ದ್ವಿಮುಖ ನೀತಿ

ಯಾವುದೇ  ಒಂದು ವ್ಯಕ್ತಿಯ ಪರ ಅಥವಾ ಎಡ / ಬಲ  ವಾದದ ಪರ ಪೂರ್ವಾಗ್ರಹ  ಬಂದಲ್ಲಿ, ಜನರ ಅರಿವಿಗೇ  ಬಾರದಂತೆ ಅವರ ದ್ವಿಮುಖ ನೀತಿ ಪ್ರಕಟವಾಗಿ ಬಿಡುತ್ತದೆ.  ಇದು ಅವರ ತಪ್ಪಲ್ಲ  ಬಿಡಿ, ಮಾನವ ಸಹಜವಾದದ್ದು. ಯಾವುದೇ  ವಾದಕ್ಕೆ ಜೋತು ಬೀಳದವರಿಗೆ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ.  ನಿಷ್ಪಕ್ಷಪಾತಿಗಳಿಗೆ ಈ ಪೂರ್ವಾಗ್ರಹಪೀಡಿತರ ಮೇಲಾಟಗಳು  ರಸದೌತಣ  ನೀಡುವುದರಲ್ಲಿ ಸಂಶಯವಿಲ್ಲ.

GST ಯನ್ನು ಕಾಂಗ್ರೆಸ್‍ನವರು ತಂದರೆ ಬಿಜೆಪಿಯವರಿಗೆ  ಅಪಥ್ಯ.  ಬಿಜೆಪಿ  ಮಾಡಿದರೆ ಕಾಂಗ್ರೆಸ್‍ನವರಿಗೆ ಅಪಥ್ಯ.  ತಮ್ಮ ವಾದವಷ್ಟೇ ಸರಿ ಅಂತ ಇಬ್ಬರಿಗೂ.  ಕಾಂಗ್ರೆಸ್ ತರಲಿಚ್ಛಿಸಿದಾಗ `ಶನಿ ಸಂತಾನ’ವಾಗಿದ್ದ GST, ಅದೇ ಮೋದಿ  ಜಾರಿಗೆ ತರುವಾಗ ಮೋದಿಭಕ್ತರಿಗೆ ಆಪ್ಯಾಯಮಾನವಾಗಿ ಬಿಡುತ್ತದೆ.  ಕಾಂಗ್ರೆಸ್‍ನವರ ಸೋನಿಯಾ ಭಕ್ತಿಯನ್ನು ಆಡಿಕೊಳ್ಳುವ  ಮೋದಿಭಕ್ತರಿಗೆ ತಾವೂ ಅದೇ ಸಾಲಿನಲ್ಲಿ ಅಗ್ರಗಣ್ಯರು ಅನ್ನುವುದು ತಿಳಿಯುವುದೇ ಇಲ್ಲ. ತಾವೂ ವ್ಯಕ್ತಿ ಪೂಜೆಯಲ್ಲಿಯೇ ಇದ್ದೇವೆ ಅನ್ನುವುದು ಅವರ ಅರಿವಿಗೆ  ಬಾರದು. ಏಕೆಂದರೆ `ಪೂರ್ವಾಗ್ರಹ’ ಎಂಬ ಕನ್ನಡಕದಿಂದ  ನೋಡಿದಾಗ ಸ್ಪಷ್ಟ ಚಿತ್ರಣ ಸಾಧ್ಯವೇ? ನಾನೂ ಮೋದಿಯ ಬೆಂಬಲಕ್ಕೆ ನಿಲ್ಲುವವನೇ.  ಆದರೆ, ಅದು ಮೌಲ್ಯಾಧಾರಿತ  ಮಾತ್ರ.  ವ್ಯಕ್ತಿ-ಆಧಾರಿತ  ಅಲ್ಲ. ವ್ಯಕ್ತಿ ಪೂಜೆ ನನ್ನಿಂದಾಗದು.  ಈ ಸಾಮಾಜಿಕ  ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಮೋದಿ ಭಕ್ತರ ಅನುರಣನಗಳು ನನಗಂತೂ ಹೇಸಿಗೆ ಹುಟ್ಟಿಸುತ್ತವೆ.

