಾರರು ಈ ಸುಸಂದರ್ಭವನ್ನು ಸರಿಯಾಗಿಯೇ ಬಳಸಿಕೊಂಡರು. ಇದರಲ್ಲಿ ರಾಜಕೀಯ ಬೆರತಿದ್ದೇ ಜಾಸ್ತಿ ಎನ್ನುವುದು ಹಲವರ ಅಂಬೋಣ. ಅದೇನೇ ಇರಲಿ, ಮುಖ್ಯ ಪ್ರಶ್ನೆ ಅದಲ್ಲ. ಮುಖ್ಯ ಪ್ರಶ್ನೆ, ಹಿಂದಿಯಿಂದ ಕನ್ನಡದ ಮೇಲೆ ನಿಜವಾಗಿಯೂ ಆಕ್ರಮಣವಾಗಿತ್ತೇ ಅನ್ನುವುದು. ನಮ್ಮ ಮೆಟ್ರೋವಿನಲ್ಲಿ ಕನ್ನಡವೇ ಪ್ರಥಮ ಸ್ಥಾನದಲ್ಲಿದ್ದು ನಂತರ ಹಿಂದಿ ಹಾಗೂ ಇಂಗ್ಲೀಷ್ ಇದೆ. ಇದನ್ನು ಕನ್ನಡಕ್ಕಾದ ಅವಮಾನವೆಂದು ಪರಿಭಾವಿಸಬೇಕೇ? ನಿಜ, ಕನ್ನಡಕ್ಕೆ ಸ್ಥಾನವಿಲ್ಲದೇ ಇದ್ದಲ್ಲಿ ಹೋರಾಟ ಮಾಡಿದರೆ ಅರ್ಥವಿರುತ್ತಿತ್ತು. ಆದರೀಗ? ಈ ಹೋರಾಟಕ್ಕೆ ಅರ್ಥವಿತ್ತೇ ಎಂಬುದೇ ನನ್ನ ಮುಂದೆ ಧುತ್ತೆಂದು ಬಂದು ನಿಂತ ಪ್ರಶ್ನೆ. ಆಗಲೇ ನನಗನಿಸಿದ್ದು, ನಮ್ಮ ಕನ್ನಡ ಚಳುವಳಿ ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿದೆಯೇ? ಇಂಥಹ ರೂಪುರೇಷೆಗಳನ್ನು ಇಟ್ಟುಕೊಂಡು ನಾವು ಕನ್ನಡ ಚಳುವಳಿ ಮಾಡಿದರೆ, ನಾವು ನಿಜವಾಗಿಯೂ ಕನ್ನಡ ಉಳಿಸುತ್ತೀವಾ? ನನ್ನಭಿಪ್ರಾಯದಲ್ಲಂತೂ ಖಂಡಿತಾ ಇಲ್ಲ.

ಈ ಹಿನ್ನೆಲೆಯಲ್ಲಿ ಯೋಚಿಸಿದಾಗ, ನಮ್ಮ ಕನ್ನಡ ಚಳುವಳಿಗೆ ಹೊಸ ಕಾಯಕಲ್ಪ, ರೂಪುರೇಷೆ ಹಾಗೂ ಸ್ಪಷ್ಟ ದಿಕ್ಕುಗಳ ಆವಶ್ಯಕತೆಯಿದೆಯೆಂಬ ತೀರ್ಮಾನಕ್ಕೆ ನಾವು ಬರಬಹುದು. ನಮ್ಮ ಚಳುವಳಿ ಹೊಸದಾಗಿ ಹಾಗೂ ಅರ್ಥವತ್ತಾಗಿ ಬದಲಾಗಬೇಕಿದೆ – ಚಳುವಳಿಯನ್ನು ಹೊಸದಾಗಿ ಆವಿಷ್ಕರಿಸಿಕೊಳ್ಳಬೇಕಾಗಿದೆ.

ಇದೇ ನಿಟ್ಟಿನಲ್ಲಿ, ನನಗೆ ಹೇಳಲು ಬೇಸರವಾಗುವ, ಆದರೆ ಹೇಳಲೇಬೇಕಾದ ಇನ್ನೊಂದು ಸಂಗತಿಯೆಂದರೆ ನಮ್ಮ ಕನ್ನಡ ಚಳುವಳಿಯ ನಾಯಕತ್ವ. ಕನ್ನಡ ಚಳುವಳಿಯ ಆರಂಭದಲ್ಲಿ ನಮಗೆ ದೊರಕಿದ್ದು ಮ.ರಾಮಮೂರ್ತಿ, ಅ.ನ.ಕೃ. ಅಂಥವರ ನಾಯಕತ್ವ. ಆದರಿಂದು, ಕನ್ನಡ ಚಳುವಳಿಯು ಹೊಳಪು ಕಳೆದುಕೊಂಡು, ಕ.ರ.ವೇ. ಹಾಗೂ ಇತರ ವಿವಿಧ ಬಣಗಳಲ್ಲಿ ಕಳೆದುಹೋಗಿದೆ. ಕನ್ನಡ ಚಳುವಳಿಯಲ್ಲಿ ರಾಜಕೀಯವೆಂಬ ನಿಧಾನವಿಷ (ಪ್ರಧಾನ ವಿಷ?!) ಬೆರೆತು, ಕೆಲವೆಡೆ ಅವು ಹಫ್ತಾ ವಸೂಲಿ ಸಂಘಟನೆಗಳಾಗಿಬಿಟ್ಟಿವೆ – ಮುಂಬೈನಲ್ಲಿ ಶಿವಸೇನೆ ಆದಂತೆ. ನಮ್ಮ ಕನ್ನಡ ಚಳುವಳಿ ದಾರಿ ತಪ್ಪಿದ್ದೇ ಇಲ್ಲಿ.

ಇಷ್ಟರ ಜೊತೆಗೆ, ಈ ಸಂಘಟನೆಗಳ `ಉಟ್ಟು’ `ಓರಾಟಗಾರ’ ರಿಂದ ಕನ್ನಡವನ್ನು ರಕ್ಷಿಸುವುದು ಇಂದಿನ ಜರೂರಿನ ತುರ್ತು! ಸರಿಯಾದ ಉಚ್ಚಾರ, ವ್ಯಾಕರಣಗಳನ್ನು ಬೀದಿಪಾಲು ಮಾಡಿ ನಾವು ಕನ್ನಡವನ್ನು ಉಳಿಸಲು ಸಾಧ್ಯವೇ? ಕನ್ನಡವನ್ನು ಹೇಗೆ ಬೇಕೆಂದರೆ ಹಾಗೆ ಆಡುತ್ತೇವೆ ಎಂದರೆ ಅದನ್ನು ಕನ್ನಡವೆಂದೇಕೆ ತಾನೇ ಕರೆಯಬೇಕು? ಅದನ್ನೂ ಒಂದು ಭಾಷೆ ಎನ್ನಲು ಬರುತ್ತದೆಯೇ? ಕನ್ನಡ ಭಾಷೆಯು `ಸುಲಿದ ಬಾಳೆಹಣ್ಣಿನಂದದಿ’ ಎಂದದ್ದನ್ನು ವಿರೋಧಿಸಿ, ಕನ್ನಡ ಭಾಷೆಯ `ಸರಳೀಕರಣ(?)’ಕ್ಕಾಗಿ ವಿದ್ವಾನ್ (!) ಶಂಕರಭಟ್ ಮತ್ತವರ ಹಿಂಬಾಲಕರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ! ವ್ಯಾಕರಣ, ಅ-ಕಾರ ಹ-ಕಾರ, ಶ-ಕಾರ ಸ-ಕಾರಗಳ ಭಾರದಿಂದ ಕನ್ನಡ ಭಾಷೆಯನ್ನು ಮುಕ್ತಗೊಳಿಸುವುದೇ ಈ ಆಧುನಿಕ ಶಕಾರನ ಜೀವನ ಧ್ಯೇಯ. ಈ `ಶಕಾರ’, ಮೃಚ್ಛಕಟಿಕದ ವಿಲನ್ ಅನ್ನುವುದು ಕೇವಲ ಕಾಕತಾಳೀಯ (?!). ಶ್ರೀ ಶಂಕರ ಭಟ್ರವರು, ಭಟ್ ಅಂತ ಉಚ್ಚರಿಸಲು ‘ಸ್ಯಾನೇ ತ್ರಾಸಾಗ್ತೈತಿ’ ಅಂತ ಬಟ್ ಅಂತ್ಲೇ ಇಟ್ಕೊಂಡಿದಾರೆ. But, ಬಟ್ ಅನ್ನೋದು ಇಂಗ್ಲೀಷಿನಲ್ಲಿ ಪೃಷ್ಠವೆಂಬುದಕ್ಕೆ ಆಡುಪದವೆಂದರೆ, ಆಡಿಕೊಂಡಂತಾಗದಷ್ಟೇ?! ಕನ್ನಡದ ಉದ್ಧಾರ ಕಾರ್ಯದ ಕಾರಣವಾಗಿ, ಇವರು ಜಾತೀಯತೆ ಎಂಬ ವಿಷವನ್ನು ಬಿತ್ತಿದ್ದರಾದರೂ, ಇವರ ಸಂಕುಚಿತ ಮಹಾಪಾತಕಕ್ಕೆ ಸಮಗ್ರ ಕನ್ನಡಿಗರು ಬಲಿ ಬಿದ್ದಿಲ್ಲವೆಂಬುದೇ ನನಗೆ ಸಂತಸ ತರುವ ವಿಷಯ.

ಇಂತಿಪ್ಪ ಸಂದರ್ಭದಲ್ಲಿ, ಕನ್ನಡ ಹಾಗೂ ಕನ್ನಡತನವನ್ನು ಉಳಿಸಲು ಕನ್ನಡ ಚಳುವಳಿಯು ಯಾವ ದಿಕ್ಕಿನಲ್ಲಿ ಸಾಗಬೇಕು, ಏನು ಮಾಡಬೇಕು, ಚಳುವಳಿಯ ರೂಪುರೇಷೆ ಹೇಗಿರಬೇಕು ಅನ್ನುವುದು ಬಹುಮುಖ್ಯವಾಗುತ್ತದೆ. ನಮ್ಮ ಕನ್ನಡ ಚಳುವಳಿಯು ಈಗಿರುವ `ಉಡುಗೆ’ ಬಿಚ್ಚಿಟ್ಟು, ಹೊಸ ರೂಪಾಂತರ ಹೊಂದಬೇಕು. ಮಾಡಬೇಕಾದ ಕೆಲಸ ಹಾಗೂ ಸಾಗಬೇಕಾದ ದಾರಿಗಳ ಬಗ್ಗೆ ಕೆಲ ಪ್ರಮುಖ ಸಂಗತಿಗಳನ್ನಿಲ್ಲಿ ಪ್ರಸ್ತಾಪಿಸ ಬಯಸುತ್ತೇನೆ.

ಮೊದಲಿಗೆ, ಶಾಲೆಗಳಲ್ಲಿ ಕನ್ನಡ ಮಾಧ್ಯಮ. ಸುಪ್ರೀಂ ಕೋರ್ಟ್ ತೀರ್ಪಿನ ಗುಮ್ಮ ತೋರಿಸಿ, ನಮ್ಮ ಸರ್ಕಾರಗಳು ಈ ಬಗ್ಗೆ ನಿರ್ಲಕ್ಷ್ಯ ತೋರಿರುವುದರ ವಿರುದ್ಧ ನಮ್ಮ ಹೋರಾಟ ಸಾಗಬೇಕು. ಮಗುವಿಗೆ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿಯೇ ದೊರೆಯಬೇಕು. ಗಡಿ ಭಾಗದಲ್ಲಿ, ಆಯಾಯಾ ಮಾತೃಭಾಷೆಯಲ್ಲಿಯೇ ಕನ್ನಡವನ್ನು ಕಲಿಸಿದರೂ ತಪ್ಪಲ್ಲವಷ್ಟೇ. ಆಗ ಕನ್ನಡ `ಹೇರಿಕೆ’ಯಾಗದೇ ಸುಪ್ರೀಂಕೋರ್ಟ್ನ ತೀರ್ಪು ಪಾಲಿಸಿದಂತಾಗುತ್ತದೆ. ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆಯವರೇ ಬಹುಸಂಖ್ಯಾತರಾದಾಗ, ಸುಪ್ರೀಂಕೋರ್ಟ್ ತೀರ್ಪಿನನ್ವಯವೇ, ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತರುವುದು ಕಷ್ಟದ ಕೆಲಸವಲ್ಲ. ಅನುಷ್ಠಾನಕ್ಕೆ ಮನಸ್ಸಿರಬೇಕಷ್ಟೇ – ರಾಜಕೀಯ ಇಚ್ಛಾಶಕ್ತಿ ಇರಬೇಕು. ಇರದಿದ್ದಾಗ, ಅದನ್ನು ತರುವಲ್ಲಿ ನಮ್ಮ ಕನ್ನಡ ಚಳುವಳಿಯು ಜಾಗೃತವಾಗಬೇಕಾಗುತ್ತದೆ.

ಕನ್ನಡ ಮಾಧ್ಯಮದ ಇನ್ನೊಂದು ಆಯಾಮ ನಮ್ಮ ಇಂಗ್ಲೀಷ್ ವ್ಯಾಮೋಹ. ಇಂಗ್ಲೀಷ್ ಇಲ್ಲದೇ ನಮ್ಮ ಜೀವನಾಧಾರವೇ ಇಲ್ಲದು ಎಂಬುದು ಈಗಿನ ಧೋರಣೆ. ಈಗಿನ ಸನ್ನಿವೇಶಗಳೂ ಇದಕ್ಕೆ ಪೂರಕವಾಗಿರುವುದೇ ಈ ತಪ್ಪು ಧೋರಣೆಗೆ ಕಾರಣ. ಕರ್ನಾಟಕದ ಸಾಕಷ್ಟು ಮೇಧಾವಿಗಳು – ಉದಾ: ವಿಶ್ವೇಶ್ವರಯ್ಯ, ಸಿ.ವಿ. ರಾಮನ್, ಯು. ಆರ್.ರಾವ್ – ಕನ್ನಡ ಮಾಧ್ಯಮದಲ್ಲಿ ಓದಿಯೇ ಮೇರು ವ್ಯಕ್ತಿತ್ವ ಹೊಂದಿದವರು – ಅವರುಗಳ ವ್ಯವಹಾರವೂ ಕನ್ನಡದಲ್ಲಿಯೇ ಇತ್ತು. ಅವರು ಇಂಗ್ಲೀಷನ್ನು ಒಂದು ಸಂವಹನ ಭಾಷೆಯಾಗಿ ಬಳಸಿದರೇ ಹೊರತು, ವ್ಯಾಮೋಹದಿಂದ ಅದಕ್ಕೆ ಜೋತು ಬೀಳಲಿಲ್ಲ. ಚೀನಾ, ರಷ್ಯಾ ಮತ್ತು ಕೆಲ ಯೂರೋಪ್ ದೇಶಗಳಲ್ಲಿ ಇಂಗ್ಲೀಷ್ ಬಳಸುವುದಿಲ್ಲ. ಮಾತೃಭಾಷೆಯಲ್ಲಿಯೇ ವ್ಯವಹಾರ. ಹಾಗಂತ, ಆ ದೇಶಗಳ ಗರಿಮೆ ಕುಂಠಿತವಾಗಿದೆಯೇ? ನಿಜ, ಎಲ್ಲರೂ ಹಾಗಾಗಲು ಸಾಧ್ಯವಿಲ್ಲ. ಆದರೆ ಈ ಪಾಟಿ ವ್ಯಾಮೋಹ ಬಿಡಲು ಖಂಡಿತಾ ಸಾಧ್ಯ. ಇಂಗ್ಲೀಷ್ ಇಲ್ಲದೆಯೇ ನಾವು ಬಾಳಬಲ್ಲೆವಾದರೂ, ಇಂದಿನ ಪರಿಸ್ಥಿತಿಯಲ್ಲಿ ಅದು ಕಷ್ಟಸಾಧ್ಯವಾದ್ದರಿಂದ, ನಾನು ಇಂಗ್ಲೀಷ್ ವಿರೋಧಿಯೇನಲ್ಲ. ನಮ್ಮ ಕನ್ನಡ ಚಳವಳಿಯ ಮುಖಂಡರು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಿಗೆ ಸೇರಿಸಿ, ಉಳಿದವರಿಗೆ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸಲು ಉಪದೇಶಿಸುತ್ತಿರುವುದು – ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ ಅನ್ನುವಂತಾಗಿದೆ. ತಾಂತ್ರಿಕ ಶಿಕ್ಷಣಗಳಿಗೆ ಇಂಗ್ಲೀಷ್ ಅತ್ಯಗತ್ಯವಾದ್ದರಿಂದ ಪ್ರಾಥಮಿಕ ಶಿಕ್ಷಣದಿಂದಲೇ ನಮ್ಮ ಮಕ್ಕಳು ಇಂಗ್ಲೀಷ್ ಕಲಿತು `ಮೇಧಾವಿ’ಗಳಾಗಲಿ ಅನ್ನುವ ಹಠಕ್ಕೆ ಎಲ್ಲರೂ ಬಿದ್ದಿದ್ದಾರೆ. ಹಾಗೆ ಕಲಿತು ಸಾಫ್ಟ್ವೇರ್ ಇಂಜಿನಿಯರಾಗಿ ಕೈತುಂಬಾ ಸಂಬಳ ಎಣಿಸಲಿ ಅನ್ನುವ ಸದಾಶಯ. ಈ ಆಶಯವೇನೂ ತಪ್ಪಿಲ್ಲ, ಆದರೆ ಅದಕ್ಕಾಗಿ ಕನ್ನಡ ಮಾಧ್ಯಮವನ್ನು ದೂರೀಕರಿಸಬೇಕಿಲ್ಲ ಅನ್ನುವುದಷ್ಟೇ ನನ್ನ ಕಳಕಳಿಯ ಮಂಡನೆ.

`ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆ’, ಮಾತೃಭಾಷೆಯಾದ ಕನ್ನಡವನ್ನು ಕಡೆಗಣಿಸಿ, ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಗುವಿಗೆ ನೀಡುವ ಬದಲು, ಅದಕ್ಕೆ ಸುಲಭವಾದ ಕನ್ನಡ ಮಾಧ್ಯಮದಲ್ಲಿಯೇ ಇಂಗ್ಲೀಷನ್ನೂ ಕಲಿಸೋಣ. ಆಗ ಮಗುವಿಗೆ ಪ್ರಾಥಮಿಕ ಶಿಕ್ಷಣವೂ ಕನ್ನಡದಲ್ಲಿ ಸರಳವಾಗಿ ಆಗಿ, ಕನ್ನಡದಲ್ಲಿಯೇ ಇಂಗ್ಲೀಷನ್ನೂ ಕಲಿಯುವುದರಿಂದ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತವೂ ಸಿಕ್ಕುತ್ತದೆ. ಹೀಗೆ ಇಂಗ್ಲೀಷ್ ಭಾಷಾ ಪ್ರೌಢಿಮೆಗೆ, ಗಟ್ಟಿ ತಳಹದಿ ಸಿಕ್ಕಾಗ, ಕನ್ನಡ ಮಾಧ್ಯಮ ಬೇಕಾ ಇಲ್ಲವೇ ಇಂಗ್ಲೀಷ್ ಮಾಧ್ಯಮ ಬೇಕಾ ಅನ್ನುವ ಪ್ರಶ್ನೆ ಗೌಣವಾಗಿ ಬಿಡುತ್ತದೆ. ಇದರಿಂದ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತರೂ, ಇಂಗ್ಲೀಷ್ ಮೇಲಿನ ಹಿಡಿತದಿಂದಾಗಿ, ತಾಂತ್ರಿಕ ಶಿಕ್ಷಣದಲ್ಲಿ ಕಷ್ಟಪಡುವ ಸನ್ನಿವೇಶ ಬಾರದು. ತಾಂತ್ರಿಕ ಶಿಕ್ಷಣ ಮುಗಿಸಿ, ತಂದೆ ತಾಯಿಯರ ಆಶಯದಂತೆ ಸಾಫ್ಟ್ವೇರ್ ಇಂಜಿನಿಯರಾಗಿ ಕೈ ತುಂಬಾ ಸಂಬಳವೆಣಿಸಲು ಕಷ್ಟವೇನೂ ಇರದು. ಈಗ ಹೇಳಿ ನಮಗೆ, ಇಂಗ್ಲೀಷ್ ಮಾಧ್ಯಮ ಅನಿವಾರ್ಯವೇ? ಈ ನಿಟ್ಟಿನಲ್ಲಿ ನಮ್ಮ ಕನ್ನಡ ಚಳುವಳಿ, ಕೇವಲ ಸರ್ಕಾರವನ್ನು ಅನುಷ್ಠಾನಕ್ಕೆ ಒತ್ತಾಯ ಮಾಡುವುದಷ್ಟೇ ಅಲ್ಲ, ಇಂಗ್ಲೀಷ್ ವ್ಯಾಮೋಹೀ ಜನಗಳ ಮನಃಪರಿವರ್ತನೆಗೆ ಕೂಡಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ.

