ನೋಟ್ – ರದ್ದತಿ

ಹೆಚ್ಚಿನ  ಮುಖಬೆಲೆಯ ನೋಟ್ – ರದ್ದತಿಯ  ಮೋದಿಯ ನಿರ್ಧಾರದಿಂದ  ನನಗಂತೂ ಹಾಲು ಕುಡಿದಷ್ಟು ಸಂತಸವಾಯ್ತು. ಸಾಮಾನ್ಯ ಜನರಿಗೆ ಸ್ವಲ್ಪ ದಿನ  ತೊಂದರೆಯಾದರೂ, ದೂರಗಾಮಿಯಾಗಿ ಈ ದಿಟ್ಟ ನಿರ್ಧಾರ ಭಾರತ ದೇಶಕ್ಕೆ  ಒಳಿತನ್ನುಂಟು  ಮಾಡುವಂಥದು ಅಂತ ನನ್ನ ಬಲವಾದ ನಂಬಿಕೆ. ಇದು ಕಾಳಧ‌ನದ  ಬುಡಕ್ಕೇ ಕೈ ಹಾಕುವುದರಿಂದ, ಈ ನಿರ್ಧಾರದಿಂದ ಮೋದಿ ಬೆಂಕಿಯೊಡನೆ ಸರಸಕ್ಕೆ  ಕೈ ಹಾಕಿದ್ದಾರೆ- ಹಾಕಿ ಸೈ ಎನಿಸಿಕೊಂಡಿದ್ದಾರೆ.  ಈ ನಿರ್ಧಾರದ  ಪರ-ವಿರೋಧ‌  ಚರ್ಚೆಗಳು ಕಾವೇರಿರುವುದಂತೂ ನಿಜ.  ಮೋದಿ ಏನು ಮಾಡಿದರೂ ಸರಿ ಎಂದು ದೇಶಭಕ್ತಿಯ ಗುರಾಣಿಯನ್ನಿಟ್ಟುಕೊಂಡು ಮಾತಾಡುವ  ಬಿ.ಜೆ.ಪಿ.ಯವರನ್ನು, ಹಾಗೂ,  ಮೋದಿ ಏನು ಮಾಡಿದರೂ ತಪ್ಪು ಹಾಗೂ ಅದರಲ್ಲಿ ತಪ್ಪನ್ನೇ ಹುಡುಕುವ ಪ್ರತಿಪಕ್ಷದವರನ್ನು, ಹಾಗೂ  ಅವರ ಅರ್ಥರಹಿತ  ಹಳಹಳಿಕೆಗಳನ್ನು ಬದಿಗಿಟ್ಟು, ರಾಜಕೀಯೇತರ, ಸಾಮಾನ್ಯ ಜನರ ವಾದಗಳನ್ನು ನಾನಿಲ್ಲಿ ಮಂದಿಡ ಬಯಸುತ್ತೇನೆ.

“ನಿಜವಾದ ಕಾಳಧ‌ನಿಕರಿಗೆ ಇದರಿಂದ ತೊಂದರೆ ಆಗುತ್ತಿಲ್ಲ.  ಜನ ಸಾಮಾನ್ಯರಷ್ಟೇ ತೊಂದರೆಗೀಡಾಗಿದ್ದಾರೆ. ಯಾಕೆ ಅಂದ್ರೆ, ಕಾಳಧ‌ನಿಕರು  ಕಾಳಧ‌ನವನ್ನು ಹಣವಾಗಿ  ಇಟ್ಟಿರೋಲ್ಲ, ಬದಲಾಗಿ ಚಿನ್ನ ಮತ್ತು ಭೂಮಿಯಲ್ಲಿ  ಇಟ್ಟಿರುತ್ತಾರೆ.”
ನಿಜ, ಇದು  ಅಸತ್ಯವಲ್ಲ – ಆದರೆ  ಅರ್ಧ‌ ಸತ್ಯ.  ಜನಸಾಮಾನ್ಯರ ಬವಣೆಗಳು ನಮಗೆ ಎದ್ದು ಕಾಣುತ್ತಿದೆ.  ಹಾಗಾಗಿ ನಾವು ಹತಾಶರಾಗಿದ್ದೇವೆ.  ಆದರೆ, ಹಣ, ಚಿನ್ನ ಯಾ ಭೂಮಿ –ಯಾವುದೇ ರೀತಿಯಲ್ಲಿಟ್ಟಿದ್ದರೂ, ಕಾಳಧ‌ನಿಕರ ನಿದ್ದೆ ಹಾರಿ ಹೋಗಿರೋದಂತೂ ನಿಜ.  ಇದು ಎದ್ದು ಕಾಣದ ಸತ್ಯ.  ಅಷ್ಟಕ್ಕೂ ಮೋದಿಯ ಈ ಯತ್ನ ಕೇವಲ ಆರಂಭ ಅಷ್ಟೇ.  ಇದರ ಮುಂದುವರೆದ ಭಾಗವಾದ ಕೆಲ ಕ್ರಮಗಳಿಂದ  ಕಾಳಧ‌ನದ ಮೂಲದವರೆಗೆ  ಹೋಗುವುದು ಅಸಾಧ‌್ಯವೇನಲ್ಲ. ಹಾಗಾಗಿ, ಈ  ಕ್ರಮದಿಂದ  ಒಮ್ಮೆಗೇ ಕಾಳಧ‌ನದ ಮೂಲೋತ್ಪಾಟನೆಯಾದೀತೆಂಬ ಭ್ರಮೆ  ಬೇಡ.  ಆದರೆ, ಕಾಳಧ‌ನದ ವಿರುದ್ಧದ  ಸಮರದ ಮೊದಲ ಹೆಜ್ಜೆಯಂತೂ ಹೌದು.  ನೋಟ್ ರದ್ದತಿಯ  ಈ ಕ್ರಮ, ಲೆಕ್ಕಕ್ಕೆ  ಸಿಗದ ಹಣವನ್ನು  ಲೆಕ್ಕಕ್ಕೆ ತರುವ ಒಂದು ಯತ್ನ ಅಷ್ಟೇ.  ಇದರಿಂದ ಮೊದಲಿಗೆ, ಚುನಾವಣೆಗಳಲ್ಲಿ ನೀರಿನಂತೆ ಹರಿಯುತ್ತಿದ್ದ  ಹಣದ ಹರಿವಿಗೆ ಕಡಿವಾಣ ಬೀಳುತ್ತದೆ.  ಎರಡನೆಯದಾಗಿ, ಈಗ ಚಲಾವಣೆಯಲ್ಲಿದ್ದ ಹೆಚ್ಚಿನ  ಮುಖಬೆಲೆಯ ನೋಟುಗಳಲ್ಲಿ  ಬಹು ಭಾಗ  ಖೋಟಾ ನೋಟುಗಳಾಗಿದ್ದು, ಅದಕ್ಕೂ  ಕಡಿವಾಣ ಬಿದ್ದಂತಾಗುತ್ತದೆ.  ಈ ಖೋಟಾನೋಟಿನ ದಂಧೆಯು ಭಯೋತ್ಪಾದಕರ  ಮುಖ್ಯ ಧ‌ನಮೂಲವಾಗಿದೆ.   ಹಾಗಾಗಿ ನೋಟ್ ರದ್ದತಿಯ ಕ್ರಮವು ಭಯೋತ್ಪಾದಕರ ಆದಾಯಕ್ಕೇ ಕತ್ತರಿ ಹಾಕುವುದರಿಂದ‌ ಭಯೋತ್ಪಾದನೆಯೂ ಒಂದಿಷ್ಟು  ತಹಬಂದಿಗೆ  ಬರುವುದು ಸುಳ್ಳಲ್ಲ. ಮೋದಿಯ  ಉಪಕ್ರಮದ‌ ಉದ್ದಿಶ್ಯ‌, ಕಾಳಧ‌ನದ ಕಡಿವಾಣಕ್ಕಿಂತ, ಭಯೋತ್ಪಾದನೆಯ ಬೆನ್ನು ಮೂಳೆ  ಮುರಿಯುವುದೇ ಮುಖ್ಯವಾಗಿದ್ದೀತು ಅಂತ ಅನ್ನಲೂ  ಅಡ್ಡಿಯಿಲ್ಲ. ನವೆಂಬರ್ 8ರ ನಂತರ ಕಾಶ್ಮೀರದಲ್ಲಿ ಕಲ್ಲು ತೂರಾಟ ಕಡಿಮೆಯಾಗಿರುವುದು ಕಾಕತಾಳೀಯವಂತೂ ಅಲ್ಲ !

ನಿಜ, ಕಾಳಧ‌ನಿಕರು ರಂಗೋಲಿ ಕೆಳಗೆ ತೂರುವ ಯತ್ನ ಮಾಡಿ  ಧ‌ನಪರಿವರ್ತನೆಗೆ ಮುಂದಾಗುತ್ತಿದ್ದಾರೆ. ಅದಕ್ಕಾಗಿ ಅವರು ಸಾಕಷ್ಟು ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಬಡವರ ಗುರುತಿನ ಚೀಟಿಗಳು ಈಗ ಅವರಿಗೆ `ಕಮಿಷನ್’  ಒದಗಿಸುತ್ತಿದೆ.  ಆದರೆ, ಈ ಎಲ್ಲ ಕ್ರಮಗಳಿಂದ, ಒಂದು 20% ಕಾಳಧ‌ನ  ಬಿಳಿಯಾದೀತೇ ಹೊರತು, ಉಳಿದ 80% ನಗಣ್ಯವಾದೀತಲ್ಲ – ಅಷ್ಟು ಸಾಕು, ದೇಶದ ಒಳಿತಿಗೆ. ಚಿನ್ನ, ಭೂಮಿಯಲ್ಲಿ ಕಾಳಧ‌ನವಿಟ್ಟವರು, ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ `ಪ್ರಜಾಪ್ರಭುತ್ವ’ದ  ಅಣಕವನ್ನಂತೂ  ಸದ್ಯದ ಪರಿಸ್ಥಿತಿಯಲ್ಲಿ ಮಾಡಲಾಗುವುದಿಲ್ಲವಲ್ಲಾ – ಅಷ್ಟು ಸಾಕು. ನಾನಂತೂ  ಅಲ್ಪ ತೃಪ್ತ‌.

ಜನ ಸಾಮಾನ್ಯರ  ಪರಿಪಾಟಲು ಅಷ್ಟಿಷ್ಟಲ್ಲ, ನಿಜ. ಆದರೆ,  ಈ ಉಪಕ್ರಮದ ಕಾರ್ಯಕಾರಣ‌ ಯಾ ಮುಖ್ಯ‌ ಉದ್ದೇಶ‌ ಬಹು ದೊಡ್ಡದು.  ದೇಶದ ಅಭಿವೃದ್ಧಿಗೆ  ಇದು ಅತ್ಯಗತ್ಯವಾಗಿ  ಬೇಕಾಗಿತ್ತು.  ಕಾಳಧ‌ನ,  ಭಯೋತ್ಪಾದಕರಿಗೆ ಧ‌ನಮೂಲ, ಖೋಟಾನೋಟು  ಹಾವಳಿ ಮುಂತಾದ ಪಿಡುಗುಗಳು ಯಾವುದೇ ದೇಶದ ಅಭಿವೃದ್ಧಿಗೆ  ಮಾರಕ.  ಅಂಥ ಮಾರಕಗಳಿಗೆ ಮಾರಕಾಸ್ತ್ರ  ಬೀಸಿದಾಗ  ದೇಶಕ್ಕೆ  ಒಳಿತಾದೀತು.  ದೇಶದ ಒಳಿತಿಗಾಗಿ ನಾವು ಇಷ್ಟೂ ಸಹಿಸಲಾರೆವೇ?  ಈ ಕ್ರಮದಿಂದ  ಧ‌ನ-ಮದ-ಬಲದ ರಾಜಕಾರಣ ತಗ್ಗೀತು.  ಇದು ಒಳ್ಳೆಯ  ಆಳ್ವಿಕೆಗೆ  ಪೂರಕ.  ಭಯೋತ್ಪಾದನೆ   ತಗ್ಗೀತು.  ಖೋಟಾನೋಟಿನ  ಭಯ ಇಳಿದೀತು. ಹೇಳಿ, ಇದು ಬೇಡವೇ ? ಇಂಜೆಕ್ಷಿನ್ನಿನ ನೋವಿನ ಭಯದಿಂದ ಇಂಜೆಕ್ಷನ್ ತೆಗೆದುಕೊಳ್ಳದಿದ್ದಲ್ಲಿ ರೋಗ ಗುಣವಾದೀತೇ ?  ನೋಟು ರದ್ದತಿಯಿಂದ `ಇಷ್ಟೊಂದು’  ಅನುಭವಿಸುವುದಕ್ಕಿಂತ, ಈಗಿನ ಭ್ರಷ್ಟಾಚಾರ ಹಾಗೂ ಕೆಟ್ಟ ರಾಜಕಾರಣದ ಕೊಚ್ಚೆಯಲ್ಲಿಯೇ ನೆಮ್ಮದಿಯಿಂದಿರುತ್ತೇವೆಂಬ ಸಿನಿಕತನವೇಕೆ? ಈ ಕ್ರಮದಿಂದ ತಕ್ಷಣ ಸ್ವರ್ಗ ಧ‌ರೆಗೆ ಇಳಿದುಬಿಡುತ್ತೇಂತಲ್ಲ – ಪಿಡುಗುಗಳು  ಸ್ವಲ್ಪವಾದರೂ ತಗ್ಗೀತೆಂಬ ಆಶಾವಾದ. ಭ್ರಷ್ಟಾಚಾರದಿಂದ  ಬೇಸತ್ತು ಜನಸಾಮಾನ್ಯರೇ ಮೋದಿಯ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ನಾನಂತೂ ಆಶಾವಾದಿ. ನೀವು?

