ಒತ್ತುವರಿ (ಒತ್ತು-worry)

ಇತ್ತೀಚೆಗೆ ರಾಜಾಕಾಲುವೆ  ಒತ್ತುವರಿ ತೆರವಿನ ಸುದ್ಧಿ ಓದಿ  ಮೊದಲಿಗೆ ಬಹಳ ಸಂತೋಷಪಟ್ಟೆ- ಅಕ್ರಮ ಒತ್ತುವರಿದಾರರಿಗೆ ತಕ್ಕ ಶಾಸ್ತಿ ಆಯ್ತಲ್ಲ ಕೊನೆಗೂ ಅಂತ.  ಆದರೆ, ಈ ಒತ್ತುವರಿ ತೆರವಿನ ಬಗ್ಗೆ ಸಂಪೂರ್ಣ ಚಿತ್ರಣ ದೊರೆಯುತ್ತಿದ್ದಂತೆ, ನನ್ನ ಸಂತೋಷ ದುಃಖದೆಡೆಗೆ ತೆರಳಿತು.  ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿಯಾಗ್ಬೇಕೇ? ಪ್ರಭಾವೀ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಅವರೊಂದಿಗೆ  ಶಾಮೀಲಾದ ಸರ್ಕಾರೀ ಅಧಿಕಾರಿಗಳ ಧನದಾಹಕ್ಕೆ, ಈ ಮುಗ್ಧ ಜನರು ಬಲಿಯಾಗುವುದನ್ನು ಯಾರು ತಾನೇ ಸಮರ್ಥಿಸಿಯಾರು?
ಬೆಂಗಳೂರು ಮಹಾನಗರ ಪಾಲಿಕೆಯಿಂದ ಸಕ್ರಮವಾಗಿ ಖಾತೆಗಳನ್ನು ಹೊಂದಿದ್ದು, ಪ್ರತಿ ವರ್ಷ ತೆರಿಗೆ ಪಾವತಿಸಿದ್ದ, ಈ ಜನರ ಬದುಕನ್ನು ಮೂರಾಬಟ್ಟೆ ಮಾಡುವ ಬದಲು, ಇವರನ್ನು ವಂಚಿಸಿದ ಅಧಿಕಾರಿಗಳು / ಬಿಲ್ಡರ್‍ಗಳನ್ನು ಶಿಕ್ಷಿಸಬೇಕಾದ್ದು ನ್ಯಾಯ. ಆದರೆ, ದುರದೃಷ್ಟವಶಾತ್ ಭಾರತ ದೇಶದಲ್ಲಿ `ನ್ಯಾಯ’ ಬಿಕರಿಗಿದೆ ! ಹಣ, ಅಧಿಕಾರವಿದ್ದಾತ  ನ್ಯಾಯವನ್ನು ಕೊಳ್ಳಬಲ್ಲ. ಅದಕ್ಕೇ ಹೇಳಿದ್ದು – ನ್ಯಾಯ ಜೇಡರಬಲೆ  ಇದ್ದಂತೆ- ಅದರಲ್ಲಿ ಸಣ್ಣ ಸಣ್ಣ ಕೀಟಗಳು ಬಂಧಿಯಾದಾವೇ ಹೊರತು ದೊಡ್ಡ ಜೀವಿಗಳಲ್ಲ! ಇನ್ನು ನಮ್ಮ ನ್ಯಾಯ ವ್ಯವಸ್ಥೆಯ ಬಗ್ಗೆ ಮಾತನಾಡದಿರುವುದೇ ಲೇಸು.  