ಅಷ್ಟೇ ಅಲ್ಲ, ಭವಿಷ್ಯತ್ತಿನಲ್ಲೂ ಕನ್ನಡದ ಉಳಿವಿಗೆ ಭಂಗ ಬಾರದಿರಲು, ಈಗಲೇ ನಾವು ಕೆಲವೊಂದು ಕೆಲಸಗಳಲ್ಲಿ ಉದ್ಯುಕ್ತರಾಗಬೇಕಿದೆ. ಈ ತಾಂತ್ರಿಕ ಶಿಕ್ಷಣದ ಪಠ್ಯಗಳನ್ನು ನಾವು ಕನ್ನಡದಲ್ಲಿ ತರಬೇಕಾಗಿದೆ. ‘ಕನ್ನಡ ಪೀಠ’ಗಳು ಜರೂರಾಗಿ ಮಾಡಬೇಕಾದ ಕೆಲಸ ಇದು. ತಾಂತ್ರಿಕ ಶಿಕ್ಷಣದ ತಾಂತ್ರಿಕ ಶಬ್ದಗಳು – Technical terms – ಇವಕ್ಕೆ ಕನ್ನಡದಲ್ಲಿ ಪರ್ಯಾಯವಾಚಿಗಳನ್ನು ಹುಟ್ಟಿಸಲೇ ಬೇಕೆಂಬ ಹಠದಲ್ಲಿ ಬೀಳುವುದಕ್ಕಿಂತ, ಅವುಗಳನ್ನೇ ಉಳಿಸಿಕೊಂಡು, ತಾಂತ್ರಿಕ ಶಿಕ್ಷಣದ ಪಠ್ಯಗಳನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದ ಮಾಡಬೇಕಿದೆ. ಈ ಕಾರ್ಯ ಆದಲ್ಲಿ ನಮಗೆ ಇಂಗ್ಲೀಷ್ನ ಅನಿವಾರ್ಯತೆ ಇರದು. ತನ್ಮೂಲಕ ಇಂಗ್ಲೀಷ್ ವ್ಯಾಮೋಹ ತಪ್ಪುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಇಂಗ್ಲೀಷ್ ವ್ಯಾಮೋಹ /ಅನಿವಾರ್ಯತೆ ತಪ್ಪಿದಲ್ಲಿ, ಇವುಗಳು ಕನ್ನಡ ಭಾಷೆಯ ಉಳಿವಿನ ಮೇಲೆ ತೂಗುಗತ್ತಿಯಂತೆ ತೂಗಾಡುವುದು ತಪ್ಪುತ್ತದೆ. ನಮ್ಮ ಕನ್ನಡ ಭಾಷೆ, ಅನ್ನ ಕೊಡುವ ಭಾಷೆಯಾಗಿಯೂ ಉಳಿಯುತ್ತದೆ. ಈಗಿನ ಸಂದರ್ಭದಲ್ಲಿ ಅನ್ನ ಕೊಡುವ ಭಾಷೆಯಷ್ಟೇ ಉಳಿವಿಗೆ ಅರ್ಹತೆ ಗಿಟ್ಟಿಸುತ್ತದೆ. ಅದಕ್ಕೇ
ಸಂಸ್ಕ್ಱತದಲ್ಲಿ ಮಾತಿದೆ – “ಸರ್ವಾರಂಭಾಃ ತಂಡುಲಪ್ರಸ್ಥಮೂಲಾಃ||” ಇದು ನಮ್ಮ ಚಳುವಳಿಯ ಮುಖ್ಯ ಗುರಿಯಾಗಬೇಕು.

ನಮ್ಮ ಮುಂದಿನ ಗುರಿ – ಆಡಳಿತದಲ್ಲಿ ಸರಳಗನ್ನಡ ಹಾಗೂ ಸರಳ ವ್ಯವಹಾರ. ಕರ್ನಾಟಕದ ಎಲ್ಲೆಡೆ ಇದರ ಅನುಷ್ಠಾನಕ್ಕೆ ನಮ್ಮ ಕನ್ನಡ ಚಳುವಳಿ ಸದಾ ಕಾಲ ಹದ್ದುಗಣ್ಣಿನಲ್ಲಿರಬೇಕಾಗುತ್ತದೆ. ಆಡಳಿತದಲ್ಲಿ ಅಧಿಕಾರಿ ವರ್ಗ ಯಾವಾಗಲೂ ಕುಂಟು ನೆಪಗಳನ್ನೊಡ್ಡಿ ಅಡ್ಡಿಯಾಗುತ್ತಲೇ ಇರುತ್ತದೆ. ಸಂಘರ್ಷವಿಲ್ಲದೇ ಆ ಅಡ್ಡಿಗಳ ನಿವಾರಣೆಗೆ ನಮ್ಮ ಚಳುವಳಿ ಸದಾ ನಿರತವಾಗಿರಬೇಕಾಗುತ್ತದೆ.

ಆಡಳಿತದಲ್ಲಿ ಅನುಷ್ಠಾನಕ್ಕೆ ಬಂದಿರುವ ಕಡೆಗಳಲ್ಲೂ ಅಡ್ಡಿ ಇಲ್ಲವೆಂದಲ್ಲ. ಸರ್ಕಾರದ `ಆಡಳಿತ ಕನ್ನಡ’ವೇ ನಮ್ಮ ಆಡು ಕನ್ನಡಕ್ಕಿಂತ ಭಿನ್ನವಾಗಿದ್ದು ಕಠಿಣವಾಗಿದೆ. ಜೊತೆಗೆ ಭರ್ತಿ ಮಾಡಬೇಕಿರುವ ಫಾರಂಗಳೂ ಸಂಕೀರ್ಣವಾಗಿರುತ್ತವೆ. ಉದಾಹರಣೆಗೆ ಹೇಳುವುದಾದರೆ, ಬ್ಯಾಂಕರನಾಗಿ ನಮ್ಮಲ್ಲಿ, ಒಂದು ಖಾತೆ ತೆರೆಯಲು ಅರ್ಜಿ ಭರ್ತಿ ಮಾಡಲು ಒಬ್ಬ Post graduate ಗೇ ಕಷ್ಟ ಆಗುತ್ತಿದೆಯೆಂದರೆ, ಸಾಮಾನ್ಯರ ಪಾಡೇನು? ಈ ಸಂಕೀರ್ಣತೆ ಜನರನ್ನು ಅನಿವಾರ್ಯವಾಗಿ ದಳ್ಳಾಳಿಗಳತ್ತ ದೂಡುತ್ತದೆ. ಅರ್ಜಿ ಫಾರಂಗಳ ಸಂಕೀರ್ಣತೆಯನ್ನು ಕೊನೆಗಾಣಿಸಿದಲ್ಲಿ, ನಾವು ಅರ್ಧ ಜಯಗಳಿಸಿದಂತೆಯೇ ಸೈ. ಈ ನಿಟ್ಟಿನಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಇರಬೇಕು.

ಮೇಲ್ಕಂಡವು ಕನ್ನಡದ ಉಳಿವಿಗಾಗಿ ಆದರೆ, ನಾವು ಕನ್ನಡತನದ ಉಳಿವಿಗಾಗಿಯೂ ಶ್ರಮಿಸಬೇಕಾಗಿರುತ್ತದೆ. ನಮ್ಮ ಕನ್ನಡ ಸಂಸ್ಕ್ಱತಿಯ ಕುರುಹುಗಳಾದ ಕೊಡವ ವೇಷಭೂಷಣಗಳು, ಆಚರಣೆಗಳು, ಹಾಗೆಯೇ ಮಂಗಳೂರು, ಉತ್ತರ ಕರ್ನಾಟಕ, ಕರ್ನಾಟಕದ ಎಲ್ಲ ಭಾಗಗಳಲ್ಲಿನ ನೆಲದ ಅಸ್ಮಿತೆಯನ್ನು ಗುರುತಿಸಿ ಬೆಳೆಸಬೇಕಾದ ಕರ್ತವ್ಯ ನಮ್ಮದು. ಈ ಸಂಸ್ಕ್ಱತಿಯ ಉಳಿವಿಗಾಗಿ ಪ್ರದರ್ಶನಗಳು, ಜಾಗೃತಿ ಸಮ್ಮೇಳನಗಳನ್ನು ಆಯೋಜಿಸಬೇಕು.

ಈಗಿನ ಡಿಜಿಟಲ್ ಯುಗದಲ್ಲಿ, ಕನ್ನಡದಲ್ಲಿನ ಎಲ್ಲ ಸಾಹಿತ್ಯ ಕೃತಿಗಳೂ ಗಣಕೀಕರಣಗೊಂಡು, ಎಲ್ಲರಿಗೂ ಸುಲಭವಾಗಿ ಸಿಗುವಂತಾಗಬೇಕು. ಕನ್ನಡತನವನ್ನು ಸಾರುವ ನಮ್ಮ ಪ್ರವಾಸೀ ತಾಣಗಳಾದ ಹಂಪಿ, ಬೇಲೂರು, ಬಾದಾಮಿ ಮುಂತಾದವುಗಳನ್ನು ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ರಸ್ತೆ, ವಸತಿ ವ್ಯವಸ್ಥೆಯಂಥ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿದಲ್ಲಿ, ಈ ಪ್ರವಾಸೀ ತಾಣಗಳು ಜಗತ್ತಿಗೆ ಕನ್ನಡತನದ ರಾಯಭಾರಿಗಳಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಸರ್ಕಾರಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಈ ಜವಾಬ್ದಾರಿಯನ್ನು ನಮ್ಮ ಕನ್ನಡ ಚಳುವಳಿ ಸಮರ್ಥವಾಗಿ ನಿಭಾಯಿಸಬೇಕಿದೆ.

ಕೊನೆಯದಾಗಿ, ತಲುಪಬೇಕಾದ ಗುರಿ, ಸಾಗಬೇಕಾದ ಹಾದಿ ತೀರ್ಮಾನವಾದ ನಂತರ, ನಮ್ಮ ಚಳುವಳಿಯನ್ನು ನಡೆಸುವವರು ಯಾರೆಂಬ ಬೃಹತ್ ಪ್ರಶ್ನೆ ಪೆಡಂಭೂತದಂತೆ ನಮ್ಮೆದುರು ನಿಲ್ಲುತ್ತದೆ. ಯಾವುದೇ ಚಳುವಳಿಯ ಗೆಲುವು, ಜನರ ಪಾಲ್ಗೊಳ್ಳುವಿಕೆಯ ಮೇಲೆ ನಿರ್ಧಾರವಾಗುತ್ತದೆ. ಕನ್ನಡ ಕಾರ್ಯಕರ್ತರ ಪಡೆ ಹೆಚ್ಚಾದಂತೆ, ಚಳುವಳಿಯ ಯಶಸ್ಸೂ ಹೆಚ್ಚಾಗುವುದು ಸಹಜ.

ನಾವು `ನವೆಂಬರ್ ಕನ್ನಡಿಗ’ರಾಗದೇ ಪ್ರಾಮಾಣಿಕವಾಗಿ ನಮ್ಮ ಕೈಲಾದಷ್ಟು ಸಮಯವನ್ನು, ಕನ್ನಡ ಚಳುವಳಿಗೆ ಮೀಸಲಿಟ್ಟರೆ, ಅದೇ ಸಾಕಾಗುತ್ತದೆ. ಹನಿಹನಿ ಕೂಡಿದರೆ ಹಳ್ಳವಷ್ಟೇ. ನಾವಷ್ಟೇ ಜಾಗೃತರಾದರೆ ಸಾಲದು, ನಮ್ಮ ಸುತ್ತಮುತ್ತಲಿನವರನ್ನೂ ಈ ನಿಟ್ಟಿನಲ್ಲಿ ಜಾಗೃತಗೊಳಿಸಿದಲ್ಲಿ, ನಮ್ಮ ಕರ್ತವ್ಯ ಮಾಡಿದಂತೆ. ಇಂಥ ಪ್ರಾಮಾಣಿಕ ಪಾಲ್ಗೊಳ್ಳುವಿಕೆ, ದೊಡ್ಡ ಚಳುವಳಿಯಾಗುವುದರಲ್ಲಿ ಅನುಮಾನವಿಲ್ಲ. ಜನರ ಭಾಗೀದಾರಿಕೆಯಿಂದ ನಮ್ಮ ಕನ್ನಡ ಚಳುವಳಿ ಹೊಸದಾಗಿ ಆವಿಷ್ಕರಿಸಿಕೊಳ್ಳಬೇಕಾಗಿದೆ. ಹೊಸ ದಿಕ್ಕು, ಹೊಸ ದಾರಿ ಹಾಗೂ ಸಮರ್ಥ ನಾಯಕತ್ವ ನಮ್ಮ ಕನ್ನಡ ಚಳುವಳಿಯನ್ನು ನಿಜವಾಗಿ ಮೇಲೆತ್ತುತ್ತ್ತದೆಯೆಂಬುದು ನನ್ನ ಖಚಿತ ಅಭಿಪ್ರಾಯ. ಅಲ್ಲವೇ?

——-

ಅತಿಥಿ ದೇವೋ ಭವ

(ನಮ್ಮ ಮಾಧವ, ಮಾಲತಿ-ದಂಪತಿಗಳಿಬ್ಬರೂ SBI ಉದ್ಯೋಗಿಗಳು. ಸಾಲದ್ದಕ್ಕೆ ಇಬ್ಬರೂ officers. ಹಾಗಾಗಿ ಇಬ್ಬರೂ ಮನೆ ತಲ್ಪೋದೇ ಊಟ ಮತ್ತು ವಸತಿಗಾಗಿ! ಮದುವೆಯಾಗಿ 3 ವರ್ಷ ಆದ್ರೂ ಮಕ್ಕಳಿಲ್ಲ. ಅವರಲ್ಲೇನೋ ಕೊರತೆ ಇದೇಂತಲ್ಲ – just, ಪ್ರೈವಸಿಯ ಕೊರತೆ – ಬೇಡಾದ ಅತಿಥಿಗಳಿಂದ. ಹೇಗಂತೀರಾ? ಬನ್ನಿ ನೋಡೋಣ . . . )

ಮಾಲತಿ – ರೀ ಈ office ಸಾಕಾಗ್ಹೋಗಿದೆ. ಸುಮ್ನೆ ವಾಲಂಟರಿ ರಿಟೈರ್ಮೆಂಟ್ ತೊಗೊಂಬಿಡ್ತೀನಿ.
ಮಾಧವ- ಏ ಹಾಗೆಲ್ಲಾರೂ ಮಾಡ್ಬಿಟ್ಟೀಯಾ! ಯಾಕೆ, ಈ ಸಲ ನಂ. SBIಗೆ 7500 ಕೋಟಿ ನಷ್ಟ ಆಯ್ತೂಂತ್ಲೇ? ಅದೂ NPA ಪ್ರಾವಿಶನ್ನೂಂತ . . .
ಮಾಲತಿ- ಅಯ್ಯೋ, ನಾನು ಆ ಪ್ರಾವಿಶನ್ ಬಗ್ಗೆ ತಲೆ ಕೆಡಿಸ್ಕೊಂಡಿಲ್ಲಾರೀ. ನಮ್ಮ ಮನೆ ಪ್ರಾವಿಶನ್ ಬಗ್ಗೆ ಮಾತಾಡಿ. ಮನೆಗೆ ಬಂದು ಹೋಗ್ತಿರೋ ಈ ದಂಡಪಿಂಡಗಳಿಂದ ಮನೆ ಖರ್ಚು ಎರಡರಷ್ಟಾಗಿದೆ.
ಮಾಧವ- ಮತ್ತೆ, ಹೀಗಿರ್ಬೇಕಾದ್ರೆ ಕೆಲ್ಸ ಬಿಡೋ ಮಾತ್ಯಾಕೆ?
ಮಾಲತಿ- ನಂ ಬಾಸ್ ಇದಾನಲ್ಲಾ, ಅವ್ನು ಮನುಷ್ಯ ವರ್ಗಕ್ಕೆ ಸೇರಿದ ಪ್ರಾಣಿ ಅಲ್ಲಾಂತ ನನ್ನ ಅನಿಸಿಕೆ.
ಮಾಧವ- ಬಾಸ್ಗಳೆಲ್ಲಾ ಅಷ್ಟೇ ಕಣೇ. ನಂ ಬಾಸ್ ಇನ್ನೇನು ಅಂತಿಯಾ? ಇವನಿಗೆ ಹೋಲಿಸಿದ್ರೆ, ರಾವಣ, ಕಂಸ, ಇವರುಗಳ ಕೈಕೆಳಗೇ ನಾನು ಹಾಯಾಗಿರ್ತಿದ್ನಾಂತ ಅನ್ಸತ್ತೆ!
ಮಾಲತಿ- ಅಲ್ಲಿಂದ ಮನೆಗೆ ಬಂದ್ರೆ, ಇಲ್ಲಿ ಯಾವಾಗ್ಲೂ ಅತಿಥಿಗಳ ಕಾಟ. ರೀ ನಿಜಾ ಹೇಳ್ರೀ. ನಾವಿಬ್ರೇ ಮನೇಲಿ ಹಾಯಾಗಿ ಇದ್ದದ್ದು last ಯಾವಾಗ?
ಮಾಧವ- ಅದೂ. . . ಅದೂ . . ಪ್ರಾಯಶಃ ಎರಡು ವರ್ಷದ ಹಿಂದೆ, ಫೆಬ್ರವರಿ 30ಕ್ಕೆ!
ಮಾಲತಿ- ಅದ್ಸರೀನ್ನಿ, ಇಲ್ಲಾಂತ ಡೈರೆಕ್ಟಾಗೂ ಹೇಳ್ಬಹುದು. ನಾವು ಬೆಂಗಳೂರಿನಲ್ಲಿದೀವಿ ಅನ್ನೋ ಏಕೈಕ ತಪ್ಪಿಗೆ, ಇಡೀ ಕರ್ನಾಟಕದ ಉದ್ದಗಲ ಹಬ್ಬಿರೋ ನಿಂ ಕಡೆ ಸಂತತಿಯವರೆಲ್ಲಾ ನಮ್ಮಲ್ಲೇ ಬಂದು ಝಾಂಡಾ ಊರ್ತಾರೆ!
ಮಾಧವ- ಯಾಕೋs. . . ತಂ ಕಡೆ ಸಂತತಿಯವರೇನು ಕಡಿಮೇನೇ? ಹೋದ ತಿಂಗಳು ನಿನ್ನ ಚಿಕ್ಕಮ್ಮನ ಮಗಳ ಸಂಸಾರ ಬಂದು 20 ದಿನ ನಮ್ಮಲ್ಲಿ ಇರಲಿಲ್ವೇ?
ಮಾಲತಿ- ರೀ, ಅವರಾದ್ರೂ ಹತ್ತಿರದ ಸಂಬಂಧ. ನಿಂ ಕಡೆಯವ್ರು, ಅದ್ಯಾರೋ ನಿಂ ತಂಗಿಯ ನೆಗಣ್ಣಿ…
ಮಾಧವ- ಆ್ಞಂ, ಏನೇ ಅದು ನೆಗಣ್ಣಿ ಅಂದ್ರೆ?
ಮಾಲತಿ- ನಂಗೇನ್ಗೊತ್ತು, ನೀವೇ ಹೇಳಿದ್ದು.
ಮಾಧವ- ಹೌದಾ, ಏನೋ ಇರ್ಬಹುದು ಬಿಡು!
ಮಾಲತಿ- ನಿಂ ತಂಗಿಯ ನೆಗಣ್ಣಿಯ ಮಲತಾಯಿ ಮೊಮ್ಮಗ ಅಂದ್ಕೊಂಡು ಯಾವನೋ ಬಂದಿದ್ನಲ್ಲಾ, ಅವನ್ಯಾರೂಂತ ಹೋಗೋವರ್ಗೂ ನಿಮಗೇ ಗೊತ್ತಾಗ್ಲಿಲ್ಲ!
ಮಾಧವ- ಈಗ್ಲೂ ಗೊತ್ತಿಲ್ಲ – ಆ ವಿಷ್ಯ ಬೇರೆ ಬಿಡು. ಇಲ್ಲಾ, ಈ ವಿಚಾರದಲ್ಲಿ ನಾವು serious ಆಗಿ ಒಂದು ತೀರ್ಮಾನಕ್ಕೆ ಬರ್ಬೇಕು.
ಮಾಲತಿ- ನಾನೂ ಅದೇ ಹೇಳ್ಬೇಕೂಂತಿದ್ದೆ. ಮದುವೆ ಆದಾಗಲಿಂದ ಈವರೆಗೆ ಮೊದಲ ಸಲ ನಾವಿಬ್ರೂ ಒಂದೇ ಯೋಚನೆ ಮಾಡಿದೀವಿ ನೋಡಿ!
ಮಾಧವ- Yes, ನಿಂ ಕಡೆಯವರು ಯಾರಾದ್ರೂ ಬಂದ್ರೆ, ನೀನು ಏನಾದ್ರೂ ನೆಪ ಹೇಳಿ, avoid ಮಾಡು. ನಂ ಕಡೆಯವರನ್ನು ನಾನು avoid ಮಾಡ್ತೀನಿ. ಏನಂತಿಯಾ?
ಮಾಲತಿ- ನಂದೇನೋ ok, ನಿಮ್ದೇ doubt ನಂಗೆ!
ಮಾಧವ- ಏಯ್, ನನ್ಮೇಲೇ ಡೌಟಾ ನಿಂಗೇ? ನಾನು . . (ಅಷ್ಟರಲ್ಲಿ ಫೋನು ರಿಂಗಾಗುತ್ತೆ) ತಡಿ, ಫೋನಲ್ಲಿ ಮಾತಾಡಿ ನಿನಗೆ ತಕ್ಕ ಉತ್ತರ ಕೊಡ್ತೀನಿ. . ಹಲೋ ಯಾರು, ಓ ಗೋವಿಂದಾನಾ? ಹೇಗಿದಿಯಪ್ಪ ಎಲ್ಲಿದ್ದೀಯಾ ಈಗ? ಬೆಂಗ್ಳೂರಲ್ಲಾ? . . . ಒಂದ್ನಿಮ್ಷ ನನ್ಮಾತು ಕೇಳಪ್ಪಾ . . . ಅಯ್ಯೋ, ನಂಗೂ ಮಾತಾಡಕ್ಕೆ ಬಿಡು . . .ಓಹೋ . . . (ನಿಟ್ಟುಸಿರು)
ಮಾಲತಿ- ಏನ್ರೀ, ಏನಾಯ್ತ್ರೀ?
ಮಾಧವ- ಸಾರಿ ಕಣೇ, ನಿನ್ನಿಂದ ಒಂದು help ಆಗ್ಬೇಕು.
ಮಾಲತಿ- ರಾಯರೇನೋ ದೊಡ್ಡ ಖೆಡ್ಡಾ ಹಾಕ್ತಿರೋ ಹಾಗಿದೆ!
ಮಾಧವ- ಹಾಗೇನಿಲ್ಲ. ನಂ ದೊಡ್ಡಮ್ಮನ ಮಗ ಗೋವಿಂದೂ ಬಂದಿದ್ದಾನಂತೆ ಬೆಂಗ್ಳೂರಿಗೆ..
ಮಾಲತಿ- ಪ್ರಶ್ನೇನೇ ಇಲ್ಲಾ. ಈಗ್ತಾನೇ ತೀರ್ಮಾನಕ್ಕೆ ಬಂದಿದ್ದೀವಿ. ಹೇಗಾದ್ರೂ ಸಾಗಹಾಕಿ ಅವನನ್ನ.
ಮಾಧವ- ಏ ಅದೊಂದು ವಿಚಿತ್ರ ಪ್ರಾಣಿ ಕಣೇ. ಡೈರೆಕ್ಟಾಗಿ ಹೋಗೋ ಅಂದ್ರೂ ಹೋಗಲ್ಲ, ಅಂಥದ್ದು. ನಾನು ಅವನನ್ನ ಮನೇಗೆ ಸೇರಿಸ್ಲಿಲ್ಲಾಂದ್ರೆ, ಊರಲ್ಲಿ, ನನ್ನ ಇರೋ ಬರೋ ಮಾನಾನೆಲ್ಲ ಹರಾಜು ಹಾಕಿ ಬಿಡ್ತಾನೆ ಅಷ್ಟೇ.
ಮಾಲತಿ- ಅವೆಲ್ಲಾ ಕಥೆ ಬಿಡ್ಬೇಡಿ. ಎಲ್ರೂ ಅಷ್ಟೇನೇ. ಬೇಡಾಂದ್ರೆ ಬೇಡಾ ಅಷ್ಟೇ.
ಮಾಧವ- ಇದು ಎಲ್ರ ಥರಾ ಅಲ್ಲಾ ಕಣೇ. specimenಊ. ಸಾಗಹಾಕೋ ಜಾತೀದೇ ಅಲ್ಲಾ. ಅದಕ್ಕೇ ಕಣೇ ನಿನ್ನ help ಕೇಳ್ತಿರೋದು. ಇದೊಂದ್ಸಲ adjust ಮಾಡ್ಕೊಂಡ್ಬಿಡು ಪ್ಲೀಸ್.
ಮಾಲತಿ- ಹಾಳಾಗ್ಹೋಗ್ಲಿ. ಎಷ್ಟು ದಿವ್ಸ ಇರತ್ತಂತೋ ಈ ಪ್ರಾಣಿ?
ಮಾಧವ- ಅದೇ ಗೊತ್ತಿಲ್ಲ ಕಣೇ. ನಾಳೆ ಬಂದಾಗ ಕೇಳ್ಬೇಕು. (ಅಷ್ಟರಲ್ಲಿ calling bell ಶಬ್ದ. ಮಾಧವ ಬಾಗಿಲು ತೆಗೆಯುತ್ತಾನೆ)
ಗೋವಿಂದ- ಹಾಯ್ ಮಾಮ್ಸ್. ನಮಸ್ತೇ ಅತ್ತಿಗೆ. ನಾನು ಗೋವಿಂದೂ ಅಂತ.
ಮಾಧವ- ಏ. . ಏನೋ ಗೋವಿಂದೂ, ನಾಳೆ ಬರ್ತೀನಿ ಅಂದಿದ್ಯಲ್ಲೋ!?
ಗೋವಿಂದ- ಸಂತ ಕಬೀರದಾಸರು ಹೇಳಿಲ್ವೇ? – ಕಲ್ ಕರೇತೋ ಆಜ್ ಕರ್, ಆಜ್ ಕರೇತೋ ಅಬ್! . . . ಹೇಗಿದೇ surprise? . . . ಹ್ಹ ಹ್ಹ ಹ್ಹ ಹಿಡಿಸಲಿಲ್ವಾ? Ok . . .
ಮಾಧವ- ಅಲ್ಲಲೇ, ಅದೂ . . .
ಗೋವಿಂದ- ಅದೂ ಇಲ್ಲ. ಇದೂ ಇಲ್ಲ. ಅತ್ತಿಗೇ, ನಿಮ್ಮ ಅಮೃತೋಪಮ ಕೈಗಳಿಂದ ಒಂದು ಅಮೃತೋಪಮ ಕಾಫಿ ಮಾಡ್ಬಿಡಿ. ದಾರೀಲಿ ಕಾಕಾ ಅಂಗ್ಡೀಲಿ ಟೀ ಕುಡಿದು ಬಾಯೆಲ್ಲ ಎಕ್ಹುಟ್ಹೋಗಿದೆ! ಊಟಕ್ಕೆ ಜಾಸ್ತಿ ಮಾಡಕ್ಹೋಗಬೇಡಿ. ಅನ್ನ ಸಾರು ಸಾಕು. ನೀವಂತೂ ಶಿರ್ಸಿ ಕಡೆಯವ್ರು . . ಬೇಡಾಂದ್ರೂ ಹಪ್ಪಳ, ಹಶೀ, ಗೊಜ್ಜು ಮಾಡೋವ್ರೇನೇ . ಅಲ್ವೇ? ಅಂದ್ಹಾಗೆ ಎಲ್ಲಮ್ಮಾ ನನ್ರೂಮು? ಥ್ಯಾಂಕ್ಯೂ . . . (ಹಿನ್ನೆಲೆ ಹಾಡು: `ವಿವಾಹ ಭೋಜನವಿದು . . . ‘)

