Month: January 2016

ಆರೋಗ್ಯಕ್ಕಾಗಿ ಸರ್ಕಸ್

ಜನ ಹಿಂದಿನಂತಿಲ್ಲ. ಎಚ್ಚೆತ್ತಿದ್ದಾರೆ. ತಮ್ಮ ಸುದೃಢ ಆರೋಗ್ಯಕ್ಕಾಗಿ, ಅವರೀಗ ಯಾವುದೇ ಸರ್ಕಸ್‍ಗೆ  ತಯಾರು. ಬೊಜ್ಜು, ಬಿ.ಪಿ., ಮಧುಮೇಹಗಳಿಂದ  ಅನುಭವಿಸಿದ್ದು ಸಾಕಾಗಿ, ಅವುಗಳ ಮೇಲೆ ಅಂತಿಮ ಯುದ್ಧ ಸಾರಿದ್ದಾರೆ. ಎಲ್ಲರ ಕಿವಿಯಲ್ಲಿಯೂ ವಿವೇಕಾನಂದರ ವಾಣಿ ಮೊಳಗುತ್ತಿದೆ – `ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ’. ಉದ್ಯಾನವನಗಳಲ್ಲಿ  ಜಾಗಿಂಗ್  ನಡೆಸಿರುವ ಬೊಜ್ಜಿಗರನ್ನು ನೋಡಿದಾಗ, ಇದು ನಿಜವೆನ್ನಿಸುವುದು ಸಹಜ.  ನನ್ನಂಥ  ನಿದ್ದಂಡಿಗಳಿಗೆ, ಮುಂಜಾನೆ ಐದಕ್ಕೇ ಜಾಗಿಂಗ್  ನಡೆಸುವ ಮಂದಿ, `ಬುದ್ಧ’ರಿವರೇನೋ ಎನಿಸುತ್ತದೆ – `ಜಗವೆಲ್ಲ ಮಲಗಿರಲು  ಇವನೊಬ್ಬನೆದ್ದ’ ಉಕ್ತಿಯನುಸಾರ‌. ಈ ಅಂತಿಮ ಯುದ್ಧದಲ್ಲಿ ಗೆಲ್ಲುವರಾರೆಂದು  ಮುಂಚೆಯೇ  ತಿಳಿಯುವ ಕೆಟ್ಟ ಕುತೂಹಲ ನನಗೆ.  ಆದರೆ , ಈ `ಯುದ್ಧ’ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ.  ಬೊಜ್ಜಿಗರು  ಹಠವ್ರತ  ಕೈಗೊಂಡು ಜಾಗಿಂಗ್‍ನಲ್ಲಿ ಒಂದೊಂದು ರೌಂಡ್ ಜಾಸ್ತಿ  ಮಾಡಿದಷ್ಟೂ, ಅವರು  ಒಂದೊಂದು ರೌಂಡ್ ಹಿಗ್ಗುತ್ತಿದ್ದಾರಾ ಅನ್ನುವ ಅನುಮಾನ ಎನಗೆ! ಮನುಜನ ಆರೋಗ್ಯಕ್ಕಾಗಿ ಇಂಥಹ ಸರ್ಕಸ್  ಮುಗಿಯುವುದೆಂದು?

ಜನರಲ್ಲಿ  health consciousness ಮೂಡಿದುದರ ಪರಿಣಾಮವೇ ಈ ಸರ್ಕಸ್.  ನಿಮ್ಮ ಆರೋಗ್ಯದ ಗುಟ್ಟು ನಿಮ್ಮ ಕೈಯಲ್ಲಿಯೇ ಇದೆ ಅನ್ನುವ ಘೋಷವಾಕ್ಯವನ್ನಿಟ್ಟುಕೊಂಡು  ನಮ್ಮನ್ನು ಮರಳು ಮಾಡಿ ಬದುಕುವ ದೊಡ್ಡ `ಮಾಫಿಯಾ’ ಇದರ ಹಿಂದೆ  ಇದೆಯೆಂದರೆ  ನಿಮಗೆ  ಆಶ್ಚರ್ಯವಾಗಬಹುದು.  ಅದರ ಬಗ್ಗೆ ಮುಂದೆ ಚರ್ಚಿಸುತ್ತೇನೆ.  `ನಮ್ಮ ನಡೆ, ಆರೋಗ್ಯದ ಕಡೆ’ ಎಂಬ ದಿಢೀರ್ ಜ್ಞಾನೋದಯವಾದದ್ದೇ ತಡ, ಜನಗಳ ವಿಧ‌ ವಿಧ‌ದ ಸರ್ಕಸ್  ಅವಿರತವಾಗಿ  ನಡೆಯುತ್ತಿದೆ.