“ತಕ್ಕ ವ್ಯವಸ್ಥೆ ಮಾಡದೇ  ದಿಢೀರ್  ನಿರ್ಧಾರ ಬೇಡವಿತ್ತು”

ಸೂಕ್ತ ವ್ಯವಸ್ಥೆ ಮಾಡಿ  ಈ ನಿರ್ಧಾರ  ಕೈಗೊಂಡಿದ್ದಲ್ಲಿ, ಸರ್ಕಾರದ ಈ `ನಡೆ’ ಯನ್ನು  ಮುಂಚೆಯೇ ಆಘ್ರಾಣಿಸಿ, ಜಾಣ ಕಾಳಧ‌ನಿಕರು ತಮ್ಮಲ್ಲಿನ‌ ಕಾಳಧ‌ನವನ್ನು ಸಂಪೂರ್ಣ ಬಿಳಿಯಾಗಿಸಿ ಮತ್ತೆ ತಮ್ಮಲ್ಲಿಯೇ  `ಬಂಧಿ’ ಯಾಗಿಸುತ್ತಿದ್ದರು.  ಕೆಲ `ನರರೋಗ’ಗಳಿಗೆ  ಶಾಕ್ ಟ್ರೀಟ್‍ಮೆಂಟೇ ಗತಿ ಎನ್ನುವಂತೆ, ಈ ನಿರ್ಧಾರ  ದಿಢೀರ್  ಆಗಿದ್ದರಷ್ಟೇ ಕಾರ್ಯಸಾಧ‌ನೆಯಾಗುವುದು. Of course, ಎರಡು ಸಾವಿರದ  ನೋಟಿನ ಬದಲು ಐನೂರರ ನೋಟನ್ನೇ  ಸುಧಾರಿತ ವಿನ್ಯಾಸದಲ್ಲಿ ಮೊದಲೇ ತಯಾರಿಸಿಟ್ಟುಕೊಂಡು, ಈ ನಿರ್ಧಾರ ಕೈಗೊಂಡಿದ್ದರೆ, ಜನಗಳಿಗೆ ಇಷ್ಟು ತೊಂದರೆಯಾಗುತ್ತಿರಲಿಲ್ಲ ಅನ್ನುವುದು  ನನ್ನ ಭಾವನೆ.

ನೋಟು ವಿನಿಮಯಕ್ಕೆ ನಿಯಂತ್ರಣವನ್ನು ಜನರು ತಪ್ಪು ತಿಳಿದಿದ್ದಾರೆ. ನೋಟು ವಿನಿಮಯಕ್ಕೆ ಮಾತ್ರ ನಿಯಂತ್ರಣವೇ ಹೊರತು, ನಿಮ್ಮ ಖಾತೆಗೆ ಜಮೆ ಮಾಡಲು  ನಿಯಂತ್ರಣವಿಲ್ಲ. ಹಣ ಹಿಂಪಡೆಯಲು ವಿಧಿಸಿದ‌ ನಿಯಂತ್ರಣದಿಂದ ನಮ್ಮ ಸಹಜ ಜೀವನ ಶೈಲಿಗೇನೂ ಅಡ್ಡಿಯಿಲ್ಲ.  ಖಾತೆ ಹೊಂದಿರಲಾರದವರು ಪರಿಪಾಟಲಿಗೀಡಾಗುತ್ತಿದ್ದಾರೆ. ಅದಕ್ಕೇ  ತಾನೇ ಸರ್ಕಾರ ಜನ-ಧ‌ನ ಖಾತೆ ತೆರೆಯಲು  ಪ್ರೋತ್ಸಾಹಿಸಿದ್ದು. ಆಗ ಖಾತೆ ತೆರೆಯದೇ ಈಗ ಹುಯಿಲೆಬ್ಬಿಸುವುದು ಯಾವ ಜಾಣತನ?

ಇದರ ಜೊತೆಗೆ, ಕೆಲವರಿಂದ ಜನರಿಗೆ  ತಪ್ಪು ಮಾಹಿತಿ ರವಾನೆ-  ಖಾತೆಗೆ ಹಣ ಹಾಕಿದರೆ ತೆರಿಗೆ ಅಂತ.  ನಿಮ್ಮ ಹಣಕ್ಕೆ  ನಿಮ್ಮಲ್ಲಿ ಸರಿಯಾದ ಲೆಕ್ಕ ಇದ್ದರೆ, ನಿಮ್ಮ ಖಾತೆಗೆ  50 ಕೋಟಿ ರೂ. ಜಮೆ ಮಾಡಿದರೂ ನಿಮಗೆ ಭಯ ಬೇಡ.  ಇದು ಗೊತ್ತಿಲ್ಲದೇ ಜನ ನೋಟು ವಿನಿಮಯಕ್ಕೇ ಮೊರೆ ಹೊಕ್ಕು ಬೇಡದ ಕಷ್ಟಕ್ಕೆ ಬೀಳುತ್ತಿದ್ದಾರೆ. ಇವೆಲ್ಲ ರಾಜಕೀಯದವರ  ಕುತಂತ್ರ.  ಅವರು ಜನರನ್ನು  ಉದ್ರೇಕಿಸಿಯೇ ತಮ್ಮ ಬೇಳೆ  ಬೇಯಿಸಿಕೊಳ್ಳುತ್ತಾರೆ. ನಾವೂ ಕಾಳಧ‌ನಿಕರಿಗೆ ಧ‌ನ ಪರಿವರ್ತನೆಗೆ  ಸಹಾಯ ಮಾಡಬಾರದಷ್ಟೇ.

ಸಾಕಷ್ಟು  ಆರ್ಥಿಕ  ತಜ್ಞರ  ಪ್ರಕಾರ, ಈ ಕ್ರಮದಲ್ಲಿ  ಆದ ವೆಚ್ಚಕ್ಕೆ ಹೋಲಿಸಿದಲ್ಲಿ ಆಗುವ ಲಾಭ ಕಡಿಮೆ.  ನೋಟ್ ರದ್ದತಿ  ಕ್ರಮದಲ್ಲಿಯೇ  ನಿಂತರೆ, ಅವರುಗಳ ಮಾತು ನಿಜ.  ಮುಂದೂ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಂಡಲ್ಲಿ  ನಮ್ಮ ನಿಜವಾದ  ಆಶಯ ಪೂರೈಸುವುದರಲ್ಲಿ ಸಂಶಯವಿಲ್ಲ.  ಆಗ ಈ ಕ್ರಮದ ಲಾಭ ಅರಿವಿಗೆ  ಬರುತ್ತದೆ.  ಹಣದ ವಹಿವಾಟಿನ ಮೇಲೆ ಬಿಗಿಯಾದ  ನಿಗಾ ಹಾಗೂ `ನಗದಿಲ್ಲದ’  cash less ವಹಿವಾಟಿಗೆ ನಮ್ಮ ಆರ್ಥಿಕತೆ  ತೆರೆದುಕೊಂಡಲ್ಲಿ ಕಾಳಧ‌ನ ತಂತಾನೇ  ಮಾಯವಾಗುತ್ತದೆ.

ಲೆಕ್ಕಕ್ಕೆ ಈವರೆಗೆ ಸಿಗದಿದ್ದ ಹಣ, ಈಗ ಲೆಕ್ಕಕ್ಕೆ  ಸಿಕ್ಕರೆ ಬರುವ ಹಣದ ಒಳಹರಿವು, ದೇಶದ ಅಭಿವೃದ್ಧಿಗೆ ಪೂರಕ.  ಅಭಿವೃದ್ಧಿಯ ಕೆಲಸಗಳಿಗೆ  ಜಾಸ್ತಿ ಹಣ  ಖರ್ಚು ಮಾಡಬಹುದು.  ಬ್ಯಾಂಕುಗಳು  ಜನರಿಗೆ ಜಾಸ್ತಿ  ಸಾಲ ವ್ಯವಸ್ಥೆ ಮಾಡಬಹುದು.  ಒಟ್ಟಾರೆ ದೇಶದ ಆರ್ಥಿಕತೆಯ ಚೈತನ್ಯ  ಬಲಗೊಳ್ಳುತ್ತದೆ.  `ಆರ್ಥಿಕ ಹಿಂಜರಿತ’ ದ ವಾದದಿಂದ  ಭಾರತ ಮೈಕೊಡವಿ ಏಳಲು ಸಾಧ‌್ಯವಾಗುತ್ತದೆ.

ಮೋದಿಯ ನೋಟು ರದ್ದತಿಯ ವಿರುದ್ಧ ಇರುವವರ ವಾದ ತಪ್ಪು ಅಂತ ನಾನು ಇಲ್ಲಿ ಹೇಳುತ್ತಿಲ್ಲ.  ಇದರಿಂದ ಯಾವ ಒಳಿತೂ ಆಗದು  ಅನ್ನುವ ಸಿನಿಕತನ ಬಿಡಿ ಅಂತಷ್ಟೇ ನನ್ನ ಕೋರಿಕೆ. ಇದೊಂದು ಅಪರೂಪದ ಪ್ರಾಮಾಣಿಕ ಯತ್ನ‌ ಹಾಗೂ ಈ ಯತ್ನಕ್ಕೆ ಅಡ್ಡಗಾಲಾಗುವುದು ಬೇಡ ಅನ್ನುವುದಷ್ಟೇ ನನ್ನ ಮನವಿ.

* * * * *

 

Advertisements

ಮೊದಲ ಬಾರಿಗೆ ಮಾವನ ಮನೆಗೆ

ಮೊದಲ ಬಾರಿಗೆ ಮಾವನ ಮನೆಗೆ ಹೋಗುತ್ತಿರುವ ಅಳಿಯನ ಮುಖ ಗಮನಿಸಿ. ಅದರ ಖದರ್ರೇ ಬೇರೆ. ಆತನ ಠೀವಿ ಏನು-ನೋಟ ಏನು? ಚುನಾವಣೆಯಲ್ಲಿ ಗೆದ್ದ ರಾಜಕಾರಣಿಯಂತೆ, ಒಲಂಪಿಕ್ಸ್ ಪದಕ ಗೆದ್ದ ಆಟಗಾರನಂತೆ, ಫಿಲ್ಮ್‍ಫೇರ್ ಪ್ರಶಸ್ತಿ ಗೆದ್ದ ಹೀರೋನಂತೆ ಹೊಳೆಯುತ್ತಿರುತ್ತದೆ. `ಜಗದ್ವಂದ್ಯ’ ಈತನೋ ಗಣೇಶನೋ (ನಟ ಅಲ್ಲ ದೇವರು!) ಅಂತ ನಾವು ದ್ವಂದ್ವದಲ್ಲಿ ಬೀಳ್ತೇವೆ.  ಆತನ ಪ್ರಕಾರ,  ಆತ ವಜ್ರಗಳಲ್ಲಿ ಆಯ್ದ ಕೊಹಿನೂರು! ತನ್ನ ವೈಶಿಷ್ಟ್ಯಗಳಿಂದಾಗಿ ಆ ದೀನ ಹೆಣ್ಣಿಗೆ  ತನ್ನನ್ನು select  ಮಾಡಿದ್ದಾರೆ, ಮಾವನ ಕಡೆಯವರು ಅಂತ ಆತನ ಅಂಬೋಣ. (ಬೇರಾವ ಮಿಕವೂ ಸಿಗದೇ ಈ ಮಾಸಿದ  ತಲೆಗೆ ಆ ಹೆಣ್ಣನ್ನು  ಕಟ್ತಿರೋದು  ಅನ್ನೋದು ತಿಳಿದಿಲ್ಲ ಆ ಭೂಪನಿಗೆ!) ಅದಕ್ಕೇ ಪಳಗಿದ ಹಿರಿಯರು ಇಂಥವರನ್ನು ನೋಡಿಯೇ ಗುರ್ತಿಸುತ್ತಾರೆ-“ಅಳಿಯ ದೇವರು ಮೊದಲ ಸಲ ಮಾವನ ಮನೆಗೆ ಬಿಜಿಯಂಗೈಯುತ್ತಿರೋ ಹಾಗಿದೆ!?” ಅಂತ. ತಾನಲ್ಲದೇ ಬೇರಾರು ಇದಕ್ಕೆ ಅರ್ಹರು ಅನ್ನುವ ಹಮ್ಮಿನೊಡನೆ (ಅ-ಹಮ್ಮಿನೊಡನೆ ಅಂದ್ರೇನೂ ವಿರೋಧವಾಗೋಲ್ಲ!) ಇವರ ಹತ್ತಿರ `ಹ್ಞೂಂ’ಕರಿಸಿ ನಡೆದಾನು.