ಅಂಕ – 2
ಮಾಲತಿ- ರೀ, ಎಲ್ಲಿಂದ ಗಂಟ್ಹಾಕಿದ್ರಿ ಈ ಶನೀನಾ? ಎರಡು ವಾರ ಆಯ್ತು. ಹೋಗೋ ಮಾತೇ ಇಲ್ಲ! ಅವ್ನೋ, ಅವ್ನ ಹೊಟ್ಟೇನೋ, ಕಾಫಿ, ತಿಂಡಿ, ಊಟ ಎಲ್ಲಾ ಪಾಂಕ್ತವಾಗಿ ಕಾಲಕಾಲಕ್ಕೆ ಆಗ್ಬೇಕು! ಬಸರಿ/ಬಾಣಂತಿಯರಿಗೂ ಇಷ್ಟೊಂದು ಸೇವೆ ಮಾಡೋದಿಲ್ಲಾಪ್ಪ!
ಮಾಧವ- ನಾ ಮೊದ್ಲೇ ಹೇಳ್ಳಿಲ್ವಾ, ಇದೊಂದು ಸ್ಪೆಸಿಮನ್ನು, ಇನ್ನೊಬ್ಬರ ಪರಿಸ್ಥಿತಿಯನ್ನ ಅರ್ಥ ಮಾಡ್ಕೊಳ್ಳೋದೇ ಇಲ್ಲಾ. ನಾವೇ ಏನಾದ್ರೂ plan ಮಾಡಿ ಆಚೆ ತಳ್ಬೇಕು.
ಮಾಲತಿ- ರಿ ನಂಗೊಂದು plan ಹೊಳೀತು. ಇವತ್ತು ಸಂಜೆ ಅವ್ನು ಬಂದಾಗ ಹೇಳಿ – `ಗೊವಿಂದೂ, ನಾವ್ನಾವೇ ಇದ್ದು ಬೋರಾಗಿದೆ. ಇವತ್ತು ಹೊರಗಡೆ ಹೋಟಲಿಗೆ ಹೋಗೋಣ’ – ಅಂತ. ಕೆಟ್ಟ ಹೋಟಲಿಗೆ ಕರ್ಕೊಂಡ್ಹೋಗಿ, ಅವನಿಗಷ್ಟೇ ಚೆನ್ನಾಗಿ ತಿನ್ಸಿ, ನಮಗೆ ಏಕಾದಶಿ ಉಪವಾಸ ಅಂತ ಹೇಳಣ. ಅವ್ನ ಹೊಟ್ಟೆ ಕೆಟ್ಟು ಮಲಗ್ಬಿಡಬೇಕು. ಆಮೇಲೆ ಮತ್ಯಾವತ್ತೂ ಅವ್ನು ಈ ಕಡೆ ತಲೆ ಹಾಕಿಯೇ ಮಲಗ್ಬಾರ್ದು! ಹಾಗಾಗತ್ತೆ ನೋಡೀ.
ಮಾಧವ- ಆಹಾ, ಏನ್ ತಲೇನೇ! ಈ ಥರದ thinking ನಲ್ಲಿ ನಿಮ್ಮನ್ನ ಮೀರಿಸ್ಲಿಕ್ಕೆ ಆಗಲ್ಲ ನೋಡು!
ಮಾಲತಿ- ಏನಂದ್ರೀ?
ಮಾಧವ- ಏನಿಲ್ಲ, ಸುಮ್ನೆ ಅಂದೆ. ಅದೇ ಮಾಡೋಣ. ನಂಗೂ ಸಾಕ್ಸಾಕಾಗ್ಹೋಗಿದೆ!
(ಗೋವಿಂದನ ಆಗಮನ)

ಗೋವಿಂದ- Sorry, ಗಂಡ ಹೆಂಡ್ತಿ ಮಧ್ಯೆ ಕರಡಿ ಹಾಗೆ ಬಂದ್ಬಿಟ್ಟೆ!
ಮಾಧವ- ಅಯ್ಯೋ, ಅದರಲ್ಲಿ ಹೊಸತೇನಿದೆ ಬಿಡು!
ಗೋವಿಂದ- ಆ್ಞಂ!
ಮಾಧವ- ಅದಿರ್ಲಿ, ನಾನು ನಿನಗೆ ಬೆಳಿಗ್ಗೇನೇ ಒಂದ್ಮಾತು ಹೇಳ್ಬೇಕೂಂತಿದ್ದೆ.
ಗೋವಿಂದ- Oh, what a co-incidence, ನಾನೂ ಹೇಳ್ಬೇಕೂಂತಿದ್ದೆ. Ok, Seniors first, ಹೇಳು.
ಮಾಧವ- ನಾವು ಮೂರೇ ಜನ ಪ್ರತಿದಿನ ಊಟಕ್ಕೆ ಕೂತು ಬೋರಾಗಿದೆ ಅದಕ್ಕೇ . . .
ಗೋವಿಂದ- Correct ಮಾಧೂ, ನಾನೂ ಅದೇ ಹೇಳ್ಬೇಕೂಂತಿದ್ದೆ. ನೋಡು ನನ್ನ ನಿಮ್ಮ ಯೋಚನೆಗಳು ಹೇಗೆ ಮ್ಯಾಚ್ ಆಗುತ್ವೇಂತ. ಬೆಳಿಗ್ಗೆ ನಾನು ಕೃಷ್ಣಂಗೆ ಫೋನ್ ಮಾಡಿದ್ದೆ. ಕೃಷ್ಣ ಗೊತ್ತಾಗ್ಲಿಲ್ವಾ? ಅದೇಪ್ಪಾ ನಾನೂ ನೀನೂ ಸೇರಿ ಅವ್ನ ಡವ್ನ ಚುಡಾಯ್ಸಿದ್ವಿ ಅಂತ ಹಿಗ್ಗಾಮುಗ್ಗಾ ತದ್ಕಿದ್ನಲ್ಲಾ 8ನೇ ಕ್ಲಾಸಲ್ಲಿ. ಅದೇ ಕೃಷ್ಣ. ನನ್ನ ದೂರದ ಸಂಬಂಧಿ. ಅವ್ನು ಇಲ್ಲೇ ಗಿರಿನಗರದಲ್ಲಿದಾನಂತೆ. ಅವನನ್ನ ಇಲ್ಲಿಗೇ ರಾತ್ರಿ ಊಟಕ್ಕೆ ಕರ್ದಿದೀನಿ!
ಮಾಧವ- (ಸಿಟ್ಟಿನಿಂದ) ಅವನನ್ನಷ್ಟೇ ಯಾಕಪ್ಪಾ, ಅವನ ಪಟಾಲಂಗೂ ಕರೀಬೇಕಿತ್ತು!
ಗೋವಿಂದ- ವಾಹ್, ನಂಗೊತ್ತಿತ್ತು ನೀನು ದಿಲ್ದಾರ್ ಮನುಷ್ಯಾಂತ. ಅವನು 2-3 ಫ್ರೆಂಡ್ಸ್ ಜೊತೆಗೇ ಬರ್ತಿರೋದು.
ಮಾಧವ- ಆ್ಞಂ!
ಗೋವಿಂದ- ಹೋಟಲಿಗೆ ಹೋಗೋಣವಾ ಅಂದ. `ಅಯ್ಯೋ ಕತ್ತೆ ಮುಂಡೇದೇ, ಅಂಥ ಹೊರನಾಡು ಅನ್ನಪೂರ್ಣೇಶ್ವರಿಯ ಅಪರಾವತಾರವಾಗಿರೋ ಅತ್ತಿಗೆ ಮುಂದೆ ಹೋಟೆಲ್ ಹೆಸರ್ಹೇಳಿದ್ರೆ ನಾಶವಾಗ್ಹೋಗ್ತಿಯಾ’ ಅಂತ ಬೈದೆ! (ಹಿ. ಹಾಃ `ಅನ್ನಪೂರ್ಣೇಶ್ವರಿ ಸ್ತುತಿ. . . ) ಹೋಟೆಲ್ಗೆ ಹೋಗಿ ಹೊಟ್ಟೆ ಕೆಡಿಸ್ಕೋಬೇಕೇ? ಅತ್ತಿಗೇs ಇದು ನಿಮ್ಮ ಮಾನಾಪಮಾನದ ಪ್ರಶ್ನೆ. ಅವರನ್ನ ಎಷ್ಟು ಚೆನ್ನಾಗಿ ಸತ್ಕರಿಸುತ್ತಿರೋ ನಿಮಗೇ ಬಿಟ್ಟದ್ದು. ಎಷ್ಟಂದ್ರೂ ಶಿರ್ಸಿ ಕಡೆಯವ್ರು. ಅಣ್ಣಾ, ಮಾಧವ, ಸ್ವಲ್ಪ ಅತ್ತಿಗೇಗೆ help ಮಾಡಪ್ಪಾ – ಸುಮ್ನೆ ನಿಂತ್ಬಿಟ್ಟಾ ಗೋಮಟೇಶನ ಥರಾ . ಹ್ಹ ಹ್ಹ ಹ್ಹಾ. . . . ಯಾಕೆ ಜೋಕ್ ಹಿಡಿಸಲಿಲ್ವಾ? Ok. . . .
ಮಾಧವ- ಮಾಲತೀ . . .
ಮಾಲತಿ- ಅಡುಗೆ ಮನೆಗೆ ಬನ್ನಿ, ನಿಮಗೆ ಇದೆ ಇವತ್ತು!

ಅಂಕ-3
ಮಾಲತಿ- ರೀ ಒಂದು ತಿಂಗಳು ಮುಗಿದು, ಹದಿನೈದು ದಿವ್ಸ ಆಗ್ತಾ ಬಂತು.
ಮಾಧವ- ವಾವ್, Good news ಏನೇ?
ಮಾಲತಿ- Good news ಏನ್ಬಂತು, ನಿಮ್ಮ ಮುಖಕ್ಕಿಷ್ಟು! ನಾ ಹೇಳಿದ್ದು, ಆ ಶನಿ ಬಂದು ಒಂದೂ ವರೆ ತಿಂಗಳು ಆಯ್ತೂಂತ! ನನ್ನ plan work out ಆಗ್ಲಿಲ್ಲ. ನೀವೇ ಏನಾರಾ plan ಮಾಡಿ.
ಮಾಧವ- ಹೌದು, ದೇವ್ರು ಯಾಕೋ ನಮ್ಮ ಮೇಲೆ ಕೋಪಿಸಿಕೊಂಡ್ಹಾಂಗಿದೆ. ನಕ್ಷತ್ರಿಕನೂ ಹರಿಶ್ಚಂದ್ರನ್ನ ಇಷ್ಟು ಸತಾಯಿಸ್ತಿರ್ಲಿಲ್ಲ ಅನ್ಸತ್ತೆ (ಯೋಚಿಸಿ) ಹೀಗೆ ಮಾಡಿದರೆ ಹೇಗೆ? ನಿನಗೆ 15 ದಿವಸ training ಬಂದಿದೇಂತ ಹೇಳಿಬಿಡಲಾ?
ಮಾಲತಿ- ಹಾಗ್ಹೇಳಿದ್ರೆ ಮುಗೀತು. ನೀವುಗಳು ಮನೇನೇ ಬಾರ್ ಮಾಡ್ಕೊಂಡ್ಬಿಡ್ತೀರಾ. . (ಹಿ.ಹಾಃ `ಜಾಲಿಬಾರಿನಲ್ಲಿ ಪೋಲಿ ಹುಡುಗರು . . ‘) ನಾವುಗಳು ನೆಟ್ಟಗಿರ್ತೀವಿ. ಹಂಸದ ಥರಾ ಚೂಸೀ. ಹಾಲೊಂದ್ಕಡೆ, ನೀರೋಂದ್ಕಡೆ ಇಟ್ರೆ ಹಾಲು ಕುಡಿದು, ನೀರನ್ನ ಬಿಡ್ತೀವಿ.
ಮಾಧವ- ನಾವೂ ಅಷ್ಟೇನಮ್ಮಾ, ಬೀಚಿ ಹೇಳ್ದಂಗೆ, ಹಾಲು ಕುಡಿದು, ನೀರು ಬಿಡ್ತೀವಿ, ಸ್ವಲ್ಪ ಹೊತ್ತಾದ್ಮೇಲೆ! ಅಷ್ಟೇ.
ಮಾಲತಿ- ಛೀ, ಏನೂಂತ ಮಾತಾಡ್ತೀರೋ.. ಅದಿರ್ಲಿ , ಆ training ನಿಮ್ದೂಂತ ಹೇಳಿದ್ರೆ ಹೇಗೆ? ಆಗ್ಲೂದ್ರೂ ಪ್ರಾಣಿ `location shift’ ಅಂದಾನು.
ಮಾಧವ- Yes, correct, we will try that (ಗೋವಿಂದನ ಆಗಮನ)
ಗೋವಿಂದ- Oh sorry, ಗಂಡ ಹೆಂಡ್ತಿ ಮಧ್ಯೆ . . . .
ಮಾಧವ- ಓ ಸುಮ್ನಿರಪ್ಪಾ, ನೀನು ಕರಡಿ ಹಾಗೇ ಬಂದೆ! ಪ್ರತಿ ದಿವಸಾ ಅದೇ ಮಾತ್ ಹೇಳ್ಬೇಡಾ, ತಲೆ ನೋಯತ್ತೆ.
ಗೋವಿಂದ- Relax ಮಾಧೂ, relax. ಗಂಡ ಹೆಂಡ್ತಿ ಮಧ್ಯೆ ಜಗಳ ಆಗ್ತಿದ್ಯಾ ಅಂತ ಕೇಳೋಕೆ ಹೊರಟಿದ್ದೆ! ಗಂಡಾ-ಹೆಂಡ್ತಿ ಅಂದ್ರೇ ಜಗಳಾ . . ಹ್ಹ ಹ್ಹ ಹ್ಹಾ . . . ಯಾಕೆ joke ಹಿಡಿಸಲಿಲ್ವಾ? Ok . . .
(ಹಿ.ಹಾಃ `ಸೂರ್ಯಂಗೂ ಚಂದ್ರಂಗೂ ಬಂದಾsರೆ ಮುನಿಸು . . )
ಮಾಧವ- ಗೋವಿಂದೂ, ನಿಂಗೊಂದ್ ಮಾತ್ ಹೇಳ್ಬೇಕಮ್ಮಾ.
ಗೋವಿಂದ- ಒಂದೇನು, ಸಾವಿರ ಹೇಳಮ್ಮಾ, ನಾನಿರೋದೇ ನಿಮಗಾಗಿ.
ಮಾಧವ- ನನಗೆ ಒಂದ್ ಹದಿನೈದು ದಿವಸ ಡೆಲ್ಲೀಲಿ training ಗೆ ಹಾಕಿದಾರೆ. ಅದಕ್ಕೇ ನೀನು . . .
ಗೋವಿಂದ- Ok, ok, ಮುಂದೇನೂ ಹೇಳ್ಬೇಕಾಗಿಲ್ಲ ನೀನು. ನಂಗೆಲ್ಲಾ ಅರ್ಥ ಆಗುತ್ತೆ.
ಮಾಧವ- ಅಬ್ಬಾ ಅಂತೂ ಅರ್ಥ ಆಯ್ತಲ್ಲಾ.
ಗೋವಿಂದ- (ಯೋಚಿಸಿ, ನಿಟ್ಟುಸಿರು ಬಿಟ್ಟು) Ok, I have come to a conclusion.
ಮಾಧವ- ಯಾವಾಗ ಹೊರಡ್ತೀಯಪ್ಪಾ? ಟಿಕೆಟ್ ಬೇಕಿದ್ರೆ ನಾನು ಬುಕ್ ಮಾಡ್ತೀನಿ.
ಗೋವಿಂದ- ಥೂ ಬಿಡ್ತೂನ್ನು, ನಾನ್ಯಾಕೆ ಹೋಗ್ಲಿ. ಅದೂ ಪಾಪ ಅತ್ತಿಗೇನ ಒಬ್ಬಂಟಿಯಾಗಿ ಬಿಟ್ಬಿಟ್ಟು!
ಮಾಧವ- ಏ ಅವೆಲ್ಲಾ ಯೋಚನೆ ಮಾಡಬೇಡ, ಇದು ಬೆಂಗ್ಳೂರಮ್ಮ. ನಂ ಹಳ್ಳಿ ಅಲ್ಲಾ.
ಗೋವಿಂದ- ನೀ ಏನೇ ಹೇಳು, ನನಗೆ ತುತ್ತನ್ನ ನೀಡಿದ ದೇವತೇನ ನಾನು ನಡು ನೀರಲ್ಲಿ ಕೈ ಬಿಡಲಾರೆ. (ಹಿ. ಹಾಃ `ಕೈ ತುತ್ತು ಕೊಟ್ಟೋಳೇ Mother India. . ‘) ಎರಡು ದಿವಸ ಬಿಟ್ಟು ಹೋಗೋಣಾಂತಿದ್ದೆ. ಈಗ, ಹೀಗಾದ್ಮೇಲೆ, ಮೂರು ವಾರ ಬಿಟ್ಟೇ ಹೋಗ್ತೀನಿ, ಬಿಡು.
ಮಾಧವ- ಛೇ ಛೇ ನಿನ್ನ plan ಪ್ರಕಾರ ನೀನು ಹೋಗಪ್ಪಾ. ಅಡ್ಡಿ ಏನಿಲ್ಲ. ನನ್ನ training ನ ನಾನು ಬೇಕಾದ್ರೆ cancel ಮಾಡಿಸ್ಕೋತೀನಿ.
ಗೋವಿಂದ- ನೀ ಹೇಳಿದ್ರೆ ಆಗ್ಬಿಡತ್ತಾ? ಈ office ಗಳಲ್ಲಿ ನಾವಂದ್ಕೊಂಡ್ಹಾಗೆ ಆದ್ರೆ ಮುಗೀತು ಕತೆ, ಅಲ್ವಾ ಅತ್ತಿಗೆ? ಈಗ ಟೆನ್ಶನ್ನೇ ಬೇಡಪ್ಪಾ. ನಿನ್ನ training ಅನ್ನೋ ತೂಗುಗತ್ತಿ ನಿಲ್ಲೋವರ್ಗೂ, ಅಂದ್ರೆ ಒಂದ್ಮೂರು ವಾರದ ವರ್ಗೆ ನಾನು ಹೋಗೋ ಕಥೇನೇ ಉದ್ಭವಿಸೋದಿಲ್ಲ. Ok?
ಮಾಧವ- ಗೋವಿಂದಾs . . . .
ಗೋವಿಂದಾ- ನಾನಿದೀನಲ್ಲಮ್ಮಾ?
ಮಾಧವ – ಅದಕ್ಕೇ ಕಣೋ, ಆ ಗೋವಿಂದನ್ನ ನೆನೆಸಿದ್ದು!
– – –
ಅಂಕ-4
ಮಾಲತಿ- ರೀ ನನಗೆ ಹುಚ್ಚು ಹಿಡಿಯೋದೊಂದು ಬಾಕಿ . ಕಸಾ ಕೊಟ್ರೂ ತಿಂತಾನಲ್ರೀ ನಿಮ್ ಶಿಷ್ಯ. ಚೋರ್ ಗುರು ಚಾಂಡಾಲ ಶಿಷ್ಯ.
ಮಾಧವ- ಏs, ನಂಗ್ಯಾಕೇ ಬೈತೀಯಾ? ಪೀಡೆ ಕಳ್ಕೊಳೋಕ್ಕೆ ನಾನು try ಮಾಡ್ತಿಲ್ವಾ?
ಮಾಲತಿ- ನಿಂ plan ಎಂಥದ್ದು ಅಂತ prove ಆಯ್ತಲ್ಲಾ. ಹೋದೆಯಾ ಪಿಶಾಚಿ ಅಂದ್ರೆ, ಬಂದೇ ಗವಾಕ್ಷೀಲಿ ಅಂತ ವಕ್ರಿಸಿಕೊಂಡ್ತು!
ಮಾಧವ- ಏನೋ ಆ plan boomerang ಆಯ್ತು, ಏನ್ಮಾಡ್ಲೀ.
ಮಾಲತಿ- ಇದು continue ಆದ್ರೆ ನಾನು loss of pay ಹಾಕಿ ಶಿರ್ಸಿಗೆ ಹೋಗ್ಬಿಡ್ತೀನಿ.
ಮಾಧವ- ಹಾಗೆಲ್ಲಾ ಮಾಡ್ಬಿಟ್ಟೀಯೆ! ಇದು ನನ್ನ ಜೀವಕ್ಕೇ ಅಂಟ್ಕೊಂಡ್ ಬಿಡತ್ತೆ! (ಹಿ.ಹಾಃ `ಕುಚುಕು, ಕುಚುಕು . . . ‘) ನೀನು ವಾಪ್ಸು ಬರೋವರ್ಗೂ ಹೋಗಲ್ಲಾ ಅಂದ್ರೆ ನನ್ನ ಗತಿ! ಏನಾರೂ strong plan ಮಾಡಣ.
ಮಾಲತಿ- ಏನು ಪ್ಲಾನೋ ಏನೋ? ವೋ ತೋ ಜಾನೇ ಕಾ ನಾಮ್ಹೀ ನಹ್ಞೀ ಲೇತಾ!
ಮಾಧವ- ವಾವ್ . . Idea . . ವೋ ನಹ್ಞೀ ಜಾತಾ ತೋ ಹಂ ಜಾ ಸಕ್ತೇ ನಾ?
ಮಾಲತಿ- ಅಂದ್ರೇ?
ಮಾಧವ- ಅದೇ ಕಣೇ, ಇದೇ ನಂ ಹೊಸಾ ಪ್ಲಾನು. Of course ಆಖರೀ ಪ್ಲಾನು.
ಮಾಲತಿ- Details ಪ್ಲೀಸ್
ಮಾಧವ- ನಾವಿಬ್ರೂ 15 ದಿವಸ Honeymoon Tourಗೆ ಬುಕ್ ಮಾಡಿದೀವಿ ಅಂತ ಹೇಳೋಣ. ನಾನೊಬ್ನೇ ಇಲ್ಲಿ ಇರ್ತೀನಿ ಅಂತ ಖಂಡಿತಾ ಹೇಳಲ್ಲ. ಯಾಕೇಂದ್ರೆ ಹೊತ್ಹೊತ್ತಿಗೆ ಕೂಳು ಸಿಗಲ್ವಲ್ಲಾ? ಏನಂತೀ?
ಮಾಲತಿ- ಹೌದ್ರೀ, ಅಪರೂಪಕ್ಕೆ ನಿಮ್ಮ ಮೆದಳೂ ಕೆಲಸ ಮಾಡತ್ತೆ!
ಮಾಧವ- ಏನಂದೇ!
ಮಾಲತಿ- ತಮಾಷೆಗಂದೆ, But ಇದು work out ಆಗುತ್ತಾ?
ಮಾಧವ- ಯಾಕಾಗಲ್ಲ, ನೋಡ್ತಿರು.
(ಗೋವಿಂದೂ ಆಗಮನ)
ಗೋವಿಂದ- Oh sorry, ಈ ಸಾರಿ ಗಂಡ ಹೆಂಡ್ತಿ . . . . .
ಮಾಧವ- ಮತ್ತೆ . . . .
ಗೋವಿಂದ- No No No . . ಗಂಡ ಹೆಂಡ್ತಿ ಸೇರಿ ನನ್ನನ್ನ ಸಾಗ ಹಾಕ್ಲೀಕೆ ನೋಡ್ತಾ ಇದ್ಹಾಂಗಿದೆ ಅಂದೆ! ಹ್ಹ ಹ್ಹ ಹ್ಹಾ . . . ಯಾಕೆ joke ಹಿಡಿಸಲಿಲ್ವಾ, Ok. . . .
ಮಾಧವ- ಗೋವಿಂದೂ, ಅದೂ ಕಳೆದ 1 ವರ್ಷದಿಂದ ನಾವು ದಂಪತಿಗಳು ಎಲ್ಲೂ ಹೋಗೇ ಇಲ್ಲ. ಅದಕ್ಕೇ ಒಂದ್ ಹದಿನೈದು ದಿವ್ಸ, ರಜಾ ಹಾಕಿ North India Tour ಹೋಗೋಣಾಂತ. `ಆನಂದ ವಿಹಾರಿ’ನಲ್ಲಿ 2 ಸೀಟ್ book ಮಾಡಿದೀವಿ. ಅದೂ ಬರೋ ಭಾನುವಾರದಿಂದ. ಲೇಟಾಗಿ book ಮಾಡಿದ್ದಕ್ಕೆ ನಮ್ದೇ ಎರಡು ಲಾಸ್ಟ್ ಸೀಟಂತೆ!
ಗೋವಿಂದ- ವಾವ್, What an idea sirjee!! `ಆನಂದ ವಿಹಾರಿ’ಯವ್ನು ನನ್ನ close friend. ಈಗ್ಲೂ ನಾನು officeಗೆ ಅವ್ನು ಕೊಟ್ಟಿರೋ bagನ್ನೇ ತೊಗೊಂಡ್ಹೋಗೋದು! (ಪ್ರೇಕ್ಷಕರತ್ತ ತಿರುಗಿ, `ಅಲ್ವೇನ್ರಪ್ಪಾ? ಹ್ಞೂ ಅನ್ನಿ’) ಅವ್ನು ನನಗೆ ಇಲ್ಲಾ ಅನ್ನೋದೇ ಇಲ್ಲ. Driverನ ಇಳಿಸಿಯಾದ್ರೂ ನನ್ನ ಕೂರಿಸ್ತಾನೆ! ಅಷ್ಟಕ್ಕೂ ನಾನು, seat ಇಲ್ಲಾಂದ್ರೆ ನಿಂತ್ಕೊಂಡು ಬರೋಕೂ ರೆಡಿ! ನನಗಾಗಿ ಅಲ್ದಿದ್ರೂ, ಇಷ್ಟ್ ದಿವ್ಸ ನಿಂ ಜೊತೆ ಇದ್ದು, ನಿಮಗೆ ನನ್ನ ಕಂಪನಿ ಇಲ್ಲಾಂತ, ಬೇಜಾರಾಗ್ಬಾರ್ದು ಅಲ್ವಾ, ಅದಕ್ಕಾಗಿ!
ಇಬ್ಬರೂ- ವೆಂಕಟರಮಣ ಗೋವಿಂದಾs , ಗೋವಿಂದ!

