Month: March 2017

ಸುಭಗರು ಯಾರು?

ಈಚೆಗೆ  ಭಾರೀ ಸುದ್ದಿ ಮಾಡುತ್ತಿರುವುದು – ಮಾಧ್ಯಮ  ಹಾಗೂ ರಾಜಕಾರಣಿಗಳ ಹಗ್ಗ-ಜಗ್ಗಾಟ. ಈರ್ವರದ್ದೂ ತಾವು ಸುಭಗರೆಂಬ ವಾದ-ಪ್ರತಿವಾದ.  ನಿಜ ಹೇಳಬೇಕೆಂದರೆ, ಇಬ್ಬರೂ ಸರಿ ಹಾಗೂ ಇಬ್ಬರೂ ತಪ್ಪು ! ಹೇಗಂತೀರೋ? ಹೇಗೆ ಎಲ್ಲಾ ರಾಜಕಾರಣಿಗಳೂ ಭ್ರಷ್ಟರಲ್ಲವೋ, ಹಾಗೆಯೇ ಮಾಧ್ಯಮದ  ಎಲ್ಲ ಮಂದಿಯೂ ಸುಭಗರಲ್ಲ. ಜನಸಾಮಾನ್ಯರ  ದೃಷ್ಟಿಯಲ್ಲಿ ಹೇಳುವುದಾದಲ್ಲಿ, ರಾಜಕಾರಣಿಗಳಲ್ಲಿ ಭ್ರಷ್ಟರಲ್ಲದವರು 10% ಇದ್ದರೆ, ಮಾಧ್ಯಮದಲ್ಲಿ ಭ್ರಷ್ಟರು 10% ಇದ್ದಾರೆ.

ಮಾಧ್ಯಮದ ಕಾವಲ್ಗಣ್ಣಿಲ್ಲದೇ ಇದ್ದಲ್ಲಿ, ರಾಜಕಾರಣಿಗಳ ಭ್ರಷ್ಟ ಮುಖ ಸಮಾಜಕ್ಕೆ ಸಿಗುತ್ತಿರಲಿಲ್ಲ. ಸುದ್ದಿ ಮಿತ್ರರ ಕಡು-ಕಾವಲ್ಗಣ್ಣಿದ್ದಾಗ್ಯೂ  ಇಷ್ಟು ಭ್ರಷ್ಟಾಚಾರ/ ಅತ್ಯಾಚಾರ/ ಅನಾಚಾರಗಳು ನಡೀತಿರಬೇಕಾದ್ರೆ, ಮಾಧ್ಯಮಗಳ ಅನುಪಸ್ಥಿತಿಯಲ್ಲಿನ  ಪರಿಸ್ಥಿತಿಯನ್ನು ಊಹಿಸಿಕೊಳ್ಳಲೇ  ಭಯವಾಗುತ್ತ‌ದೆ!

ಕಡಿವಾಣವೇ ಇಲ್ಲದ ಸುದ್ದಿ-ಮಾಧ್ಯಮಗಳ, ಅದರಲ್ಲೂ, ದೃಶ್ಯ-ಮಾಧ್ಯಮಗಳಿಂದ ಇನ್ನೊಂದು ಮಗ್ಗುಲ ದರ್ಶನ. ಟಿ.ಆರ್.ಪಿ. ಹಪಾಹಪಿಗೆ, ಕೆಲವೊಮ್ಮೆ ವೈಯಕ್ತಿಕ  ಕಾರಣಗಳಿಗೆ, ರಾಜಕಾರಣಿಗಳ ಅನಗತ್ಯ ತೇಜೋವಧೆ- ನ್ಯಾಯಾಂಗಕ್ಕೆ  ಹೋದಲ್ಲಿ 10-15 ವರ್ಷ ತಗಲುವ ಸಂದರ್ಭ ಇರುವುದರಿಂದ, ತಾವೇ ಜಡ್ಜ್ ಆಗಿ, ವೀಕ್ಷಕರ ತಲೆ ಕೆಡಿಸುವುದು ಯಾ ಪೂರ್ವನಿರ್ಧಾರಿತ  ಹವಾ ಸೃಷ್ಟಿ ಮಾಡುವುದು ಈಗೀಗ ಜಾಸ್ತಿ ಆಗಿದೆ.  ಇದಕ್ಕೆ ಕಡಿವಾಣ ಬೇಡವೇ? ನೀವೇ ಹೇಳಿ.

ಹಾಗಾದರೆ, ಇದಕ್ಕೆ ಪರಿಹಾರ  ಇಲ್ಲವೇ? ಯಾಕಿಲ್ಲ? ಇದೆ.  ಸುದ್ದಿ-ಮಾಧ್ಯಮಗಳು ರಾಜಕಾರಣಿಗಳ ಭ್ರಷ್ಟಾಚಾರ / ಅನಾಚಾರಗಳನ್ನು ಮುಲಾಜಿಲ್ಲದೇ ಜನರಿಗೆ  ತಲುಪಿಸಲೇ ಬೇಕು.  ಅದು ಅವರ ಆದ್ಯ ಕರ್ತವ್ಯ – ಯಾರೂ  ಅದನ್ನು ಅಲ್ಲಗೆಳೆಯಲಾರರು ಮತ್ತು  ಅಲ್ಲಗೆಳೆಯಬಾರದು.  ಆದರೆ,  ಅದಕ್ಕೆ ಮಸಾಲಾ ಸೇರಿಸಿ, ತಿರುಚಿ, ತಮಗೆ ಇಷ್ಟ ಬಂದಂತೆ  ತೀರ್ಪನ್ನು ಹೊರಡಿಸದಿರಿ. ಇದಕ್ಕೆ ಕಡಿವಾಣ ಬೇಕಿದೆ.

ಮತ್ತೆ ಧುತ್ತೆಂದು ಎದಿರಾಗುವ ಪ್ರಶ್ನೆ. ಯಾವ ಸುದ್ದಿ ನಿಖರ, ಮತ್ತಾವುದು ಮಸಾಲಾಯುಕ್ತ – ಇದನ್ನು ನಿರ್ಧರಿಸುವವರು ಯಾರು? ಇದು ಬಹಳ  ಕಷ್ಟಕರ. ಇದನ್ನು ಆಯ್ದ ಅನುಭವೀ ಮಾಧ್ಯಮದವರು ಹಾಗೂ  ರಾಜಕಾರಣಿಗಳನ್ನೊಳಗೊಂಡ ಸಮಿತಿ ತೀರ್ಮಾನಿಸುವುದು ಒಳಿತು.  ಈ ಸಮಿತಿಯನ್ನು  ಆಯ್ಕೆ ಮಾಡುವವರು, ಎರಡೂ ಬಣಕ್ಕೆ  ಸೇರದ ನ್ಯಾಯಾಂಗದ ಮಂದಿಯಾದಲ್ಲಿ ಉತ್ತಮ.  ಆಗ ಈ ಮೇಲಾಟಗಳಿಗೆ ಕಡಿವಾಣ ಬಿದ್ದೀತು ಎಂಬ ಆಶಾವಾದ ನನ್ನದು.