ಬೆಂಗಳೂರಿನ ಯಾವುದೇ ಉದ್ಯಾನವನಕ್ಕೆ ಬನ್ನಿ, -ಅದು ಪಾಳು ಬಿದ್ದಿದ್ರೂ ಅಡ್ಡಿಯಿಲ್ಲ – ಬೆಳಿಗ್ಗೆ  ಪೂರ್ತಾ `ಜಾಗಿಷ್ಠ’ರಿಂದ ಜಾಮ್  ಆಗಿರುತ್ತದೆ.  ಹೊಸ ಜಾಗಿಷ್ಠರು  ಕಾಲು ಹಾಕಲೂ  ಸ್ಥಳವಿರೋದಿಲ್ಲ.  ಅದರ ಜೊತೆಗೆ, ಬರುವವರಲ್ಲಿ  ಬಹು ಸಂಖ್ಯಾತರು  ರೋಡ್‍ರೋಲರಿನ  ಮಿನಿಯೇಚರ್‍ಗಳು.  ಈ ಬೊಜ್ಜಿಗರೊಂದಿಗೆ  ಸಣಕಲರು ಢೀ  ಕೊಟ್ಟಲ್ಲಿ ಅವರ `ಬೊಜ್ಜ’ಕ್ಕೆ  ಅವರ ಮನೆಯವರು ತಯಾರಾಗಬೇಕಾದೀತು! ಇಂಥ ಕೆಲ ವಜ್ರಕಾಯದ ಹೆಂಗಸರು ಜಾಗಿಂಗ್  ಮಾಡುವುದನ್ನು ನೋಡಿದಾಗ, ಕೆಲವರಿಗೆ ಹೆಣ್ಣು ಜಾತಿಯ ಮೇಲೇ ಅವಜ್ಞೆ ಮೂಡುವುದುಂಟು!  Of course, ಇದು ಗಂಡಸರಿಗೂ ಅನ್ವಯವಾಗುತ್ತದೆ.

ಜಾಗಿಂಗ್  ವಿಚಾರಕ್ಕೆ ಬಂದರೆ, ಹೀಗೂ ಹೇಳುತ್ತಾರೆ – ಉದ್ಯಾನದಲ್ಲಿ  ಒಬ್ಬಳು ಸುಂದರ ಯುವತಿ ಜಾಗ್  ಮಾಡುತ್ತಿದ್ದರೆ, ಕನಿಷ್ಠ ಹತ್ತು ಗಂಡಸರ ತೂಕ ಕರಗುತ್ತದೆ – ಅವಳ ಹಿಂದೆ  ಸುತ್ತುತ್ತಾ ತಾವೆಷ್ಟು ರೌಂಡ್ ಜಾಗ್ ಮಾಡಿದೆವೆಂಬ  ಪರಿಜ್ಞಾನವೂ ಇರದೇ! ಯುವತಿಯರು,  zero  size ಗಾಗಿ, ಯುವಕರು, ಉತ್ತಮ ದೇಹ ದಾರ್ಢ್ಯ‌ಕ್ಕೆ, ಬೊಜ್ಜಿಗರು  ಬಳಕುವ (?) ಮೈ ಹೊಂದಲು  – ಹೀಗೇ ಒಬ್ಬೊಬ್ಬರು ಒಂದೊಂದು ಕಾರಣಕ್ಕಾಗಿ  ಜಾಗಿಂಗ್  ಮಾಡುತ್ತಾರೆ.  ಈ ಎಲ್ಲಾ ಸರ್ಕಸ್  ಯಾಕಾಗಿ? ಉತ್ತಮ ಆರೋಗ್ಯಕ್ಕಾಗಿ, ಸ್ವಾಮೀ ಉತ್ತಮ ಆರೋಗ್ಯಕ್ಕಾಗಿ.