ಮಹಿಳಾ ದಿನಾಚರಣೆ ಪ್ರಯುಕ್ತ ಒಂದು ಏಕಾಂಕ

(Office ಗೆ ಪ್ರಶಾಂತ್ ಲೇಟಾಗಿ ಆಗಮನ . . )

ಸುಶಾಂತ್: ಏನಪ್ಪಾ ಇವತ್ತೂ ಲೇಟು! ಬಾಸ್ ಇನ್ನೂ ಬಂದಿಲ್ಲ ..ಹಾಗಾಗಿ ಬದುಕ್ಕೊಂಡೆ ಬಿಡು.

ಪ್ರಶಾಂತ್: ಏನ್ಹೇಳ್ಳಪ್ಪಾ, ಮನೇಂದ್ರೆ ಸಾಕು, ತಲೆ ಚಿಟ್ಟು ಹಿಡಿದು ಬಿಡುತ್ತೆ.

ಸುಶಾಂತ್: ಯಾರಪ್ಪಾ ನಮ್ಮ ಮಹಾರಾಜರ ಬೇಸರಕ್ಕೆ ಕಾರಣ?

ಪ್ರಶಾಂತ್: ಇನ್ಯಾರು, ಮನೇಲಿರೋ ಶೂರ್ಪನಖಿ. ಅವ್ಳದ್ದು ಯಾವಾಗ್ಲೂ ಸಿಡಿಮಿಡಿ. ನನ್ನ ಮೂಡು ಪರ್ಮನೆಂಟಾಗಿ ಹಾಳಾಗಿ ಬಿಡುತ್ತಪ್ಪ. ಎಷ್ಟೋ ಸಲ ಡೈವೋರ್ಸ್ ತೊಗೋಬೇಕೂಂತ ಅನ್ಸಿಬಿಡುತ್ತೆ.

ಸುಶಾಂತ್: ಅಯ್ಯೋ ಸ್ವಾಮೀs, ವಿಷಯಾನ ಅಷ್ಟೊಂದು serious ಮಾಡ್ಬೇಡ. ಅದಿರ್ಲಿ ಯಾಕೆ ಕೋಪ?

ಪ್ರಶಾಂತ್: ಏನೂಂತ ಹೇಳ್ಳಿ, ಎಷ್ಟೂಂತ ಹೇಳ್ಳಿ. ಒಂದಾ, ಎರಡಾ? ಕಾಫೀ ಮಾಡೇ ಅಂದ್ರೆ, ಮಕ್ಕಳಿಗೆ ಹಾಲು ಮಾಡ್ತಿದೀನಿ, ಒಂದೈದು ನಿಮಿಷಾಂತಾಳೆ. ಕರ್ಚೀಫು ಹುಡುಕ್ಕೊಡೇ ಅಂದ್ರೆ, ಮಕ್ಕಳನ್ನ ರೆಡಿ ಮಾಡ್ತಿದೀನಿ, ಸ್ಕೂಲ್ ವ್ಯಾನ್ನವ್ನು ಒಂದೇ ಸಮನೆ ಹಾರ್ನ್ ಮಾಡ್ತಿದಾನೆ, ಅವ್ನು ಬಿಟ್ಟು ಹೋದಾಂದ್ರೆ ನೀವೇ ಬಿಡ್ಬೇಕಾಗತ್ತೆ. ನೀವೇ ಹುಡುಕ್ಕೋಬಾರ್ದಾ ಅಂತಾಳೆ. ಎಲ್ಲಾದಕ್ಕೂ ಸಿಡಿಮಿಡಿ ಮಾಡಿದ್ರೆ ನನಗೆ ಹೇಗಾಗ್ಬೇಕು ನೀನೇ ಹೇಳು.

ಸುಶಾಂತ್: ಓ, ವಿಷಯಾ ಇದು. ಅದ್ಸರಿ, ನೀನು ಎಷ್ಟು ಗಂಟೆಗೆ ಏಳ್ತೀಯಾ? ಮಕ್ಕಳನ್ನು ಸ್ಕೂಲಿಗೆ ರೆಡಿ ಮಾಡ್ತೀಯಾ?

ಪ್ರಶಾಂತ್: ನಾನು ಏಳೂವರೆಗೆಲ್ಲಾ ಎದ್ಬಿಡ್ತೀನಿ. ಆಫೀಸ್ಗೆ ರೆಡಿ ಆಗ್ಬೇಕಲ್ಲಾ. ಮಕ್ಕಳನ್ನು ರೆಡಿ ಮಾಡೋದೆಲ್ಲ ಅವಳ ಡಿಪಾರ್ಟ್ಮೆಂಟು.

ಸುಶಾಂತ್: ಅತ್ತಿಗೆ ಎಷ್ಟು ಗಂಟೆಗೆ ಏಳ್ತಾರೋ?

ಪ್ರಶಾಂತ್: ಅವ್ಳು 5.30ಗೆಲ್ಲಾ ಏಳ್ಬೇಕಾಗುತ್ತೆ. ನನಗೆ ಮತ್ತು ಮಕ್ಕಳಿಗೆ ತಿಂಡಿ, ಡಬ್ಬಿಗೆ ಊಟ ಎಲ್ಲಾ ರೆಡಿ ಮಾಡ್ಬೇಕಲ್ಲಾ. ಕೆಲವು ಸಲ ಮಕ್ಕಳು ಅವ್ರಿಗೆ ಬೇಕಾದ ತಿಂಡೀನೇ ಮಾಡೂಂತ ಹಠ ಹಿಡ್ಯೋದೂ ಇದೆ. ಕೆಲವು ಸಲ ನಾನೂ ನನಗೆ ಬೇರೆ ತಿಂಡಿ ಮಾಡೂ ಅಂತೀನಿ – ನನ್ನ ನಾಲಿಗೆಗೂ ರುಚಿ ಬೇಡವೇ?

ಸುಶಾಂತ್: ಇದು, ಯಾವಾಗಾದ್ರೂ ನೀನು ಮಾಡಿದ್ದಿದ್ಯಾ?

ಪ್ರಶಾಂತ್: ಇಲ್ಲಪ್ಪಾ. ಬಹಳ ಅಪರೂಪ. ಒಂದ್ಸಲ ಅವರಪ್ಪಂಗೆ ಸೀರಿಯಸ್ ಆಗಿತ್ತೂಂತ ಮಕ್ಕಳನ್ನು ಬಿಟ್ಟು ಊರಿಗೆ ಹೋಗಿದ್ಲು. ನಾನೂ ರಜಾ ಹಾಕ್ಬೇಕಾಯ್ತು. ಆದ್ರೆ ಈ ಮಕ್ಕಳಿವೆಯಲ್ಲ, ಅವಂತೂ ರಾಕ್ಷಸ ಸಂತಾನ. ಎರಡು ದಿವಸ ನನ್ನನ್ನು ಹಿಂಡಿ ಹಿಪ್ಪೆ ಮಾಡಿಬಿಟ್ರು. ಆವತ್ತಿಂದ ಅವಳಿಗೆ ಒಬ್ಬಳೇ ಹೋಗ್ಬೇಡಾಂತ ಹೇಳ್ಬಿಟ್ಟಿದ್ದೀನಿ.

ಸುಶಾಂತ್: ಅಲ್ಲಲೇ ಮಗನೇ, ಒಂದು ದಿನಕ್ಕೇ ಸೋತು ಸುಣ್ಣ ಆದವನಿಗೆ, ಅತ್ತಿಗೆ ಪ್ರತಿದಿನ ಹೇಗೆ ನಿಭಾಯಿಸಬೇಕು, ಕಷ್ಟ ಆಗಲ್ವಾಂತ ಯೋಚ್ನೇನೇ ಬರಲ್ವಲ್ಲೋ! ಆ ತಾಪತ್ರಯದಲ್ಲಿ ನಿನ್ನ ಸಿಲ್ಲಿ ಬೇಡಿಕೆಗಳಿಗೆ ಗಮನ ಕೊಡಕ್ಕಾಗತ್ತಾ? ಯೋಚನೆ ಮಾಡು.

ಪ್ರಶಾಂತ್: ಅಲ್ಲಾ ಅದು ಹಾಗಲ್ಲ . . . . ಮಧ್ಯಾಹ್ನ ಎಲ್ಲಾ full free ಅಲ್ವಾ ಅವಳಿಗೆ, ಸೀರಿಯಲ್ಗಳನ್ನು ನೋಡಿಕೊಂಡು ಭರ್ಜರಿ ನಿದ್ದೆ ಮಾಡ್ಕೊಂಡು enjoy ಮಾಡಲ್ವಾ?

ಸುಶಾಂತ್: ಓ .. .ಅಣ್ಣಾವ್ರು ಈ ರೂಟಿಗೆ ಬಂದ್ರೋ. . . ಸ್ವಾಮೀ, ತಾವು CCPC ಯಲ್ಲಿದ್ದಾಗ stagerred duty ಮಾಡ್ತಿರ್ಲಿಲ್ವೇ? ಬೆಳಿಗ್ಗೆ ಅರ್ಧ ಶಿಫ್ಟು, 4 ಘಂಟೆ ಮೇಲೆ ಅರ್ಧ ಶಿಫ್ಟು ಆವಾಗ ಒಂದಿಷ್ಟು free time ಸಿಗ್ತಿತ್ತಲ್ಲಾ, ಮನೆಗೇಂತ ಏನಾದ್ರೂ ಮಾಡಿದ್ದುಂಟೋ?

ಪ್ರಶಾಂತ್: ಸರಿ ಹೋಯ್ತು ಬಿಡು, ನೀನ್ಹೇಳೋದು. rest ಬೇಡ್ವೇನಮ್ಮಾ ಈ ಬಾಡೀಗೆ?

ಸುಶಾಂತ್: ನಿಂದಾದ್ರೆ ಬಾಡಿ, ಅತ್ತಿಗೆದಾದ್ರೆ ಗಾಡೀನಾ? ಸಾರಿನಪುಡಿ ಮಾಡೋದು, ಚಟ್ನಿಪುಡಿ ಮಾಡೋದು ಅದೂ ಇದೂ ಅಂತ ಏನಾದ್ರೂ ಒಂದು ಕೆಲ್ಸ ಇದ್ದೇ ಇರತ್ತಮ್ಮಾ ಅವ್ರಿಗೆ. ನೀನಂದುಕೊಂಡ್ಹಾಗೆ ನಿದ್ದೆ ಮಾಡ್ಕೊಂಡು ಸುಖದ ಸುಪ್ಪತ್ತಿಗೆ ಮೇಲಿರಲ್ಲ ತಿಳ್ಕೋ.

ಪ್ರಶಾಂತ್: ಅಣ್ಣಯ್ಯಾ, ನಾನು ಕಷ್ಟ ಪಟ್ಟು ದುಡಿದು ಸಂಬಳ ತಂದ್ಹಾಕ್ತೀನಿ ಮನೆಗೆ. ಅದು ಗೊತ್ತಿರ್ಲಿ . . .

ಸುಶಾಂತ್: ಇದಕ್ಕೇನು ಕಡಿಮೆ ಇಲ್ಲಾ ನೋಡು. ಸ್ವಾಮೀ, ಮನೆಯಾಕೆ ಮನೇಲಿರ್ತಾಳೆ ಅಂತೀಯಲ್ಲಾ, ಅವರ ಕೆಲಸಕ್ಕೆ economic value ಹಾಕಿದ್ರೆ, ಅವ್ರೂ ಸಂಸಾರಕ್ಕೆ ನಿನ್ನಷ್ಟೇ ದುಡಿದು ಹಾಕ್ತಿದಾರೆ. ನಿಂದು physical ಆಗಿ ಕಾಣತ್ತೆ. ಅವರದ್ದು ಕಾಣಲ್ಲ ಅಷ್ಟೇ. (ಜನಗಳನ್ನು ನೋಡಿ) – ಏನ್ರಮ್ಮಾ ಇದಕ್ಕೂ ಚಪ್ಪಾಳೆ ಹಾಕಲ್ವಾ? – ಹಾಗೆ – ಅಂದ್ಹಾಗೆ ಯಾರಿಗೂ ಹೇಳಕ್ಹೋಗ್ಬೇಡಾ, ಇವತ್ತಿನ inflation ಲೆಕ್ಕದಲ್ಲಿ ನಿನ್ನ ಹೆಂಡ್ತಿ ದುಡಿತ, ನಿನ್ನ salary ಗಿಂತ ಜಾಸ್ತಿ ಆಗುತ್ತೆ!

ಪ್ರಶಾಂತ್: ಸದ್ಯ, ಇದನ್ನೆಲ್ಲಾ ನನ್ಹೆಂಡ್ತಿ ಮುಂದೆ ಹೇಳಬೇಡ. ಆಮೇಲೆ ಅವಳೇ ನನಗೆ ಡೈವರ್ಸ್ ಕೊಟ್ಟಾಳು! ನಾನ್ಹೇಳಿದ್ದು, ಅವ್ರುಗಳು ಮಧ್ಯಾಹ್ನ kitty party ಅದೂ ಇದೂಂತ enjoy ಮಾಡಲ್ವಾ? ನಾವು ಆಫೀಸಿನಲ್ಲಿ ಎಷ್ಟು tension ನಲ್ಲಿ ಕೆಲಸ ಮಾಡ್ತಿರ್ತೀವಿ.

ಸುಶಾಂತ್: ಅದ್ನಿಜಾನ್ನು. ಅದ್ಸರಿ, ಆಫೀಸಿನಲ್ಲಿ ಟೀ-ಕಾಫೀ ಪಾರ್ಟಿ ಎಲ್ಲಾ ಇರಲ್ವಾ? Office tension ಅಂತೀಯಲ್ಲಾ ಆ ಶೀಲಾ, ರೋಸೀ. . . .

ಪ್ರಶಾಂತ್: ಆ ಶೀಲಾ, ರೋಸೀ ಅವರದ್ದೆಲ್ಲಾ ಡ್ರೆಸ್ಸೆನ್ಸ್ ಅಲ್ಟಿಮೇಟಮ್ಮಾ . . ಏಯ್, ಹಾಗ್ಯಾಕೆ ನೋಡ್ತಿದೀಯಾ? `ಅಂಥ’ದ್ದೇನೂ ಇಲ್ಲಮ್ಮಾ!

ಸುಶಾಂತ್: `ಅಂಥ’ದ್ದಿದೆ ಅಂತ ನಾನೆಲ್ಲಿ ಹೇಳಿದೆ. ನೀನೇ `ಹೆಗಲು ಮುಟ್ಕೊಂಡು ನೋಡ್ಕೊಂಡೆ’ ಅಷ್ಟೇ! ನಾನ್ಹೇಳಿದ್ದು ನಿನ್ನ ಟೆನ್ಷನ್ ಆಫೀಸ್ದೋ, ಆಫೀಸ್ ಜನಗಳದ್ದೋ ಅಂತ!

ಪ್ರಶಾಂತ್: ಬಿಡಪ್ಪಾ, ನಿನಗೆ ಬಿಟ್ಟರೆ, ಸೀದಾ ನನ್ನ ಬುಡಕ್ಕೇ ಬೆಂಕಿ ತಂದಿಟ್ಟು ಬಿಡ್ತೀಯಾ!

ಸುಶಾಂತ್: ಅದ್ಸರಿ, ಅತ್ತಿಗೆಗೆ ಯಾವಾಗಲಾದರೂ ಅವರ ಕೆಲಸಕ್ಕೆ ಸಹಾಯ ಮಾಡ್ತಾ ಇರ್ತೀಯಾ?