 

ಈ ಠೀವಿಗೆ  ಕಾರಣವೇನೆಂದು ಕೊಂಡಿರಿ? – ಹೊಸ ಅಳಿಯನಿಗೆ ಮಾವನ ಮನೆಯಲ್ಲಿ ದೊರಕುವ ಆದರಾತಿಥ್ಯ. `ಅಳಿಯ ದೇವರು’ ಅಂತ ಪೂಜಾಸಮಾನವಾದಂಥ ಆತಿಥ್ಯ. ಇದನ್ನು ನೋಡಿದ ಮಗಳಿಗೇ ಒಮ್ಮೊಮ್ಮೆ  ಆಶ್ಚರ್ಯವಾಗುವುದುಂಟು – “ಇದು  ನನ್ನ ಮನೆಯೋ, ಅಥವಾ `ಅವರ’ದ್ದಾ?”  ಗಮನಿಸಿ, ಇದು ಮೊದಲ ಬಾರಿ ಮಾತ್ರ. ಅಳಿಯ ಹಗಲೆಲ್ಲಾ  ಮಾವನ ಮನೆಗೆ ಬಂದರೆ ಅಲ್ಲ! ಹೇಳೋದು ಕೇಳಿಲ್ವೇ `ಗತಿಗೆಟ್ಟ ಗಂಡ ಗೌರಿ ಹಬ್ಬಕ್ಕೆ ಮಾವನ ಮನೆಗೆ ಬಂದ’ ಅಂತ. ಆಗ  `ಜಾಮಾತಾ ದಶಮ ಗ್ರಹಃ’ ಅಂತ ಅಳಿಯನಿಗೆ ನವಗ್ರಹ ಪೂಜೆ ಆದೀತು! ಮನೆಯ ಗೃಹಿಣಿ ಗ್ರಹಚಾರ ಬಿಡಿಸುತ್ತಾಳೆ!

 

ಆದರೆ ಮೊದಲ ಸಲದ ಚಿತ್ರಣವೇ ಬೇರೆ. ಮಾವನ ಮನೆಯಲ್ಲಿ ಎಲ್ಲರೂ ಹೊಸ ಅಳಿಯನನ್ನು ಹೂಗಳಿಂದ ಅರ್ಚನೆ ಮಾಡುವುದರ ಹೊರತಾಗಿ ಮಿಕ್ಕೆಲ್ಲ ವಿಚಾರಗಳಲ್ಲಿಯೂ ದೇವರಂತೇ ನೋಡುತ್ತಾರೆ. ಹಳ್ಳಿಗಳಲ್ಲಂತೂ, ಊರಿನಲ್ಲಿರುವ ಎಲ್ಲ ಗ್ರಾಮವಾಸಿಗಳೂ ಗುಂಪು ಗುಂಪಾಗಿ ಬಂದು, ಹೀರೋವನ್ನು ದರ್ಶಿಸಿ ಪುನೀತರಾದಂತೆ, ನೋಡೋದೂ ಉಂಟು! ಇವೆಲ್ಲಾ  ಒಳಗೊಳಗೇ ಖುಷಿ ಕೊಟ್ಟರೂ, ಜಾಸ್ತಿಯಾದಾಗ ಮುಜುಗರ  ತಪ್ಪಿದ್ದಲ್ಲ‌.  ಅಳೀಮಯ್ಯನ  ಎಲ್ಲ ಬೇಕುಗಳೂ ಕುಳಿತಲ್ಲಿಯೇ ಪೂರೈಕೆಯಾಗುತ್ತ‌ದೆ. ಅವನ ಸೇವೆಗೆ ಮನೆಯವರು ನಾಮುಂದು ತಾಮುಂದು ಅಂತ ಪೈಪೋಟಿಗೆ ಬೀಳುತ್ತಾರೆ! ಪೇಸ್ಟು ಕೊಡಲು ಒಬ್ಬ, ಟವೆಲ್ ಕೊಡಲು ಮತ್ತೊಬ್ಬ. ಬೆನ್ನು ತಿಕ್ಕಲೂ ಜನ ತಯಾರಿರುತ್ತಾರಾದರೂ, ತಿಕ್ಕಲನಂತೆ ಹ್ಞೂ ಅನ್ನದೇ, ಬೇಡವೆನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು!

 

ಮನೆಯಲ್ಲಿ ದೊರಕದ ಹದವಾದ ಹಬೆ ನೀರಿನ ಸ್ನಾನ-ಸ್ವರ್ಗ ಧರೆಗಿಳಿದಂತೆ ಅಳಿಯನಿಗೆ! ಹೊಸ ಊರಾದಲ್ಲಿ, ಅಳಿಯ ದೇವರಿಗೆ ಊರು ಸುತ್ತಾಟ. `ನಮ್ಮನೆ ಅಳಿಯ’ನೆಂಬ ಹೆಮ್ಮೆಯಿಂದ ಮಾವನ ಮನೆಯವರಿಂದ ಎದೆಯುಬ್ಬಿಸಿದ ನಡೆ! ಬೇಕು ಬೇಡಾದವರೆಲ್ಲರಿಗೂ ಅಳಿಯನ ಪರಿಚಯ ಮಾಡಿಕೊಡುತ್ತಾರವರು. ತನ್ಮೂಲಕ, ತಮಗೆ ಊರಿನ ಗಣ್ಯರೆಲ್ಲ ಗೊತ್ತು ಎನ್ನುವ ಸಂದೇಶವನ್ನು ಅಳಿಯನಿಗೆ ರವಾನಿಸಬೇಕಾಗಿರುತ್ತದೆ!

 

ಇನ್ನು, ಊಟದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಆಗುತ್ತದೆ. ಇದ್ದಷ್ಟೂ ದಿವಸ (ತಿಂಗಳಲ್ಲ‌ ಗಮನಿಸಿ!) ಹಬ್ಬದ ಅಡುಗೆಯೇ. ಎರಡೆರಡು ಸ್ವೀಟ್ ತಿಂದು, ಈಗಿನ ಜನರೇಶನ್ನಿನ  ಅಳಿಯಂದ್ರಿಗೆ ಡಯಾಬಿಟೀಸ್ ಬರೋದು ಗ್ಯಾರಂಟಿ –ಮೊದಲೇ ಇದ್ದಿದ್ರೆ. sugar level 400 ದಾಟೋದು ಗ್ಯಾರಂಟಿ. ನೀವೆಷ್ಟು ಬೇಡಾ ಅಂದ್ರೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಅವರು ಇರೋದಿಲ್ಲ.  ಅವರು ಬಡಿಸಿಯೇ ಶುದ್ಧ, ನೀವು ತಿನ್ನದೇ ಏಳಲಿಕ್ಕೆ ಅವರು ಬಿಟ್ರೆ ತಾನೇ?

 

ಇಷ್ಟೆಲ್ಲಾ ನಿರೀಕ್ಷೆಗಳಿದ್ದಾಗ್ಗ್ಯೇ, ಯಾವ ಹೊಸ ಅಳಿಯ ತಾನೇ ಮಾವನ ಮನೆಗೆ  ಮೊದಲ ಸಲ ಬರುವುದನ್ನು ತಪ್ಪಿಸಿಯಾನು? ಚಾರ್ಲ್ ಡಿಕನ್ಸ್‍ನ Great Expectations ಇದರ ಮುಂದೆ ಏನೇನೂ ಅಲ್ಲ!

 

ಸರಿಯಾದ  ಇಸುಮುಗಳದ್ದು ಹೀಗಾದರೆ, ಮತ್ತೆ ಕೆಲವರ expectations ಬೇರೇನೇ ಇರ್ತದೆ! ಇವರು ಮಾವನ ಮನೆಗೆ ಭೇಟಿ ಕೊಡೋದೇ `ವರದಕ್ಷಿಣೆ’ಯ ಕಂತು ವಸೂಲಾತಿಗಾಗಿ! ಇವರನ್ನು  ನೋಡಿಯೇ ಹೇಳಿದ್ದು- `ಅಳಿಯ ಮನೆ ತೊಳೆಯಾ’ (ಅವನ್ಯಾಕೆ  ಮನೆ ತೊಳೀತಾನೆ ಹೇಳಿ, ಗುಡಿಸಿ ಗುಂಡಾಂತರ ಮಾಡ್ಲೀಕ್ಕೆ ಬಂದಾಗ!). ಧನಾತ್ಮಕ ಅಂಶಗಳಿಂದ ಬಹು ದೂರ  ಇರುವ ಇಂಥ ಅಳಿಯ ಸಂತತಿ `ಋಣಾ’ತ್ಮಕವಾಗಿ ಇರುತ್ತಾರೆ – ತಮ್ಮ `ಋಣ-ಧನ’ ಅಂದರೆ ಸಾಲದ ಬಾಬ್ತು ಭರಿಸುವವನೇ ಮಾವ ಅನ್ನೋದು ಅವರ ಒಂದಂಶದ ಕಾರ್ಯಕ್ರಮ. ಇಂಥವರು ಮೊದಲ ಸರ್ತಿ ಮಾವನ ಮನೆಗೆ ಬಂದಾಗಲೂ,  ಈ ಮೊದಲು ಹೇಳಿದಂತೆಯೇ  ಆತಿಥ್ಯ  ಸಿಗುವುದಾದರೂ, ಅದು ಹೃದಯದಿಂದ ಬಂದಂಥವಲ್ಲ! ಇಂಥದೇ ಆಸಾಮಿ ಒಮ್ಮೆ ಮೊದಲ ಬಾರಿ  ಮಾವನ ಮನೆಗೆ  ತೆರಳುವ ಮುನ್ನ ಮಡದಿಗೆ  ಧಿಮಾಕಿನಿಂದ ಕೇಳಿದನಂತೆ – `ಏನು, ನಿಮ್ಮಪ್ಪ ಕಾರ್ ಕೊಡಿಸುತ್ತಾನಂತೋ?’  ಹೆಂಡತಿ ತಣ್ಣಗೆ ಹೇಳ್ತಾಳೆ – `ಕಾರೇನು, ರೈಲೇ, ಕೊಡಿಸ್ತಾರೆ – ಮನೆವರೆಗೆ  ಹಳಿ ಹಾಕಿಸಿಕೊಂಡ್ಬಿಡಿ!’ ಅಂತ!.

 

ಮೊದಲ ಸಲ ಬಂದಾಗ ಅಳಿಯಂದಿರು ಮಾವನ ಮನೆಯಲ್ಲಿ  ಸ್ಕೋಪ್ ತೊಗೊಳ್ಳೋದುಂಟು.  ಗ್ರೂಪ್ – ಡಿ ಆಗಿದ್ರೂ,  ತಾನಿಲ್ಲದೇ ಕಛೇರಿ  ನಡೆಯುವುದಿಲ್ಲ ಅನ್ನುತ್ತಾರೆ. ತನ್ನಿಂದಲೇ  ಕಂಪನಿ ನಷ್ಟದಲ್ಲಿದ್ದುದು  ಲಾಭಕ್ಕೆ ತಿರುಗಿತು ಅನ್ನುವುದುಂಟು. ರೈಲ್ವೆ  ಇಲಾಖೆಯನ್ನು ತಲೆ ಮೇಲೆ  ಹೊತ್ತಿದ್ದೇನೆಂದು ರೈಲು ಬಿಡುವುದೂ ಉಂಟು. ಇವೆಲ್ಲ ಮೊದಲ ಸಲ ಮಾವನ ಮನೆಗೆ  ಹೋದಾಗ ಮಾತ್ರ ಸಾಧ್ಯ.  ನಂತರದ  ಭೇಟಿಗಳಲ್ಲಿ ನಿಜ ಬಣ್ಣ ಬಯಲಾಗಿರ್ತದಲ್ಲಾ! ಹೀಗೇ ಸ್ಕೋಪ್  ತೊಗೊಳ್ಳಿಕ್ಕೇಂತ, ಮೊದಲ ಸರ್ತಿ  ಬಂದ ಅಳಿಯ ಮಾವನ ಮುಂದೆ ತನ್ನ ಮೊಬೈಲಿನಲ್ಲಿ –  `ಹ್ಞಾ, ಯಾರು, ಮೋದಿ ಅವ್ರಾ . . . ಹೇಳಿ, ಮಾಡ್ಕೊಡೋಣ . . ಆದ್ರೆ ಸ್ವಲ್ಪ ಕಾಯ್ಬೇಕಾಗ್ತದೆ . . . ಸರಿ’ ಅಂತ್ಹೇಳಿ `ಮೊಬೈಲ್ ಕಟ್’ ಮಾಡಿದ.  ಮಾವ ತಣ್ಣಗೆ ಹೇಳಿದ್ರು – `ಏನಿಲ್ಲ, ಮಗಳು ಹೇಳಿದ್ಲು ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದೆ – ಸ್ವಲ್ಪ ಛಾರ್ಜ್ ಮಾಡಿಕೊಡೀ ಅಂತ.  ಛಾರ್ಜ್ ಮಾಡಿಕೊಡಲಾ?’  ಆವಾಗಿನ  ಆ ಅಳಿಯನ  ಮುಖ ಇಂಗು ತಿಂದ  ಮಂಗನಂತಾಗಿರದಿದ್ರೆ  ಕೇಳಿ!