ಜನಗಳ ಮೇಲೆ ಕಾರು ಹಾಯಿಸಿದ ಸಲ್ಮಾನ್‍ಖಾನ್ ಪ್ರಕರಣ ತೆಗೆದುಕೊಳ್ಳಿ – 15 ವರ್ಷ ಎಳೆದಾಟದ ನಂತರ, ಹೈಕೋರ್ಟ್ ಆತನನ್ನು ನಿರ್ದೋಷಿ ಅನ್ನುತ್ತದೆ! ನ್ಯಾಯಾಲಯದಲ್ಲಿ ಪ್ರಕರಣಗಳು ಕೊಳೆ ಬೀಳುವುದರಿಂದ ಬಡ-ಜನಸಾಮಾನ್ಯರಿಗೆ ನ್ಯಾಯವೆಂಬುದು ಗಗನ ಕುಸುಮ.  ಈ ಭಂಡ ಧೈರ್ಯವಿರುವುದರಿಂದಲೇ ಈ ಅಧಿಕಾರಿಗಳು / ಭೂ ಮಾಫಿಯಾ  ಒತ್ತುವರಿ ಮಾಡಿಯೇ `ವಂಚನೆ’ಯನ್ನು ಬೇರೋರ್ವರ ತಲೆಗೆ ಕಟ್ಟಿ, ಹಣ ಮಾಡಿಕೊಂಡು  ನೆಮ್ಮದಿಯಿಂದ ಇರುವುದು.  ಈ ಮುಗ್ಧ  ಜನರಿಗೆ ಈಗ ಹಣವೂ ಇಲ್ಲ – ತಲೆಯ ಮೇಲೆ ಸೂರೂ ಇಲ್ಲ ! ಇದು ಇಂದಿನ  ದಾರುಣ ಪರಿಸ್ಥಿತಿ !
ಆ ಜಾಗದಲ್ಲಿ ರಾಜಾ ಕಾಲುವೆ ಇತ್ತೆಂಬ `ಮಾಹಿತಿ’ ಇಂದಿನದಲ್ಲ‌. ಒತ್ತುವರಿಯಾಗುತ್ತಿದ್ದಾಗಲೂ ಇದ್ದ ಮಾಹಿತಿ.  ಆಗ ಆ ಮಾಹಿತಿಯನ್ನು ಅನುಕೂಲಕ್ಕಾಗಿ  ಬದಿಸರಿಸಿ, ಜನಗಳಿಗೆ ಖಾತಾ ಕೊಟ್ಟು, ತನ್ಮೂಲಕ ನೀರು, ವಿದ್ಯುತ್ ಮುಂತಾದ  ಸಕಲ ಸವಲತ್ತುಗಳನ್ನು ಒದಗಿಸಿ, ತೆರಿಗೆ ಸಂಗ್ರಹಣೆ ಮಾಡುತ್ತಿದ್ದು, ಈಗ ಏಕಾಏಕೀ ಇದು ಅಕ್ರಮ ಮನೆ ಎನ್ನುವುದು ಎಷ್ಟು ಸರಿ?  