 

ಜಾಂಗಿಂಗರಿಗರಲ್ಲೂ  ಬಹಳ ವಿಧ‌ವುಂಟು. ಕೆಲವರು, ಹರ್ಕ್ಯುಲಸ್‍ನಂತೆ ಇಡೀ ಜಗತ್ತಿನ ಭಾರ ಹೊತ್ತಂತೆ ಮುಖ ಮಾಡಿರುತ್ತಾರೆ.  `ಇಂದೇ ಜಗತ್ಪ್ರಳಯ’ ವೆಂಬ, ವರ್ಷಕ್ಕೆ  ಮೂರು ಸರ್ತಿ ಬರುವ ಕಾರ್ಯಕ್ರಮವನ್ನು  ನೋಡಿ, ನಂಬಿ ಬಂದವರಂತೆ ಕೆಲವರ  ಧಾವಂತದ  ಜಾಗಿಂಗ್. ಜಾಗಿಂಗರಿಗರಲ್ಲಿ  ಬಹು ಪಾಲು ಜನ ಕಿವಿಗೆ  ಇಯರ್ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಜಾಗ್ ಮಾಡುವುದುಂಟು – entertainment  ಹಾಗೂ  jogging ಒಟ್ಟಿಗೆ ಮುಗಿಸುವಾ ಅಂತ.  ಇನ್ನು ಕೆಲವರು ಚಪ್ಪಾಳೆ ತಟ್ಟುತ್ತಾ,  ಕೆಲವರು ಸುತ್ತಲೂ ಕೈ ಬೀಸುತ್ತಾ (ಮತ್ತಾರೂ ಹತ್ತಿರ ಬರದಿರಲೆಂದೇ?!)  ಜಾಗುವುದುಂಟು. ಹಿಂದಿಯ `ಜಾಗೇ’ ಇಲ್ಲದ – ಅಂದರೆ ಎದ್ದೇ ಇಲ್ಲದ – ಪುಟ್ಟ ಮಕ್ಕಳನ್ನು ಹಿಡಿದೆಳೆಯುತ್ತ ಜಾಗ್ ಮಾಡುವ ಅಪ್ಪ/ಅಮ್ಮಂದಿರೂ ಇದ್ದಾರೆ.  ಆವಾಗ, ಬರಲೊಲ್ಲದ ಕುರಿಯನ್ನು ಬಲವಂತವಾಗಿ ಎಳೆಯುತ್ತಿರುವ ಕುರುಬನ ಚಿತ್ರಣ ನನ್ನ ಮನಃಪಟಲದಲ್ಲಿ ಮೂಡಿದರೆ ನನ್ನ ತಪ್ಪೇ?