ಇನ್ನೊಂದು ಉದಾಹರಣೆ – ಇದೇ  ಬಿಜೆಪಿಯವರು 2 – 3 ವರ್ಷಗಳ ಹಿಂದೆ, ಚುನಾವಣಾ ನಂತರ ಆಯ್ಕೆಯಾದ ಅತಿ ದೊಡ್ಡ  ಪಕ್ಷವನ್ನು ರಾಜ್ಯಪಾಲರು  ಸರ್ಕಾರ ರಚನೆಗೆ ಆಹ್ವಾನಿಸಬೇಕು ಎಂದು ಬೊಬ್ಬಿರಿಯುತ್ತಿದ್ದರು.  ಇವರು ಈಗ  ಗೋವಾ, ಮಣಿಪುರಗಳಲ್ಲಿ ಮಾಡಿದ್ದೇನು? ಮೋದಿ ಭಕ್ತರಿಗೆ ಇದು ಅಸಮರ್ಥನೀಯ ಎಂದು ಅನಿಸದು. ಏಕೆಂದರೆ, ಇದು ಆಗಿದ್ದು  ಅವರ `ದೇವ’ರಾದ  ಮೋದಿಯ ಅಣತಿಯಿಂದಷ್ಟೇ? ಕಾಂಗ್ರೆಸ್‍ನವರು  ಹಿಂದೆ ಮಾಡಿದ್ದನ್ನೇ ನೀವೂ ಮಾಡುತ್ತೀರಾದರೆ, ನಿಮಗೂ  ಅವರಿಗೂ ವ್ಯತ್ಯಾಸವೇನು ಬಂತು? ನೀವಂದಂತೆ,  ನೀವು ಅವರಿಗಿಂತ  ಭಿನ್ನವೇನಲ್ಲ ಅಂತಾಯ್ತು ! ನೀವು ಭಿನ್ನ ಎಂದೆಣಿಸಿದ  ನಮ್ಮ ಎಣಿಕೆಯೇ ತಪ್ಪಾಯ್ತೇ?

ಹೈಕಮಾಂಡ್ ಸಂಸ್ಕೃತಿಯ ಬಗ್ಗೆ ಕಾಂಗ್ರೆಸ್ ಮೇಲೆ ಹರಿಹಾಯುವ ಮೋದಿಭಕ್ತರು, ಈಗ ಉತ್ತರ ಪ್ರದೇಶಕ್ಕೆ ಯೋಗಿ ಆದಿತ್ಯನಾಥರ ಹೆಸರು ಮುಖ್ಯಮಂತ್ರಿ  ಪದವಿಗೆ ಸೂಚಿತವಾಗಿದ್ದರ ಬಗ್ಗೆ ಏನಂತಾರೆ? ಹಿಂದೆ, ರಾಜೀವ್‍ಗಾಂಧಿ ಕಾಲದಲ್ಲಿ `ಲಕೋಟೆ’ಯಲ್ಲಿ ಮುಖ್ಯಮಂತ್ರಿ ಹೆಸರು ಬಂದು, ಶಾಸಕರಿಂದ  `ಸರ್ವಾನುಮತ’ದಲ್ಲಿ ಆಯ್ಕೆಯಾಗುತ್ತಿತ್ತು! ಈಗ ಉತ್ತರಪ್ರದೇಶದಲ್ಲಿ ಆಗಿದ್ದಾದರೂ ಏನು? ಯೋಗಿ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಅಲ್ಲಿನ ಯಾವೊಬ್ಬ ಶಾಸಕನಿಗಾದರೂ ತಿಳಿದಿತ್ತೇ? ಆದರೂ ಮೋದಿಭಕ್ತರ ಪ್ರಕಾರ,  ಯೋಗಿ ಅಲ್ಲಿಯ ಶಾಸಕರಿಂದ `ಸರ್ವಾನುಮತ’ದಿಂದ ಆಯ್ಕೆಯಾಗಿದ್ದಾರೆ ! ಮೋದಿಯಿಂದ ಸೂಚಿತವೆನ್ನುವುದು ಕೇವಲ ಮಾಧ್ಯಮಗಳ  ಸೃಷ್ಟಿ !! ನಿಮ್ಮ ಕಣ್ಣಿಗೆ  ನೀವು ಗಾಂಧಾರಿಯಂತೆ ಪಟ್ಟಿ ಕಟ್ಟಿಕೊಳ್ಳಬಹುದು.  ಆದರೆ, ಜನರ  ಕಣ್ಣಿಗೆ ಮಣ್ಣೆರಚಲಾರಿರಿ.  ನೀವೂ ಹೈಕಮಾಂಡ್ ಸಂಸ್ಕೃತಿಗೆ ಜೋತು ಬಿದ್ದವರಾದಲ್ಲಿ ಇತರರ ಹೈಕಮಾಂಡ್ ಸಂಸ್ಕೃತಿಯನ್ನು ಜರಿಯಲು ಯಾವ ನೈತಿಕತೆ  ಇದೆ ಹೇಳಿ ಭಕ್ತರೇ? ಇಂಗ್ಲೀಷಿನಲ್ಲಿ ಒಂದು ಗಾದೆಯಿದೆ – `ಗಾಜಿನ ಮನೆಯಲ್ಲಿರುವಾತ, ಇತರರತ್ತ ಕಲ್ಲೆಸೆಯಬಾರದು’ ಅಂತ.