ಪ್ರಶಾಂತ್: ಯಾಕಿಲ್ಲ, ಮದುವೆ ಆದ ಹೊಸತರಲ್ಲಿ ಸಂಕ್ರಾಂತೀಗೆ ಒಂದ್ಸಲ, ಸೌತೇಕಾಯಿ ಹೆಚ್ಕೊಟ್ಟಿದ್ದೆ, ಅಡುಗೆಗೇಂತ. ಈಗ್ಲೂ ಅವ್ಳು ಅದನ್ನ ನೆನಪಿಸ್ಕೋತಾನೇ ಇರ್ತಾಳೆ.

ಸುಶಾಂತ್: ಅತ್ತಿಗೆ ನೆನಪಿಸ್ಕೊತಾಳೋ ಅಥವಾ ನೀನೇ ಮತ್ತೆ ಮತ್ತೆ ಅದನ್ನ ಹೇಳ್ತಾ ಇರ್ತಿಯೋ?

ಪ್ರಶಾಂತ್: ಎಲ್ಲಾ ಒಂದೇನೇ. ನಾನೇ ಹೇಳ್ತೀನಿ ಅಂತಾನೇ ಇಟ್ಕೋ. ತಪ್ಪಾ? ಹೆಲ್ಪ್ ಮಾಡಿಲ್ವಾ?

ಸುಶಾಂತ್: ಈ ego ನೇ ನಮ್ಮನ್ನ ಸಾಯಿಸೋದು ಅಣ್ಣಯ್ಯ. ಯಾವತ್ತೋ ಒಂದಿವ್ಸ ಮಾಡಿದ್ದನ್ನ ಜನ್ಮವಿಡೀ ಹೇಳ್ತಿರ್ತೀವಿ. ಅದೇ ಅವಳು ನಮಗೆ ಮಾಡಿದ್ರೆ ನಮಗೆ irritate ಆಗಲ್ವಾ? ಅದೂ ಅಲ್ದೇ, ಅದು help ಆಗಲೀ, ಅಥವಾ ನೀನಂದು ಕೊಂಡಂತೆ, ನೀನು ಮಾಡಿದ favour ಆಗ್ಲೀ ಅಲ್ಲ. ಅವ್ಳು ಹೇಗೆ ನಿಮ್ಮ ಸಂಸಾರಕ್ಕೆ ಮಾಡ್ತಿದಾಳೋ ಹಾಗೆಯೇ, ನೀನೂ ನಿಮ್ಮ ಸಂಸಾರಕ್ಕೆ ಮಾಡ್ತಿರೋ ಕರ್ತವ್ಯ ಅಷ್ಟೇ. ಇಲ್ಲಿ favour ನ ಪ್ರಶ್ನೇನೇ ಬರಲ್ಲ. ಹಿಂದೆ ಬ್ಯಾಂಕಲ್ಲಿ ನಾವು, ಕಂಪ್ಯೂಟರೈಸೇಶನ್ಗೂ ಮುಂಚೆ, ಎಲ್ಲಾ ಸೇರಿ ಬ್ಯಾಲೆನ್ಸ್ ಮಾಡಿ ಕೈ ಜೋಡಿಸುತ್ತಿದ್ದೆವಲ್ಲಾ, ಹಾಗೇನಮ್ಮಾ ಇದೂನೂವೇ.

ಪ್ರಶಾಂತ್: ನೀನು ಎಲ್ಲಾದಕ್ಕೂ ಹೆಂಗಸರ ಪರಾನೇ ಮಾತಾಡ್ತೀಯಾ. ಅವ್ರು ಕಪ್ಪಗಿದ್ರೂ, ದಪ್ಪಕ್ಕಿದ್ರೂ ನಾವು ಮದುವೆ ಆಗಿಲ್ವಾ? ನಮ್ಮದೇನೂ greatness ಇಲ್ಲವೇ ಇಲ್ಲಾಂತೀಯಾ?

ಸುಶಾಂತ್: ನೋಡು, ನಂ ಗಂಡಸರ ಕಥೆಯೆಲ್ಲಾ ಇಷ್ಟೇನೇ. ವಾದದಲ್ಲಿ ಇನ್ನೇನು ಸೋತ್ಬಿಡ್ತೀವಿ ಅಂತ ಆದಾಗ, ಇಂಥಾ ವಿಚಾರಕ್ಕೆ ಬಂದ್ಬಿಡ್ತೀವಿ. ಬೇರೆ ಹೆಂಗಸಾದ್ರೆ, ಅವಳ ಶೀಲದ ಬಗ್ಗೆ ಮಾತಾಡಕ್ಕೆ ಶುರು ಮಾಡಿಬಿಡ್ತೀವಿ. ಅದು ಹಾಳಾಗ್ಲಿ, ತಿಂಡಿ ತಿಂದಿದ್ದಾಯ್ತಾ?

ಪ್ರಶಾಂತ್: ಅಂತೂ ಸೋತೆ ಅಂತ ಒಪ್ಕೊಂಡ್ಯಾ? ಅಬ್ಬಾ! ತಿಂಡಿ ತಿಂದಿದ್ದಾಯ್ತು. ಯಾಕೆ?

ಸುಶಾಂತ್: ಸರಿಯಾಗಿ ಸಿಂಕಲ್ಲಿ ಕೈ ತೊಳ್ಕೋ. ಅಲ್ಲಿ ಕನ್ನಡೀನೂ ಇದೆ.

ಪ್ರಶಾಂತ್: Yes, ತೊಳ್ಕೋತೀನಿ. ಕನ್ನಡೀಲಿ ನೋಡ್ಕೊಂಡೇ . . . . . ಏಯ್, ಏನು, ನನ್ನ ಮೂತಿ ಸರಿ ಇಲ್ಲಾಂತ ಕಿಂಡಲ್ ಮಾಡ್ತಿದೀಯ?

ಸುಶಾಂತ್: ಇಲ್ಲಪ್ಪಾ ಸತ್ಯಾನೇ ನುಡೀತಿದೀನಿ!

ಪ್ರಶಾಂತ್: ಅಣ್ಣೋ, ಇಂಥಾ ಕಠೋರ ಸತ್ಯ ಹೇಳಬೇಡಪ್ಪಾ! ಅರಗಿಸಿಕೊಳ್ಳೋಕೆ ಕಷ್ಟ ಆಗುತ್ತೆ!

ಸುಶಾಂತ್: ಅದ್ಸರಿ, ಇತ್ತೀಚೆಗೆ ಯಾವಾಗಾದ್ರೂ, ಹೆಂಡ್ತೀನ ತಬ್ಕೊಂಡು ‘I Love you’ ಅಂತ ಹೇಳಿದೀಯಾ?

ಪ್ರಶಾಂತ್: ನಿಂದೊಳ್ಳೇ ಕಥೆಯಾಯ್ತು. ಅದೆಲ್ಲಾ ಮದುವೆಯಾದ ಹೊಸತರಲ್ಲಿ_ ಈಗೆಲ್ಲಿಂದ ಬಂತು!

ಸುಶಾಂತ್: ನನ್ನ ಮಾತು ಕೇಳು. ಈಗಲೂ ಒಮ್ಮೊಮ್ಮೆ ಅವಳನ್ನಪ್ಪಿ ‘I Love you’ ಅಂತ ಹೇಳಿ ನೋಡು. ಆವಾಗ, ಡೈವೋರ್ಸ್ ಗೀವೋರ್ಸ್ ಅಂತ ನಿನ್ನ ಬಾಯಿಂದ ಅಪ್ಪಿತಪ್ಪಿಯೂ ಬರಲ್ಲ.

ಪ್ರಶಾಂತ್: ಗುರೂ, ನಿಜ ಹೇಳಬೇಕೂಂದ್ರೆ, ನನಗೂ ಎಷ್ಟೋ ಸಲ ಹೇಳ್ಬೇಕೂಂತಲೇ ಅನ್ನಿಸತ್ತೆ. ಹಾಳಾದ್ದು `ಅಹಂ’ ಅಡ್ಡ ಬಂದ್ಬಿಡುತ್ತೆ – ನಾನೇ ಯಾಕೆ first ಹೇಳಬೇಕೂಂತ.

ಸುಶಾಂತ್: ಅವಳಿಗೆ ನಿನ್ನ ಅನುಕಂಪ, favour ಏನೂ ಬೇಡಾಮ್ಮ. They want your TRUE Love. That’s all.

ಪ್ರಶಾಂತ್: ಹ್ಞಾ. . . . (ನಿಟ್ಟುಸಿರು ಬಿಟ್ಟು) ಏನೇ ಆಗ್ಲಿ ಇವತ್ತು ಮನೆಗೆ ಹೋದ್ಮೇಲೆ ಹೇಳೇ ಬಿಡ್ತೀನಿ – I Love you my lovely lady ಅಂತ.

ಸುಶಾಂತ್: ನೋಡು ಇದು ಎಲ್ಲಾ ಗಂಡಂದಿರಿಗೂ ಅರಿವಾದ ದಿವಸಾನೇ, ಗಂಡ-ಹೆಂಡ್ತಿ ಜಗಳಾನೇ ಇರಲ್ಲ. ಕಾಕತಾಳೀಯವಾಗಿ, ಇವತ್ತು ಮಹಿಳಾ ದಿನಾಚರಣೆ, ಎಲ್ಲ ಮಹಿಳೆಯರಿಗೂ ಒಂದು ದೊಡ್ಡ ಚಪ್ಪಾಳೆ ತಟ್ಟೋಣವೇ? (ಜನರತ್ತ ತಿರುಗಿ) ಯಾಕೆ ನಿಮಗೆ ಸಪರೇಟಾಗಿ ಹೇಳ್ಬೇಕಾ?

ಪ್ರಶಾಂತ್: ಅದೆಲ್ಲಾ ಸರೀನಪ್ಪಾ. ಇಷ್ಟೆಲ್ಲಾ ಗೊತ್ತಿರೋ ನೀನ್ಯಾಕೆ ಇನ್ನೂ ಮದುವೆ ಆಗಿಲ್ಲ!

ಸುಶಾಂತ್: ಹ್ಞಾಂ. . . (ನಿಟ್ಟುಸಿರು ಬಿಟ್ಟು) ನನ್ನನ್ನ ಅರ್ಥ ಮಾಡ್ಕೋಳೋವ್ರು ಇನ್ನೂ ಸಿಕ್ಕಿಲ್ಲಾಮ್ಮ!

ಪ್ರಶಾಂತ್: ಆ್ಞಂ. . . . . .

————–

ಮಾಡರ್ನ್ ದ್ರೌಪದಿ ಮಾನಭಂಗ

ಪಾತ್ರಗಳು: ಧರ್ಮರಾಯ, ದುರ್ಯೋಧನ, ಶಕುನಿ, ದುಃಶ್ಯಾಸನ, ದ್ರೌಪದಿ, ಕೃಷ್ಣ
——-
(ಹಿನ್ನೆಲೆ ಹಾಡು – `ನಾ ಬೆಂಕಿಯಂತೆ, ನೀ ಗಾಳಿಯಂತೆ . . .’ ದುರ್ಯೋಧನ, ಶಕುನಿ, ಹಾಡಿಗೆ ಹೆಜ್ಜೆ ಹಾಕುತ್ತಾರೆ)
ದುರ್ಯೋಧನ : ಮಾಮಾಶ್ರೀ match fixing ಪಕ್ಕಾ ತಾನೇ? ಬೆಟ್ಟಿಂಗ್ಗೆ ಧರ್ಮರಾಯನ್ನ ಕರ್ದಿದ್ದೀನಿ. ಆಮೇಲೆ ಸೋತು ಪರಿಪಾಟಲಾಗಬಾರದು.
ಶಕುನಿ : ಆ್ಞ , you are doubting me? Me? ಯಾಕಪ್ಪಾ ? ದ್ವಾಪರ ಯುಗದಲ್ಲಿ ಪಗಡೆ ಆಡಿ ಗೆದ್ದದ್ದು ಮರ್ತುಹೋಯ್ತೇನು?
ದುರ್ಯೋಧನ : ಅದ್ಸರಿ… ಸರಿ, ಸರಿ, ಸುಮ್ನಿರು, ಧರ್ಮರಾಯ ಬಂದ.
ದುರ್ಯೋಧನ : Welcome ರಾಯರಿಗೆ, ರೆಡೀನಾ ಬೆಟ್ಟಿಂಗ್ಗೆ?
ಧರ್ಮರಾಯ : ಬೆಟ್ಟಿಂಗ್ಗೆ ನಾನ್ಯಾವತ್ತೂ ರೆಡೀನೇ..ಮಾ. ಅದು ನನ್ನ ಫೇವರೆಟ್ ಗೇಮ್. ನೋಡಿಲ್ಲಿ, ನನ್ನ ಮೊಬೈಲ್ ಸ್ಕ್ರೀನ್ ಸೇವರ್ರೇ ಬೆಟ್ಟಿಂಗ್ ರೇಸ್ ಕುದುರೆ. ಈ ಸಲಾ ಏನಾದ್ರೂ ನಾನು ಬೆಟ್ಟಿಂಗ್ನಲ್ಲಿ ಸೋತ್ರೆ ಬೆಂಗಳೂರು southನ್ನು ನಿನಗೆ ಕೊಟ್ಬಿಡ್ತೀನಿ.
ದುರ್ಯೋಧನ : Land ಯಾವನಿಗೆ ಬೇಕು? Demonetisation ನಿಂದ ರಿಯಲ್ ಎಸ್ಟೇಟ್ ಬಿದ್ಹೋಗಿದೆ. ಅದು ಬೇಡ. ನಿನಗೆ ಧಂ ಇದ್ರೆ, ನೀನು ಅಮ್ಮಾವ್ರ ಗಂಡ ಅಲ್ದಿದ್ರೆ, ದ್ರೌಪದೀನ ಪಣಕ್ಕಿಡು.
ಧರ್ಮರಾಯ : ಆ್ಞ , ಏನು ನನ್ನ ಗಂಡಸ್ತನದ ಮೇಲೇ ಛಾಲೆಂಜಾ?
(ಹಿ. ಹಾ : ಗಂಡು ಎಂದರೆ ಗಂಡು, ಬೆಂಕಿ ಚೆಂಡು, ಬಂಕಾಪುರದ ಬೆಂಕಿ
ಚೆಂಡು, ಬಹದ್ದೂರ್ ಗಂಡು . . . )
Done. ಯಾವ ಮ್ಯಾಚ್ ನಡೀತಿದೆ ಈಗ, ಬೆಟ್ಟಿಂಗ್ಗೆ?
ದುರ್ಯೋಧನ : ನಡೀತಿದ್ಯಲ್ಲಾ, ಇಂಡಿಯಾ – ಸೌತ್ ಆಫ್ರಿಕಾ ಮ್ಯಾಚು.
ಧರ್ಮರಾಯ : ಸರಿ ನನ್ನ ಬೆಟ್ಟಿಂಗ್ ಇಂಡಿಯಾ ಮೇಲೆ.
ದುರ್ಯೋಧನ : ಶಕುನಿ ಮಾಮ?
ಶಕುನಿ : ನಂ ಬೆಟ್ ಸೌತಾಫ್ರಿಕಾ ಮೇಲೆ. 2 ಘಂಟೇಲಿ ಆಟ ಮುಗ್ಯತ್ತೆ ನೋಡೋಣ.
(ಪಕ್ಕಕ್ಕೆ ಬಂದು ಯಾರೊಂದಿಗೋ ಗುಪ್ತವಾಗಿ ಮಾತಾಡಿ, match fix ಮಾಡುತ್ತಾನೆ. ನಂತರ ಎಲ್ಲರೂ ಹೋಗಿ ಮತ್ತೆ ಸೇರುತ್ತಾರೆ)
ಧರ್ಮರಾಯ : ಏನಾಯ್ತು ಮ್ಯಾಚು?
ಶಕುನಿ : ಯಾಕೆ ಮೊಬೈಲಲ್ಲಿ ಇಂಟರ್ನೆಟ್ ಇಲ್ವಾ? ನ್ಯೂಸ್ ನೋಡು.
ಧರ್ಮರಾಯ : Net Pack ಖಾಲಿ ಆಗಿದ್ಯಪ್ಪಾ. ಇಲ್ದಿದ್ರೆ ನಿನ್ಯಾಕೆ ಕೇಳ್ತಿದ್ದೆ?
ಶಕುನಿ : ಇಂಡಿಯಾ ಸೋತಿದೆ. ಅಂದ್ರೆ ಬೆಟ್ಟಿಂಗ್ನಲ್ಲಿ ನಂ ದುರ್ಯೋಧನ ಗೆದ್ದಿದ್ದಾನೆ. ಹ್ಹ ಹ್ಹ ಹ್ಹಾ . . . . .
ಧರ್ಮರಾಯ : ಅಯ್ಯೋ ಮತ್ತೆ ದ್ರೌಪದಿ ವಸ್ತ್ರಾಪಹರಣವೇ? ಗೊತ್ತಾದ್ರೆ ಭೀಮ ನನ್ನನ್ನ ಹೂತ್ಹಾಕಿ ಬಿಡ್ತಾನೆ!
ದುರ್ಯೋಧನ : ಹ್ಹ ಹ್ಹ ಹ್ಹಾ . . . ದುಃಶ್ಶಾಸನಾ, ದ್ರೌಪದೀನ ಇಲ್ಲಿಗೆ ಎಳ್ಕೊಂಡು ಬಾ..
ದುಃಶ್ಶಾಸನ : ಅಷ್ಟೆಲ್ಲಾ ಕಷ್ಟ ಯಾಕೆ? SMS ಹಾಕಿದೀನಿ. ಇನ್ನೆರಡು ನಿಮಿಷದಲ್ಲಿ ಇಲ್ಲಿರ್ತಾಳೆ ಬಿಡು.
ಧರ್ಮರಾಯ : ಅಲ್ಲಯ್ಯಾ ದುರ್ಯೋಧನಾ, ಯಾಕೀಪಾಟಿ ಕೋಪ ದ್ರೌಪದೀ ಮೇಲೆ?
ದುರ್ಯೋಧನ : ಇಲ್ವಾ ಮತ್ತೆ. ಆವತ್ತು ಗೋಪಾಲನ್ ಮಾಲ್ಗೆ ಹೋದಾಗ, ಸಿಕ್ಬಿಟ್ಟು, ನನ್ನ ಗಾಗಲ್ಸ್ ನೋಡಿ `ಕುಲ್ಡನ್ ಮಗ ಕುಲ್ಡ’ ಅನ್ಲಿಲ್ವಾ? ಜೊತೆಗೆ, ಗಾಗಲ್ ಹಾಕ್ಕೊಂಡು ಗೂಗಲ್ ನೋಡೋ ಪಾಗಲ್ ಅನ್ಬಿಡೋದಾ? ಸಿಟ್ಟು ಬರಲ್ವಾ?
ಧರ್ಮರಾಯ : ಏನೋ ಹಾಸ್ಯಕ್ಕೆ . . . .
ದುರ್ಯೋಧನ : ನನ್ನನ್ನೇನಾದ್ರೂ ಅಂದಿದ್ರೆ ಚಿಂತೆಯಾಗ್ತಿತ್ತಿಲ್ಲ! 10000/- ಕೊಟ್ಟಿರೋ ನನ್ನ ಗಾಗಲ್ಸ್ಗೆ ಯಾರಾದ್ರೂ ಏನಾದ್ರೂ ಅಂದ್ರೆ ನಾನು ಸುಮ್ಮನಿರೋನಲ್ಲ!
ದುಃಶ್ಶಾಸನ : ಅಯ್ಯೋ ನಿಮ್ಮ ಜಗಳ ಯಾವಾಗಲೂ ಇದ್ದದ್ದೇ. ಸುಮ್ನಿರಿ, ದ್ರೌಪದಿ ಬಂದ್ಲು.
(ಹಿ. ಹಾ: ಓಪನ್ ಹೇರು ಬಿಟ್ಕೊಂಡು, ಕೂದಲು ಹಾರಾಡಿಸ್ಕೊಂಡು…)
ದ್ರೌಪದಿ : ಏನಪ್ಪಾ ಧರ್ಮರಾಯ. ಯುಗ ಬದಲಾದ್ರೂ ನಿನ್ನ ಚಟ ಬದಲಾಗಲಿಲ್ಲವಲ್ಲ. ಮತ್ತೆ ಬೆಟ್ಟಿಂಗ್ನಲ್ಲಿ ಸೋತ್ಯಾ?
ಧರ್ಮರಾಯ : ನಿಂಗ್ ಹ್ಯಾಗೆ ಗೊತ್ತಾಯ್ತು?
ದ್ರೌಪದಿ : ಸ್ವಾಮೀ, ಸ್ವಲ್ಪ update ಆಗಿರಪ್ಪಾ. ನೀನು ಸೋಲೋಕೂ ಮುಂಚೇನೇ ಎಲ್ಲಾ ಟಿ.ವಿ. ನ್ಯೂಸ್ ಛಾನಲ್ನಲ್ಲಿ Breaking News ಆಗಿ ಬರ್ತಿದೆ.
(ಹಿ. ಹಾ. MTV ಸುಬ್ಬುಲಕ್ಷ್ಮಿಗೇ ಬರೀ ಓಳು . . . )
ಧರ್ಮರಾಯ : ಭೀಮಂಗೆ ಗೊತ್ತಾಗಿಲ್ಲ ತಾನೇ?
ದ್ರೌಪದಿ : ನಂಗೊತ್ತಿಲ್ಲಪ್ಪಾ. . ಪಿಜ್ಜಾ ತಿಂತಿದ್ದವ್ನುAK 47 ಗನ್ ಎಲ್ಲಿ ಸಿಗತ್ತೆ ಅಂತ ಅರ್ಜುನನ್ನ ಕೇಳಿ, ಇಬ್ರೂ ಗೂಗಲ್ನಲ್ಲಿ ಸರ್ಚ್ ಮಾಡ್ತಿದ್ರು.
ದ್ರೌಪದಿ : ಅದ್ಸರಿ, ನನ್ನನ್ಯಾಕಪ್ಪಾ ಇಲ್ಲಿ ಕರ್ಸಿದ್ದು Mr. ದುಃಶಾಸನ್?
ಧರ್ಮರಾಯ : ಅಯ್ಯಾ ದುಃಶಾಸನ, ಮತ್ತೊಮ್ಮೆ ವಸ್ತ್ರಾಪಹರಣ ಮಾಡಬೇಡವಯ್ಯಾ! ಎಲ್ಲಾ ಚಾನಲ್ನವರೂ ಇನ್ನೊಂದ್ ವರ್ಷದವರೆಗೆ ಇಂಚಿಂಚಾಗಿ ಅದನ್ನೇ ತೋರಿಸ್ತಿರ್ತಾರೆ.
ದುಃಶಾಸನ : ಅಯ್ಯಾ ಬಿಡ್ತೂನ್ನು, ನಂಗೇನು ಬೇರೆ ಕೆಲಸ ಇಲ್ವಾ? ಅದೂ, ನಾನು ಹಾಗೇ ಇರ್ಲೀಂತ SBI ನಲ್ಲಿ ಕೆಲ್ಸಕ್ಕೆ ಸೇರ್ಕೊಂಡ್ ಬಿಟ್ಟೆ. ಅದೊಂದೇ ನಾ ಮಾಡಿದ ತಪ್ಪು! ಈಗ SBI Life, ಮ್ಯೂಚುವಲ್ ಫಂಡು ಮಾಡ್ಸು ಮಾಡ್ಸೂಂತ ವಿಪರೀತ ಪ್ರೆಶರ್ರು. ಆಗಿಲ್ಲಾಂದ್ರೆ ಮೇಲ್ನವ್ರು ಎಲೆ ಅಡಿಕೆ ಹಾಕ್ಕೊಂಡು ಉಗೀತಿದ್ದಾರೆ. ನುಂಗಾಂಗಿಲ್ಲ ಉಗುಳಾಂಗಿಲ್ಲ – ಉಗಿದಿದ್ದನ್ನಲ್ಲಾ – ಕೆಲಸದ ಬಗ್ಗೆ ಹೇಳಿದ್ದು. ಅದಕ್ಕೇ ದ್ರೌಪದಿ ಹೆಸರಲ್ಲಿ ಒಂದಿಷ್ಟು SBI Life ಮಾಡ್ಸುವಾಂತ!
ದ್ರೌಪದಿ : ಛಾನ್ಸೇ ಇಲ್ಲ – ಮರೆತು ಬಿಡು ಅದನ್ನ. ನನ್ಹತ್ರ ಎಲ್ಲಿ ದುಡ್ಡಿದೆ? ನಾನಂತೂ SBI Life ತೊಗೊಳೋಲ್ಲ.
ದುಃಶ್ಶಾಸನ : ಹಾಗಂದ್ರೆ ಹೇಗೆ? ನಿನ್ನ ಅಕೌಂಟ್ನಲ್ಲಿ ಎಷ್ಟು ದುಡ್ಡಿದೇಂತ ಬ್ಯಾಂಕಿನವ್ರಿಗೆ ಗೊತ್ತಾಗೋಲ್ವೇ? ಪ್ರಶ್ನೇನೇ ಇಲ್ಲ. SBI Life ನಲ್ಲಿ 5 ಕೋಟಿ, ಮ್ಯೂಚುವಲ್ ಫಂಡಲ್ಲಿ 5 ಕೋಟಿ ಹಾಕೋದೇನೇ. ಬೇರೆ ಆಪ್ಶನ್ನೇ ಇಲ್ಲ. ಧರ್ಮರಾಯ ಬೇರೇ ನಿನ್ನನ್ನು ಸೋತಿಲ್ವಾ? ನಾನು MDRT ಆಗಿ Europe Tour ಹೋಗ್ಬೇಕು!
ದ್ರೌಪದಿ : ಹಾಯ್, ಮೈ ಮರ್ ಜಾವಾs
(ಹಿ. ಹಾ. ಇದು ಯಾರು ಬರೆದ ಕಥೆಯೋs. . . )
ಹ್ಞಾ ನನ್ನ ಆಪತ್ತಿಗಾಗೋವ್ನು ಕೃಷ್ಣ ಮಾತ್ರ. ಓ ಗಿರಿಧರಾs . . ಅಯ್ಯೋ ಅಷ್ಟು ಜೋರಾಗಿ ಕೂಗಿದ್ರೆ ನನ್ನ ಲಿಪ್ಸ್ಟಿಕ್ಕೆಲ್ಲಾ ಹಾಳಾಗುತ್ತೆ. ವಾಟ್ಸಾಪ್ ಮೆಸೇಜ್ ಮಾಡಿಬಿಡ್ತೀನಿ.
(ಹಿ. ಹಾ: ಕಿಟ್ಟಪ್ಪ ಕಿಟ್ಟಪ್ಪಾ ನಿನ್ನ ಪ್ಲೂಟು ಎಲ್ಲಪ್ಪಾ…)
ಕೃಷ್ಣ : (ಬಂದು) ಹಾಯ್ ಎವರಿಬಡೀ, ದ್ರೌಪದೀ ಏನಮ್ಮಾ ಕರೆದೆಯಲ್ಲ. ಏನ್ ಸಹಾಯ ಬೇಕಿತ್ತು?
ದ್ರೌಪದಿ : ಸದ್ಯ ಬಂದ್ಯಲ್ಲಾ. ಈ ದುಃಶಾಸನ ನನ್ನಿಂದ ಎಲ್ಲವನ್ನೂ ದೋಚ್ತಾ ಇದ್ದಾನೆ.
ಕೃಷ್ಣ : ಇನ್ನೂ ವಸ್ತ್ರಾಪರಣ ಸೀನೇ ಶುರು ಆಗಿಲ್ಲ. ಮುಂಚೇನೆ ಯಾಕೆ ಕರ್ದಿದ್ದು? ಗೋಪಿಯರ ಜೊತೆ ಹಾಯಾಗಿರೋಕೂ ಬಿಡಲ್ವಲ್ಲಾ!
ದ್ರೌಪದಿ : ವಸ್ತ್ರಾಪಹರಣ ಇವನ ಕೈಲಿ ಎಲ್ಲಿ ಆಗತ್ತೆ? ಮುಖ ನೋಡು! ವಿಷಯ ಅದಲ್ಲ. ನನ್ಹತ್ರ ಇರೋ ದುಡ್ಡನ್ನೆಲ್ಲಾ SBI Life ಗೆ ಹಾಕ್ಸಿ ಮುಂಡಾ ಮೋಚಕ್ಕೆ ಸ್ಕೆಚ್ ಹಾಕಿದಾನೆ_ ಈ ದುಶ್ಯಾಸನ.
ಕೃಷ್ಣ : ಅದ್ಸರೀನ್ನು, ಮೊನ್ನೆ ಯಾವನೋ ಒಬ್ಬ ಬ್ಯಾಂಕಿಗೆ ಹೋಗಿದ್ನಂತೆ. ಎಲ್ರಿಗೂ ಗನ್ ತೋರಿಸಿ ಹೇಳಿದ್ನಂತೆ – `ನೋಡಿ, ನಾನಿಲ್ಲಿ ಬಂದಿರೋದು, ದುಡ್ಡು ಅಕೌಂಟ್ನಲ್ಲಿ ಡೆಪಾಸಿಟ್ ಮಾಡಕ್ಕೆ. SBI Life, ಮ್ಯೂಚುವೆಲ್ ಫಂಡು ಅಂದ್ರೋ, ಕೊಂದ್ಹಾಕಿ ಬಿಡ್ತೀನಿ!’ ಅಂತ. ಅಪ್ಪಾ ದುಶ್ಯಾಸನ, ಪಾಪದ ಹೆಣ್ಮಗಳು, ಆಕೀನ ಬಿಟ್ಟು ಬಿಡಪ್ಪಾ!
ದುಶ್ಯಾಸನ : ನೋಡು, ಆಗೋದೆಲ್ಲಾ ಒಳ್ಳೇದಕ್ಕೇ ಅಂತ ಇದಕ್ಕೇ ಹೇಳೋದು. ಅಣ್ಣೋ ದಯಮಾಡಿ ನೀನು SBI Life ಗೆ ಒಂದ್ಹತ್ತಿಪ್ಪತ್ತು ಕೋಟಿ ಹಾಕ್ಬಿಡಮ್ಮಾ. ನನ್ನ target ಅಚೀವ್ ಆಗುತ್ತೆ. ಇಲ್ಲಾ ಅನ್ಬೇಡ.
ಕೃಷ್ಣ : ಥತ್ತೇರಿಕಿs ಇದ್ಯಾಕೋ ನನ್ನ ಬುಡಕ್ಕೇ ಬರ್ತಿದೆಯಲ್ಲಪ್ಪಾ! ಇದನ್ನ ನೀವ್ನೀವೇ ನೋಡ್ಕೋಳೀಪ್ಪಾ. ನನ್ನನ್ನು ಮಧ್ಯೆ ಏಳೀಬೇಡಿ. ನಂಗೂ SBI Life ಗೂ ತುಂಬಾನೇ ದೂರ! ದ್ರೌಪದೀ ಈ ವಿಷ್ಯದಲ್ಲಿ ನಿಂಗೆ ಸಹಾಯ ಮಾಡಕ್ಕಾಗಲ್ಲಮ್ಮ. Sorry.. ವಸ್ತ್ರಾಪಹರಣ ಆಗಿದ್ದಿದ್ರೆ ಕಥೇನೇ ಬೇರೆ ಇತ್ತು. ಯೇ ಮೇರೀ ಬಸ್ಕೀ ಬಾತ್ ನಹ್ಞೀs!
(ಓಡಿ ಹೋಗುತ್ತಾನೆ. ಹೋಗುತ್ತಿರಲು – ಹಿ.ಹಾ. . . ಲುಟ್ಗಯೇs ಹಂ ಲುಟ್ಗಯೇs. . . )
————