* * * *

 

 

Advertisements

ದ್ವಿಮುಖ ನೀತಿ

ಯಾವುದೇ  ಒಂದು ವ್ಯಕ್ತಿಯ ಪರ ಅಥವಾ ಎಡ / ಬಲ  ವಾದದ ಪರ ಪೂರ್ವಾಗ್ರಹ  ಬಂದಲ್ಲಿ, ಜನರ ಅರಿವಿಗೇ  ಬಾರದಂತೆ ಅವರ ದ್ವಿಮುಖ ನೀತಿ ಪ್ರಕಟವಾಗಿ ಬಿಡುತ್ತದೆ.  ಇದು ಅವರ ತಪ್ಪಲ್ಲ  ಬಿಡಿ, ಮಾನವ ಸಹಜವಾದದ್ದು. ಯಾವುದೇ  ವಾದಕ್ಕೆ ಜೋತು ಬೀಳದವರಿಗೆ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ.  ನಿಷ್ಪಕ್ಷಪಾತಿಗಳಿಗೆ ಈ ಪೂರ್ವಾಗ್ರಹಪೀಡಿತರ ಮೇಲಾಟಗಳು  ರಸದೌತಣ  ನೀಡುವುದರಲ್ಲಿ ಸಂಶಯವಿಲ್ಲ.

GST ಯನ್ನು ಕಾಂಗ್ರೆಸ್‍ನವರು ತಂದರೆ ಬಿಜೆಪಿಯವರಿಗೆ  ಅಪಥ್ಯ.  ಬಿಜೆಪಿ  ಮಾಡಿದರೆ ಕಾಂಗ್ರೆಸ್‍ನವರಿಗೆ ಅಪಥ್ಯ.  ತಮ್ಮ ವಾದವಷ್ಟೇ ಸರಿ ಅಂತ ಇಬ್ಬರಿಗೂ.  ಕಾಂಗ್ರೆಸ್ ತರಲಿಚ್ಛಿಸಿದಾಗ `ಶನಿ ಸಂತಾನ’ವಾಗಿದ್ದ GST, ಅದೇ ಮೋದಿ  ಜಾರಿಗೆ ತರುವಾಗ ಮೋದಿಭಕ್ತರಿಗೆ ಆಪ್ಯಾಯಮಾನವಾಗಿ ಬಿಡುತ್ತದೆ.  ಕಾಂಗ್ರೆಸ್‍ನವರ ಸೋನಿಯಾ ಭಕ್ತಿಯನ್ನು ಆಡಿಕೊಳ್ಳುವ  ಮೋದಿಭಕ್ತರಿಗೆ ತಾವೂ ಅದೇ ಸಾಲಿನಲ್ಲಿ ಅಗ್ರಗಣ್ಯರು ಅನ್ನುವುದು ತಿಳಿಯುವುದೇ ಇಲ್ಲ. ತಾವೂ ವ್ಯಕ್ತಿ ಪೂಜೆಯಲ್ಲಿಯೇ ಇದ್ದೇವೆ ಅನ್ನುವುದು ಅವರ ಅರಿವಿಗೆ  ಬಾರದು. ಏಕೆಂದರೆ `ಪೂರ್ವಾಗ್ರಹ’ ಎಂಬ ಕನ್ನಡಕದಿಂದ  ನೋಡಿದಾಗ ಸ್ಪಷ್ಟ ಚಿತ್ರಣ ಸಾಧ್ಯವೇ? ನಾನೂ ಮೋದಿಯ ಬೆಂಬಲಕ್ಕೆ ನಿಲ್ಲುವವನೇ.  ಆದರೆ, ಅದು ಮೌಲ್ಯಾಧಾರಿತ  ಮಾತ್ರ.  ವ್ಯಕ್ತಿ-ಆಧಾರಿತ  ಅಲ್ಲ. ವ್ಯಕ್ತಿ ಪೂಜೆ ನನ್ನಿಂದಾಗದು.  ಈ ಸಾಮಾಜಿಕ  ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಮೋದಿ ಭಕ್ತರ ಅನುರಣನಗಳು ನನಗಂತೂ ಹೇಸಿಗೆ ಹುಟ್ಟಿಸುತ್ತವೆ.

ಇನ್ನೊಂದು ಉದಾಹರಣೆ – ಇದೇ  ಬಿಜೆಪಿಯವರು 2 – 3 ವರ್ಷಗಳ ಹಿಂದೆ, ಚುನಾವಣಾ ನಂತರ ಆಯ್ಕೆಯಾದ ಅತಿ ದೊಡ್ಡ  ಪಕ್ಷವನ್ನು ರಾಜ್ಯಪಾಲರು  ಸರ್ಕಾರ ರಚನೆಗೆ ಆಹ್ವಾನಿಸಬೇಕು ಎಂದು ಬೊಬ್ಬಿರಿಯುತ್ತಿದ್ದರು.  ಇವರು ಈಗ  ಗೋವಾ, ಮಣಿಪುರಗಳಲ್ಲಿ ಮಾಡಿದ್ದೇನು? ಮೋದಿ ಭಕ್ತರಿಗೆ ಇದು ಅಸಮರ್ಥನೀಯ ಎಂದು ಅನಿಸದು. ಏಕೆಂದರೆ, ಇದು ಆಗಿದ್ದು  ಅವರ `ದೇವ’ರಾದ  ಮೋದಿಯ ಅಣತಿಯಿಂದಷ್ಟೇ? ಕಾಂಗ್ರೆಸ್‍ನವರು  ಹಿಂದೆ ಮಾಡಿದ್ದನ್ನೇ ನೀವೂ ಮಾಡುತ್ತೀರಾದರೆ, ನಿಮಗೂ  ಅವರಿಗೂ ವ್ಯತ್ಯಾಸವೇನು ಬಂತು? ನೀವಂದಂತೆ,  ನೀವು ಅವರಿಗಿಂತ  ಭಿನ್ನವೇನಲ್ಲ ಅಂತಾಯ್ತು ! ನೀವು ಭಿನ್ನ ಎಂದೆಣಿಸಿದ  ನಮ್ಮ ಎಣಿಕೆಯೇ ತಪ್ಪಾಯ್ತೇ?