ಪರಿಸ್ಥಿತಿ  ಇಂತಿದ್ದಾಗ, ಒತ್ತುವರಿ ತೆರವು  ಹೇಗೆ ಕಾನೂನುಬದ್ಧವಾಗುತ್ತದೆ? ಇದು, ಮನೆಯಲ್ಲಿ ಕಳ್ಳತನವಾದಾಗ, ಕಳ್ಳನನ್ನು ಶಿಕ್ಷಿಸುವುದನ್ನು ಬಿಟ್ಟು, ಮನೆಯವನನ್ನೇ  ಶಿಕ್ಷಿಸಿದಂತೆ ಇದೆ ! ಇದು ತಪ್ಪು ಅಂತಲೂ  ನಮ್ಮ ಸರ್ಕಾರಕ್ಕೆ  ಅನ್ನಿಸುತ್ತಿಲ್ಲವಲ್ಲಾ ಅದೇ ನನ್ನ ವ್ಯಥೆ.  ಸರ್ಕಾರ ಅಷ್ಟು ಜಡ್ಡುಗಟ್ಟಿ ಹೋಗಿದೆಯಾ ಅಥವಾ `The king can do no wrong’ ಅನ್ನುವ ಮನೋಭಾವವೋ? ಇದರಿಂದ ಬೆಂಗಳೂರಿನ ಎಲ್ಲ ನಿವಾಸಿಗಳಿಗೂ ಈಗ ನಡುಕ ಹುಟ್ಟಿದೆ – ಯಾವಾಗ  ಯಾವ ಅಧಿಕಾರಿ ಯಾವುದೋ ಅಂದಕಾಲತ್ತಿಲ್ ನಕ್ಷೆ ಹಿಡಿದುಕೊಂಡು  ಬಂದು “ಇಲ್ಲಿ ರಾಜಾ ಕಾಲುವೆ ಇತ್ತು. ಆದ್ದರಿಂದ, ನಿಮ್ಮ ಮನೆ ಅಕ್ರಮ. ಈಗಿಂದೀಗ್ಲೇ ಕೆಡುವುತ್ತೇವೆ” ಅಂತ ಬರ್ತಾನೋ ಅಂತ!
ಪೇಪರ್‍ಗಳಲ್ಲಿ ಬಂದ ವರದಿಗಳ ಪ್ರಕಾರ, ಮನೆ ಕೆಡವಲು ಬಂದ ಅಧಿಕಾರಿ ವರ್ಗದವರು, ಅಲ್ಲಿಯ ನಿವಾಸಿಗಳು ತಮಗೆ ಈ ಬಗ್ಗೆ ನೋಟೀಸ್  ನೀಡಿಲ್ಲವೆಂದಾಗ, ಯಾವುದೋ ಕಾಯ್ದೆಗಳನ್ನುದ್ಧರಿಸಿ, ರಾಜಾಕಾಲುವೆ  ಒತ್ತುವರಿ ತೆರವಿಗೆ  ನೋಟೀಸ್ ಬೇಕಿಲ್ಲ ಎಂದಿದ್ದಾರಂತೆ ! ಹೀಗೆ ಅಮಾನವೀಯವಾಗಿ ಯೋಚಿಸುವವರನ್ನು ನಾವು ಮನುಷ್ಯರು  ಎನ್ನಬೇಕೇ? ಯಾರಾದರೂ ಅವರ ಮನೆಯನ್ನು ಏಕಾಏಕೀ ಕೆಡವಿದ್ದಲ್ಲಿ ಮಾತ್ರ ಅವರಿಗೆ ಪರಿಸ್ಥಿತಿಯ ಅರಿವುಂಟಾಗುತ್ತಿತ್ತು ! ಅವರಿಗೆ  ಅರ್ಥೈಸಲು  ನಾವೂ ಅವರ ದಾರಿಗೇ ಇಳೀಬೇಕೇನೋ!