ಕರ್ನಾಟಕದ ವಿವಿಧ ಭಾಗದ ಕನ್ನಡ– ಒಮ್ಮೆ ಸುಮ್ಮನೆ

ಸೂತ್ರಧಾರ : ನೋಡಿ, ಮಿನಿ ಕರ್ನಾಟಕ ಎನ್ನಬಹುದಾದ ವಠಾರ ಇದು. ಇಲ್ಲಿ ನಮ್ಮ ರಾಜ್ಯದ ವಿವಿಧ ಭಾಗಗಳ ಜನ ಒಂದಾಗಿ ಹಾಯಾಗಿ ಇದ್ದಾರೆ. ಕವಿತಾ ಮೈಸೂರಿನವಳಾದ್ರೆ, ಸುಕನ್ಯಾ ಪಕ್ಕದ ಮಂಡ್ಯದವಳು. ಉಡುಪಿ ಮೂಲದವಳು ರಶ್ಮಿ. ಶ್ಯಾಮಲಾ ಹುಬ್ಬಳ್ಳಿಯಿಂದ ಬಂದಿದ್ರೆ, ವಿಜಾಪುರದಿಂದಿಳಿದವಳು ಶ್ವೇತಾ. ಉತ್ತರಕನ್ನಡಕ್ಕ್ಯಾಕೆ ಕೊರತೇಂತ ಇದಾಳೆ ಗೀತಾ. ಇಲ್ಲಿನ ದಿನಚರಿ ಹೇಗೇಂತ ಒಮ್ಮೆ ನೋಡೋಣವೇ –

ಶ್ಯಾಮಲಾ : ಇವತ್ತು ಬಾಯಿ ಬಂದಿಲ್ರೀ?

ಗೀತ : ಬಾಯಿ ಎಂತಕ್ಕೆ ಬತ್ತಡ? ಅದೇನು ಕಾಲುಬಾಯಿ ರೋಗವಾ?

ಕವಿತಾ : ಯಾವ ಭಾಯಿ ಬರಬೇಕಿತ್ತು ಶ್ಯಾಮಲಾ? ಅನಿಲ್ ಭಾಯ್ ಯಾ ಸುನೀಲ್ ಬಾಯ್?

ಶ್ಯಾಮಲಾ : ಅಲ್ರೀ ನಾ ಕೇಳಿದ್ದ್ ಕೆಲಸದ ಬಾಯಿ ಬಂದಾಳೇನ್ರೀ ಅಂತ.

ಕವಿತಾ : ಕೆಲಸದ ಕಮಲಮ್ಮಾನಾ? ಮಾಮೂಲಿ ಹಾಗೆ ಇವತ್ತೂ ರಜಾ.

ರಶ್ಮಿ : ಈ ಕೆಲಸದವರು ಬರಲಿಕ್ಕಿಲ್ಲಾ ಅಂದರೆ ನೋಡಿ ಬಿಸಿಯಾಗ್ತದೆ ಮಂಡೆ.

ಸುಕನ್ಯಾ : ಬರೀ Monday ಏನ್ರೀ ವಾರದ್ ಓಸೂ ದಿನಾ busy ಆಗಿ ಶ್ಯಾನೇ ಕಸ್ಟ ಆಯ್ತದೆ.

ರಶ್ಮಿ : ಮಾರಾಯ್ತಿ ನಾನಂದದ್ದೂ ಮಂಡೆ ಬಿಸಿ ಅಂತ, ಗೊತ್ತುಂಟೋ?

ಗೀತ : ನಿಂಗ್ಳಿಗಲ್ಲಿ ಮಂಡೆ ಬಿಸಿ ಆಗ್ತಿದ್ರೆ ನಂಗಿಲ್ಲಿ ಕುಂಡೆ ಬಿಸಿ ಆಗ್ತ್ ಬಿಜ್ಜು. ಎಲ್ಲಾ ಆನೇ ಮಾಡ್ಕಳವು. ಆನೇ ಕೊರ್ಯೋ. ಆನೆ ಬಿಶಿ ಮಾಡವು.

ಶ್ವೇತ : ಯವ್ವಿಯವ್ವೀ, ಆನೇನ ಹ್ಯಾಂಗ ಕೊರೆದು ತಿಂತೀರ್ರೀ. ನಂಗೊಂದೂ ತಿಳೀವಲ್ದು.

ಗೀತ : ಈ ಕೂಸೊಂದು! ಎಂತದೂ ತಳೀತಿಲ್ಲೆ. ಆನೇ ಅಂದ್ರೆ ನಾನೇ ಎಲ್ಲಾ ಕೆಲ್ಸ ಮಾಡ್ಕಳಕಾತು ಹೇಳಿ. ತಳತ್ತಾ?

ರಶ್ಮಿ : ಯಾಕಷ್ಟು ಕೋಪ? ತಂಪಾಗಲಿಕ್ಕೆ ನಿಮಗೆ ಬೊಂಡ ಬೇಕಾಗುವುದು ಗ್ಯಾರಂಟಿ ಮಾರಾಯರೇ.

ಕವಿತ : ಬೋಂಡ ತಿಂದ್ರೆ ಬಾಯಿ ಬಿಸಿಯಾಗುತ್ತೇರೀ. ತಂಪ್ಹೇಗಾಗುತ್ತೆ?

ರಶ್ಮಿ : ಹೋs ಬಿಡಿ. ನೀವು ಭಾಷೆಯಿಲ್ಲದವರು! ಬೊಂಡ ಅಂದರೆ ಎಳನೀರು.

ಸುಕನ್ಯಾ : ತಗಳಪ್ಪ, ನಮ್ದೂಂತ ಕನ್ನಡ ಬಾಸೆ ಇಲ್ಲ್ ವ್ರಾ?

ಕವಿತ : ಅಯ್ಯೋ ಒಲೆ ಮೇಲೆ ಕುಕ್ಕರ್ ಇಟ್ಟಿದ್ದೆ. ಮರ್ತೇಬಿಟ್ಟೆ. ಸಂಜೆ ಸಿಗೋಣಾರೀ.

ಅಂಕ – 2

ಕವಿತ : ರೀ ಶ್ವೇತಾ, ತಿಂಡಿ ಆಯ್ತಾ?

ಶ್ವೇತ : ಇಲ್ರೀ, ನಂಗೇನೂ ತಿಂಡೀ ಬ್ಯಾನಿ ಇಲ್ರೀ.

ಕವಿತ : ಆ್ಞಂ . . . .. ತಿಂಡೀದೇನ್ರೀ ಬೇನೇ?

ಶ್ವೇತ : ಯಾಕ್ರೀ ನಿಮಗಾಗಂಗಿಲ್ಲೇನ್ರೀ? ಭಾರಿ ಧಗೀನಾಗ ತಿಂಡಿ, ಅದೇ ನವೆ ಜಾಸ್ತಿಯಾಗಿ ಪರಾ ಪರಾ ತುರುಸೋದ್ ಆಗ್ತದ್ರೀಪಾ.

ಕವಿತ : ಅಯ್ಯೋ ನಾ ಕೇಳಿದ್ದು ತಿಂಡೀ, ನಾಷ್ಟಾ ಏನೂ ಅಂತ.

ಶ್ವೇತ : ಓಹ್. . . . ನಾಷ್ಟಾಗೆ ಶಿರಾ ಮಾಡಿದ್ನ್ರೀ.

ಸುಕನ್ಯಾ : ಯಾವ ಶಿರ? ಕೋಳಿ ಶಿರ ಯಾ ಕುರಿ ಶಿರ?

ಶ್ವೇತ : ನಾ ಹೇಳಿದ್ದು ಶಿರಾರೀ.

ಸುಕನ್ಯಾ : ನಾ ಯೋಳಿದ್ದೂ ಅದೇರೀ.

ಕವಿತ : ನಿಮ್ಮಾತು ಕೇಳ್ತಿದ್ರೆ ಆಗ್ತಾರೆ ಎಲ್ರೂ ಪರಾರಿ!

ಗೀತ : ನಮ್ಮಲ್ಲಿ ಇವತ್ತು ಸೇವು ಲಡ್ಡಾಗ್ಹೋತ್ರಾ.

ಶ್ಯಾಮಲಾ : ಲಡ್ಡಾದ್ರೆ ತರ್ರೆಲಾ, ನಾವೂ ರುಚಿ ನೋಡೋಣು. ಶ್ಯಾವಿಗೀದೂ ಲಡ್ಡಾಗ್ದದೇಂತ ಇವತ್ತೇ ತಿಳ್ದಿದ್ದು ನಂಗೆ ಮತ್ತ.

ಗೀತ : ಲಡ್ಡು ಹೇಳಿ, ಬಾಯ್ ಬಾಯ್ ಕಳೇತೋ. ಇದು ಲಡ್ಡಾಗಿ ನನಗೆ ತ್ರಾಸಾಗ್ತ್ ಬಿಜ್ಜು. ತಾಯ್ತೀs ಲಡ್ಡಾತೇ! ಅಂದ್ರೆ cut cut ಆತೂ ಹೇಳಿ.

ಶ್ಯಾಮಲ : cut cut…. ಹೇಳೀನಪ್ಪಾs

ಗೀತ : ಓ. . . . .

ಕವಿತ : ಶ್ಯಾಮಲಾ ಅವರೇ, ಅದು ಬಂದುs ಅವ್ರು ಹೇಳಿದ್ದು . . . .

ಶ್ಯಾಮಲ : ಏನು ಬಂದು?

ಕವಿತ : ಅಯ್ಯೋ ಹೇಗಪ್ಪಾ ಹೇಳೋದು ನಿಮಗೆ?

ಸುಕನ್ಯಾ : ಅದಕ್ಕ್ಯಾಕೆ ಕೂಗ್ತೀರಾ?

ರಶ್ಮಿ : ಆ್ಞಂ, ಯಾರದು ಕೂಗುವುದು? ಎಂತ ಆಯ್ತು? ನಮ್ಮಲ್ಲಿ ಯಾರು ಕೂಗಿದರೂ ನನಗೆ ನೋಡಲಿಕ್ಕೆ ಆಗದು ಮಾರಾಯ್ತೀ.

ಸುಕನ್ಯಾ : ಅಯ್ಯಾ ಕೂಗಾದ್ ಹ್ಯಾಗೆ ನೋಡೋದು? ವಸಿ ಕೇಳಿಸ್ಕಳಾದಲ್ಲವ್ರಾ?

ಕವಿತ : ಸುಕನ್ಯಾ ಅವ್ರೇ, ಕೂಗೋದು ಅಂದ್ರೆ ಅಳೋದು, ಮಂಗಳೂರು ಕಡೆ, ಅಲ್ವೇನ್ರೀ ರಶ್ಮಿ?

ರಶ್ಮಿ : ಹೌದು ಹೌದು. ಅದು ಸತ್ಯ.

ಅಂಕ-3

ರಶ್ಮಿ : ಶ್ವೇತಾ, ನಂ ಯಜಮಾನ್ರು ನಿಂ ಮನೆಯವ್ರನ್ನ ನೋಡಬೇಕಿತ್ತಲ್ಲ. ಅಜಮಾಸು ಯಾವಾಗ ಆಗಬಹುದು?

ಶ್ವೇತ : ನಂ ಮನೇವ್ರು ಈಗಿಲ್ರೀ, ನಿಂ ಮನೇವ್ರಿಗೆ ಹಿಂದಾಗಡಿ ಬರ್ಲೀಕೆ ಹೇಳ್ರೀ.

ರಶ್ಮಿ : ಆ್ಞಂ, ನನ್ನ ಮುಂದೆಯೇ ಹೀಗೆ ನುಡಿಯುವುದಾ? ಹೀಗೆ ನುಡೀಲಿಕ್ಕೆ ನಿಮಗೆ ನಾಚಿಕೆ ಅನ್ನಿಸೋದಿಲ್ಲಾ?

ಶ್ವೇತಾ : ನಂಗ್ಯಾಕ್ರೀ ನಾಚ್ಕೆ ಆಗ್ಬೇಕು? ಆಮ್ಯಾಕೆ ಬರ್ಲೀಕೆ ಹೇಳಿದ್ರೆ ತೆಪ್ಪಾ?

ರಶ್ಮಿ : ಓಹ್ ಸರೀರಿ, ನಾನೇನೂ ನೀವು ನನ್ನನ್ನ ಮಂಗ್ಯಾ ಮಾಡೀರಿ ಅಂತ ತಿಳಿದೆ.

ಗೀತ : ನೋಡು ಎರ್ಡ್ ನಿಮಿಷದಲ್ಲಿ ಮಂಗನ ಮುಸುಡೀನೇ ಆಗ್ಹೋತು. ಬಿಟ್ಟಿದಿದ್ರೆ ದೊಡ್ಡಕ್ ಹೊಡೆದಾಟವೇ ಆಗ್ತಿದ್ದಿತೂ ಅನ್ಸ್ತು.

ಶ್ಯಾಮಲ : ಅಕ್ಕೋರೇ ನೀವು ಭಾಳ ಮೊಂಡಿದ್ದೀರಪ್ಪಾ.

ಕವಿತ : ಅರೆರೇ ಗೀತಕ್ಕ ಬಹಳ sharp ಅಂತ ಅನ್ಕೋಂಡಿದ್ನಲ್ಲಾ? ಅವರು ಯಾವಾಗ ಮೊಂಡು ಆದ್ರು!

ಶ್ಯಾಮಲಾ : ನೋಡಪಾ, ಕವಿತಾ ಈಗ ಆಟಕ್ಕೆ ಇಳೀಲಿಕ್ಕೆ ಹತ್ಯಾಳ.