ಹೈಕಮಾಂಡ್ ಸಂಸ್ಕೃತಿಯ ಬಗ್ಗೆ ಕಾಂಗ್ರೆಸ್ ಮೇಲೆ ಹರಿಹಾಯುವ ಮೋದಿಭಕ್ತರು, ಈಗ ಉತ್ತರ ಪ್ರದೇಶಕ್ಕೆ ಯೋಗಿ ಆದಿತ್ಯನಾಥರ ಹೆಸರು ಮುಖ್ಯಮಂತ್ರಿ  ಪದವಿಗೆ ಸೂಚಿತವಾಗಿದ್ದರ ಬಗ್ಗೆ ಏನಂತಾರೆ? ಹಿಂದೆ, ರಾಜೀವ್‍ಗಾಂಧಿ ಕಾಲದಲ್ಲಿ `ಲಕೋಟೆ’ಯಲ್ಲಿ ಮುಖ್ಯಮಂತ್ರಿ ಹೆಸರು ಬಂದು, ಶಾಸಕರಿಂದ  `ಸರ್ವಾನುಮತ’ದಲ್ಲಿ ಆಯ್ಕೆಯಾಗುತ್ತಿತ್ತು! ಈಗ ಉತ್ತರಪ್ರದೇಶದಲ್ಲಿ ಆಗಿದ್ದಾದರೂ ಏನು? ಯೋಗಿ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಅಲ್ಲಿನ ಯಾವೊಬ್ಬ ಶಾಸಕನಿಗಾದರೂ ತಿಳಿದಿತ್ತೇ? ಆದರೂ ಮೋದಿಭಕ್ತರ ಪ್ರಕಾರ,  ಯೋಗಿ ಅಲ್ಲಿಯ ಶಾಸಕರಿಂದ `ಸರ್ವಾನುಮತ’ದಿಂದ ಆಯ್ಕೆಯಾಗಿದ್ದಾರೆ ! ಮೋದಿಯಿಂದ ಸೂಚಿತವೆನ್ನುವುದು ಕೇವಲ ಮಾಧ್ಯಮಗಳ  ಸೃಷ್ಟಿ !! ನಿಮ್ಮ ಕಣ್ಣಿಗೆ  ನೀವು ಗಾಂಧಾರಿಯಂತೆ ಪಟ್ಟಿ ಕಟ್ಟಿಕೊಳ್ಳಬಹುದು.  ಆದರೆ, ಜನರ  ಕಣ್ಣಿಗೆ ಮಣ್ಣೆರಚಲಾರಿರಿ.  ನೀವೂ ಹೈಕಮಾಂಡ್ ಸಂಸ್ಕೃತಿಗೆ ಜೋತು ಬಿದ್ದವರಾದಲ್ಲಿ ಇತರರ ಹೈಕಮಾಂಡ್ ಸಂಸ್ಕೃತಿಯನ್ನು ಜರಿಯಲು ಯಾವ ನೈತಿಕತೆ  ಇದೆ ಹೇಳಿ ಭಕ್ತರೇ? ಇಂಗ್ಲೀಷಿನಲ್ಲಿ ಒಂದು ಗಾದೆಯಿದೆ – `ಗಾಜಿನ ಮನೆಯಲ್ಲಿರುವಾತ, ಇತರರತ್ತ ಕಲ್ಲೆಸೆಯಬಾರದು’ ಅಂತ.

ಇನ್ನು ಡೈರಿ ಪುರಾಣ_ ಗೋವಿಂದರಾಜ್ ಡೈರಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರನ್ನು ಕ್ರಿಮಿನಲ್‍ಗಳೆಂದು ವಾಚಾಮಗೋಚರವಾಗಿ ಬಯ್ಯುವ ಮೋದಿಭಕ್ತರಿಗೆ ಸಹರಾ ಡೈರಿ ಮೋದಿಯತ್ತ ಬೊಟ್ಟು ಮಾಡುತ್ತದೆ ಅನ್ನುವುದನ್ನು ಜೀರ್ಣಿಸಿಕೊಳ್ಳಲಾಗದು.  ಅದೇ ಬೇರೆ ಇದೇ ಬೇರೆ ಅನ್ನುವ ಸಮರ್ಥನೆ ಬೇರೆ.  ಆ ಕೇಸಿನಲ್ಲಿ  ಸುಪ್ರೀಂಕೋರ್ಟ್ ಮೋದಿಗೆ ಕ್ಲೀನ್ ಚಿಟ್ ನೀಡಿದೆಯೆಂದು ಉಗ್ರವಾಗಿ ಪ್ರತಿಪಾದಿಸುವ ಇವರಿಗೆ ಅದೇ ಸುಪ್ರೀಂಕೋರ್ಟ್, ಡೈರಿಯನ್ನು ಸಾಕ್ಷಿಯಾಗಿ  ಮಾನ್ಯ ಮಾಡಲಾಗದು ಎಂದಿರುವುದು ಅಮಾನ್ಯ ! ಅಥವಾ ಜಾಣಗುರುಡು ! ನಾನೇನೂ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡುತ್ತಿಲ್ಲ.  ಭ್ರಷ್ಟಾಚಾರ ಯಾವ ಪಕ್ಷದ ರಾಜಕಾರಣಿಯಿಂದಾದರೂ ಭ್ರಷ್ಟಾಚಾರವೇ ಹಾಗೂ ಅಮಾನ್ಯವೇ.  ನಾನು ಮೋದಿ ಭಕ್ತರಿಗೆ ಹೇಳುತ್ತಿರುವುದಿಷ್ಟೇ – ಈ ದ್ವಿಮುಖ ನೀತಿ ಯಾಕೆ ಸ್ವಾಮಿ?

ಮಾನ್ಯ ಮೋದಿ ದೇಶದ ಒಳಿತಿಗಾಗಿ  ಹಗಲಿರುಳೂ ಶ್ರಮಿಸುತ್ತಿರುವುದರಲ್ಲಿ ನನಗೊಂದಿನಿತೂ ಸಂಶಯವಿಲ್ಲ.  ನಾನದನ್ನು ಮನಸಾರೆ ಮೆಚ್ಚುತ್ತೇನೆ ಹಾಗೂ ಹೊಗಳುತ್ತೇನೆ.  ನಾನಂತೂ ಮೋದಿಯ ಬೆಂಬಲಕ್ಕೆ ನಿಲ್ಲುವವನೇ. ಆದರೆ ತಪ್ಪು ಮಾಡಿದಾಗ, ಅದನ್ನು ತಪ್ಪೆಂದು ಹೇಳಲು ನನಗೆ  ಯಾವ ಕಟ್ಟುಪಾಡೂ ಇಲ್ಲ, ನಿರ್ಬಂಧವೂ ಇಲ್ಲ. ಅದಕ್ಕೇ ಮೋದಿಭಕ್ತರಿಗೆ ನನ್ನದೊಂದು ಬಿಟ್ಟಿ ಸಲಹೆ – ಪೂರ್ವಾಗ್ರಹ  ಮತ್ತು ವ್ಯಕ್ತಿಪೂಜೆ  ಬಿಡಿ, ಈಗ ನಿಮಗೆ ಸಿಗುತ್ತಿರುವ ಬೆಂಬಲಕ್ಕಿಂತ ಜಾಸ್ತಿ ಬೆಂಬಲ ಸಿಗುತ್ತದೆ.  ದ್ವಿಮುಖ ನೀತಿಗೆ ತಿಲಾಂಜಲಿಯಿಟ್ಟಲ್ಲಿ, ನಿಮಗೂ ಒಳಿತು, ದೇಶಕ್ಕೂ ಒಳಿತು, ಅಲ್ಲವೇ?