 

`ಹೂವಿನಿಂದ  ನಾರು ಸ್ವರ್ಗಕ್ಕೆ’  ಅಂದಂತೆ, ಅಳಿಯನ  ಮೊದಲ ಸಲದ  ಮಾವನ ಮನೆ ಭೇಟಿಯಲ್ಲಿ, ಮಗಳೂ ಮಿಂಚುವುದುಂಟು. ಓರಗೆಯವರಲ್ಲಿ ಗಂಡನ ಬಗ್ಗೆ `ಇಲ್ಲದ/ಇರಬೇಕಿದ್ದ’  ಸದ್ಗುಣಗಳನ್ನೆಲ್ಲ ಕಲ್ಪಿಸಿ ಹೇಳಿ ಬೀಗುತ್ತಾಳೆ.  ತನ್ನೆಲ್ಲ  ಆಸೆಗಳನ್ನೂ `ಇವರು’ ಪೂರೈಸುತ್ತಾರೆ ಅಂತ ಪಲಕುತ್ತಾಳೆ. (ಕೆಲವೊಮ್ಮೆ  ಗಂಡನ ನಿಜರೂಪ ತಿಳಿದ ಮಡದಿ, ತವರು ಮನೆಯವರು ತಪ್ಪು ತಿಳಿಯಬಾರದೆಂದು, ಈ ಪಾಟಿ  ಸುಳ್ಳು ಹೇಳುತ್ತಾರಾದರೂ, `ಅಮ್ಮ’ನನ್ನು ಅವರು ಮೋಸಗೊಳಿಸಲಾರರು). ಮತ್ತೆ ಕೆಲವರು ತಮ್ಮ  ಕಲ್ಪನಾ ವಿಹಾರದಿಂದ  ಭೂಮಿಗೆ ಇಳಿದೇ  ಇರೋಲ್ಲ ಇನ್ನೂ. ಹನಿಮೂನಿನಲ್ಲಿ ಕಳೆದಂತೆಯೇ  ಉಳಿದ ಜೀವನವೂ  ಕೂಡಾ ಅಂತ ಭ್ರಮಿಸುತ್ತಾರೆ.  ಆದರೆ, ಒಂದು ವರ್ಷದ  ನಂತರ ಪರಿಸ್ಥಿತಿ  ಹೇಗಿರುತ್ತದೆ ಅಂತ ನಾನು ಬಿಡಿಸಿ ಹೇಳಬೇಕಾಗಿಲ್ಲ – ನಮ್ಮ ನಿಮ್ಮೆಲ್ಲರ  ಕಥೆಯಂತೆಯೇ  ಇದೂವೇ. ಎಲ್ಲರ ಮನೆ ದೋಸೇನೂ ತೂತೇ.

 

ಮೊದಲ ಸರ್ತಿ  ಮಾವನ ಮನೆಗೆ ಹೋದಾಗ  ಅಳಿಯನ ಪರೀಕ್ಷೆ  ಪರೋಕ್ಷವಾಗಿ  ನಡೆಯುವುದುಂಟು  – ಮಗಳಿಗಾಗಿ  ತಮ್ಮ ಆಯ್ಕೆ ಸರಿಹೋಯ್ತೋ ಇಲ್ಲವೋ ಅನ್ನುವ doubt clear  ಮಾಡ್ಕೊಳ್ಳೋಕ್ಕೆ. ಎಲ್ಲರಿಂದಲೂ ಮದುವೆಗೆ ಮುಂಚೆ, detective agency ಯವರಿಂದ  ಹುಡುಗನ `ಜಾತಕ’  ಪರಿಶೀಲನೆ  ಮಾಡಿಸ್ಲಿಕ್ಕೆ ಆಗಲ್ಲವಲ್ಲ! ಮಗಳನ್ನ ಸುಖವಾಗಿ  ನೋಡ್ಕೊಳ್ಳೋ ಆರ್ಥಿಕ ಸಬಲತೆ  ಅಳಿಯನಲ್ಲಿ  ಮೇಳೈಸಿವೆಯೋ,  ದುರ್ಗುಣಗಳೇನಾದರೂ  ಇವೆಯೋ  ಅಂತೆಲ್ಲಾ ಚೆಕ್ ಮಾಡಕ್ಕೆ ಪರೀಕ್ಷಿಸಬೇಕಾಗುತ್ತದೆ.  ಒಂದ್ಸಲ ಹೀಗೇ, ಹೊಸ ಅಳಿಯನನ್ನ ಪರೀಕ್ಷಿಸಲಿಕ್ಕೆ ಮಾವ ಕೇಳಿದರಂತೆ – `ಡ್ರಿಂಕ್ಸ್ ಅಭ್ಯಾಸ  ಇದೆಯೋ ಹೇಗೆ?’ ಅಂತ. ಅದಕ್ಕೆ  ಈ ಖತರ್‍ನಾಕ್  ಅಳಿಯ ಮರುಪ್ರಶ್ನಿಸಿದ – `ಮಾವ,  ಇದು ಪ್ರಶ್ನೆಯೋ, ಆಹ್ವಾನವೋ?’ಅಂತ!

 

ಒಟ್ಟಿನಲ್ಲಿ, ಮೊದಲ ಬಾರಿ ಮಾವನ ಮನೆಗೆ ಹೋದಾಗ  ಸಿಗುವ ಆತಿಥ್ಯ, ಮತ್ತೆಲ್ಲೂ  ಸಿಗದು – ಅಷ್ಟೇಕೆ, ಮಾವನ ಮನೆಯಲ್ಲೇ ಮತ್ಯಾವಾಗಲೂ ಸಿಗದು!

 

 

ತೋಳದ ಸಾರಥ್ಯ ?

KPSCಗೆ ಶ್ಯಾಂಭಟ್ಟರಂಥ ಭ್ರಷ್ಟರನ್ನು ಅಧ್ಯ‌ಕ್ಷಗಿರಿಗೆ  ತಂದಿದ್ದು,  ನನಗೆ ‘ಕುರಿ ಕಾಯುವ ಕೆಲಸಕ್ಕೆ  ತೋಳವನ್ನು ನೇಮಿಸಿದಂತೆ’ ಅನ್ನಿಸಿದ್ದು ಸುಳ್ಳಲ್ಲ.  ಬಿಡಿ, ನಮ್ಮಲ್ಲಿ ಇದು ಬಹಳ ಸಾಮಾನ್ಯ.  ಯಾವ ರಾಜಕಾರಣಿಯೂ `ಕಾಮಧೇನು’ವಿನಂಥ KPSCಯ ಮೂಗುದಾರವನ್ನು ಬೇರೆಯವರ ಸುಪರ್ದಿಗೆ  ಖಂಡಿತಾ ವಹಿಸುವುದಿಲ್ಲ.  ಅದು ತಮ್ಮ ಆಪ್ತನ ಕೈಲೇ  ಇರಬೇಕು.  ಒಂದು, ತಮಗೆ ಬೇಕಾದವರಿಗೆ, ಮತ್ತು `ತಕ್ಕ ಮೊತ್ತ’ ಪಾವತಿಸುವ  `ಖರೀದಿದಾರ’ರಿಗೆ  ಕೆಲಸ ಕೊಡಿಸುವ ಆಡಳಿತ ಯಂತ್ರ ಇದು.

ಜೀವನ ಪರ್ಯಂತ ಲಂಚವೆನ್ನುವ ಮೇಲ್ಸಂಪಾದನೆ / ಉಪ-ವೇತನವನ್ನೀವ  ಆಯ್ದ ಹುದ್ದೆಗಳಿಗೆ ಎಷ್ಟಾದರೂ ದುಡ್ಡು ‘ಬಿಚ್ಚುವವರು’ ಇರುವವರೆಗೆ, ಅದನ್ನು ಬಾಚಿಕೊಳ್ಳುವ ರಾಜಕಾರಣಿಗಳು/ಅಧಿಕಾರಿ ವರ್ಗ ಇದ್ದೇ ಇರುತ್ತದೆ. ಹೀಗೆ  `ಆಯ್ಕೆ’ಯಾದ  ಅಧಿಕಾರ ವರ್ಗ ತಾವೂ ದುಡ್ಡು ಮಾಡಿಕೊಂಡು, ರಾಜಕಾರಣಿಗಳಿಗೂ ಸರಬರಾಜು ಮಾಡುತ್ತಿರುತ್ತಾರೆ. ಇಂಥ ಅಧಿಕಾರಿವರ್ಗ, ತಮ್ಮನ್ನು `ಆಯ್ಕೆ’ ಯಾಗಲು  ಸಹಕರಿಸಿದ್ದಕ್ಕಾಗಿ  ಈ ರಾಜಕಾರಣಿಗಳಿಗೆ – ಅವರು ಅಧಿಕಾರದಲ್ಲಿರಲಿ ಬಿಡಲಿ – ದಾಕ್ಷಿಣ್ಯದಲ್ಲಿದ್ದುಕೊಂಡು ಸಹಾಯ ಮಾಡುತ್ತಿರುತ್ತದೆ. ರಾಜಕಾರಣಿಗಳಿಗೆ ಬೇಕಾದ್ದೂ ಇದೇ! ತಾವು ಹೇಳಿದಂತೆ ಕೇಳುವ ಅಧಿಕಾರಿ ವರ್ಗವನ್ನೇ ತಮ್ಮ ಕ್ಷೇತ್ರಕ್ಕೆ `ವರ್ಗಾ’ಯಿಸಿಕೊಳ್ಳುತ್ತಾರೆ. ಒಟ್ಟಾರೆ ಇದು ಒಂದು ವಿಷ ವರ್ತುಲ.

ಈ ಕಾರಣಕ್ಕೇ ನಮ್ಮ ಸಿದ್ದು KPSC ಸಾರಥ್ಯವನ್ನು ಶ್ಯಾಂಭಟ್ಟರಿಗೆ  ವಹಿಸಿದ್ದು. ಈ ಮನುಷ್ಯ (?)ನ  ಭ್ರಷ್ಟತನ ಕರ್ನಾಟಕದ  ಉದ್ದಗಲಕ್ಕೂ  ಚಿರಪರಿಚಿತ. ಎಲ್ಲ ಕಡೆ ಇದು ಸಾಮಾನ್ಯ ಎಂದು ಹೇಳುವುದು ತಪ್ಪು. ಯಾಕೆ, ಕೇಂದ್ರದಲ್ಲಿ UPSC ಇದೆಯಲ್ಲಾ? ಅದು ಯಾಕೆ  ಈ ಪಾಟೀ ಭ್ರಷ್ಟವಾಗಿಲ್ಲ? ಅದರ ಆಯ್ಕೆ ಪಾರದರ್ಶಕ  ಹಾಗೂ ವಿವಾದರಹಿತವಾಗಿದೆಯಲ್ಲಾ? KPSCಯನ್ನೂ ಅದರಂತೆ ಮಾಡಲು ನಮ್ಮ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇರಬೇಕಷ್ಟೇ. ಈಗಿನ ನೇಮಕದಿಂದಂತೂ ತದ್ವಿರುದ್ಧವಾದ ಸಂದೇಶ ರವಾನೆಯಾಗಿದೆಯಷ್ಟೇ.