ಸುಕನ್ಯ : ಆ್ಞಂ… ಇಳಿಯೋದಕ್ಕೆ ಯಾಕಪಾ ಹತ್ಬೇಕು? ಇಳೀದಿದ್ರಾಯ್ತಲ್ಲಾ! ಸುಮ್ಕೆ ಕ್ಯಾಮಿಲ್ಲ!

ಕವಿತ : ಅಂದ್ಹಾಗೆ ಶ್ವೇತಾ. ನಿಮ್ಮ ಮೈದುನನಿಗೆ ಹುಷಾರಿತ್ತಿಲ್ಲ – ಆಸ್ಪತ್ರೇಲಿದಾರೇಂದಿದ್ರಲ್ಲಾ ಹೇಗಿದಾರೆ ಈಗ?

ಶ್ವೇತಾ : (ನಿಟ್ಟುಸಿರು ಬಿಟ್ಟು) ಅವಾ ನಿನ್ನ ರಾತ್ರಿ ಸರಿ ಹೋದ್ನ್ ರೀ.

ಕವಿತ : ಸದ್ಯ ಒಳ್ಳೇದಾಯ್ತು ಬಿಡಿ.

ಶ್ವೇತ : ಏs ಅದ್ಯಾಕೆ ಹಾಗನ್ಲೀಕ್ಹತ್ತೀರಿ? ಜರಾ ಕನಿಕರ ಬೇಡಾ?

ಕವಿತ : ಅಯ್ಯೋ ಇದೇನ್ರೀ, ಆಸ್ಪತ್ರೆಗೆ ಹೋದವ್ರು ಸರಿಯಾಗಿ ಮನೆಗೆ ವಾಪಸ್ ಆದ್ರೆ
ಖುಷಿ ತಾನೇ ಪಡೋದು? ಇನ್ನೇನು, ನೆಗೆದು ಬಿದ್ರೆ ಖುಷಿ ಪಡ್ತೀವಾ?

ಶ್ವೇತಾ : ಅಯ್ಯೋ ಸರಿಹೋದಾಂದ್ರೆ, ಸತ್ಹೋದ್ರೂಂತ ಅಕ್ಕೋರೇ!

ಕವಿತ : ಆ್ಞಂ . . .

———-

ಪಮ್ಮಿ ಉರ್ಫ್ ಪ್ರಮೀಳಾ ಪರಿಣಯ

On the anniversary of Demonetisation-ಹೀಗೇ ಸುಮ್ಮನೆ..

ಸೂತ್ರಧಾರ : ಧರಣಿ ಮಂಡಳ ಮಧ್ಯದೊಳಗೆ, ಮೆರೆಯುತಿಹ ಕರ್ಣಾಟ ರಾಜ್ಯದೊಳು,
ಬೆಂಗಳೂರೆಂಬ ಮಾಯಾನಗರಿಯಲ್ಲಿ ಒಂದು ಸಂಸಾರ – ಸೀತಾರಾಮ
ಜಾನಕಿಯರದ್ದು. ಅವರಿಗೊಬ್ಬಳು ಮದುವೆಗೆ ಬಂದ ಮಗಳು- ಹೆಸರು ಪಮ್ಮಿ, ಪ್ರಮೀಳಾ ಅಂತ.
ಸೀತಾರಾಮ SBI ನಲ್ಲಿ VRS ತಗೊಂಡಾತ. ಮಮ್ಮಿ ಮತ್ತು ಪಮ್ಮಿ ಸ್ತ್ರೀ ಸ್ವಾತಂತ್ರ್ಯ
ಹೋರಾಟದ ಮುಂಚೂಣಿಗರು. ಪಮ್ಮಿ ಮದುವೆಗೆ ದಂಪತಿಗಳ ಹರಸಾಹಸ. ತನ್ನನ್ನು ನೋಡಲು
ಬಂದ ಹತ್ತು ಗಂಡುಗಳಿಗೆ ನಕಾರ ಹೇಳಿದವಳು ಪಮ್ಮಿ. ಇಂತಿಪ್ಪ ಸಂಸಾರದಲ್ಲಿ ಮುಂದೇನಾಯ್ತು
ನೋಡೋಣವೇ?
———-
(ಸೀತಾರಾಮ, ಶಾಮಣ್ಣರೊಡನೆ ನಡೆದು ಬರುತ್ತಾ)
ಸೀತಾರಾಮ : ಶಾಮಣ್ಣೋರೇ, ಈ ಸಂಬಂಧ ಏನಾದರೂ ಕುದುರಿದ್ರೆ ತಲೆ ಮೇಲಿಂದ ದೊಡ್ಡ ಭಾರ ಇಳೀತದೆ.
ಶಾಮಣ್ಣ : ಯಾಕೆ ಯೋಚ್ನೆ ಸ್ವಾಮಿ, ನನ್ನ ಕೆಲಸಾನೇ ಅದಲ್ವೇ. ಈ ಹುಡುಗನ್ನ ನಿಮ್ಮ ಮಗಳು ಹೇಗೆ
ಬೇಡಾಂತಾಳೆ ನಾನೂ ನೋಡೇ ಬಿಡ್ತೀನಿ. ನಿಮ್ಮಾಕೇದೇ ಏನೂಂತ ಗೊತ್ತಾಗ್ಬೇಕು.
ಸೀತಾರಾಮ : ಅದ್ಬಿಡಿ, ನಾನು ಹ್ಞೂ ಅಂದ್ರೆ ಮುಗೀತು ನಮ್ಮನೇಲಿ.
ಶಾಮಣ್ಣ : ಹೌದೇ, ಪರ್ವಾಗಿಲ್ವೇ, ನೋಡಿದ್ರೆ ಹಾಗನ್ಸೋದಿಲ್ವೇ!
ಸೀತಾರಾಮ : ಯಾಕೆ ಒಂದು dose ಕೊಡ್ಲಾ – ಅದೂ ಡಾ|| ರಾಜ್ style ನಲ್ಲಿ..
ಸೀತಾರಾಮ : ಜಾನಕೀ, ಕಣ್ಣಲ್ಲಿ ಕೆಕ್ಕರಿಸಿ ನೋಡಿ ನನ್ನನ್ನು ನೀನು ಗೆಲ್ಲಲಾರೆ. . .
ಜಾನಕಿ : ಆ್ಞಂ, ಏನಂದ್ರೀ?
ಸೀತಾರಾಮ : ಕ್ಕೆ ಕ್ಕೆ ಕ್ಕೆ.. ಕೆಲಸಾ ಆಯ್ತಾ ಅಂದೆ ಜಾನೂ, ಅಷ್ಟೇ.
ಜಾನಕಿ : ಹೌದಾ, ಏನೋ ಗುರಾಯಿಸಿದ ಹಾಗಿತ್ತು, ಅದಿರ್ಲಿ ಯಾರಿವ್ರು?
ಸೀತಾರಾಮ : ಇವ್ರಾ ಶಾಮಣ್ಣ, ಮದುವೆ ಬ್ರೋಕರ್ ಶಾಮಣ್ಣ. ನಂ ಪಮ್ಮೀಗೆ ಗಂಡು ಫಿಕ್ಸ್ ಮಾಡಿಯೇ
ಶುದ್ಧಾಂತ ಹೇಳ್ತಿದಾರೆ.
ಜಾನಕಿ : ವಾವ್, ಸದ್ಯ ಅದೊಂದ್ ಆಗ್ಲಿ ಬೇಗ. ಗಂಡು ಹುಡ್ಕಿದೀರಾನ್ನಿ.
ಶಾಮಣ್ಣ : ನಿಂ ಹುಡ್ಗೀಗೆ ಗಂಡು ಹುಡ್ಕಕ್ಕಾಗತ್ತಾ – ಗಂಡು ಗಂಟು ಹಾಕಬೇಕಷ್ಟೇ!
ಜಾನಕಿ : ಏನಂದ್ರೀs?
ಶಾಮಣ್ಣ : ಏನಿಲ್ಲಮ್ಮಾ, ಒಂದೊಳ್ಳೇ ಗಂಡಿನ ಜಾತಕದ ಜೊತೆಗೇ ಬಂದಿದ್ದೀನಿ.
ಜಾನಕಿ : ಗಂಡು ಪ್ರಾಣಿ ಏನ್ಮಾಡ್ಕೊಂಡಿದ್ಯೋ?
ಶಾಮಣ್ಣ : ಏನ್ಕೇಳ್ತೀರಿ, SBIನಲ್ಲಿ ಮ್ಯಾನೇಜರ್ರು.
ಜಾನಕಿ : ಅಯ್ಯೋ ಬಡ್ಕೋಬೇಕು. ಇವ್ರನ್ನ ಕಟ್ಟಿಕೊಂಡು ನಾನು ಅನುಭವಿಸದ್ದಲ್ದೇ, ನನ್ನ ಮಗಳೂ ಅನುಭವಿಸಬೇಕೇ? ಮಕ್ಳು ಏಳೋ ಮುಂಚೆ ಆಫೀಸ್ಗೆ ಹೋದ್ರೆ, ಅವ್ರು ಮಲಗಿದ್ಮೇಲೆ
ಮನೇಗೆ ಬರ್ತಾರೆ. ರಜೆ ದಿವಾಸಾನೂ ಮನೇನಲ್ಲಿರಲ್ಲ. ಫೋಟೋ ತೋರಿಸಿ ಇವರೇ ನಿಮ್ಮಪ್ಪ ಅನ್ಬೇಕು!
ಶಾಮಣ್ಣ : ಅಯ್ಯೋ ಎಲ್ಲಾ ಹಾಗಿರಲ್ಲಾ ತಾಯಿ.
ಜಾನಕಿ : ಬೇಡಾಪ್ಪ, ನನಗಂತೂ ಸುತರಾಂ ಒಪ್ಪಿಗೆ ಇಲ್ಲ.
ಸೀತಾರಾಮ : ಅಲ್ಲಾ ಕಣೇ ಅದೂ . .
ಜಾನಕಿ : ಏ ನೀವು ಸುಮ್ನಿರೀಂದ್ರೆ. ನಿಮಗೇನೂ ಗೊತ್ತಾಗಲ್ಲ.
ಶಾಮಣ್ಣ : ಬಿಡಿ ರಾಯರೇ, ಅಮ್ಮಾವ್ರಿಗೆ ಇಷ್ಟವಿಲ್ಲಾಂದ್ರೆ ಬೇಡ ಬಿಡಿ.
ಸೀತಾರಾಮ : ಸರಿ ಬಿಡೇ, ಒಂದರ್ಧರ್ಧ ಕಾಫೀನಾದ್ರೂ ಮಾಡು.
ಜಾನಕಿ : ಕಾಫೀ ಡಿಕಾಕ್ಷನ್ ಖಾಲಿ, ಟೀ ಪುಡಿ ಇಲ್ಲಾಂತ ಮೂರ್ದಿವ್ಸದಿಂದ ಹೇಳ್ತಿದೀನಿ. ನನ್ಮಾತು
ಯಾವತ್ತಾದ್ರೂ ಕೇಳಿದ್ದಿದೆಯಾ?
ಸೀತಾರಾಮ : ಓ ಸರೀಪ್ಪಾ. ಬನ್ನಿ ಶಾಮಣ್ಣ ವಿದ್ಯಾರ್ಥಿ ಭವನ್ ಕಡೆ ಹೋಗಿ ಬರೋಣ.
ಶಾಮಣ್ಣ : ಯಾರೋ ತಾವು ಮನೇಲಿ ಹುಲಿ ಅಂತ ಹೇಳ್ತಾ ಇದ್ರು…
ಸೀತಾರಾಮ : ಇಲ್ಲಾಂದವ್ರು ಯಾರು ಶಾಮಣ್ಣ. ನಾನು ಹುಲೀನೇ, ಮೇಲೆ ದುರ್ಗೆ ಕೂತಿರ್ತಾಳಷ್ಟೇ.

ಅಂಕ -2
ಜಾನಕಿ : ಏನೂಂದ್ರೆ, ಈ ಮನೇಲಿ ನಾವು ಮೂವರಿದ್ವಲ್ಲಾ, ಸದ್ಯದಲ್ಲೇ ನಾಕಾಗ್ತೀವಿ.
ಸೀತಾರಾಮ : ಇದೇನೇ ಈ ವಯಸ್ಸಿನಲ್ಲಿ!! (ಬಸುರಿ ಹೊಟ್ಟೆ ತೋರಿಸುತ್ತ) ನಂಬಕ್ಕಾಗ್ತಿಲ್ಲ!
ಜಾನಕಿ : ಅಯ್ಯೋ ಬಡ್ಕೋಬೇಕು, ಸದಾಶಿವಂಗೆ ಅದೇ ಧ್ಯಾನ. ನಾನಂದಿದ್ದು, ನಮ್ಮಮ್ಮ ಬರ್ತಾ
ಇದಾರೇಂತ.
ಸೀತಾರಾಮ : ಆಂಡವನೇ, ಕಾಳಿ ದುರ್ಗೆಯರ ಜೊತೆ ಭದ್ರಕಾಳೀನೂ free ಆಗಿ ಕೊಟ್ರೆ ಹೇಗಪ್ಪಾ?
ಸೀತಾರಾಮ : ನನ್ನ ಮೇಲ್ಯಾಕಪ್ಪಾ ಈ ಕೋಪಾ?
ಜಾನಕಿ : ಏನಂದ್ರೀ?
ಸೀತಾರಾಮ : ಏನಿಲ್ಲ, ಜೋಪಾನಾಂದೆ – ವಯಸ್ಸಾಯ್ತಲ್ಲಾ ನಿಮ್ಮಮ್ಮಂಗೆ, ಜೋಪಾನಾಂದೆ, ಅಂದ್ಹಾಗೆ
ಯಾವ ಮಹಾತ್ಕಾರ್ಯಕ್ಕಾಗಿ ಈ ಬಿಜಯಂಗೈವಿಕೆ?
ಜಾನಕಿ : ನೋಡಿ, ಪಮ್ಮೀಗೆ ನನ್ನ ಮಮ್ಮೀ ಒಂದು ಸಂಬಂಧ ಕುದುರಿಸಿದ್ದಾರೆ.
ಸೀತಾರಾಮ : ಆ ಪುಣ್ಯಪುರುಷ ಯಾರೋ?
ಜಾನಕಿ : ಇದಕ್ಕೇನೂ ಕಮ್ಮಿಯಿಲ್ಲ. ನಿಮ್ಮ ಕೈಲಿ ಏನಾಗುತ್ತೆ ಹೇಳಿ ನೋಡೋಣ.
ಸೀತಾರಾಮ : ಯಾಕೆ ಜಾನೂ, ಪಮ್ಮೀನ ಕೊಟ್ಟಿಲ್ವೇನೇ?
ಜಾನಕಿ : ನಿಮ್ಮನ್ನ ನಂಬಿದ್ದಿದ್ರೆ ಅದೂ ಆಗ್ತಿರ್ಲಿಲ್ಲ!
ಸೀತಾರಾಮ : ಆ್ಞಂ, ಏನೇ ಇದು . . .
ಜಾನಕಿ : ಅಯ್ಯೋ ಹಾಗಲ್ರೀ… ಡಾ|| ಹತ್ರ ಹೋಗಿದ್ದಕ್ಕೆ ಆಯ್ತು ಅಂದಿದ್ದು. ಈಗ ವಿಷಯಕ್ಕೆ ಬನ್ನಿ.
ಗಂಡು real estate ಬಿಸಿನೆಸ್ನಲ್ಲಿದಾನಂತೆ. ಮುಖ್ಯ ವರದಕ್ಷಿಣೆ ಬೇಡ್ವಂತೆ! ಅವರ
ಅಂತಸ್ತಿಗೆ ತಕ್ಕಂತೆ ಮದುವೆ ಮಾಡಿಕೊಟ್ರೆ ಸಾಕಂತೆ.
ಸೀತಾರಾಮ : ಅವ್ರದ್ದು ಎಷ್ಟು ಅಂತಸ್ತಂತೆ?
ಜಾನಕಿ : ಕೊಂಕಾಡೋದ್ಬಿಟ್ಟು, ಮದುವೆಗೆ ಒಂದಿಷ್ಟು ತಯಾರೀನಾದ್ರೂ ಮಾಡಿ. ನಂಗೆ ಕೆಲಸ ಇದೆ. ನಿಂ
ಪುರಾಣ ಕೇಳೋಷ್ಟು ಪುರುಸೊತ್ತಿಲ್ಲ.
ಸೀತಾರಾಮ : ಅಯ್ಯಾ ಭಕ್ತವತ್ಸಲಾ, ಏನೀ ಪರೀಕ್ಷೆ?
ಆಕಾಶವಾಣಿ : ಕಂದಾ, ಮದುವೆಯಾದ ಮೇಲೆ ಇವೆಲ್ಲಾ ಇದ್ದದ್ದೇ. ನಂದೂ ಅದೇ ಗತಿ, ವತ್ಸಾ!
(ದೇವರು)
ಸೀತಾರಾಮ : ಆ್ಞಂ, . .

ಅಂಕ-3
ಸೂತ್ರಧಾರ : ಇವತ್ತು ನವೆಂಬರ್ 11, 2016, ಪ್ರಧಾನಿ ಮೋದಿ Demonetisation ಜಾರಿ ಮಾಡಿದ
ನಂತರದ 2ನೇ ದಿನ ಬ್ಯಾಂಕಿನಲ್ಲಿ –
ಸೀತಾರಾಮ : ಏನು ಈ ಪಾಟೀ ರಷ್ಷು. ಬ್ಯಾಂಕ್ ದಿವಾಳಿ ಎದ್ದಿದೆ ಅಂತ ಜನಗಳಿಗೆ ಡೌಟಾ ಹ್ಯಾಂಗೆ?
(cashier ಹತ್ರ ಹೋಗಿ ಚೆಕ್ ನೀಡ್ತಾನೆ. cashier ಊs ಊs ಅಂತ ಚೆಕ್
ಹಿಂತಿರುಗಿಸ್ತಾನೆ)
ಸೀತಾರಾಮ : self ಚಕ್ಕಪ್ಪಾ 2 ಲಕ್ಷ ಬೇಕು. ನಾನೇ ಬಂದಿದ್ದೀನಿ.
ಅಚಿshieಡಿ : ಊs ಊs (ಮ್ಯಾನೇಜರ್ ಕಡೆ ತೋರಿಸ್ತಾನೆ)

ಸೀತಾರಾವi : ಇದೇನಪ್ಪಾ ರೋಗ. ನನ್ನ ಅಕೌಂಟ್ನಿಂದ ದುಡ್ಡು ತೆಗೆಯೋಕ್ಕೂ ಮ್ಯಾನೇಜರ್ ಹತ್ರ
ಹೋಗ್ಬೇಕಾ? ಕರ್ಮ ಕರ್ಮ (ಮ್ಯಾನೇಜರ್ ಹತ್ರ ಬಂದು)
ಸೀತಾರಾಮ : ಅಡ್ಡಬಿದ್ದೆ ಮ್ಯಾನೇಜರ್ ಸಾಹೇಬರಿಗೆ.
ಮ್ಯಾನೇಜರ್ : ಓ ಬನ್ನಿ ಬನ್ನಿ, ಸೀತಾರಾಮಯ್ಯಗಾರಿ ಮನವರಾಲು, ಹೇಗಿದ್ದೀರಿ?
ಸೀತಾರಾಮ : ಚೆನ್ನಾಗಿದ್ದೀನಿ. 2 ಲಕ್ಷ ದುಡ್ಡು ತೆಗೆಯೋದಿತು. ನಿಂ cashier ನಿಮ್ಹತ್ರ ಕಳಿಸ್ತಾನಲ್ಲ!
ಮ್ಯಾನೇಜರ್ : ಆ್ಞಂ, . . ಏನ್ಸಾಮೀ ನೀವು ಪೇಪರ್ ಓದೋದಿಲ್ವೇ?
ಸೀತಾರಾಮ : ಬ್ಯಾಂಕಿನಲ್ಲಿದ್ದಾಗ ಪಾಂಕ್ತವಾಗಿ ಪೇಪರ್ ಓದ್ತಾ ಇದ್ದೆ. V R ತೊಗೊಂಡ್ನಾ, ಮನೆ ಕೆಲಸ ಎಲ್ಲಾ
ನಂ ತಲೆ ಮೇಲೆ ಬಿತ್ತು. ಪೇಪರ್ ಓದೋಕ್ಕೂ ಪುರುಸೊತ್ತಿಲ್ಲ. ಯಾಕೇ ಕೇಳಿದ್ದು?
ಮ್ಯಾನೇಜರ್ : ನೋಟಿನ ಅಮಾನ್ಯೀಕರಣದಿಂದ cash ವ್ಯವಹಾರಗಳ ಮೇಲೆ ಸಾಕಷ್ಟು restrictions
ಬಂದಿವೆ, ಗೊತ್ತಿಲ್ವೇ?
ಸೀತಾರಾಮ : ಆ್ಞಂ, . . ಅಮಾನ್ಯೀಕರಣ, ಹಾಗಂದ್ರೇನು? ಸ್ವಲ್ಪ ಕನ್ನಡದಲ್ಲಿ ಹೇಳೀಪ್ಪಾ.
ಮ್ಯಾನೇಜರ್ : ಅದೇರೀ Demonetisation.
ಸೀತಾರಾಮ : ಓ Demonetisation ಆ? ಹಾಗೆ ಕನ್ನಡದಲ್ಲಿ ಹೇಳಿ ಅರ್ಥವಾಯ್ತು ಬಿಡಿ.
ಮ್ಯಾನೇಜರ್ : ನೋಡಿ, ಇದು ನಮ್ಮ ಕನ್ನಡಿಗರ ಪರಿಸ್ಥಿತಿ! ನೋಡಿ ಸರ್, ವಾರಕ್ಕೆ 2000/- ತಗೀಬಹ್ದು ಅಷ್ಟೆ.
ಸೀತಾರಾಮ : ಸ್ವಾಮೀ, ನಮ್ದುಡ್ಡು ನಮಗೆ ಕೊಡೀಪ್ಪಾ. ನಾನೇನ್ ಸಾಲ ಕೇಳ್ಳೀಕ್ಕೆ ಬಂದಿಲ್ಲಾ.
ಮ್ಯಾನೇಜರ್ : ಇದು RBI ರೂಲ್ಸು ಸ್ವಾಮೀ ನಂದಲ್ಲಾ. ನಾವೇನು ಮಾಡಕ್ಕಾಗುತ್ತೆ ಹೇಳಿ.
ಸೀತಾರಾಮ : ಸರಿ FD ಮುರಿದು ಕೊಡಿ.
ಮ್ಯಾನೇಜರ್ : ಅಯ್ಯೋ ಸಾರ್, FD ಮುರಿದ್ರೂ ಅಷ್ಟೇ, ಹರಿದ್ರೂ ಅಷ್ಟೇ.
ಸೀತಾರಾಮ : ಸರಿ ಬಿಡಿ, ATM ನಲ್ಲೇ ಪ್ರತಿ ದಿವ್ಸ ಡ್ರಾ ಮಾಡ್ತೀನಿ.
ಮ್ಯಾನೇಜರ್ : ದುಡ್ಡು ಬಂದ್ಹಾಗೇ ಆಯ್ತು. ATMನಲ್ಲಿ ಡ್ರಾ ಮಾಡೋದೂ ಸೇರಿ ವಾರಕ್ಕೆ 2000/- ಅದೂ ಅಲ್ದೇ
ATMಗೆ ದುಡ್ಹಾಕಕ್ಕೆ ನಂ ಹತ್ರಾನೇ ದುಡ್ಡಿಗೆ ಪರದಾಟ!
ಸೀತಾರಾಮ : ಹೇ ಕೇಶವಾ, ಊಟಕ್ಕಿಲ್ಲದ ಉಪ್ಪಿನಕಾಯಿ ಆಯ್ಯಲ್ಲಪ್ಪಾ ನಂದುಡ್ಡು. ಪಮ್ಮಿ ಮದುವೆ ಗತಿ?!