* * * *

 

ಬಾಸ್

 

ಕಛೇರಿಯಲ್ಲಿ  ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ, ಸಂತೃಪ್ತಿಗೊಳಿಸಲಾಗದ ಏಕೈಕ  ಇಸಮು ಅಂದರೆ, ಅದು ನಿಮ್ಮ ಬಾಸ್. ನಿಮ್ಮ ಕೆಲಸದಲ್ಲಿ ತಪ್ಪು ಹುಡುಕುವ ಏಕೈಕ ಉದ್ದೇಶಕ್ಕೆ ಜನಿಸಿರುವ ಮಹಾನುಭಾವನೇ  ಈ ನಮ್ಮ ಬಾಸ್.  200% ಸರಿಯಾದ  assignment ಅನ್ನು ಆತನ ಮುಂದಿಟ್ಟರೂ, ಅದರಲ್ಲಿ ಅತಿ ಗೌಣವಾದ  ಸಣ್ಣ ತಪ್ಪೊಂದನ್ನು ಹೆಕ್ಕಿ ತೆಗೆದು, ನಿಮಗೆ ಕೆಲಸವೇ  ಗೊತ್ತಿಲ್ಲವೆನ್ನುತ್ತ ಉಗಿದು ಉಪ್ಪಿನಕಾಯಿ ಹಾಕುವ ಚಾಣಾಕ್ಷನೀತ.  ಈ ಸದ್ಗುಣಗಳ ಬಹು ಪಾಲನ್ನು ನಮ್ಮ ಪತ್ನಿಯರ‌ಲ್ಲಿ  ಕಾಣಬಹುದಾದರೂ ಅಲ್ಲಿ ಪ್ರೀತಿಯೂ ಇರುತ್ತಾದ್ದರಿಂದ, ಅವರನ್ನು  ಇವನಷ್ಟು ದ್ವೇಷಿಸಲು  ಸಾಧ್ಯವಿಲ್ಲ.  ಅದಕ್ಕೇ ಕೆಲವರು ಹೆಂಡತಿಯನ್ನು ಮನೆಯ ಬಾಸ್ ಎನ್ನುವುದು! ನಿಮ್ಮ ಜೀವನವನ್ನು ಎಷ್ಟು ಹೈರಾಣವಾಗಿಸಲು ಸಾಧ್ಯವೋ  ಅಷ್ಟನ್ನೂ ಅಣುವಷ್ಟೂ ತಪ್ಪದಂತೆ ಮಾಡುತ್ತಾನೆ, ಈ ಕೋಪಿಷ್ಠ,  ದರ್ಪಿಷ್ಠ, ಹಿಂಸಾ ವಿನೋದಿ ಬಾಸ್.  ಈ  ಪರಾಕಾಷ್ಠೆಯಿಂದಾಗಿ,  ಎಷ್ಟೋ ಜನ ತಮ್ಮ ಬಾಸ್‍ನ ಹೆಸರಿನವರನ್ನೂ ದ್ವೇಷಿಸುವುದುಂಟು !

 

ಬಾಸ್‍ಗಳು ಯಾಕೆ ಹೀಗೆ ಅನ್ನುವ ಬಹು-ಬೇಡಿತ  ಪ್ರಶ್ನೆಗೆ (Frequently Asked Questions) ಉತ್ತರವನ್ನು ಹುಡುಕಲು  ಹೊರಟರೆ ನಮ್ಮ ಅರಿವಿಗೆ  ಬರುವುದೇನೆಂದರೆ, ಇದಕ್ಕೆ ಕಾರಣ,  ಅವರು ತಮ್ಮನ್ನು `ದೇವರು’ ಅಂದುಕೊಂಡಿರುವುದು. ತಮ್ಮಿಂದ ತಪ್ಪಾಗುವುದು ಅಸಾಧ್ಯ (The King can do no wrong  ತತ್ತ್ವದನ್ವಯ !) ಹಾಗೂ ತಮ್ಮ ಕೈ ಕೆಳಗಿನವರಿಂದ  ತಪ್ಪಿನ ಹೊರತಾಗಿ  ಬೇರೇನೂ  ಘಟಿಸದು  ಅನ್ನುವ ಅಚಲ  ವಿಶ್ವಾಸ ಮತ್ತು ನಂಬಿಕೆ ಅವರದು.  ಅವರವರ ನಂಬಿಕೆ ಅವರವರಿಗೆ  ಅಂತ ವಿಶಾಲ ಹೃದಯದಿಂದ  ಬಿಟ್ಟಿದ್ದಕ್ಕೇ ತಾನೇ ಅವರು,  ನಮ್ಮ ತಲೆಯ ಮೇಲೆ ಕುಳಿತಿರುವುದು.  ಹಾಗಾಗಿಯೇ  ಅವರು ಎಲ್ಲರಿಂದ `ನೀನೇ ಇಂದ್ರ, ನೀನೇ ಚಂದ್ರ’  ಎನ್ನುವ ಸಹಸ್ರ ನಾಮಾರ್ಚನೆಯನ್ನು ಅಪೇಕ್ಷಿಸುತ್ತಾರೆ.  ಬಾಸ್  ಅಪೇಕ್ಷೆಯನ್ನು ಉಪೇಕ್ಷಿಸದ ಬಹು  ದೊಡ್ಡ ಗುಂಪೂ ಇರುತ್ತದೆಯೆನ್ನುವುದನ್ನು ಮರೆಯಬೇಡಿ. ಕೆಲಸದಿಂದ  ಬಾಸ್‍ನನ್ನು ಸಂತೃಪ್ತಿಗೊಳಿಸಲಾಗದೆನ್ನುವುದನ್ನು ಅರಿತ ಈ ಮಂದಿ,  ಅದಕ್ಕಾಗಿ  buttering ಅಥವಾ ಬೆಣ್ಣೆ ಹಚ್ಚುವ ಕೆಲಸಕ್ಕೆ ಕೈ ಹಾಕುತ್ತಾರೆ.  ಬಾಸ್‍ನ ಅಪೇಕ್ಷೆಯೇ  ಅದಾದುದ್ದರಿಂದ ಅವರು ಅದರಲ್ಲಿ ಯಶಸ್ವಿಯೂ ಆಗುತ್ತಾರೆ.  ಇಂಥವರಲ್ಲಿ  ಹಲವರು, ತಮ್ಮ ಮುಂಬಡ್ತಿಗಳಿಗೆ  ಸಹಾಯಕವಾಗುವ Service record ಗೋಸುಗ,  ಬಾಸ್‍ಗಳನ್ನು `ಚೆನ್ನಾಗಿ’  ಇಟ್ಟುಕೊಳ್ಳುತ್ತಾರೆ.  ಖಾಸಗೀ ರಂಗದಲ್ಲೇನೂ ಪರಿಸ್ಥಿತಿ  ಭಿನ್ನವಲ್ಲ.  ಇಲ್ಲಿ S.R. ಆದರೆ, ಅಲ್ಲಿ Performance Appraisal ಹೆಸರಿನಲ್ಲಿ ಬಾಸ್‍ನ ಗುಣಗಾನ  ಅಷ್ಟೇ.  ಅದಕ್ಕೇ ಹೆಸರಲ್ಲೇನಿದೆ ಅಂದ ಷೇಕ್ಸ್‍ಪಿಯರ್!