ಈಗ ಸರ್ಕಾರೀ ಯಂತ್ರದಿಂದ  ತಪ್ಪಾಗಿದೆ – ರಾಜಾಕಾಲುವೆಯ ಒತ್ತುವರಿ ಜಾಗಗಳಲ್ಲಿ ಖಾತಾ ಕೊಟ್ಟು  ಸಕ್ರಮಗೊಳಿಸಿದ್ದು. ಸಂತ್ರಸ್ತರಿಗೆ  ತೊಂದರೆಯಾಗದಂತೆ ಈ ತಪ್ಪನ್ನು ತಿದ್ದಲು ಸಾಧ್ಯವಿದೆ.  ಸರ್ಕಾರ ಈ ನಿಟ್ಟಿನಲ್ಲಿ  ಯೋಚಿಸಬೇಕೇ ಹೊರತು, ತನ್ನ ತಪ್ಪಿಗೆ  ತನ್ನ ಪ್ರಜೆಗಳೇ ಅನುಭವಿಸುವಂತಾಗಬಾರದಲ್ವೇ! ಒತ್ತುವರಿ  ಬಯಲಾದಾಗ, ಈ ನಿವಾಸಿಗಳಿಗೆ ನೋಟೀಸ್ ಕೊಟ್ಟು ಅವರಿಗೆ ಬೇರೆ ಕಡೆ  ಬದಲೀ ವ್ಯವಸ್ಥೆ ಮಾಡಿ, `ಪರಿಹಾರ’ ನೀಡಬೇಕಾದ್ದು  ಸರ್ಕಾರದ ಕರ್ತವ್ಯ.  ಇದು, ಸರ್ಕಾರದ ತಪ್ಪಿನಿಂದಾದ  ಸಕ್ರಮ ಒತ್ತುವರಿ ಬಗ್ಗೆ ಮಾತ್ರ.  ಅಕ್ರಮವಾಗಿ ಒತ್ತುವರಿ ಆದ ಕಡೆ ಅಲ್ಲ.  ಇದರ ನಂತರ, ಈ ಅಕ್ರಮ ವ್ಯವಹಾರಕ್ಕೆ ಕಾರಣರಾದ  ಎಲ್ಲ ಅಧಿಕಾರಿ ವರ್ಗ ಹಾಗೂ ಭೂ ಮಾಫಿಯಾದವರಿಂದ  ದಂಡ ಪೀಕಿಸಿ, ಅವರನ್ನು ಶಿಕ್ಷಿಸಬೇಕು.  ತಾನು `ಪರಿಹಾರ’ವಾಗಿ ಕೊಟ್ಟ ಹಣವನ್ನು, ಅವರು ಅಕ್ರಮವಾಗಿ  ಸಂಪಾದಿಸಿದ್ದ ಹಣವನ್ನು ಮುಟ್ಟುಗೋಲು  ಹಾಕಿಕೊಳ್ಳುವ ಮೂಲಕ ನಷ್ಟ ಭರ್ತಿ ಮಾಡಿಕೊಳ್ಳಬೇಕು.  ಆಗಲಾದರೂ  ಈ ಅಧಿಕಾರಿಗಳಿಗೆ ಸ್ವಲ್ಪ ಭಯ ಹುಟ್ಟಿ,  ಇಂತಹ  ‘ಒತ್ತು-worry’ಗಳಿಗೆ ಕಡಿವಾಣ ಬಿದ್ದೀತು!