ಸಾಮಾನ್ಯತಃ ಇಷ್ಟೆಲ್ಲ  work out ಮಾಡಿದರೂ ಬೊಜ್ಜು ಮಾತ್ರ ಕರಗದಿರಲು  ಕಾರಣವೇನು? ಕಾರಣ ಬಹಳ ಸರಳ.  ಸಾಮಾನ್ಯವಾಗಿ ನಾವು ಹೊಸದಾಗಿ  ಜಾಗಿಂಗ್  ಶುರು ಮಾಡಿದಾಗ, ಜಾಗಿಂಗ್ ಮಾಡಿ ಮುಗಿಸಿ ಬೆವರೊರೆಸಿಕೊಂಡು, ಪಕ್ಕದಲ್ಲಿನ  ಚಹದಂಗಡಿಯಲ್ಲಿ ಚಹಾ ಕುಡಿದು ಹೋಗುವಾ ಎಂಬ ಒಳಮನದ ದನಿಗೆ ಓಗೊಟ್ಟು, ಚಹಾ ಕುಡಿಯಲು  ಶುರು ಮಾಡುತ್ತೇವೆ. ಕ್ರಮೇಣ ಇದು ದೊಡ್ಡದಾಗುತ್ತ  light tiffin ಗೆ ಬಂದು, ಕೊನೆಗೆ  Heavy breakfast ಗೆ  ನಿಲ್ಲುತ್ತೆ!  ಜಾಗಿಂಗ್‍ನಲ್ಲಿ  ಕರಗಿಸಿದ ಕೊಬ್ಬಿನ ಎರಡರಷ್ಟು ಕೊಬ್ಬನ್ನು ತಿಂದು ಬಂದಲ್ಲಿ, ಬೊಜ್ಜು ಕರಗುವುದಾದರೂ ಎಂತು? ಅದಕ್ಕೇ ನೋಡಿ, ಸಂಜೆ chats  ತಳ್ಳುಗಾಡಿಗಳಂತೆಯೇ, ಬೆಳಿಗ್ಗೆ ಉದ್ಯಾನವನದ ಹತ್ತಿರ ‘ಮಾಮೂ’ ಚಾಯ್ ಅಂಗಡಿಗಳು ಜಾಸ್ತಿಯಾಗಿವೆ. ನಿಮ್ಮ ಉದ್ದೇಶ ಈಡೇರಲಿ ಬಿಡಲಿ, ಅವರ ಬಿಸಿನೆಸ್ಸಂತೂ ಧಂಡಿಯಾಗಿ  ಬೆಳೆಯುತ್ತಿದೆ. ಇದಕ್ಕೆ  ಅತ್ಯುತ್ತಮ  ಉದಾಹರಣೆಯೆಂದರೆ MTR  ಹೋಟೆಲ್. ಅದು ಉದ್ಧಾರ ಆಗಿದ್ದೇ ಲಾಲ್‍ಬಾಗ್‍ಗೆ  ಬರುವ ಜಾಗಿಂಗರಿಗರಿಂದ!

ನೀವೇ ಹೇಳಿ, ಈ  ಸರ್ಕಸ್‍ಗಳಿಂದ ಅವರ ಉದ್ದೇಶ  ಈಡೇರುತ್ತಾ?  ಖಂಡಿತಾ ಇಲ್ಲ. ನಮ್ಮ `ಆರೋಗ್ಯ ಭಾಗ್ಯ’ ಕ್ಕೆ (ಸಿದ್ರಾಮಣ್ಣಂದಲ್ಲ!) ಈ ಸರ್ಕಸ್‍ಗಳಿಗಿಂತ, ನಮ್ಮ ಜೀವನ ಶೈಲಿಯನ್ನು  ಬದಲಿಸಿಕೊಳ್ಳುವುದು ಉತ್ತಮ ವಿಕಲ್ಪವಾಗುತ್ತದೆ.  ಅಥವಾ ಉಳಿದಿರುವ  ಏಕಮೇವ ವಿಕಲ್ಪವಾಗುತ್ತದೆ.

ಒಮ್ಮೆ ಯೋಚಿಸಿ, ಈ ಹಿಂದೆ ನಮ್ಮ ತಾತಂದಿರು  ಸುಖವಾಗಿ,  ಆರೋಗ್ಯವಾಗಿ ಬಾಳಿತ್ತಿಲ್ಲವೇ? ಹಾಗಂತ ಅವರೇನೂ  ನಮ್ಮಂತೆ ತುಪ್ಪ, ಎಣ್ಣೆ, ಕಾಯಿ, ಹೀಗೇ ಎಷ್ಟೆಷ್ಟೋ ಪದಾರ್ಥಗಳನ್ನು ವರ್ಜಿಸಿ diet  ಮಾಡ್ತಿತ್ತಿಲ್ಲವಲ್ಲ. ಎಲ್ಲವನ್ನೂ, -ಮತ್ತೆಲ್ಲವನ್ನೂ-  ಭರ್ಜರಿಯಾಗಿ  ನಮಗಿಂತ  ಜಾಸ್ತಿ ಸೇವಿಸಿಯೇ  ಆರೋಗ್ಯವಾಗಿದ್ದು ಹೇಗೆ? ಇದರ ಗುಟ್ಟು  ಅವರ ಜೀವನ ಶೈಲಿ. ಅವರು ಯಾವತ್ತೂ  ಮೂಲೆ ಅಂಗಡಿಗೆ ಸ್ಕೂಟಿಯಲ್ಲಿ ಹೋಗುತ್ತಿರಲಿಲ್ಲ.  ಬೆರ್ಚಪ್ಪಗಳಂತೆ  ಕೂತಲ್ಲೇ ಕೂತು ಕೆಲಸ ಮಾಡುತ್ತಿರಲಿಲ್ಲ.  ಅವರು ಶ್ರಮಜೀವಿಗಳಾಗಿದ್ದರು.  ಆದರೆ ನಾವು . . .?