 

ಬಾಸ್‍ನ  ಕೃಪಾಕಟಾಕ್ಷಕ್ಕೆ ತಮ್ಮೆಲ್ಲ ನಾಚಿಕೆ, ಸ್ವಾಭಿಮಾನಗಳನ್ನು ಗಂಟು ಕಟ್ಟಿ  ಮೂಲೆಗೆ ಬಿಸಾಕಿ, ವಸ್ತುಶಃ ಅವರ ಮನೆಯ ನೌಕರರಂತೆ  ಕೆಲಸ ಮಾಡುವವರೂ  ನಮಗೆ ಕಾಣಸಿಗುತ್ತಾರೆ.  ಉಳಿದವರು ಇಂಥವರನ್ನು ಚಮಚಾ, ಚೇಲಾ, ಬಕೆಟ್ ಎಂದೆಲ್ಲಾ ಹೇಳಿ ಬಾಯಿ ಚಪಲ  ತೀರಿಸಿಕೊಳ್ಳುವುದುಂಟು. ಅಯಾಚಿತವಾಗಿ  ಇಂಥ ಮಿಕಗಳು  ಸಿಕ್ಕರೆ ಬಿಡಲಿಕ್ಕೆ ಬಾಸ್ ಏನು ಬಕರಾನೇ?

 

ಬಾಸ್  ನಿವೃತ್ತನಾದಾಗ, ಅವನ ಕಿರಿಕಿರಿ ತಪ್ಪಿದ ಖುಷಿಯಷ್ಟೇ ಮಹತ್ವವಾದ‌ ಇನ್ನೊಂದು ಖುಷಿಯೆಂದರೆ, ಇನ್ನು ಮುಂದೆ ಆತನ  ಪೇಲವ ಜೋಕುಗಳಿಗೆ  `ಹೊಟ್ಟೆ ಹಿಡಿದು  ನಗಬೇಕಾದ’ ಅನಿವಾರ್ಯತೆ ಇರದು ಎಂಬುದು.  `ಕಸ್ತೂರಿ ನಿವಾಸ’ ಅನ್ನುವ ಚಲನಚಿತ್ರದಲ್ಲಿ ಬಾಸ್ ಆದ ಡಾ|| ರಾಜ್ ಜೋಕಿಗೆ ರಾಜಾಶಂಕರ್ ನಗದಿದ್ದರೂ ಅವನಿಗೆ ಏನೂ ಆಗದು.  ಎಷ್ಟಂದ್ರೂ ರಾಜ್ ನಾಯಕ ತಾನೇ? ಆದರೆ, ನಿಜ ಜೀವನದಲ್ಲಿ  ಹೀಗಾದೀತೇ? ಪ್ರಯತ್ನಿಸಿ  ಕೈ ಸುಟ್ಟುಕೊಂಡವರನ್ನು ನಾನಂತೂ ಕಾಣೆ!

 

ಬಾಸ್‍ನ `ಸರ್ವಜ್ಞ’ ತನದ  ಅರಿವು ನಮಗುಂಟಾಗುವುದು ಸಾಧಾರಣವಾಗಿ ಮೀಟಿಂಗುಗಳಲ್ಲಿ.  ಸಾಮಾನ್ಯತಃ ಆತ ಮೀಟಿಂಗುಗಳಲ್ಲಿ  ಅರ್ಧಕ್ಕೂ  ಮಿಗಿಲು `ಹೌದಪ್ಪ’ಗಳನ್ನೇ  ಇರಿಸಿಕೊಳ್ಳುತ್ತಾನೆ.  ಅವರುಗಳು – `ಛೇ ಇಂಥಾ ಐಡಿಯಾಗಳು  ನಿಮಗಷ್ಟೇ  ಹೇಗೆ ಹೊಳೆಯುತ್ತವೆ ಸಾರ್?’ ಎಂದು ಅಭಿನಂದನಾತ್ಮಕ  ನೋಟ ಬೀರಿದಾಗ, ಆತನ ಮುಖ ನೋಡಬೇಕು – ಸಾಕ್ಷಾತ್  ಸೂರ್ಯನೂ ಅದರ ಮುಂದೆ ಮಂಕಾದಾನು !  ಅವರುಗಳು ಹಾಗಂದದ್ದು  ಪಕ್ಕಾ ವಿರೋಧಾರ್ಥದಲ್ಲಿ ಅನ್ನುವ ಸತ್ಯದ ಅರಿವಿದ್ರೂ  ಅದನ್ನು ಜಾಣತನದಿಂದ ಪಕ್ಕಕ್ಕೆ ಸರಿಸುತ್ತಾನಾತ.

 

ಮೀಟಿಂಗಿನಲ್ಲಿ ನೀವೊಂದು ಒಳ್ಳೆಯ ಪಾಯಿಂಟ್  ಮುಂದಿಟ್ಟಿರಿ ಅಂದ್ಕೊಳ್ಳಿ. ಅದನ್ನು ತನ್ನದೆಂದು  ಹೇಳಿಕೊಳ್ಳಲು ಆತ ಒಂದಿಷ್ಠೂ ನಾಚುವುದಿಲ್ಲ ! `ನಾನು ಆವಾಗಿನಿಂದ ಅದನ್ನೇ ಹೇಳ್ತಿರೋದು’ ಅಂತ ಆತ ನುಡಿದಾಗ, ಎಲ್ಲರ ಪ್ರಶಂಸೆ  ನಿಮ್ಮ ಬದಲಾಗಿ  ಬಾಸಿಗೆ ಸಂದರೆ, ಅದು ನಿಮ್ಮ ತಪ್ಪಿಲ್ಲ, ವ್ಯವಸ್ಥೆಯ ತಪ್ಪು!

 

ಇನ್ನು ಕೆಲ ಘಟಾನುಘಟಿಗಳು ಸರಳವಾಗಿ  ತಮ್ಮ ಪಾರಮ್ಯವನ್ನು ಸ್ಥಾಪಿಸುತ್ತಾರೆ.  ಮೀಟಿಂಗೂ  ಒಳಗೊಂಡಂತೆ, ಎಲ್ಲೆಲ್ಲಿಯೂ  ತಮ್ಮ ಮಾತೇ  ಅಂತಿಮ ಅನ್ನುತ್ತಾರವರು.  ಅದೇ ಬಾಸ್‍ನ ಅಂತಸ್ಸತ್ವ, ಮೂಲಭೂತ ಗುಣ ಧರ್ಮ  ಹಾಗೂ ಮೂಲಭೂತ ಹಕ್ಕು.  ನಯವಾಗಿ  ಹೇಳಿದಾಗ  ಒಪ್ಪದೇ  ವಿರೋಧಿಸಿದ್ದೇ ಆದಲ್ಲಿ ನಿಮಗೆ  ಉಗ್ರ ನರಸಿಂಹನ ದರ್ಶನ ಖಾತ್ರಿ.  ಆಗಲೂ ನೀವು ಒಪ್ಪಲಿಲ್ಲವೆಂದರೆ, ನಿಮಗೆ ನಿಮ್ಮ ಉದ್ಯೋಗದ  ಮೇಲೆ ಆಸೆ ಇಲ್ಲವೆಂದರ್ಥ!