 

Advertisements

ಆ(ಅ)ರಕ್ಷಕರು

 

ಕಳೆದ ವಾರ ಯಮನೂರಿನಲ್ಲಿ ನಡೆದ ಪೋಲೀಸರ  ಅಟ್ಟಹಾಸವನ್ನು ಟೀ.ವಿ. ವಾಹಿನಿಗಳಲ್ಲಿ ಕಂಡು ಛಳಿಯಲ್ಲೂ ಭಯದಿಂದ ಮೈ ಬೆವತಿತು.  `ಭಯೋತ್ಪಾದನೆ’ಯನ್ನು ಕಣ್ಣಾರೆ ಕಂಡಂತಾಯ್ತು.  ಇದನ್ನು ಕಂಡು ನಮಗೇ ಭಯ, ಅಸಹಾಯಕತೆ ಕಾಡಿದರೆ, ಅದನ್ನು ಅನುಭವಿಸಿದವರ  ಪಾಡೇನು? ಹಿಟ್ಲ‌ರ್ ನಾಜೀಗಳ ಮೇಲೆ ನಡೆಸಿದ  ಪೈಶಾಚಿಕ ಕೃತ್ಯದ ಸಮೀಪಕ್ಕೆ  ಬರುವಂಥದು ಈ ಘೋರ ಕೃತ್ಯ – ಯಮನೂರಿನ  ಪೋಲೀಸರದು.  ಇಂಥ ಪ್ರತ್ಯಕ್ಷ ಸಾಕ್ಷಿಗಳಿದ್ದಾಗ್ಯೂ, ಈ ಪೋಲೀಸರನ್ನು ಸಮರ್ಥಿಸಿಕೊಳ್ಳುವವರನ್ನು ನೋಡಿದರೆ, ಮೈ ಕೈ ಪರಚಿಕೊಳ್ಳುವಂತಾಗುತ್ತದೆ.  ಈ ದೃಶ್ಯಾವಳಿಗಳನ್ನು  ನೋಡಿದ ಯಾರಿಗಾದರೂ ಬರುವ ತೀರ್ಮಾನವೆಂದರೆ – ಈ ದುರುಳರು ಪೋಲೀಸ್ ವೃತ್ತಿಯಲ್ಲಿರಲು ಸಂಪೂರ್ಣ  ಅನರ್ಹರು.  ಅವರನ್ನು ಸರ್ಕಾರ ಮುಲಾಜಿಲ್ಲದೇ ಅಮಾನತ್ತು ಮಾಡದಿದ್ದಲ್ಲಿ, ಸರ್ಕಾರ ಇದ್ದರೂ ಸತ್ತ ಲೆಕ್ಕ.  ಹಿಂದೊಮ್ಮೆ ಪೋಲೀಸರ ಪರವಾಗಿ ಒಂದಿಷ್ಟು ಗೀಚಿದ್ದ ನನಗೆ ಈ ಘಟನೆ ಮುಜುಗರವನ್ನುಂಟು ಮಾಡಿದ್ದು ಸುಳ್ಳಲ್ಲ.  Of course, ಯಮನೂರಿನಲ್ಲಿ ನಡೆದ ಈ ಪೋಲೀಸ್ ದೌರ್ಜನ್ಯದ ಮೇಲೆ ಬೇರೆ ಪೋಲೀಸರನ್ನು ಅಳೆಯಲಾಗದು.  ಆದರೂ ಈ ಘಟನೆ ಯಾವುದೇ  ಸರಿಯಾದ ಪೋಲೀಸಿಗೂ ನಾಚಿಕೆ ತರಿಸಿರಲಿಕ್ಕೂ ಸಾಕು.

ಯಮನೂರಿನಲ್ಲಿ ನಡೆದ ಈ ಪೋಲೀಸ್ ಆಟಾಟೋಪ, ಸಂತ್ರಸ್ತರ  ಪಾಲಿಗೆ ಸಾಕ್ಷಾತ್  `ಯಮನೂರು’ ಆಯ್ತು. ಅವರ  ಈ ರಾಕ್ಷಸೀ ವರ್ತನೆ, ಪ್ರಚೋದಿತವಾದ ಕೃತ್ಯವೆಂದೆಣಿಸಿದರೂ, ಆ ಪ್ರಚೋದನೆಗೆ  ಕಾರಣವಾದವರನ್ನು ಶಿಕ್ಷಿಸಿ.  ಅವರ ಮನೆಯ  ವೃದ್ಧ /ಮಹಿಳೆ/ ಅಸಹಾಯಕರನ್ನಲ್ಲ ! ಯಾವುದೇ  ಸೈನಿಕರೂ ತಮ್ಮ ಶತ್ರುಪಾಳೆಯದ ಮೇಲೆ ಹೀಗೆ ವರ್ತಿಸಲಾರರು.  ಈ ಥರದ `ಭಯೋತ್ಪಾದನೆ’ಯ  ವಿರುದ್ಧ ಸರ್ಕಾರ ಕ್ರಮಕೈಗೊಳ್ಳದಿದ್ದಲ್ಲಿ, ಜನಾಂದೋಲನ ರೂಪಿತವಾಗಬೇಕಾದ ಜರೂರತ್ತಿದೆ.  ಸುಮ್ಮನೆ ಕುಳಿತರೆ, ಇಂದು ಯಮನೂರಿನಲ್ಲಿ ಆದದ್ದು ನಾಳೆ ನಮಗಾಗದೆಂಬ ಗ್ಯಾರಂಟಿ ಏನಿದೆ! ನಮ್ಮ ನಿಷ್ಕ್ರಿಯತೆ, ಇಂಥ ಘನಘೋರ ಕೃತ್ಯಗಳಿಗೆ ಮತ್ತಷ್ಟು ಇಂಬು ಕೊಡುತ್ತದಷ್ಟೇ.