ನಮಗೆ ಸೈಕಲ್ ತುಳಿಯೋದು ಕಷ್ಟ ಅಂತ, ಬೈಕು, ಕಾರು ಅಂತ ಹೋಗ್ತೀವಿ.  ಇದರಿಂದ ಬೊಜ್ಜು ಬರತ್ತೆ.  ವೈದ್ಯರ ಹತ್ತಿರ ಹೋಗ್ತೀವಿ.  ಅವರು ಬೊಜ್ಜು ಕರಗಿಸಲಿಕ್ಕೆ ,  gymಗೆ  ಹೋಗಿ ಸೈಕಲ್ ಮಾಡಲು ಸಲಹೆ  ನೀಡುತ್ತಾರೆ.  ನಾವು ಅಲ್ಲಿ  ಸೈಕಲ್ ಹೊಡೆದು ಕೃತಾರ್ಥರಾಗುತ್ತೇವೆ.  ಇದಲ್ಲವೇ `ಜೀವನ ಚಕ್ರ’! ಬೇಡವೆಂದು ಬಿಟ್ಟ ಸೈಕಲ್ಲೇ ಗತಿಯಾಯ್ತೇ?

ಕೃಷಿ ನಿರತರಾಗಿರುವ  ರೈತಾಪಿ ಜನರಲ್ಲಿ  ಒಬ್ಬೇ ಒಬ್ಬ ಬೊಜ್ಜಿನವನನ್ನ ತೋರಿಸಿ ನೋಡೋಣ. (ರೈತರೆಂದು ಹೇಳಿಕೊಳ್ಳುವ ರೈತ ನಾಯಕರನ್ನು  ಹೊರತು ಪಡಿಸಿ) ಕಾಣಲಸಾಧ್ಯ. ಅದೇ ನಮ್ಮ ನಗರಜೀವಿಗಳಲ್ಲಿ ಬೊಜ್ಜಿರದವರನ್ನು  ಹುಡುಕುವುದು ತ್ರಾಸದಾಯಕವಾಗುತ್ತದೆ.  ಅದರಲ್ಲೂ  ಮಧ್ಯವಯಸ್ಕರಲ್ಲಿಯಂತೂ  ಬೊಜ್ಜು, ಪ್ರಾಥಮಿಕ ಗುಣಲಕ್ಷಣವಾಗಿ ಬಿಟ್ಟಿದೆ.  ಕಾರಣ, ನಮ್ಮ ಜೀವನ ಶೈಲಿ. ನಮಗೆ ನಡೆಯೋದು ಅಂದ್ರೆ ಆಗದು.  ಕಾರಿನ ದಾಸರು ನಾವು. ಬಾವಿಯಿಂದ  ನೀರು ಸೇದಿ ನಮಗೆ ಗೊತ್ತಿಲ್ಲ.  Motor  ಉಂಟಲ್ಲ ! ಹೀಗೇ ನಮ್ಮ ಮೈ ಬಗ್ಗಿಸಿ ದುಡಿಯುವಂಥ  ಕಾರ್ಯಗಳಿಗೆಲ್ಲ  ಯಂತ್ರಗಳನ್ನು  ತಂದು, ಶ್ರಮವೆಂದರೇನು ಅಂತಲೇ ನಮಗೆ ತಿಳಿದಿಲ್ಲ.  ಹೀಗಾದಾಗ, ನಾವು ಸೇವಿಸಿದ ಕ್ಯಾಲೋರಿಗಳು   burn ಆಗುವುದು ಹೇಗೆ? ಅವು  burn ಆಗದೇ  ಮೈಯಲ್ಲಿ ಕೂತು ಬೊಜ್ಜನ್ನು ತರುತ್ತವೆ.  ಈ  ಬೊಜ್ಜೋ, ಬಹು ದೊಡ್ಡ ಕುಟುಂಬಸ್ಥ.  ತಾನು ಬರುವುದಲ್ಲದೇ,  ತನ್ನೊಂದಿಗೆ ಬಿ.ಪಿ. ಶುಗರ್ ಮತ್ತಿತರ ಹತ್ತು ಖಾಯಿಲೆಗಳನ್ನು ತರುತ್ತದೆ.  ಒಂದು ತೊಗೊಂಡ್ರೆ ಮತ್ತೊಂದು  ಉಚಿತ ಎಂದಿದ್ದಾಗ, ಮರೆಯದೇ, ಆ ವಸ್ತು -ಬೇಕಿರಲಿ, ಇಲ್ಲದಿರಲಿ-  ಕೊಳ್ಳುವ ಮಂದಿಯಲ್ಲವೇ ನಾವು?!