 

ಮತ್ತೆ ಕೆಲ ಬಾಸ್‍ಗಳು ಸಾತ್ವಿಕವಾಗಿಯೇ ತಮ್ಮ ಮೊಂಡು ವಾದವನ್ನು ಮುಂದಿಡುತ್ತಾರೆ.  ಅವರಿಗೆ ಬೇಕಾದ‌ದ್ದು, ನಿಮ್ಮ ಬಾಯಲ್ಲಿ  ಬಂದ ಹೊರತು, ಮೀಟಿಂಗ್  ಮುಗಿಯುವುದೇ ಇಲ್ಲ.  ನಿಮ್ಮ ಬಾಯಲ್ಲಿಯೇ ಆ `ತೀರ್ಮಾನ’  ತರಿಸಿ, ಅದು ಅವರು ನಿಮ್ಮ ಮೇಲೆ `ಹೇರಿದ’ ತೀರ್ಮಾನವಲ್ಲ ಅಂತ ಫರ್ಮಾಯಿಸುತ್ತಾರೆ!

 

ಬಾಸ್‍ಗಳ ಪ್ರಕಾರ, ಆ ಕಛೇರಿ ನಡೆಯುತ್ತಿರುವುದೇ ಅವರ ಉಪಸ್ಥಿತಿಯಿಂದ. `ಉಳಿದ’ ದಂಡಪಿಂಡಗಳನ್ನು ಸಂಭಾಳಿಸಿ ಕಛೇರಿಯನ್ನು ಉತ್ತಮವಾಗಿ ನಿರ್ವಹಿಸುವುದು ಅವರಿಗೆ ಕರತಲಾಮಲಕ!  ಈ ಶ್ರೇಷ್ಠತಾ  ವ್ಯಸನದಿಂದಾಗಿ,  ಅವರು ತಮ್ಮ ಬಾಸಿಸಂ ತೋರ್ಪಡೆಗೆ, ಕೆಲವೊಮ್ಮೆ ತಮ್ಮ‌ ಅಧೀನರಿಗೆ  ದಕ್ಕಬೇಕಾದ  ಸೌಲಭ್ಯಗಳಿಗೂ ಕತ್ತರಿ ಪ್ರಯೋಗ  ಮಾಡುವುದುಂಟು. ಬಾಸ್‍ನ  ತಾಕತ್ತೇನೆಂಬುದನ್ನು  ಈ ಅಧೀನರಿಗೆ  ತಿಳಿಸಲಿಕ್ಕಾಗಿಯೇ  ಅವರ ಈ ಆರ್ಭಟ.  ಒಮ್ಮೆ ಹೀಗಾಯ್ತು.  ಒಬ್ಬ ಗುಮಾಸ್ತ  ಮದುವೆ ಊಟ ಮುಗಿಸಿ  ಕಛೇರಿಗೆ ಬಂದ‌. ಬಾಸ್ ವ್ಯಂಗ್ಯದಿಂದಂದ -`ಎಲ್ಲೋ ಪಾರ್ಟಿ ಮುಗಿಸಿ  ಬಂದಂತಿದೆ!’ ಮರುಕ್ಷಣ ಗುಮಾಸ್ತನಂದ – `ಹೌದು ಸಾರ್, ಪಾರ್ಟಿ ಮಾಡಿದ್ವಿ. ತಾವು ನಮಗೆ ಇಂಕ್ರಿಮೆಂಟ್ ದಯಪಾಲಿಸಿ 25 ವರ್ಷ ಆಯ್ತು ನೋಡಿ – ಅದರ ರಜತ ಮಹೋತ್ಸವದ ಪಾರ್ಟಿ ! ‘

 

ಬಾಸ್ ಅಂದ್ರೇ  ಕಟ್ಟುನಿಟ್ಟು. ಇವೆರಡೂ  ಸಮಾನಾರ್ಥಕ ಪದಗಳೆಂದ್ರೂ  ತಪ್ಪಿಲ್ಲ ಬಿಡಿ. ಕಟ್ಟುನಿಟ್ಟಾಗಿದ್ದರಷ್ಟೇ ಕೆಲಸ ತೆಗೆಯಲು ಸಾಧ್ಯ ಅನ್ನುವುದು ಬಾಸ್‍ಗಳ  ಅಂಬೋಣ.  ಹಾಗಾಗಿ ಆತ ಎಲ್ಲರನ್ನೂ ಯಂತ್ರಗಳಂತೆ ದುಡಿಸುತ್ತಾನೆ.  ಕಛೇರಿಗೆ  ನೀವು  ಸ್ವಲ್ಪ ತಡವಾಗಿ ತಲುಪಿದ  ಯಾವುದೇ  ಸಂದರ್ಭದಲ್ಲಿಯೂ ಆತ ಬೇಗ ಬಂದಿರುತ್ತಾನೆ.  ನೀವು ಮುಂಚೆ ಬಂದು ಕೆಲಸ ಮಾಡಿದ್ದನ್ನು ನೋಡಲು ಯಾವಾಗಲೂ  ಆತ ಬಂದಿರುವುದಿಲ್ಲ! ಒಟ್ಟಿನಲ್ಲಿ  ನಿಮ್ಮ ಗ್ರಹಚಾರ ಕೆಟ್ಟಿದ್ದೇ ಭಾಗ್ಯ !

 

ಬಾಸ್‍ಗೆ ಬೈ ಹೇಳಲು ಹೋದಾಗಲೇ ಆತನಿಗೆ  ಎಲ್ಲಾ ಬಾಕೀ ಉಳಿದ ಕೆಲಸಗಳು  ನೆನಪಾಗುತ್ತವೆ ! ಅವುಗಳನ್ನು ನಿಮಗೆ ವರ್ಗಾಯಿಸಿ, ತಾನು ಹಾಯಾಗಿ  ಮನೆಗೆ ತೆರಳುತ್ತಾನೆ.  ಪ್ರತಿದಿನ  ಒಂಭತ್ತರವರೆಗೆ ಕಛೇರಿ ಕಾಯುವ ನಿಮ್ಮ  ಕಾಯಕಕ್ಕೆಂದೂ  ಚ್ಯುತಿಬಾರದಂತೆ  ಇಂತೇ ನೋಡಿಕೊಳ್ಳುತ್ತಾನೆ. ಆಗೆಲ್ಲಾ ನಮಗೆ ಬಾಸ್‍ಗೂ ಡಾನ್‍ಗೂ ಯಾವುದೇ ವ್ಯತ್ಯಾಸ ಕಾಣದಾಗುತ್ತದೆ.  ತನಗೆ ಮಾತ್ರ ಸಂಸಾರ, ಉಳಿದವರಿಗಲ್ಲ ಅನ್ನುವ `ಪರ-ಸನ್ಯಾಸತ್ವ’  ಅವನದ್ದು.  ರಜೆಯ  ದಿವಸಗಳಲ್ಲೂ  ಅಧೀನರನ್ನು ದುಡಿಸಿಕೊಳ್ಳಲು ಹಿಂಜರಿಯದ  ಅಪರೂಪದ ವ್ಯಕ್ತಿತ್ವ ಆತನದು !