 

 

`ಕಾವೇರಿ’ದ‌ ಕಾವೇರಿ

 

ಭಾವನಾತ್ಮಕತೆಯನ್ನು ಬದಿಸರಿಸಿ,  ಶತಕದಷ್ಟು  ಹಳೆಯದಾದ ನಮ್ಮ ಕಾವೇರಿ ವಿವಾದದ ವಸ್ತುಸ್ಥಿತಿಯ `ಸಮಗ್ರ’ ಚಿತ್ರಣವನ್ನು  ನಮಗೇಕೆ  ಯಾರೂ ನೀಡುತ್ತಿಲ್ಲ? ನಮ್ಮ ಸರ್ಕಾರ, ಕೋರ್ಟಿನ ಮುಂದೊಂದು ಮಾತು, ನಮ್ಮ ಮುಂದೊಂದು ಮಾತನಾಡುತ್ತಿದೆಯಾ? ನಿಜಸ್ಥಿತಿಯನ್ನು ಅನಾವರಣಗೊಳಿಸದೇ ಜನರ  ಭಾವನೆಗಳೊಂದಿಗೆ ಚೆಲ್ಲಾಟವಾಡುವುದಾದರೂ ಏತಕ್ಕೆ? ಶಾಶ್ವತವಾಗಿ  ಇದನ್ನು ವೋಟ್‍ಬ್ಯಾಂಕ್  ಆಗಿಸಿ ಲಾಭ ಪಡೆಯುವ  ರಾಜಕೀಯವೇ? ಇಲ್ಲವಾದಲ್ಲಿ, ಕುಡಿಯುವ  ನೀರಿಗಿಂತ ಬೆಳೆಗೆ ನೀರು ಬಿಡುವುದೇ ಆದ್ಯತೆಯ‌ದ್ದು ಎಂಬ ಬಾಲಿಶ ತೀರ್ಪನ್ನು ಯಾರೂ ನೀಡುತ್ತಿರಲಿಲ್ಲ.

ನಿಜಸ್ಥಿತಿ ತಿಳಿಸಿಯೂ, ಕೋರ್ಟ್ ಇಂಥಾ ತೀರ್ಪಿನ್ನಿತ್ತಿದೆಯೆಂದಾದರೆ, ನಮ್ಮ ನ್ಯಾಯ ವ್ಯವಸ್ಥೆ ಅಧೋಗತಿ  ತಲುಪಿದೆಯೆನ್ನುವುದರಲ್ಲಿ ಸಂಶಯವಿಲ್ಲ.  ಮಾಧ್ಯ‌ಮಗಳಲ್ಲಿ ಪ್ರಕಟವಾದಂತೆ, ನಮ್ಮಲ್ಲಿಯೇ  ಕುಡಿಯುವ ನೀರಿಗೇ  ತತ್ವಾರ ಅನ್ನುವುದನ್ನು ಕೋರ್ಟ್ ಮುಂದೆ ಸರಿಯಾಗಿ ಮಂಡಿಸಲು ನಾವು ವಿಫಲವಾದೆವೇ? ಅಥವಾ  ನಮ್ಮ ಮಾಹಿತಿ ಅಷ್ಟು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆಯಾ? ಅಥವಾ ನಮ್ಮ ನ್ಯಾಯವ್ಯವಸ್ಥೆಯಲ್ಲಿ ವಸ್ತುಸ್ಥಿತಿಗಿಂತ ಯಾರು ಹೇಗೆ  ವಾದ ಮಾಡಿದರು ಅನ್ನುವುದು ಮುಖ್ಯವಾಗುತ್ತಿದೆಯೋ? ಎಲ್ಲಿ ಎಡವುತ್ತಿದ್ದೇವೆಂದು  ತಿಳಿದೂ ತಿಳಿದೂ, ಅದೇ ತಪ್ಪನ್ನು ಪುನರಾವರ್ತಿಸುತ್ತಿದ್ದೀವಲ್ಲಾ  ಯಾಕೆ?  ನಮಗೆ ಸಮಸ್ಯೆ  ಬಗೆಹರಿಯುವುದು ಬೇಡವೇ?

ಈ ಪಾಟೀ ಕೋಳಿ ಜಗಳಕ್ಕಾಗಿ  ಸಂಪನ್ಮೂಲವನ್ನು ವ್ಯಯಿಸುವುದನ್ನು ಬಿಟ್ಟು, ಪರ್ಯಾಯ  ಪರಿಹಾರಗಳ ಬಗ್ಗೆ ವ್ಯಯಿಸಿದ್ದಿದ್ದರೆ, ಈವರೆಗೆ ಕಾವೇರಿ ವಿವಾದದಲ್ಲಿರುತ್ತಿರಲಿಲ್ಲ.  ಸಾಕಷ್ಟು  ಇಂಗುಗುಂಡಿಗಳನ್ನು ಅಭಿವೃದ್ಧಿಪಡಿಸಿದ್ದಲ್ಲಿ, ಕಾವೇರಿಯ ಮೇಲೆ ಇಷ್ಟು  ಅತ್ಯವಲಂಬನೆಯನ್ನು ತಪ್ಪಿಸಬಹುದಾಗಿತ್ತು. ಡ್ಯಾಂ  ಸ್ಟೋರೇಜ್‍ಗಳಲ್ಲಿನ  ಹೂಳೆತ್ತಿಸಿ, ಈಗ ನಾವು ಹೇಳುತ್ತಿರುವ 9 TMC Dead storage ನ್ನು ಉಪಯುಕ್ತ ಸಂಗ್ರಹವನ್ನಾಗಿಸಬಹುದು. ಸರಿಯಾಗಿ ಮಳೆಯಾದ ವರ್ಷವಿರಲಿ, ಸಂಕಷ್ಟದ ವರ್ಷವಿರಲಿ, ಲಭ್ಯವಿರುವ ನೀರನ್ನು ಕುಡಿಯುವ ನೀರು ಹಾಗೂ  ಕಾವೇರಿ ನೀರನ್ನಾಶ್ರಯಿಸಿದ ಎರಡೂ ರಾಜ್ಯಗಳ ಕೃಷಿಭೂಮಿಯ  ಅನುಪಾತದಲ್ಲಿ ನೀರನ್ನು ಹಂಚಿಕೊಂಡಲ್ಲಿ ಯಾರಿಗೂ  ಅನ್ಯಾಯವಾಗದು. ಎಲ್ಲಕ್ಕೂ ಮೊದಲಿಗೆ, ಎರಡೂ ರಾಜ್ಯದ ನಾಯಕರು `ನಿಜಸ್ಥಿತಿ’ಯನ್ನು ಜನತೆಯ ಮುಂದಿಟ್ಟು, ಅವರ ಭಾವನೆಗಳ ಜೊತೆಗೆ ಚೆಲ್ಲಾಟವಾಡದಿದ್ದರೆ ಸಾಕು. ವಿವಾದ ಮಂಜಿನಂತೆ ಕರಗಿ ಹೋಗುತ್ತದೆ.  ಇದಕ್ಕೆ ಇಚ್ಛಾಶಕ್ತಿಯಿದ್ದಿದ್ದರೆ, ಕಾವೇರಿ ಈ ಪಾಟಿ `ಕಾವೇರಿ’ರುತ್ತಿತ್ತಿಲ್ಲ.
 

ಒತ್ತುವರಿ (ಒತ್ತು-worry)