ಅಂಕ-4
ಸೂತ್ರಧಾರ : ಒಂದು ತಿಂಗಳ ನಂತರ, ಮದುವೆ- ಮುಂಜೀಗಂತ, ಪ್ರಧಾನಿಯಿಂದ cash transactions
ನಲ್ಲಿ ನಿಯಮ ಸಡಿಲಿಕೆ – 2.50 ಲಕ್ಷ ಹಣ ಪಡೀಬಹ್ದು ಬ್ಯಾಂಕಿಂದ – Proof ಇದ್ರೆ ಮಾತ್ರ.
ನಮ್ಮ ನಾಯಕಿ ಜಾನಕಿ, Event Manager (EM) ಹತ್ರ ಬರ್ತಿದ್ದಾಳೆ.
ಜಾನಕಿ : ಒಳಕ್ಕೆ ಬರಬಹುದಾ?
EM : ಬನ್ನಿ ಮೇಡಂ office ಇರೋದೇ ತಮ್ಮಂಥ ಗ್ರಾಹಕರಿಗಾಗಿ. ಏನು ಸೇವೆ ಮಾಡ್ಲಿ
ತಮಗೆ?
ಜಾನಕಿ : ಏನು ಸೇವೇನೂ ಬೇಡಾ. ನನ್ನ ಮಗಳಿಂದು ಮದುವೆ fix ಆಗಿದೆ. ಮದುವೆ
arrangement A to Z ಮಾಡಿಕೊಡಬೇಕು, ಆಗುತ್ತಾ?
E M : ನಾವಿರೋದೇ ಅದಕ್ಕೆ, ಅಂದ್ಹಾಗೆ ಮದುವೆಗೆ ಅಂದಾಜು ಎಷ್ಟು ಜನ ಆಗ್ತಾರೆ?
ಜಾನಕಿ : ಅಯ್ಯೋ, ಅದ್ಯಾಕೆ ಕೇಳ್ತೀರಾ. ಕರೀದಲೇ ಇದ್ರೂ ನಂ ಯಜಮಾನ್ರ ಪೈಕೀಲಿ 500-600 ಜನ
ಆಗ್ತಾರೆ. ನಮ್ಕಡೆಯವ್ರೂ ಸೇರಿದ್ರೆ 1000 ಆಗ್ಬಹ್ದು.
E M : ನಿಂ ಬಜೆಟ್ಟು?
ಜಾನಕಿ : ಮೋದೀ ಭಾಗ್ಯದಿಂದ ಈ ಶಾದೀಭಾಗ್ಯಕ್ಕೆ 2.50 ಲಕ್ಷ. ಅದಕ್ಕಿಂತ ಹೆಚ್ಚಿಗೆ ಸಿಗೋಲ್ವೇ?
E M : ಏನ್ತಾಯೀ, ಹಾಸ್ಯ ಮಾಡ್ಲಿಕ್ಕೆ ನಾನೇ ಬೇಕಿತ್ತೆ ನಿಮಗೆ. ಸಾವಿರ ಜನಾನ್ನ ಕರೆಸಿಬಿಟ್ಟು. ಅದ್ಧೂ..ರಿಯಾಗಿ
ಮದುವೆ ಮಾಡಿ, 2.50 ಲಕ್ಷ ನಂ ಕೈಲಿಟ್ರೆ, ನಮಗೆ ಚಿಕ್ಕನಾಯ್ಕನಹಳ್ಳಿ ಚಿಪ್ಪೇ ಗತಿ.

ಜಾನಕಿ : ನಾವೇನು ಮಾಡ್ಲೀಕಾಗ್ತದೆ. ಏನೋ ಸ್ವಲ್ಪadjust ಮಾಡ್ಕೋಬೇಕಪ್ಪಾ. ದೇಶಕ್ಕಾಗಿ ಅಷ್ಟೂ
ಮಾಡಕ್ಕಾಗೋಲ್ವೇ?
E M : ದೇಶಕ್ಕಾಗಿ ಖಂಡಿತ ಮಾಡೋಣ ಮೇಡಂ. ಅದ್ರೆ ನಿಂ offer ನನ್ನ ಕೈಗೆ ಚೊಂಬು
ಹಿಡ್ಸೋದು ಗ್ಯಾರಂಟಿ. ಅಂದ್ಹಾಗೆ, ನೀವು ತಪ್ಪು ತಿಳಿಯಲ್ಲಾಂದ್ರೆ ಒಂದು suggestion
ಕೊಡ್ಲಾ?
ಜಾನಕಿ : ನೋಡ್ರೀ, 2.50 ಲಕ್ಷದಲ್ಲಿ ಮದುವೆ ಆಗೋದಾದ್ರೆ, ನಾನು ಯಾವುದಕ್ಕೂ ರೆಡಿ.
E M : ಏನಿಲ್ಲ, ನೀವ್ಯಾಕೆ ಮದುವೇನ ದೇವಸ್ಥಾನದಲ್ಲಿ ಸರಳವಾಗಿ ಮಾಡ್ಬಾರ್ದು? ದುಡ್ಡೂ ಉಳಿಯುತ್ತೆ!
ಜಾನಕಿ : ಇದ್ ಹೇಳಲಿಕ್ಕೆ ನೀವೇ ಆಗಬೇಕಿತ್ತೇ? ಆಗಲ್ಲಾಂದ್ರೆ ಆಗಲ್ಲ ಅಂತ್ಹೇಳಿ. ಅದ್ ಬಿಟ್ಟು, ಬೇಡದ್ದನ್ನೆಲ್ಲ
ಮಾತಾಡ್ಬೇಡಿ. ನಿಮಗೂ ನಿಮ್ಮಾಫೀಸಿಗೂ ದೊಡ್ ನಮಸ್ಕಾರ. ಈ ಗಂಡಸರ ಬುದ್ಧೀನೇ
ಇಷ್ಟು. ಹಾಳಾದವ್ರು. ಮೊದಲು ಮನೆಗೆ ಹೋಗ್ಬೇಕಪ್ಪಾ . . . .

ಅಂಕ- 5
ಶಾಮಣ್ಣ : ಏನ್ ಮ್ಯಾನೇಜರ್ ಸಾಹೇಬ್ರು ಯಾವುದೋ ಯೋಚನೇಲಿ ಬಿದ್ಹಾಗಿದೆ.
ಮ್ಯಾನೇಜರ್ : ಏನಿಲ್ರೀ ಶಾಮಣ್ಣ. ಈ Demonetisation, ಬ್ರಾಂಚು, ಕಸ್ಟಮರ್ಗಳನ್ನು ಸಂಭಾಳಿಸೋದ್ರಲ್ಲಿ
ಸಾಕು ಸಾಕಾಗಿ ಹೋಗ್ತದೆ. ವಿಪರೀತ pressure ಉ. ಈ ಕಡೆ ಹೊಸಾ ನೋಟು ಅರೆಂಜ್
ಮಾಡ್ಬೇಕು. ಕಳ್ಳ ದಾರೀಲಿ note convert ಮಾಡಕ್ಕೆ ಬರೋವ್ರನ್ನ ತಡೀಬೇಕು. ಅದಕ್ಕೂ
ಹೆಚ್ಚಾಗಿ, ಗ್ರಾಹಕರಿಗೆ ಏನು ಉತ್ತರ ಹೇಳೋಣ ಹೇಳಿ. 1 ತಿಂಗಳ ಹಿಂದೆ ಸೀತಾರಾಮು ಬಂದಿದ್ರು.
ಮಗಳ ಮದುವೆಗೆ ದುಡ್ಡು-ಅದೂ ಅವರ ಹತ್ರ ಇರೋ ದುಡ್ಡು- ತೆಗೆಯಲಾಗದೇ ಒದ್ದಾಡಿ
ಹೋದ್ರು. ನಂಗೂ ತುಂಬಾನೇ ಬೇಜಾರಾಯ್ತು.
ಶಾಮಣ್ಣ : ಸರೀ ಹೇಳಿದ್ರಿ. ಈ Demonetisation ನಿಂದ ದೇಶ ಹಾಳಾಗಿ ಹೋಯ್ತು. ಬಡಜನರ
ಬದುಕು ಮೂರಾಬಟ್ಟೆ ಆಗ್ಹೋಯ್ತ. business ಪೂರಾ dull. ನಂ ಬಿಸಿನೆಸ್ಸಂತೂ nill!
ಮ್ಯಾನೇಜರ್ : ಶಾಮಣ್ಣ ಅಲ್ಲೇ ನೀವು ತಪ್ತಿರೋದು. ಮೋದಿ ಇದನ್ನ ಮಾಡಿದ್ದು ಆರ್ಥಿಕತೆ ರೈಲಿನ ಹಳಿ
ತಪ್ಪಿಸಲಿಕ್ಕಲ್ಲ. ಸರಿ ದಾರಿಗೆ ತರಲಿಕ್ಕೆ. ಇದರಿಂದ unaccounted ಹಣ ಪುನಃ
ವ್ಯವಸ್ಥೆಗೆ ಬರುತ್ತೆ. ಇದರಿಂದ ಕಪ್ಪು ಹಣದ ಚಲಾವಣೆಗೆ break ಬೀಳತ್ತೆ. ಕಪ್ಪು ಹಣ
ಇಲ್ಲವಾದ್ರೆ ನಮಗೆ ತಾನೇ ಒಳ್ಳೇದು? ಆ ಒಳ್ಳೇ ಉದ್ದೇಶಕ್ಕೆ ಸ್ವಲ್ಪ ಕಷ್ಟ ಸಹಿಸಿದ್ರೆ ತಪ್ಪೇನು?
ಜ್ವರ ಬಂದಾಗ ಕಹಿ ಮಾತ್ರೆ ತೊಗೊಳೊಲ್ವೇನು? ಮಾತ್ರೆ ಕಹಿ, ತೊಗೋಳ್ಳೋಕೆ ಕಷ್ಟಾಂತ,
ಜ್ವರಾನೇ ಇರ್ಲಿ ಅಂತ ಅನ್ನಕ್ಕಾಗತ್ತಾ?
ಶಾಮಣ್ಣ : ಸಾಹೇಬ್ರೇ, business ನಿಂತ್ಹೋದ್ರೆ ಆರ್ಥಿಕತೆ ಚಕ್ರ ತಿರುಗೋದು ಹ್ಯಾಗೆ? ಇದರಿಂದ ಎಷ್ಟು
ಜನ ಬೀದಿ ಪಾಲಾಗಿಲ್ಲ? ನಮಗಿದು ಬೇಕಿತ್ತಾ?
ಮ್ಯಾನೇಜರ್ : ಶಾಮಣ್ಣೋರೇ ಇದು temporary, ತಾತ್ಕಾಲಿಕ. Long run ನಲ್ಲಿ ಇದು ಬಹಳ
ಒಳ್ಳೇ ಫಲ ಕೊಡುತ್ತೆ.
ಶಾಮಣ್ಣ : ಏನ್ಕೊಡ್ತದೋ ಏನೋ? ನಂ ಕಷ್ಟ ನಮಗೆ, ನಿಂ ಕಷ್ಟ ನಿಮಗೆ, ಈ Arguement
ಮುಗ್ಯೋದಿಲ್ಲ. ಹಾಳಾಗ್ಲಿ, ಒಂದರ್ಧ ಕಾಫೀ ಕೊಡಿಸ್ತೀರೋ ಇಲ್ವೋ?
ಮ್ಯಾನೇಜರ್ : ಅಯ್ಯೋ, ಶಾಮಣ್ಣಂಗೆ ಇಲ್ಲಾಂದು ಬದ್ಕೋದುಂಟೇ. ಯಾಕಿಲ್ಲ. ಆದ್ರೆ ನನ್ಹತ್ರ ಇರೋದು
2000/- ನೋಟು ಮಾತ್ರ!
ಶಾಮಣ್ಣ : ಅರ್ಥವಾಯ್ತು ಬಿಡಿ! ನಾನೇ ಕೊಡಿಸ್ತೀನಿ! ಹ್ಹ. . ಹ್ಹ. . ಹ್ಹಾ. .

ಅಂಕ-6
ಸೀತಾರಾಮ : ಲೇ ಜಾನೂ, ಜಾನಕೀs
ಝಾನ್ಸಿರಾಣಿ ಲಕ್ಷ್ಮೀಬಾಯೀ s
ಜಾನಕಿ : ಏನೂಂದ್ರೆ ಯಾಕೆ ಹಾಗೆ ಅರಚ್ಕೊತಾ ಇದೀರಾ?
ಸೀತಾರಾಮ : ನೋಡಿ ಝಾನ್ಸಿರಾಣಿ ಅಂದ್ರಷ್ಟೇ ಕೇಳೋದು ಇವಳಿಗೆ.
ಜಾನಕಿ : ಏನಾಯ್ತೀಗ?
ಸೀತಾರಾಮ : ಎಷ್ಟ್ ಸಲಾ ಹೇಳಿದೀನಿ, ಮೊಬೈಲಲ್ಲಿ ಮುಳುಗಿ ಅಡುಗೆ ಮಾಡ್ಬೇಡಾಂತ! ನೋಡಿಲ್ಲಿ, ಸಾರಿಗೆ
ಉಪ್ಪಿಲ್ಲ, ಹುಳಿಯಿಲ್ಲ, ಖಾರ ಇಲ್ಲ!
ಜಾನಕಿ : ನಾನೂ ನಿಮಗೆ ಸಾವಿರ ಸಲಾ ಹೇಳಿದೀನಿ. ಮೊಬೈಲ್ ನೋಡ್ಕೊಂಡು ಊಟಾ ಮಾಡ್ಬೇಡೀಂತ!
ಈಗ ನೀವು ಅನ್ನಕ್ಕೆ ಸುರ್ಕೊಂಡಿರೋದು, ಸಾರಲ್ಲ, ನೀರು.
ಸೀತಾರಾಮ : ಅಯ್ . . . . ಸರಿ ಬಿಡು, ನಂ ನಮ್ಮಲ್ಯಾಕೆ ಜಗಳ. ಅರೆ ಮರ್ತೇ ಬಿಟ್ಟಿದ್ದೆ. courrier ನವ್ನು
cover ಕೊಟ್ಟಿದ್ದ. ನೋಡೋಕೆ ಟೈಂ ಆಗ್ಲಿಲ್ಲ.
ಜಾನಕಿ : ಎಲ್ಲಿಂದ ಬಂದಿದೇರೀ?
ಸೀತಾರಾಮ : ನಂ ಭಾವೀ ಅಳಿಯನಿಂದ ಕಣೇ.
ಜಾನಕಿ : ಬಡ್ಕೋಬೇಕು. ನಿಮಗೇನಾದ್ರೂ ಜವಾಬ್ದಾರಿ ಅನ್ನೋದಿದ್ಯಾ? ಪಮ್ಮಿ ಮದುವೆಯಷ್ಟು
important ವಿಷ್ಯಾನೂ ಮರ್ತು ಊರೆಲ್ಲಾ ಪುರಾಣ ಹುಡ್ಕೊಂಡು ಬಂದು, ಈಗ
ನೆನಪಿಸ್ಕೊತಾ ಇದೀರಾ! ನೀವೂ ಒಬ್ರು ತಂದೆ! ತಂದೇ, ಇವ್ರನ್ನ ಎಲ್ಲಿಂದೆ ತಂದೆ!
ಸೀತಾರಾಮ : ನಿನ್ನ ವರಾತ ನಿಲ್ಲಿಸಿದ್ರೆ. ಸ್ವಲ್ಪ ಪತ್ರ ಓದ್ತೀನಿ. ಓದಬಹುದಾ?. . . . .
(ಮುಖ ವಿಕಾರವಾಗುತ್ತೆ)
ಜಾನಕಿ : ಅದ್ಯಾಕ್ರೀ ಕರೆಂಟು ಹೊಡ್ದಿರೋ ಕಾಗೆ ಥರಾ ಮುಖ ಮಾಡಿದೀರಾ?
ಸೀತಾರಾಮ : ಅಯ್ಯೋ ನನ್ಮುಖ ಇರೋದೇ ಹಾಗೆ!
ಜಾನಕಿ : ಅದು ನನಗೂ ಗೊತ್ತು. ಬರೀ information ಗೆ ಹೇಳಿದೆ ಅಷ್ಟೇ (ನಗು)
ಸೀತಾರಾಮ : ನಗಬೇಡ. ಇದರಲ್ಲಿರೋ information ನಿನಗೂ ಕರೆಂಟು ಹೊಡೆಸತ್ತೆ.
ಜಾನಕಿ : ಏನ್ರೀ ಅದು?
ಸೀತಾರಾಮ : ಪುಣ್ಯಾತ್ಮ ಬರ್ದಿದಾನೆ. demonetisation ಇಂದ ಅವ್ನ ಬಿಸಿನೆಸ್ ಬಿದ್ಹೋಗಿ ಪಾಪರ್
ಆದ್ನಂತೆ. ಸ್ವಾಮೀ,ಕೆಲವರ ಕಾಲ್ಗುಣದಿಂದ ಮನೆ ಹಾಳಾಗೋದುಂಟು ನಿಮ್ಮ ಮಗಳ ಕಾಲ್ಗುಣದಿಂದ
ದೇಶಾನೇ ಮಕಾಡೆ ಮಲಗಿದೆಯಲ್ರೀ ಅಂತ ಬರ್ದಿದಾನೆ.
ಜಾನಕಿ : ಅಯ್ಯೋ ಈ ಸಂಬಂಧಾನೂ ಬಿತ್ತಾ? …..
ಬೀಳಲಿ ಬಿಡಿ ಒಳ್ಳೇದೇ ಆಯ್ತು. ಅವಂದು ಕಪ್ಪು ಹಣದ business ಇರ್ಬೇಕು. ಹಾಗೇ ಆಗ್ಬೇಕು. ನಂ ಪಮ್ಮೀಗೆ ಇದೊಂದೇ ಗಂಡಾ? ಚಿನ್ನ-ಚಿನ್ನದಂಥವನು ಸಿಗ್ತಾನೆ. ಅವನ್ನ ನೋಡಿದಾಗಲೇ ಅನ್ಸಿತ್ತು – ಬಹಳ ಕೊಬ್ಬು ಈ ಪ್ರಾಣೀಗೆ ಅಂತ!
ಸೀತಾರಾಮ : ಆ್ಞಂ U-turn!!!
ಜಾನಕಿ : ನಂ ಪಮ್ಮಿ ಎಲ್ಲಿ, ಆ ಕರಡಿ ಎಲ್ಲಿ. ಅವಳಂತೂ ನಾ ಹಾಕಿದ ಗೆರೆ ದಾಟಲ್ಲ. ಚಿನ್ನದಂಥಾ
ಹುಡುಗ ಎಷ್ಟಂದ್ರೂ ನನ್ಮಗಳು.
ಸೀತಾರಾಮ : ಯಾಕೋ, ನಂದಲ್ವೇನೋ?
ಜಾನಕಿ : ನಿಂ ಜೀನ್ಸ್ ಅವಳ ಹತ್ರಾನೂ ಸುಳಿಯಲಿಕ್ಕೆ ಬಿಟ್ಟಿಲ್ಲ ನಾನು.
ಸೀತಾರಾಮ : ಅದ್ಸರಿ ಅನ್ನು, ಅವಳ್ಯಾಕೆ ನಂ ಜೀನ್ಸ್ ಹಾಕ್ತಾಳೆ. ಅವಳದ್ದೇ 108 ಇರ್ಬೇಕಾದಾಗ!
ಜಾನಕಿ : ಇದೇನ್ರೀ TV ಮೇಲೆ ಚೀಟಿ (ಚೀಟಿ ಓದುತ್ತಾಳೆ)
ಜಾನಕಿ : ಅಯ್ಯೋ ಶಿವನೇs
ಸೀತಾರಾಮ : ಯಾಕೇ ಏನಾಯ್ತೇs ?
ಜಾನಕಿ : (ಅಳುತ್ತ) ನೀವೇ ನೋಡಿ
ಸೀತಾರಾಮ : (ಓದಿ) ಅಯ್ಯೋ ಪಮ್ಮಿಗ್ಯಾಕೇ ಈ ಹಾಳು ಬುದ್ಧಿ ಬಂತು? ಚೀಟಿ ಬರ್ದಿಟ್ಟು ಮೂಲೆ ಮನೆ ಮಾದೇಶನ ಜೊತೆ ಓಡಿ ಹೋಗಿದ್ದಾಳಲ್ಲೇ! ಒಂದೊಳ್ಳೇ ಟೇಸ್ಟೂ ಬೇಡ್ವೇ! ನಾವಿಲ್ಲಿ ಮದುವೆಗೇಂತ ಒದ್ದಾಡ್ತಿದ್ರೆ, ಇದ್ಯಾವುದೇ ಪ್ರೇಮ ಪ್ರಸಂಗ? ನಮಗೆ ಸುಳಿವೇ ಸಿಗದ ಹಾಗೆ..ಅಲ್ಲಾ ನೀ ಹಾಕಿದ ಗೆರೆ . . . .
ಜಾನಕಿ : ಎಲ್ಲಾ ನಿಮ್ಮಿಂದ್ಲೇ (ಒಳಕ್ಕೆ ಓಡಿ ಹೋಗುತ್ತಾಳೆ)
ಸೀತಾರಾಮ : ತಂದೇ, ಯಾಕಪ್ಪಾ ಹೀಗೆ?
ಆಕಾಶವಾಣಿ : ಕಂದಾ, ಆಗೋದಲ್ಲಾ ಒಳ್ಳೇದಕ್ಕೇ, ಸುಮ್ನಿರು. ಅವ್ಳು ಸ್ತ್ರೀ ಸ್ವಾತಂತ್ರ್ಯದವ್ಳು. ಹಾರಿ ಹೋದ್ಳು ಅಷ್ಟೇ!

* * * *