ಅಮೇರಿಕಾದಂಥ ಮುಂದುವರೆದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವಿಪರೀತದ  ಯಾಂತ್ರೀಕರಣದಿಂದ, ವಿಪರೀತ  ಬೊಜ್ಜುತನ  ಕಂಡು ಬರುತ್ತದೆ.  ಇಂಥದ್ದು ನೋಡಿಯೇ ಮಹನೀಯರೊಬ್ಬರು ಹೇಳಿದ್ದು – `ಮಾನವ ಬದುಕುವುದಕ್ಕಾಗಿ ತಿನ್ನಬೇಕು, ತಿನ್ನುವುದಕ್ಕಾಗಿ ಬದುಕುವುದಲ್ಲ’ ಅಂತ. ಆದರೆ,  ಈ ಜನರನ್ನು  ನೋಡಿದಾಗ, ಇವರು ಎರಡನೇ ಜಾತಿಗೆ  ಸೇರಿದವರೆಂಬುದು ಮಗುವಿಗೂ ಅರ್ಥವಾಗುತ್ತದೆ.  `ಮಾಡಿದ್ದುಣ್ಣೋ ಮಹರಾಯ’ ಅನ್ನುವ ಗಾದೆಯನ್ನು ತಪ್ಪಾಗಿ ಅರ್ಥೈಸಿ, ಮಾಡಿದ್ದೆಲ್ಲವನ್ನೂ ಉಂಡಿದ್ದರಿಂದಲೇ ಆಗಿದ್ದು, ಈ  ಪರಿಪಾಟಲು! ಇಂಥವರು  ಆರೋಗ್ಯಕ್ಕಾಗಿ  ವಿವಿಧ‌ ಸರ್ಕಸ್  ಮಾಡಲೇ ಬೇಕಾದ  ಅನಿವಾರ್ಯತೆಯಿದೆ!