ಇತ್ತೀಚೆಗೆ ರಾಜಾಕಾಲುವೆ  ಒತ್ತುವರಿ ತೆರವಿನ ಸುದ್ಧಿ ಓದಿ  ಮೊದಲಿಗೆ ಬಹಳ ಸಂತೋಷಪಟ್ಟೆ- ಅಕ್ರಮ ಒತ್ತುವರಿದಾರರಿಗೆ ತಕ್ಕ ಶಾಸ್ತಿ ಆಯ್ತಲ್ಲ ಕೊನೆಗೂ ಅಂತ.  ಆದರೆ, ಈ ಒತ್ತುವರಿ ತೆರವಿನ ಬಗ್ಗೆ ಸಂಪೂರ್ಣ ಚಿತ್ರಣ ದೊರೆಯುತ್ತಿದ್ದಂತೆ, ನನ್ನ ಸಂತೋಷ ದುಃಖದೆಡೆಗೆ ತೆರಳಿತು.  ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿಯಾಗ್ಬೇಕೇ? ಪ್ರಭಾವೀ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಅವರೊಂದಿಗೆ  ಶಾಮೀಲಾದ ಸರ್ಕಾರೀ ಅಧಿಕಾರಿಗಳ ಧನದಾಹಕ್ಕೆ, ಈ ಮುಗ್ಧ ಜನರು ಬಲಿಯಾಗುವುದನ್ನು ಯಾರು ತಾನೇ ಸಮರ್ಥಿಸಿಯಾರು?
ಬೆಂಗಳೂರು ಮಹಾನಗರ ಪಾಲಿಕೆಯಿಂದ ಸಕ್ರಮವಾಗಿ ಖಾತೆಗಳನ್ನು ಹೊಂದಿದ್ದು, ಪ್ರತಿ ವರ್ಷ ತೆರಿಗೆ ಪಾವತಿಸಿದ್ದ, ಈ ಜನರ ಬದುಕನ್ನು ಮೂರಾಬಟ್ಟೆ ಮಾಡುವ ಬದಲು, ಇವರನ್ನು ವಂಚಿಸಿದ ಅಧಿಕಾರಿಗಳು / ಬಿಲ್ಡರ್‍ಗಳನ್ನು ಶಿಕ್ಷಿಸಬೇಕಾದ್ದು ನ್ಯಾಯ. ಆದರೆ, ದುರದೃಷ್ಟವಶಾತ್ ಭಾರತ ದೇಶದಲ್ಲಿ `ನ್ಯಾಯ’ ಬಿಕರಿಗಿದೆ ! ಹಣ, ಅಧಿಕಾರವಿದ್ದಾತ  ನ್ಯಾಯವನ್ನು ಕೊಳ್ಳಬಲ್ಲ. ಅದಕ್ಕೇ ಹೇಳಿದ್ದು – ನ್ಯಾಯ ಜೇಡರಬಲೆ  ಇದ್ದಂತೆ- ಅದರಲ್ಲಿ ಸಣ್ಣ ಸಣ್ಣ ಕೀಟಗಳು ಬಂಧಿಯಾದಾವೇ ಹೊರತು ದೊಡ್ಡ ಜೀವಿಗಳಲ್ಲ! ಇನ್ನು ನಮ್ಮ ನ್ಯಾಯ ವ್ಯವಸ್ಥೆಯ ಬಗ್ಗೆ ಮಾತನಾಡದಿರುವುದೇ ಲೇಸು.  ಜನಗಳ ಮೇಲೆ ಕಾರು ಹಾಯಿಸಿದ ಸಲ್ಮಾನ್‍ಖಾನ್ ಪ್ರಕರಣ ತೆಗೆದುಕೊಳ್ಳಿ – 15 ವರ್ಷ ಎಳೆದಾಟದ ನಂತರ, ಹೈಕೋರ್ಟ್ ಆತನನ್ನು ನಿರ್ದೋಷಿ ಅನ್ನುತ್ತದೆ! ನ್ಯಾಯಾಲಯದಲ್ಲಿ ಪ್ರಕರಣಗಳು ಕೊಳೆ ಬೀಳುವುದರಿಂದ ಬಡ-ಜನಸಾಮಾನ್ಯರಿಗೆ ನ್ಯಾಯವೆಂಬುದು ಗಗನ ಕುಸುಮ.  ಈ ಭಂಡ ಧೈರ್ಯವಿರುವುದರಿಂದಲೇ ಈ ಅಧಿಕಾರಿಗಳು / ಭೂ ಮಾಫಿಯಾ  ಒತ್ತುವರಿ ಮಾಡಿಯೇ `ವಂಚನೆ’ಯನ್ನು ಬೇರೋರ್ವರ ತಲೆಗೆ ಕಟ್ಟಿ, ಹಣ ಮಾಡಿಕೊಂಡು  ನೆಮ್ಮದಿಯಿಂದ ಇರುವುದು.  ಈ ಮುಗ್ಧ  ಜನರಿಗೆ ಈಗ ಹಣವೂ ಇಲ್ಲ – ತಲೆಯ ಮೇಲೆ ಸೂರೂ ಇಲ್ಲ ! ಇದು ಇಂದಿನ  ದಾರುಣ ಪರಿಸ್ಥಿತಿ !
ಆ ಜಾಗದಲ್ಲಿ ರಾಜಾ ಕಾಲುವೆ ಇತ್ತೆಂಬ `ಮಾಹಿತಿ’ ಇಂದಿನದಲ್ಲ‌. ಒತ್ತುವರಿಯಾಗುತ್ತಿದ್ದಾಗಲೂ ಇದ್ದ ಮಾಹಿತಿ.  ಆಗ ಆ ಮಾಹಿತಿಯನ್ನು ಅನುಕೂಲಕ್ಕಾಗಿ  ಬದಿಸರಿಸಿ, ಜನಗಳಿಗೆ ಖಾತಾ ಕೊಟ್ಟು, ತನ್ಮೂಲಕ ನೀರು, ವಿದ್ಯುತ್ ಮುಂತಾದ  ಸಕಲ ಸವಲತ್ತುಗಳನ್ನು ಒದಗಿಸಿ, ತೆರಿಗೆ ಸಂಗ್ರಹಣೆ ಮಾಡುತ್ತಿದ್ದು, ಈಗ ಏಕಾಏಕೀ ಇದು ಅಕ್ರಮ ಮನೆ ಎನ್ನುವುದು ಎಷ್ಟು ಸರಿ?  ಪರಿಸ್ಥಿತಿ  ಇಂತಿದ್ದಾಗ, ಒತ್ತುವರಿ ತೆರವು  ಹೇಗೆ ಕಾನೂನುಬದ್ಧವಾಗುತ್ತದೆ? ಇದು, ಮನೆಯಲ್ಲಿ ಕಳ್ಳತನವಾದಾಗ, ಕಳ್ಳನನ್ನು ಶಿಕ್ಷಿಸುವುದನ್ನು ಬಿಟ್ಟು, ಮನೆಯವನನ್ನೇ  ಶಿಕ್ಷಿಸಿದಂತೆ ಇದೆ ! ಇದು ತಪ್ಪು ಅಂತಲೂ  ನಮ್ಮ ಸರ್ಕಾರಕ್ಕೆ  ಅನ್ನಿಸುತ್ತಿಲ್ಲವಲ್ಲಾ ಅದೇ ನನ್ನ ವ್ಯಥೆ.  ಸರ್ಕಾರ ಅಷ್ಟು ಜಡ್ಡುಗಟ್ಟಿ ಹೋಗಿದೆಯಾ ಅಥವಾ `The king can do no wrong’ ಅನ್ನುವ ಮನೋಭಾವವೋ? ಇದರಿಂದ ಬೆಂಗಳೂರಿನ ಎಲ್ಲ ನಿವಾಸಿಗಳಿಗೂ ಈಗ ನಡುಕ ಹುಟ್ಟಿದೆ – ಯಾವಾಗ  ಯಾವ ಅಧಿಕಾರಿ ಯಾವುದೋ ಅಂದಕಾಲತ್ತಿಲ್ ನಕ್ಷೆ ಹಿಡಿದುಕೊಂಡು  ಬಂದು “ಇಲ್ಲಿ ರಾಜಾ ಕಾಲುವೆ ಇತ್ತು. ಆದ್ದರಿಂದ, ನಿಮ್ಮ ಮನೆ ಅಕ್ರಮ. ಈಗಿಂದೀಗ್ಲೇ ಕೆಡುವುತ್ತೇವೆ” ಅಂತ ಬರ್ತಾನೋ ಅಂತ!
ಪೇಪರ್‍ಗಳಲ್ಲಿ ಬಂದ ವರದಿಗಳ ಪ್ರಕಾರ, ಮನೆ ಕೆಡವಲು ಬಂದ ಅಧಿಕಾರಿ ವರ್ಗದವರು, ಅಲ್ಲಿಯ ನಿವಾಸಿಗಳು ತಮಗೆ ಈ ಬಗ್ಗೆ ನೋಟೀಸ್  ನೀಡಿಲ್ಲವೆಂದಾಗ, ಯಾವುದೋ ಕಾಯ್ದೆಗಳನ್ನುದ್ಧರಿಸಿ, ರಾಜಾಕಾಲುವೆ  ಒತ್ತುವರಿ ತೆರವಿಗೆ  ನೋಟೀಸ್ ಬೇಕಿಲ್ಲ ಎಂದಿದ್ದಾರಂತೆ ! ಹೀಗೆ ಅಮಾನವೀಯವಾಗಿ ಯೋಚಿಸುವವರನ್ನು ನಾವು ಮನುಷ್ಯರು  ಎನ್ನಬೇಕೇ? ಯಾರಾದರೂ ಅವರ ಮನೆಯನ್ನು ಏಕಾಏಕೀ ಕೆಡವಿದ್ದಲ್ಲಿ ಮಾತ್ರ ಅವರಿಗೆ ಪರಿಸ್ಥಿತಿಯ ಅರಿವುಂಟಾಗುತ್ತಿತ್ತು ! ಅವರಿಗೆ  ಅರ್ಥೈಸಲು  ನಾವೂ ಅವರ ದಾರಿಗೇ ಇಳೀಬೇಕೇನೋ!
ಈಗ ಸರ್ಕಾರೀ ಯಂತ್ರದಿಂದ  ತಪ್ಪಾಗಿದೆ – ರಾಜಾಕಾಲುವೆಯ ಒತ್ತುವರಿ ಜಾಗಗಳಲ್ಲಿ ಖಾತಾ ಕೊಟ್ಟು  ಸಕ್ರಮಗೊಳಿಸಿದ್ದು. ಸಂತ್ರಸ್ತರಿಗೆ  ತೊಂದರೆಯಾಗದಂತೆ ಈ ತಪ್ಪನ್ನು ತಿದ್ದಲು ಸಾಧ್ಯವಿದೆ.  ಸರ್ಕಾರ ಈ ನಿಟ್ಟಿನಲ್ಲಿ  ಯೋಚಿಸಬೇಕೇ ಹೊರತು, ತನ್ನ ತಪ್ಪಿಗೆ  ತನ್ನ ಪ್ರಜೆಗಳೇ ಅನುಭವಿಸುವಂತಾಗಬಾರದಲ್ವೇ! ಒತ್ತುವರಿ  ಬಯಲಾದಾಗ, ಈ ನಿವಾಸಿಗಳಿಗೆ ನೋಟೀಸ್ ಕೊಟ್ಟು ಅವರಿಗೆ ಬೇರೆ ಕಡೆ  ಬದಲೀ ವ್ಯವಸ್ಥೆ ಮಾಡಿ, `ಪರಿಹಾರ’ ನೀಡಬೇಕಾದ್ದು  ಸರ್ಕಾರದ ಕರ್ತವ್ಯ.  ಇದು, ಸರ್ಕಾರದ ತಪ್ಪಿನಿಂದಾದ  ಸಕ್ರಮ ಒತ್ತುವರಿ ಬಗ್ಗೆ ಮಾತ್ರ.  ಅಕ್ರಮವಾಗಿ ಒತ್ತುವರಿ ಆದ ಕಡೆ ಅಲ್ಲ.  ಇದರ ನಂತರ, ಈ ಅಕ್ರಮ ವ್ಯವಹಾರಕ್ಕೆ ಕಾರಣರಾದ  ಎಲ್ಲ ಅಧಿಕಾರಿ ವರ್ಗ ಹಾಗೂ ಭೂ ಮಾಫಿಯಾದವರಿಂದ  ದಂಡ ಪೀಕಿಸಿ, ಅವರನ್ನು ಶಿಕ್ಷಿಸಬೇಕು.  ತಾನು `ಪರಿಹಾರ’ವಾಗಿ ಕೊಟ್ಟ ಹಣವನ್ನು, ಅವರು ಅಕ್ರಮವಾಗಿ  ಸಂಪಾದಿಸಿದ್ದ ಹಣವನ್ನು ಮುಟ್ಟುಗೋಲು  ಹಾಕಿಕೊಳ್ಳುವ ಮೂಲಕ ನಷ್ಟ ಭರ್ತಿ ಮಾಡಿಕೊಳ್ಳಬೇಕು.  ಆಗಲಾದರೂ  ಈ ಅಧಿಕಾರಿಗಳಿಗೆ ಸ್ವಲ್ಪ ಭಯ ಹುಟ್ಟಿ,  ಇಂತಹ  ‘ಒತ್ತು-worry’ಗಳಿಗೆ ಕಡಿವಾಣ ಬಿದ್ದೀತು!

 

ಆ(ಅ)ರಕ್ಷಕರು

 

ಕಳೆದ ವಾರ ಯಮನೂರಿನಲ್ಲಿ ನಡೆದ ಪೋಲೀಸರ  ಅಟ್ಟಹಾಸವನ್ನು ಟೀ.ವಿ. ವಾಹಿನಿಗಳಲ್ಲಿ ಕಂಡು ಛಳಿಯಲ್ಲೂ ಭಯದಿಂದ ಮೈ ಬೆವತಿತು.  `ಭಯೋತ್ಪಾದನೆ’ಯನ್ನು ಕಣ್ಣಾರೆ ಕಂಡಂತಾಯ್ತು.  ಇದನ್ನು ಕಂಡು ನಮಗೇ ಭಯ, ಅಸಹಾಯಕತೆ ಕಾಡಿದರೆ, ಅದನ್ನು ಅನುಭವಿಸಿದವರ  ಪಾಡೇನು? ಹಿಟ್ಲ‌ರ್ ನಾಜೀಗಳ ಮೇಲೆ ನಡೆಸಿದ  ಪೈಶಾಚಿಕ ಕೃತ್ಯದ ಸಮೀಪಕ್ಕೆ  ಬರುವಂಥದು ಈ ಘೋರ ಕೃತ್ಯ – ಯಮನೂರಿನ  ಪೋಲೀಸರದು.  ಇಂಥ ಪ್ರತ್ಯಕ್ಷ ಸಾಕ್ಷಿಗಳಿದ್ದಾಗ್ಯೂ, ಈ ಪೋಲೀಸರನ್ನು ಸಮರ್ಥಿಸಿಕೊಳ್ಳುವವರನ್ನು ನೋಡಿದರೆ, ಮೈ ಕೈ ಪರಚಿಕೊಳ್ಳುವಂತಾಗುತ್ತದೆ.  ಈ ದೃಶ್ಯಾವಳಿಗಳನ್ನು  ನೋಡಿದ ಯಾರಿಗಾದರೂ ಬರುವ ತೀರ್ಮಾನವೆಂದರೆ – ಈ ದುರುಳರು ಪೋಲೀಸ್ ವೃತ್ತಿಯಲ್ಲಿರಲು ಸಂಪೂರ್ಣ  ಅನರ್ಹರು.  ಅವರನ್ನು ಸರ್ಕಾರ ಮುಲಾಜಿಲ್ಲದೇ ಅಮಾನತ್ತು ಮಾಡದಿದ್ದಲ್ಲಿ, ಸರ್ಕಾರ ಇದ್ದರೂ ಸತ್ತ ಲೆಕ್ಕ.  ಹಿಂದೊಮ್ಮೆ ಪೋಲೀಸರ ಪರವಾಗಿ ಒಂದಿಷ್ಟು ಗೀಚಿದ್ದ ನನಗೆ ಈ ಘಟನೆ ಮುಜುಗರವನ್ನುಂಟು ಮಾಡಿದ್ದು ಸುಳ್ಳಲ್ಲ.  Of course, ಯಮನೂರಿನಲ್ಲಿ ನಡೆದ ಈ ಪೋಲೀಸ್ ದೌರ್ಜನ್ಯದ ಮೇಲೆ ಬೇರೆ ಪೋಲೀಸರನ್ನು ಅಳೆಯಲಾಗದು.  ಆದರೂ ಈ ಘಟನೆ ಯಾವುದೇ  ಸರಿಯಾದ ಪೋಲೀಸಿಗೂ ನಾಚಿಕೆ ತರಿಸಿರಲಿಕ್ಕೂ ಸಾಕು.

ಯಮನೂರಿನಲ್ಲಿ ನಡೆದ ಈ ಪೋಲೀಸ್ ಆಟಾಟೋಪ, ಸಂತ್ರಸ್ತರ  ಪಾಲಿಗೆ ಸಾಕ್ಷಾತ್  `ಯಮನೂರು’ ಆಯ್ತು. ಅವರ  ಈ ರಾಕ್ಷಸೀ ವರ್ತನೆ, ಪ್ರಚೋದಿತವಾದ ಕೃತ್ಯವೆಂದೆಣಿಸಿದರೂ, ಆ ಪ್ರಚೋದನೆಗೆ  ಕಾರಣವಾದವರನ್ನು ಶಿಕ್ಷಿಸಿ.  ಅವರ ಮನೆಯ  ವೃದ್ಧ /ಮಹಿಳೆ/ ಅಸಹಾಯಕರನ್ನಲ್ಲ ! ಯಾವುದೇ  ಸೈನಿಕರೂ ತಮ್ಮ ಶತ್ರುಪಾಳೆಯದ ಮೇಲೆ ಹೀಗೆ ವರ್ತಿಸಲಾರರು.  ಈ ಥರದ `ಭಯೋತ್ಪಾದನೆ’ಯ  ವಿರುದ್ಧ ಸರ್ಕಾರ ಕ್ರಮಕೈಗೊಳ್ಳದಿದ್ದಲ್ಲಿ, ಜನಾಂದೋಲನ ರೂಪಿತವಾಗಬೇಕಾದ ಜರೂರತ್ತಿದೆ.  ಸುಮ್ಮನೆ ಕುಳಿತರೆ, ಇಂದು ಯಮನೂರಿನಲ್ಲಿ ಆದದ್ದು ನಾಳೆ ನಮಗಾಗದೆಂಬ ಗ್ಯಾರಂಟಿ ಏನಿದೆ! ನಮ್ಮ ನಿಷ್ಕ್ರಿಯತೆ, ಇಂಥ ಘನಘೋರ ಕೃತ್ಯಗಳಿಗೆ ಮತ್ತಷ್ಟು ಇಂಬು ಕೊಡುತ್ತದಷ್ಟೇ.