ಇನ್ನು ಡೈರಿ ಪುರಾಣ_ ಗೋವಿಂದರಾಜ್ ಡೈರಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರನ್ನು ಕ್ರಿಮಿನಲ್‍ಗಳೆಂದು ವಾಚಾಮಗೋಚರವಾಗಿ ಬಯ್ಯುವ ಮೋದಿಭಕ್ತರಿಗೆ ಸಹರಾ ಡೈರಿ ಮೋದಿಯತ್ತ ಬೊಟ್ಟು ಮಾಡುತ್ತದೆ ಅನ್ನುವುದನ್ನು ಜೀರ್ಣಿಸಿಕೊಳ್ಳಲಾಗದು.  ಅದೇ ಬೇರೆ ಇದೇ ಬೇರೆ ಅನ್ನುವ ಸಮರ್ಥನೆ ಬೇರೆ.  ಆ ಕೇಸಿನಲ್ಲಿ  ಸುಪ್ರೀಂಕೋರ್ಟ್ ಮೋದಿಗೆ ಕ್ಲೀನ್ ಚಿಟ್ ನೀಡಿದೆಯೆಂದು ಉಗ್ರವಾಗಿ ಪ್ರತಿಪಾದಿಸುವ ಇವರಿಗೆ ಅದೇ ಸುಪ್ರೀಂಕೋರ್ಟ್, ಡೈರಿಯನ್ನು ಸಾಕ್ಷಿಯಾಗಿ  ಮಾನ್ಯ ಮಾಡಲಾಗದು ಎಂದಿರುವುದು ಅಮಾನ್ಯ ! ಅಥವಾ ಜಾಣಗುರುಡು ! ನಾನೇನೂ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡುತ್ತಿಲ್ಲ.  ಭ್ರಷ್ಟಾಚಾರ ಯಾವ ಪಕ್ಷದ ರಾಜಕಾರಣಿಯಿಂದಾದರೂ ಭ್ರಷ್ಟಾಚಾರವೇ ಹಾಗೂ ಅಮಾನ್ಯವೇ.  ನಾನು ಮೋದಿ ಭಕ್ತರಿಗೆ ಹೇಳುತ್ತಿರುವುದಿಷ್ಟೇ – ಈ ದ್ವಿಮುಖ ನೀತಿ ಯಾಕೆ ಸ್ವಾಮಿ?

ಮಾನ್ಯ ಮೋದಿ ದೇಶದ ಒಳಿತಿಗಾಗಿ  ಹಗಲಿರುಳೂ ಶ್ರಮಿಸುತ್ತಿರುವುದರಲ್ಲಿ ನನಗೊಂದಿನಿತೂ ಸಂಶಯವಿಲ್ಲ.  ನಾನದನ್ನು ಮನಸಾರೆ ಮೆಚ್ಚುತ್ತೇನೆ ಹಾಗೂ ಹೊಗಳುತ್ತೇನೆ.  ನಾನಂತೂ ಮೋದಿಯ ಬೆಂಬಲಕ್ಕೆ ನಿಲ್ಲುವವನೇ. ಆದರೆ ತಪ್ಪು ಮಾಡಿದಾಗ, ಅದನ್ನು ತಪ್ಪೆಂದು ಹೇಳಲು ನನಗೆ  ಯಾವ ಕಟ್ಟುಪಾಡೂ ಇಲ್ಲ, ನಿರ್ಬಂಧವೂ ಇಲ್ಲ. ಅದಕ್ಕೇ ಮೋದಿಭಕ್ತರಿಗೆ ನನ್ನದೊಂದು ಬಿಟ್ಟಿ ಸಲಹೆ – ಪೂರ್ವಾಗ್ರಹ  ಮತ್ತು ವ್ಯಕ್ತಿಪೂಜೆ  ಬಿಡಿ, ಈಗ ನಿಮಗೆ ಸಿಗುತ್ತಿರುವ ಬೆಂಬಲಕ್ಕಿಂತ ಜಾಸ್ತಿ ಬೆಂಬಲ ಸಿಗುತ್ತದೆ.  ದ್ವಿಮುಖ ನೀತಿಗೆ ತಿಲಾಂಜಲಿಯಿಟ್ಟಲ್ಲಿ, ನಿಮಗೂ ಒಳಿತು, ದೇಶಕ್ಕೂ ಒಳಿತು, ಅಲ್ಲವೇ?

* * * *

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s