ಬಾಸ್‍ನ  ನಿಜವಾದ ಕಿರಿಕ್ಕಿನ ದರ್ಶನವಾಗುವುದು, ನೀವು ರಜೆ ಕೇಳಿದಾಗ. ಎಷ್ಟೇ ಅತ್ಯವಶ್ಯವಾದ  ಕಾರ್ಯಕ್ರಮಕ್ಕೆ  ನೀವು ರಜೆ ಕೇಳಿದರೂ, ಆತ, ಹೇಗೆ ತಾನು ರಜೆ ತೆಗೆದುಕೊಳ್ಳದೇ ಸಂಸ್ಥೆಗೆ ದುಡಿದಿದ್ದೇನೆ ಅಂತ‌ ಒಂದೂ ವರೆ ಘಂಟೆ  ಭಾಷಣ ಬಿಗಿಯುತ್ತಾನೆ.  ಇಷ್ಟಾದ  ನಂತರವೂ ಆತ ನಿಮಗೆ  ರಜೆ ಮಂಜೂರು  ಮಾಡುತ್ತಾನೆಂದು ನೀವು ಭಾವಿಸಿದಲ್ಲಿ, ನೀವು ಭಾರೀ ಆಶಾವಾದಿಗಳಷ್ಟೇ. ಯಾವುದಕ್ಕೆ ರಜೆ  ಕೋರಿದರೂ, `ಬದಲೀ  ವ್ಯವಸ್ಥೆ ಮಾಡಿಕೊಳ್ಳುವುದು’ ಎಂದಂದು  ಅಭ್ಯಾಸವಾಗಿದ್ದ ಬಾಸ್‍ಗೆ,  ಆತನ ಗುಮಾಸ್ತನೊಬ್ಬ `ಸಾರ್, ನನ್ನ ಮದುವೆಗೆ ರಜೆ ಕೊಡಿ’ ಅಂತ ಕೇಳಿದಾಗಲೂ  ಇದೇ ಉತ್ತರ ಬಂದರೆ,  ಆ ಗುಮಾಸ್ತನ  ಗತಿ ಏನಾಗಬೇಡ ?!  ಒಳ್ಳೆಯ ಬಾಸು (ಇರುವುದೇ  ಅನುಮಾನ, ಇದ್ದಿದ್ದರಲ್ಲಿ ಒಳ್ಳೆಯ  ಅನ್ನಬಹುದೇನೋ) ಒಂದು ವಾರ ರಜೆ  ಕೇಳಿದರೆ ಒಂದು ದಿನ ರಜೆ ಕೊಟ್ಟಾನು! ಹಾಗಾಗಿಯೇ  ಅನುಭವಸ್ಥ ನೌಕರರು  ಒಂದು ವಾರ ರಜೆ ಬೇಕಾದಾಗ  3 ತಿಂಗಳು ರಜೆ ಕೇಳುತ್ತಾರೆ !

 

ಇಂಥ ಕಿರಿಕಿರಿಯ ಮನುಷ್ಯ  ರಜೆ ಮೇಲೆ  ತೆರಳಿದರೆ,  ಸಹಜವಾಗಿಯೇ ಎಲ್ಲರಿಗೂ  ಪಾಯಸ  ಕುಡಿದಷ್ಟು  ಸಂತೋಷ.  ಹೀಗೇ ಒಮ್ಮೆ, ಬಾಸ್ ರಜೆ  ಮೇಲೆ ತೆರಳುತ್ತ ತಮ್ಮ ನೌಕರರಿಗೆ  ಹೇಳಿದ – `ಈ ರಜೆ  ನನಗೆ ಅತ್ಯವಶ್ಯವಾಗಿತ್ತು ನೋಡಿ’ ಅಂತ. ಹಿಂದಿನಿಂದೊಬ್ಬ‌ ಮುಲುಗುಟ್ಟಿದ `ನಮಗೂ ಅಷ್ಟೇ !’

 

ಬಾಸುಗಳಿಗೆ  ತಮ್ಮ ಖದರ್ ತೋರಿಸಲಿಕ್ಕೆ ತುಂಬಾ ಆಸಕ್ತಿ.  ಅಂಥ ಸಂದರ್ಭಗಳಿಗಾಗಿ  ಅವರು ಕಾಯುತ್ತಿರುತ್ತಾರೆ.  ಹೀಗೇ  ಬಾಸೊಬ್ಬ  ಫ್ಯಾಕ್ಟರಿಗೆ  ಬಂದ. ತಾನು ಬಹಳ ಕಟ್ಟುನಿಟ್ಟು ಅನ್ನೋದನ್ನ ತೋರಿಸ್ಕೋಬೇಕಿತ್ತು ಆತನಿಗೆ.  ಅಲ್ಲೇ ನೋಡ್ಬೇಕಾದ್ರೆ, ಅವನಿಗೆ ಒಬ್ಬ ಹುಡುಗ  ಸುಮ್ಮನೆ ನಿಂತಿದ್ದು ಕಂಡಿತು.  ಅವಕಾಶ ಸಿಕ್ಕಿದ್ದಕ್ಕೆ ಒಳಗೊಳಗೇ ಖುಷಿಯಾದರೂ ಹೊರಗೆ ಮಾತ್ರ, ಕೆಂಡಾಮಂಡಲ ಕೋಪದಿಂದಂದ – `ಏಯ್ ನಿನ್ನ ಸಂಬಳ ಎಷ್ಟು ?’ ಆ ಹುಡುಗ‌ ಆಶ್ಚರ್ಯದಿಂದಂದ‌ ‍‍- “ಸ್ವಾಮೀ, ರೂ. 3000/‍-” ಬಾಸ್ ನುಡಿದ – `ತೊಗೋ ಈ ರೂ. 9000/-, You are fired. ನಿನ್ನಂಥವರ  ಅಗತ್ಯ ನಮಗಿಲ್ಲ !’  ಆ ಹುಡುಗ  ಮರು ಮಾತಾಡದೇ  ಹೊರಟು ಹೋದ.  ಆಗ ಆತ  ಪಕ್ಕದಲ್ಲಿದ್ದಾತನನ್ನು  ವಿಚಾರಿಸಿದ – `ಆತ ಏನು ಕೆಲಸ ಮಾಡಿಕೊಂಡಿದ್ದ  ಇಲ್ಲಿ?’  ಆ ನೌಕರ ತಣ್ಣಗೆ  ಹೇಳಿದ – `ಸಾರ್,  ಆತ ಕೊರಿಯರ್ ಹುಡುಗ !’  ಆಗ ಬಾಸ್‍ನ  ಮುಖ ಹೇಗಾಗಿರಬಹುದೆಂದು ಊಹಿಸಿ, ನಮ್ಮ ಬಾಸ್‍ಗೆ ಹೀಗಾಗಬಾರದಿತ್ತೇ ಅಂತ ನಮಗೆ ಅನ್ನಿಸಿದಲ್ಲಿ, ಅದು ಮಾನವ ಸಹಜ ಗುಣ –  ಅಪರಾಧೀ  ಭಾವ ಬೇಡ !