ನೂರೆಂಟು ಟೀ.ವಿ. ವಾಹಿನಿಗಳ, ಮೊಬೈಲ್ ಕ್ಯಾಮರಾಗಳ ಈ ಕಾಲದಲ್ಲಿ, ತಮ್ಮೀ ನಾಚಿಕೆಗೆಟ್ಟ ಕಾರ್ಯವನ್ನು ಯಾರಾದರೂ ಚಿತ್ರೀಕರಿಸಿಯಾರು ಎನ್ನುವ ಸಣ್ಣ ಭಯವೂ ಆ ಪೋಲಿಸರಲ್ಲಿ  ಇರದಿದ್ದುದನ್ನು ನೋಡಿದರೆ, ಇದು ಸರ್ಕಾರೀ ಪ್ರಾಯೋಜಿತವೇ ಅನ್ನುವ ಅನುಮಾನ ಬಾರದಿರದು. ಹಾಗಿರಲಾರದು ಅಥವಾ ಹಾಗಂದುಕೊಂಡು ಸಮಾಧಾನಪಟ್ಟುಕೊಳ್ಳೋಣ.

ಒಟ್ಟಿನಲ್ಲಿ ಪ್ರತ್ಯಕ್ಷ ಸಾಕ್ಷಿಯಿರುವ ಈ  ಘಟನೆಯಲ್ಲಿ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಪ್ರಜಾಪ್ರಭುತ್ವಕ್ಕಾಗುವ ಘೋರ ಅಪಮಾನವಿದಾಗುತ್ತದೆ.

 

ಪೋಲೀಸ್ ಪಾಡು

ಸಾಮಾನ್ಯವಾಗಿ ಪೋಲೀಸ್  ಅಂದ ಕೂಡಲೇ  ನಮ್ಮ ಮನಸ್ಸಿಗೆ  ಮೂಡುವುದು ಅವರ ದೌರ್ಜನ್ಯ ಹಾಗೂ ದರ್ಪದ ಚಿತ್ರಣವೇ.  ಆದರೆ, ನಿಜ ಜೀವನದಲ್ಲಿ, ಕೆಳಹಂತದ ಪೋಲೀಸರ  ಪಾಡು, ನಾಯಿಪಾಡಾಗಿರುವುದು ಆಶ್ಚರ್ಯವಾದರೂ ಸತ್ಯ.  ಇತ್ತೀಚಿನ  ಪೋಲೀಸರ ಎರಡು ಆತ್ಮಹತ್ಯೆ  ಹಾಗೂ ಒಂದು ರಾಜೀನಾಮೆಯ ಕಥನ ಅವರ ಇಂದಿನ ಸ್ಥಿತಿಗತಿಗೆ  ಹಿಡಿದ ಕನ್ನಡಿ.

ಭಾರತದಲ್ಲಿ `ಭ್ರಷ್ಟಾಚಾರ’ದ  ಸಮನಾರ್ಥಕ ಪದವೇ `ಕಂದಾಯ ಇಲಾಖೆ’.  ಇದಕ್ಕೆ  ಸರಿಸಾಟಿಯಾಗಿ  ಪೈಪೋಟಿ ನೀಡುತ್ತಿದೆ, ಪೋಲೀಸ್ ಇಲಾಖೆ.  ಆದರೆ, ಇದಕ್ಕೆ  ಮೂಲ ಕಾರಣ, ಕನಿಷ್ಠತಮವಾದ ಅವರ ಸಂಬಳ. ಪ್ರಾಮಾಣಿಕವಾಗಿ ಸಂಸಾರದ ಖರ್ಚುಗಳನ್ನು ಸರಿದೂಗಿಸಲಾಗದೇ, `ಯಾರಿಗೆ ಸಾಲುತ್ತೆ ಸಂಬಳ’ ಅಂತ‌ ಹಾಡುತ್ತ‌, ವಾಮಮಾರ್ಗಕ್ಕೆ  ಅನಿವಾರ್ಯತೆಯಿಂದ ಇಳಿಯುತ್ತಾರೆ.  ನಂತರ, `ನೀರಿಗಿಳಿದವನಿಗೆ  ಛಳಿಯೇನು ಮಳೆಯೇನು’ ಅನ್ನುತ್ತ ಭ್ರಷ್ಟಾಚಾರದಲ್ಲೇ ಮುಳುಗಿಬಿಡುತ್ತಾರೆ.  ಅಲ್ಲಾ, ಪೋಲೀಸರು ಮಹಾಭ್ರಷ್ಟರು  ಅಂತ ಘಂಟಾಘೋಷವಾಗಿ ಹೇಳುತ್ತೀವಲ್ಲಾ, ನಾವುಗಳು ಸಾಚಾನೇ ಸ್ವಾಮೀ? ಹೆಲ್ಮೆಟ್ ಇಲ್ಲದೇ ಸ್ಟೈಲಾಗಿ ಹೋಗ್ತೀವಲ್ಲಾ, ಅದು ತಪ್ಪಲ್ವಾ? One way ನಲ್ಲಿ ರಾಜಾರೋಷವಾಗಿ  ನುಗ್ತೀವಲ್ಲಾ, ಅದು ಸರೀನಾ? ದುಡ್ಡು ಉಳಿಸೋಕ್ಕೆ ಒಂದೇ ಆಟೋನಲ್ಲಿ 5-6 ಜನ ತುಂಬ್ಕೊಂಡು ಹೋಗ್ತೀವಲ್ಲಾ, ಅದು ತಪ್ಪಲ್ವಾ?  ಪೋಲೀಸರಲ್ಲಿನ ಭ್ರಷ್ಟಾಚಾರದ ಬಯಕೆಗೆ ನೀರೆರೆದು ಪೋಷಿಸಿ (ನಮ್ಮ ತಪ್ಪನ್ನು ಮರೆಮಾಚಿ) ಅವರನ್ನು  ಕಳ್ಳರೆನ್ನುವುದು  ಸರಿಯಾ? ಕ್ಷಮಿಸಿ, ನಾನಿಲ್ಲಿ ಪೋಲೀಸರ ಭ್ರಷ್ಟಾಚಾರವನ್ನು ಸಮರ್ಥಿಸುತ್ತಿಲ್ಲ.  ನಾವೂ ಅದರಲ್ಲಿ ಸಮಭಾಗೀದಾರರು ಅನ್ನುತ್ತಿದ್ದೀನಷ್ಟೇ.

ಪೋಲೀಸರ ನಾಯಿಪಾಡು, ಸಾರ್ವಜನಿಕರಿಗೆ, ಹಿಂದೆಂದಿಗಿಂತಲೂ ಇಂದು ಜಾಸ್ತಿ ಗೋಚರವಾಗುತ್ತಿದೆ. ಯಾ ಅವರ ಅರಿವಿಗೆ ಬರುತ್ತಿದೆ.  ಸತ್ಯವನ್ನು ಸಾರ್ವಜನಿಕರೆದುರು ತಂದ ಕೀರ್ತಿ ಕೆಲ ಪತ್ರಿಕಾ ಮಾಧ್ಯಮಗಳಿಗೆ ಸಲ್ಲುತ್ತದೆ. ಹಾಗಾಗಿಯೇ, ಇತ್ತೀಚೆಗೆ ಸುದ್ಧಿಯಾದ `ಪೋಲೀಸ್ ಪ್ರತಿಭಟನೆ’ ಗೆ  ಸಾಕಷ್ಟು ಸಾರ್ವಜನಿಕ ಬೆಂಬಲ ದೊರಕಿತು.  ಸರ್ಕಾರದ ಆಶ್ವಾಸನೆ ಹಾಗೂ ಬೆದರಿಕೆಗಳಿಂದ ಪ್ರತಿಭಟನೆಯನ್ನು ಅವರು ಹಿಂಪಡೆದರೂ, ಜನರ ದೃಷ್ಟಿಯಲ್ಲಿ ಹೀರೋಗಳಾದವರು ಪೋಲೀಸರೇ.

ಪೋಲೀಸರ ಇಂದಿನ  ನಾಯಿಪಾಡಿನ ಪರಿಸ್ಥಿತಿಗೆ  ಬಹಳ ಆಯಾಮಗಳಿವೆ.  ಅವುಗಳಲ್ಲಿ  ಪ್ರಮುಖವಾದದ್ದು ಪೋಲೀಸರ ಲಭ್ಯತೆ.  ನ್ಯಾಯವಾಗಿ  ಇರಬೇಕಾದ  ಪರಿಮಾಣಕ್ಕಿಂತ ಬಹಳ ಕಡಿಮೆ ಪ್ರಮಾಣದಲ್ಲಿ  ಪೋಲೀಸ್ ಸಂಖ್ಯೆಯಿದ್ದು, ಇರುವವರೇ ಅಷ್ಟೂ ಕೆಲಸದ ಭಾರವನ್ನು ಹೊರಬೇಕಾದ  ಪರಿಸ್ಥಿತಿ ಇದೆ.  ಮೊದಲೇ ಒತ್ತಡದಲ್ಲಿ  ನಿರ್ವಹಿಸುವಂಥ ಕಾರ್ಯ, ಜೊತೆಗೆ ಕಾರ್ಯಬಾಹುಳ್ಯ ! ದಿನದ  12 ರಿಂದ 14 ಘಂಟೆ  ಕಾರ್ಯನಿರ್ವಹಣೆ ಪೋಲೀಸರ ಸಾಮಾನ್ಯ ದಿನಚರಿಯಾದರೆ, ಕೆಲವೊಮ್ಮೆ  ಪರಿಸ್ಥಿತಿಯ ದೆಸೆಯಿಂದಾಗಿ  ಅವರು ಸತತವಾಗಿ  2-3 ದಿನ ಕಾರ್ಯನಿರ್ವಹಿಸಬೇಕಾಗುತ್ತದೆ ! ಅವರೂ ಮನುಷ್ಯರಲ್ಲವೇ? ಮನುಷ್ಯ ಇಷ್ಟೊಂದು  ಒತ್ತಡದಲ್ಲಿದ್ದಾಗ, ಅವರಿಂದ  ಯಾವಾಗಲೂ ಸೌಜನ್ಯ ನಿರೀಕ್ಷಿಸುವುದು ತಪ್ಪಾಗುತ್ತದೆ.  ತುಂಬಾ ಒತ್ತಡದಲ್ಲಿ ಕುಕ್ಕರ್ ಕೂಡಾ ಸಿಡಿಯುತ್ತದೆ – ನೆನಪಿರಲಿ.  ಅಪರೂಪಕ್ಕಿರಬೇಕಾದ ಬಹುವಾದ ಒತ್ತಡ, ಪ್ರತಿದಿನವೂ  ಇರುವುದರಿಂದಲೇ ಪೋಲೀಸರು  ಅಷ್ಟು ಕಟುವಾಗಿ ವರ್ತಿಸುತ್ತಾರೆಂದು ನಿರ್ಣಯಿಸಲು  ನಾವು ಮನಶ್ಶಾಸ್ತ್ರಜ್ಞರೇ ಆಗಬೇಕೆಂದಿಲ್ಲ‌.