* * *

ಜನಗಳ ಈ  health consciousness ನ್ನು ತಮ್ಮ  business potential ಆಗಿ ಪರಿವರ್ತಿಸಿ  ಕೊಂಡವರು  gymನವರು, ಪಥ್ಯ ವೈದ್ಯರು,  ಮಧುಮೇಹ ವೈದ್ಯರು  ಇತ್ಯಾದಿ. ಜನರ `ಆರೋಗ್ಯಕ್ಕಾಗಿ’ ಅನಾರೋಗ್ಯಕರ ಪೈಪೋಟಿ  ನಡೆಸುತ್ತ  gymನವರು  ಜನರನ್ನ ತಮ್ಮತ್ತ ಸೆಳೆಯುತ್ತಾರೆ.  ತಮ್ಮಲ್ಲಿ  work out ಮಾಡಿ, `ಸುಂದರ’ ದೇಹ ಪಡೆಯಲು ಪ್ರೇರೇಪಿಸುತ್ತಾರೆ.  ಆಯುರ್ವೇದಿಕ್  ಔಷಧಿಯವರೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ! ನಾವುಗಳೋ ಇವರುಗಳ ಮಾತಿಗೆ ಮರುಳಾಗಿ, ಆರೋಗ್ಯಕ್ಕಾಗಿ  ಎಂಥ ಸರ್ಕಸ್ಸಿಗೂ  ತಯಾರಾಗಿ ಬಿಡುತ್ತೇವೆ.  ಈ ಎಲ್ಲರ ಉದ್ಧಾರ ನಮ್ಮಿಂದ,  ನಮ್ಮ ಸರ್ಕಸ್‍ನಿಂದ!
ಒಂದೊಂದು dietician ಒಂದೊಂದು ಸಲಹೆ ಕೊಡುತ್ತಾರೆ.  ಒಬ್ಬ ದಿನಕ್ಕೆ 1 ಚಪಾತಿ, 1 ಲೋಟ ಹಾಲು – ಮಾಂಸದ ಯೋಚನೆಯನ್ನೂ ಮಾಡದೇ – ಸೇವಿಸಲು ಹೇಳಿದರೆ, ಮತ್ತೊಬ್ಬ  ಮಾಂಸ ಸೇವನೆಗೆ ಅಡ್ಡಿಯೇನಿಲ್ಲ ಅನ್ನುತ್ತಾನೆ.  (ಸಾಮಾನ್ಯತಃ ಜನ ಪಥ್ಯವನ್ನು  strict ಆಗಿ  ನಡೆಸೋದಿಲ್ಲ  ಅನ್ನುವ ನಂಬಿಕೆಯಿಂದ ಇವರು ಧೈರ್ಯವಾಗಿ ಸಲಹೆ ನೀಡುತ್ತಾರಾ?!) ಕೆಲವರು ಯೋಗ ಮಾಡಲು  ಸಲಹೆ ಮಾಡಿದರೆ, ಕೆಲವರು ಜಿಮ್‍ಗೆ, ಮತ್ತೆ ಕೆಲವರು  ಜಾಗಿಂಗ್‍ಗೆ  ಸಲಹೆ ನೀಡುತ್ತಾರೆ.  ಯಾರ ಮಾತನ್ನು  ನಂಬಬೇಕು ಹೇಳಿ! ಒಮ್ಮೆಯಂತೂ ಓರ್ವ ವೈದ್ಯ ನನಗೆ ವಾರಕ್ಕೆ ಐದು  ದಿನ ವ್ಯಾಯಾಮ ಮಾಡಿ, ಉಳಿದೆರಡು ದಿನ ಮಾಡದಿದ್ದರೂ ನಡೆದೀತು  ಎಂದಿದ್ದ!  Software ನಲ್ಲಿ ಕೆಲಸ ಸಿಗದೇ ಡಾಕ್ಟರಾಗಿದ್ದನೋ ಏನೋ ಆತ!
ಈ ಬೋಗಸ್  ಮಾತುಗಳಿಗೆ ಬಲಿ ಬೀಳದೇ ನಮ್ಮ ಜೀವನ  ಶೈಲಿಯನ್ನು ತಿದ್ದಿ ತೀಡಿಕೊಂಡರೆ, ಈ ಪಾಟಿ ಸರ್ಕಸ್‍ಗಳಿಂದ ನಮಗೆ ಮುಕ್ತಿ ಸಿಕ್ಕೀತು.
* * *