 

ಚಮಚಾಗಿರಿ ಮಾಡಿ, ಉನ್ನತ ಹುದ್ದೆಗೇರಿ,  ಬಾಸ್‍ಗಳಾಗಿ  ಬರುವವರೂ ಉಂಟು. ಕೆಲಸ ಬಾರದ ಅವರ ಫಜೀತಿ ಕೆಲಸಗಳು ಅಷ್ಟಿಷ್ಟಲ್ಲ. ಹಾಗಂತ ನೀವು ಅವರನ್ನು ತಿದ್ದಲಾರಿರಿ. ಏನಾದರೂ  ಆಗಲಿ, ನಾನು ತಿದ್ದಿಕೊಳ್ಳೆನೆಂಬ  ದೃಢ ನಿಶ್ಚಯ ಮಾಡಿದ ಇವರನ್ನು ತಿದ್ದ ಹೊರಟಲ್ಲಿ  ನಮ್ಮ ಎದೆಯ ತಿದಿಯೊತ್ತೀತು ಅಷ್ಟೇ.  ಒಮ್ಮೆ ಗುಮಾಸ್ತನೊಬ್ಬ  ಬಂದು ಕೇಳಿದ – `ಸಾರ್, ಈ ಅನುಪಯುಕ್ತ  ಫೈಲ್‍ಗಳಿಗೆ  ಬೆಂಕಿ ಕಾಣಿಸಬೇಕು.  ತಮ್ಮ ಅನುಮತಿ ಬೇಕಾಗಿದೆ’. ಮರು ಯೋಚನೆಯೇ  ಇಲ್ಲದೇ, ಬಾಸ್ ಉಲಿದ – `ಯಾಕಿಲ್ಲ, ನನ್ನ ಅನುಮತಿಯಿದ್ದೇ ಇದೆ. ಆದರೆ,  ಸುಡುವ ಮುಂಚೆ,  ಅವುಗಳ ಕಾಪಿ ತೆಗೆದು ಕಾಪಿಟ್ಟುಕೊಂಡು, ಅಕಾರಾದಿಯಾಗಿ ಜೋಡಿಸಿ ಸುಡತಕ್ಕುದು !’  ಗುಮಾಸ್ತ  ಮೂರ್ಛೆ ಹೋದ ! ಕೆಲಸ  ಇಲ್ಲದಿದ್ರೂ ಕಂಬ ಸುತ್ತು ಅನ್ನುವ ಜಾತಿ, ಈ ಬಾಸ್‍ಗಳದ್ದು.

 

ಒಟ್ಟಿನಲ್ಲಿ, ಬಾಸ್‍ನಿಂದ  ನೊಂದ ಜೀವಿಗಳ ಎಣಿಕೆ  ಮಾಡಿದಲ್ಲಿ, ನಮ್ಮ ದೇಶದ ಜನಸಂಖ್ಯೆಯ  ಸಮೀಪ ಬಂದೀತು! ನಮಗೆ  ಬಾಸ್ ಆದರೂ,  ಆತನೂ ತನ್ನ ಬಾಸ್‍ನಿಂದ ನೊಂದಿರುತ್ತಾನಷ್ಟೇ ?! ಬಾಸ್ ಇಲ್ಲದಿದ್ದಾಗ, ನಮ್ಮ ಕಾರ್ಯಕ್ಷಮತೆ  ಅತ್ಯುನ್ನತ  ಮಟ್ಟದಲ್ಲಿರುತ್ತದೆಂದು  ಮನಃಶಾಸ್ತ್ರಜ್ಞರು  ಹೇಳಿದ್ದರೂ, ಅದನ್ನು ನೋಡಲು  ಬಾಸ್ ಇರುವುದಿಲ್ಲವಲ್ಲಾ! ಬಾಸ್‍ನ ಕಿರಿಕಿರಿಗೆ ಅಭ್ಯಸ್ಥರಾಗಿ ಆತನ  ಅನುಪಸ್ಥಿತಿಯಲ್ಲಿ ಮಂಕಾಗುವ  ಮಂಕುದಿಣ್ಣೆಯರಿದ್ದಾರೆನ್ನುವುದೂ  ದಿಟವೇ!

 

ಹೀಗೇ,  ಊಟದ ವೇಳೆಯಲ್ಲಿ ಸಹೋದ್ಯೋಗಿಗಳು  ಹರಟುತ್ತಿದ್ದರು.  ಒಬ್ಬ ಕಿಲಿಮಾಂಜಿರೋ ಅಗ್ನಿಪರ್ವತದ ಬಗ್ಗೆ ಹೇಳುತ್ತಿದ್ದ – `ಅದು  ಸೌಮ್ಯವಾಗಿ ಇರುತ್ತೆ.  ಆದರೆ,  ಬಾಯಿ ತೆರೆದರೆ ಬೆಂಕಿ ಉಗುಳುತ್ತದೆ.’ ಇದನ್ನಷ್ಟೇ  ಕೇಳಿದ ಆಗ ತಾನೇ ಬಂದಾತ ಹೇಳಿದ – `ಓಹೋ ಒಗಟು ಹೇಳ್ತಿದಿಯೋ ?  ನನಗೆ ಗೊತ್ತಿಲ್ವೇ, ನಾನು  ಈ ಕಛೇರಿಯಲ್ಲಿ  10 ವರ್ಷಗಳಿಂದ  ದುಡೀತಿದ್ದೇನೆ!’  ಬಾಸ್‍ನ್ನು ಅಗ್ನಿಪರ್ವತಕ್ಕೆ ಸಮೀಕರಿಸಿದ ರೂಪಕಕ್ಕಿಂತ, ಹೆಚ್ಚಿಗೆ  ಹೇಳಲು ನಾನು ಅಶಕ್ತ. ಬಹಳ ಅರ್ಥವತ್ತಾದ, ಪರಿಣಾಮಕಾರೀ ರೂಪಕವಿದು, ಏನಂತೀರಿ?