ಇನ್ನೊಂದು ಆಯಾಮ, ನಾನು  ಮೊದಲೇ  ಹೇಳಿದಂತೆ, ಪೋಲೀಸರ  ಕಡಿಮೆ ಸಂಬಳ.  ಅವರು  ಮಾಡುವ ಕೆಲಸದ‌ 10%ಗೂ ಕಡಿಮೆ  ಕೆಲಸ ಮಾಡುವ ಸರ್ಕಾರೀ ನೌಕರರಿಗೆ  ಅವರ 2-3 ಪಟ್ಟು ಜಾಸ್ತಿ ಸಂಬಳವಿದೆ. ಸಕಾರಣವಿದ್ದರೂ ಪೋಲೀಸರು ಪ್ರತಿಭಟನೆ  ನಡೆಸಕೂಡದು ಅನ್ನುವ ಸರ್ಕಾರ, ಅವರ  ಸ್ಥಿತಿಗತಿಗಳು ಅವರು ಮಾಡುವ  ಕೆಲಸಕ್ಕೆ ತಕ್ಕುದಾಗಿರಬೇಕೆಂದು ಯೋಚಿಸದಿರುವ ಹಿಂದೆ ಯಾವ ಹುನ್ನಾರವಿದೆಯೋ ತಿಳಿಯದು.   ಯಾವುದೇ ಪಕ್ಷದ ಸರ್ಕಾರವಿದ್ದರೂ  ಪೋಲೀಸರ ಗತಿ ಮಾತ್ರ  ಅಧೋಗತಿಯೇ ಸೈ.  ರಾಜಕಾರಣಿಗಳಿಗೆ ಜೀತದಾಳಿನಂತಹ ಪೋಲೀಸಪ್ಪ ಬೇಕು. ತಮ್ಮ ತಾಳಕ್ಕೆ  ತಕ್ಕಂತೆ ಕುಣಿಯಬಲ್ಲಂಥವರೇ ಅವರಿಗೆ ಬೇಕು. ಅಂಥವರನ್ನೇ ತಮ್ಮ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ.  ತಮ್ಮ ಕ್ಷೇತ್ರದಲ್ಲಿ `ಯಾವುದೇ ರೀತಿ’ಯಲ್ಲಿಯಾದರೂ ತಮ್ಮ ಮಾತೇ ನಡೆಯಬೇಕೆಂಬ  ಜಹಗೀರ್ದಾರೀ ನಡವಳಿಕೆ.  ತಮ್ಮ ಮಾತಿಗೆ  ಕವಡೆ ಕಿಮ್ಮತ್ತು  ಕೊಡದ ಅಧಿಕಾರಿಗೆ  ವರ್ಗಾವಣೆ ಶಿಕ್ಷೆ.  ಅನುಪಮಾ ಶೆಣೈ, ಒರ್ವ‌ ದಕ್ಷ‌ DYSP, ಪರಮೇಶ್ವರ ನಾಯ್ಕ ಅನ್ನುವ ಕ್ಷುಲ್ಲಕ ರಾಜಕಾರಣಿಯ ಕಾಟ‌ ತಾಳಲಾರದೇ ತಾನೇ ರಾಜೀನಾಮೆ ಬಿಸಾಕಿದ್ದು?
ರಾಜಕಾರಣಿಗಳು ಪೋಲೀಸರನ್ನು ಜೀತದಾಳಿನಂತೆ ನೋಡುತ್ತಾರೆ ಅಂದೆನಲ್ಲವೇ?  ಶಾಂತಂ ಪಾಪಂ, ತಪ್ಪು ತಪ್ಪು.  ಪಾಪ ಪೋಲೀಸರು  ತಮ್ಮ ಹಿರೀಕರಿಗೆ  ಜೀತದಾಳಾಗಿ  ದುಡಿಯಬೇಕಾದ ಅನಿವಾರ್ಯತೆಯನ್ನು, `ಆರ್ಡರ್ಲೀ’ ಪದ್ಧತಿ  ತಂದಿಟ್ಟಿದೆ. ಅಧಿಕೃತವಾಗಿ, ರಾಜಾರೋಷವಾಗಿ  ನಡೆಯುವ ಈ ಜೀತ ಪದ್ಧತಿಯನ್ನು ಕೊನೆಗಾಣಿಸಲು ಯಾವ ಪಕ್ಷದ ಸರ್ಕಾರವೂ ಮುಂದಾಗದಿರುವುದನ್ನು ನೋಡಿದರೆ, ನಾವಿರುವುದು ಪ್ರಜಾಪ್ರಭುತ್ವದಲ್ಲಿಯಾ ಅನ್ನುವ ಅನುಮಾನ ಯಾರಿಗಾದರೂ  ಬಾರದಿರದು.  ಮೇಲ್ದರ್ಜೆ ಪೋಲೀಸ್ ಹಾಗೂ ರಾಜಕಾರಣಿಗಳ ನಡುವಿನ  ಒಳ ಒಪ್ಪಂದದ  ಬಲಿಪಶುಗಳು ಯಾವಾಗಲೂ  ಈ ಕೆಳಹಂತದ‌ ಪೋಲೀಸರೇ.  ಸ್ವಂತದ `ಯಾವುದೇ’ ಕೆಲಸಕ್ಕೆ ಪೋಲೀಸರನ್ನು ಬಳಸಲು ಅನುಕೂಲ ಮಾಡಿರುವ  ಈ ಪದ್ಧತಿಯನ್ನು ಸದಾ ಮುಂದುವರೆಸುತ್ತಿದ್ದಾರೆ, ನಮ್ಮ ರಾಜಕಾರಣಿಗಳು. `ಅನುಕೂಲ’ಗಳನ್ನು ಅವರಾದರೂ  ಅನಾಯಾಸವಾಗಿ  ಯಾಕೆ ಬಿಟ್ಟಾರು?!

ನನ್ನ ಪ್ರಕಾರ, ಪೋಲೀಸರ  ಇಂದಿನ ಈ  ಹೀನಾಯ  ಪರಿಸ್ಥಿತಿಗೆ, ಅವರ ನೇಮಕಾತಿಯಲ್ಲಿನ  ವ್ಯಾಪಕ ಭ್ರಷ್ಟಾಚಾರವೇ ಮೂಲ ಕಾರಣ.  ಈಗಂತೂ ಪೋಲೀಸ್ ಇಲಾಖೆಯಲ್ಲಿ ಅರ್ಹತೆ ಆಧಾರದಲ್ಲಿ ಆಯ್ಕೆಯಾಗುವುದು ಕನ್ನಡಿಯ ಗಂಟು. ದುಡ್ಡು ಕೊಟ್ಟೋ, ವಶೀಲಿ ಬಾಜಿ ನಡೆಸಿಯೋ  ಆಯ್ಕೆಯಾದ  ಪೋಲೀಸರು,  ಸದಾ ಅವರ ಮರ್ಜಿಯಲ್ಲಿಯೇ  ಇರುತ್ತಾರೆ.  ದಕ್ಷತೆಯಿಂದ  ಕೆಲಸ ಮಾಡುವ ಪೋಲೀಸರಿಗೆ, ಸರ್ಕಾರದಿಂದ  `ವರ್ಗಾವಣೆ’ ಶಿಕ್ಷೆ ಯಾವಾಗಲೂ ಕಾದಿರುತ್ತದೆ.  ಹಾಗಾಗಿ, ಪರಿಹಾರವಿಲ್ಲದಂತೆ ಶಿಕ್ಷೆ ಅನುಭವಿಸುವ ಬದಲು, ಅಂಥ ರಾಜಕಾರಣಿಯ  ತಾಳಕ್ಕೆ ತಕ್ಕಂತೆ ಕುಣಿಯುವುದೇ ಲೇಸೆನ್ನಿಸಿಬಿಡ್ತದೆ, ಪೋಲೀಸರಿಗೆ. ಇಷ್ಟರ ಜೊತೆ ಮೇಲಧಿಕಾರಿಗಳ ಒತ್ತಡವೂ ಸೇರಿ, ಪೋಲೀಸರು  ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಅವರನ್ನು ಸೌಜನ್ಯರಹಿತರನ್ನಾಗಿಸಿ ಬಿಡುತ್ತದೆ, ಪರಿಸ್ಥಿತಿ.

ಹಿಂದೆ ರಾಜನಿಗೆ ಸೈನ್ಯದ ಬಲವಿದ್ದಂತೆ, ಈಗ ಸರ್ಕಾರಕ್ಕೆ ಪೋಲೀಸ್ ಬಲ.  ಹಾಗಾಗಿ ಪೋಲೀಸರು  ಆಳುವ ಪಕ್ಷದ ಅನಧಿಕೃತ ಕಾರ್ಯಕರ್ತರು ! ಬೀಜೇಪಿ ಸರ್ಕಾರದಡಿ ಕಾರ್ಯ ನಿರ್ವಹಿಸುವ  ದೆಹಲಿ ಪೋಲೀಸರಿಗೆ  ಬರೀ ಆಪ್ ಗುಂಡಾಗಳಷ್ಟೇ ಸಿಗುತ್ತಾರೆ.  ಕರ್ನಾಟಕದಲ್ಲಿನ‌ ಕಾಂಗ್ರೆಸ್ ಪೋಲೀಸರಿಗೆ ಬೀಜೇಪಿ, ಜೇಡೀಎಸ್ ಗೂಂಡಾಗಳಷ್ಟೇ ಕಾಣುತ್ತಾರೆ. ಆಳುವ ಪಕ್ಷದ  ಮರ್ಜಿಯಲ್ಲಿಯೇ ಅವರು ಮಾಡುವ ತನಿಖೆಗಳೂ ಕೂಡ. ತನಿಖೆಯ ಅಂತಿಮ ವರದಿಯನ್ನು ನಾವು ಊಹಿಸಬಹುದು – ಆಳುತ್ತಿರುವ ಪಕ್ಷದ ಆಧಾರದ ಮೇಲೆ!! ಹೀಗೆ ರಾಜಕಾರಣಿಗಳು ಸಕಲ ರೀತಿಯಲ್ಲಿಯೂ ಪೋಲೀಸರ ಮೇಲೆ ಒತ್ತಡವನ್ನು ಹೇರುತ್ತಿರುತ್ತಾರೆ. ಇದು ಮಿತಿ ಮೀರಿದಾಗ DYSP ಗಣಪತಿಯಂಥವರ ಜೀವನ ಆತ್ಮಹತ್ಯೆಯಲ್ಲಿ ಪರ್ಯವಸಾನವಾಗುತ್ತದೆ.

ಎಂಥದೇ ಪರಿಸ್ಥಿತಿಯಲ್ಲಿಯೂ ರಜೆಯಿಲ್ಲದಂತೆ ದುಡಿಯಬೇಕಾದಂಥ ಅನಿವಾರ್ಯತೆಗೆ ತುಳಿಯಲ್ಪಟ್ಟಂಥ ಪೋಲೀಸರಿಗೆ ಇದೇ ಕಾರಣಕ್ಕಾಗಿಯೇ ಹೆಣ್ಣುಗಳು ಸಿಗುವುದು ದುಸ್ತರವಾಗಿಬಿಟ್ಟಿದೆ. ಅವರ ವಸತಿ ಗೃಹಗಳಂತೂ ಸ್ಲಂಗಳಿಗಿಂತ ಕೆಳ ಸ್ಥಿತಿಯಲ್ಲಿವೆ. ಪೋಲೀಸರ ಈ ಹೀನಾಯ ಸ್ಥಿತಿಗಳಿಗೆ ಕಾರಣಗಳು ಹಾಗೂ ಪರಿಹಾರ ಹುಡುಕುವ ಕಾರ್ಯಗಳು ‘ಧರ್ಮವೀರ ಆಯೋಗ’ದಂತೆ ಬಹಳಷ್ಟು ಆಯೋಗಗಳಿಂದ ಆಗಿವೆ.  ಆದರೆ ಪ್ರಯೋಜನವೇನು? ಸರ್ಕಾರವೇ ಕಿವುಡಾಗಿ ಕುಳಿತಾಗ?!! ನ್ಯಾಯವಾಗಿ ಇರಬೇಕಾದಷ್ಟು ಪ್ರಮಾಣದಲ್ಲಿ ಪೋಲೀಸರ ನೇಮಕಾತಿ ಆದಲ್ಲಿ ಅವರ ಈ ಪಾಡು ಸ್ವಲ್ಪವಾದರೂ ಸುಧಾರಿಸೀತು!

ಇಂತಿಪ್ಪ‌ ಪೋಲೀಸರಲ್ಲಿ ನನ್ನದೊಂದು ಮನವಿ. ನಿಮ್ಮ  ಈ ಪರಿಪಾಟಲು ಕಂಡ  ಸಾರ್ವಜನಿಕರು  ನಿಮ್ಮೊಂದಿಗಿದ್ದಾರೆ.  ಖಿನ್ನತೆಯಿಂದ ಆತ್ಮಹತ್ಯೆಯಂತಹ `ಅಂತಿಮ ನಿರ್ಧಾರ’ಗಳನ್ನು ದುಡುಕಿ ತೆಗೆದುಕೊಳ್ಳಬೇಡಿ. ಸಮಾಜ ನಿಮ್ಮೊಂದಿಗಿದೆಯೆನ್ನುವ ಧನಾತ್ಮಕ ಆಲೋಚನೆಯಿದ್ದಾಗ, ಖಿನ್ನತೆ ನಿಮ್ಮ ಬಳಿಯೂ  ಸುಳಿಯುವುದಿಲ್ಲ. ಇನ್ನು ಮುಂದಾದರೂ ಪೋಲೀಸರ ಪರಿಸ್ಥಿತಿ  ಸುಧಾರಿಸೀತು ಅಂತ ಆಶಿಸುತ್ತಾ, ಎಲ್ಲ ಪೋಲೀಸರಿಗೆ ಇದೋ ನನ್ನ ಸಲಾಂ.