ಆರೋಗ್ಯಕ್ಕಾಗಿನ  ಕೆಲವೊಂದು ಸರ್ಕಸ್ ಅಪಾಯಕಾರಿಯೂ  ಆದೀತು.  ಬೊಜ್ಜುತನದ  ನಿವಾರಣೆಗೆ  short cut ವಿಧಾನವಾಗಿ  ಕೊಬ್ಬು ಕೊಯ್ಸಿಕೊಳ್ಳುವ ವಿಧಾನವೊಂದಿದೆಯಂತೆ. ಈ ಆಪರೇಷನ್‍ಗೆ ಸಿನಿಮಾ ರಂಗದ ಘಟಾನುಘಟಿಗಳೆಲ್ಲ ಕ್ಯೂ ನಿಂತು, ಈಗ ಆ ಬಿಸಿನೆಸ್  ಅಗಾಧ‌ವಾಗಿ  ಬೆಳೆದಿದೆಯಂತೆ.  ಇದಕ್ಕೆ ಉದಾಹರಣೆಯೆಂದರೆ, 30 ಎಮ್ಮೆಯಷ್ಟು ತೂಕವಿದ್ದ ಅಡ್ನಾನ್ ಸಾಮಿ ಎಂಬ ಗಾಯಕ ಈಗ ದೀಪಿಕಾ ಪಡುಕೋಣೆಯಂತೆ ಲತಾಂಗಿ, ಅಲ್ಲಲ್ಲ, ಲ‌ತಾಂಗನಾಗಿರುವುದು! ಆದರೆ,  ಆರತಿ ಅಗರ್‍ವಾಲ್ ಎಂಬ ತೆಲುಗಿನ `ತೂಕ’ದ ಚೆಲುವೆ, ಈ  short cut ಆಪರೇಷನ್  ವಿಫಲವಾಗಿ, ದುರ್ದೈವವಶಾತ್  ಸಾವನ್ನಪ್ಪಿದಳು.  ಹೇಳಿ,  ಈ ಸರ್ಕಸ್‍ಗಳು ನಮಗೆ ಬೇಕೇ?
ಇನ್ನಾದರೂ  ನಾವು ನಮ್ಮ ಜೀವನ ಶೈಲಿಯನ್ನು  ಬದಲಿಸಿಕೊಳ್ಳಲು  ಪ್ರಯತ್ನ ಪಡೋಣವೇ? ಒಂದೆರಡು ಕಿ.ಮೀ. ದೂರದ ಯಾವುದೇ  ಗಮ್ಯಸ್ಥಾನಕ್ಕೆ -ಆಫೀಸ್, ಅಂಗಡಿ, ಸಿನಿಮಾ ಯಾವುದಕ್ಕೇ ಆಗಲಿ- ಬೈಕ್ ಯಾ  ಕಾರು ಉಪಯೋಗಿಸದೇ ನಡೆದೇ ಹೋಗುವುದನ್ನು ಅಭ್ಯಾಸ ಮಾಡೋಣವೇ? ಮಿಕ್ಸಿ,  vaccume cleaner  ಮುಂತಾದ gadget ಗಳನ್ನು ಮೂಲೆಗೊತ್ತಿ, ಕನಿಷ್ಠ  ಕೆಲವೊಂದು  ದೈಹಿಕ ಶ್ರಮದ ಕೆಲಸಗಳನ್ನು ಮಾಡೋಣವೇ?  ಹಿತ-ಮಿತದಲ್ಲಿ ಆಹಾರವನ್ನು ಸೇವಿಸೋಣವೇ? ನಮ್ಮ ಕುಟುಂಬ ವೈದ್ಯರ ಮಾತಿನಲ್ಲೇ ಹೇಳುವುದಾದರೆ – `ಎಲ್ಲೀವರೆಗೆ ನೀವು ತಿನ್ನೋ ಕ್ಯಾಲೋರಿಗಳನ್ನು ಪೂರಾ  burn  ಮಾಡಿ (ಅಂದರೆ ದೈಹಿಕ  ಶ್ರಮದಲ್ಲಿ ಅವುಗಳನ್ನು ಸಂಪೂರ್ಣ ಉಪಯೋಗಿಸಿ)  ಮುಗಿಸುತ್ತೀರೋ, ಅಲ್ಲೀವರೆಗೆ ನೀವು ಬೊಜ್ಜಿನಿಂದ  ದೂರವಿರುತ್ತೀರಿ – ತನ್ಮೂಲಕ  ಅದರ after effectಗಳಾದ ಬಿ.ಪಿ. ಶುಗರ್‍ಗಳಿಂದಲೂ  ಮುಕ್ತಿ ಹೊಂದುತ್ತೀರಿ.  ಆರೋಗ್ಯಕ್ಕಾಗಿ ಬೇರಾವ ಸರ್ಕಸ್‍ನ ಅಗತ್ಯವೂ ಇಲ್ಲ.’ ಆದರಿದು  ನಮ್ಮಿಂದ ಸಾಧ್ಯ‌ವೇ?  ಇಲ್ಲವಾದ್ದರಿಂದಲೇ, ಈ `ಆರೋಗ್ಯಕ್ಕಾಗಿ ಸರ್ಕಸ್’  ಮುಂದುವರೆಯುತ್ತಲೇ ಇರುತ್ತದೆ – ಅವಿರತವಾಗಿ.
* * *

 

Advertisements