ನೂರೆಂಟು ಟೀ.ವಿ. ವಾಹಿನಿಗಳ, ಮೊಬೈಲ್ ಕ್ಯಾಮರಾಗಳ ಈ ಕಾಲದಲ್ಲಿ, ತಮ್ಮೀ ನಾಚಿಕೆಗೆಟ್ಟ ಕಾರ್ಯವನ್ನು ಯಾರಾದರೂ ಚಿತ್ರೀಕರಿಸಿಯಾರು ಎನ್ನುವ ಸಣ್ಣ ಭಯವೂ ಆ ಪೋಲಿಸರಲ್ಲಿ  ಇರದಿದ್ದುದನ್ನು ನೋಡಿದರೆ, ಇದು ಸರ್ಕಾರೀ ಪ್ರಾಯೋಜಿತವೇ ಅನ್ನುವ ಅನುಮಾನ ಬಾರದಿರದು. ಹಾಗಿರಲಾರದು ಅಥವಾ ಹಾಗಂದುಕೊಂಡು ಸಮಾಧಾನಪಟ್ಟುಕೊಳ್ಳೋಣ.

ಒಟ್ಟಿನಲ್ಲಿ ಪ್ರತ್ಯಕ್ಷ ಸಾಕ್ಷಿಯಿರುವ ಈ  ಘಟನೆಯಲ್ಲಿ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಪ್ರಜಾಪ್ರಭುತ್ವಕ್ಕಾಗುವ ಘೋರ ಅಪಮಾನವಿದಾಗುತ್ತದೆ.

 

ಪೋಲೀಸ್ ಪಾಡು

ಸಾಮಾನ್ಯವಾಗಿ ಪೋಲೀಸ್  ಅಂದ ಕೂಡಲೇ  ನಮ್ಮ ಮನಸ್ಸಿಗೆ  ಮೂಡುವುದು ಅವರ ದೌರ್ಜನ್ಯ ಹಾಗೂ ದರ್ಪದ ಚಿತ್ರಣವೇ.  ಆದರೆ, ನಿಜ ಜೀವನದಲ್ಲಿ, ಕೆಳಹಂತದ ಪೋಲೀಸರ  ಪಾಡು, ನಾಯಿಪಾಡಾಗಿರುವುದು ಆಶ್ಚರ್ಯವಾದರೂ ಸತ್ಯ.  ಇತ್ತೀಚಿನ  ಪೋಲೀಸರ ಎರಡು ಆತ್ಮಹತ್ಯೆ  ಹಾಗೂ ಒಂದು ರಾಜೀನಾಮೆಯ ಕಥನ ಅವರ ಇಂದಿನ ಸ್ಥಿತಿಗತಿಗೆ  ಹಿಡಿದ ಕನ್ನಡಿ.

ಭಾರತದಲ್ಲಿ `ಭ್ರಷ್ಟಾಚಾರ’ದ  ಸಮನಾರ್ಥಕ ಪದವೇ `ಕಂದಾಯ ಇಲಾಖೆ’.  ಇದಕ್ಕೆ  ಸರಿಸಾಟಿಯಾಗಿ  ಪೈಪೋಟಿ ನೀಡುತ್ತಿದೆ, ಪೋಲೀಸ್ ಇಲಾಖೆ.  ಆದರೆ, ಇದಕ್ಕೆ  ಮೂಲ ಕಾರಣ, ಕನಿಷ್ಠತಮವಾದ ಅವರ ಸಂಬಳ. ಪ್ರಾಮಾಣಿಕವಾಗಿ ಸಂಸಾರದ ಖರ್ಚುಗಳನ್ನು ಸರಿದೂಗಿಸಲಾಗದೇ, `ಯಾರಿಗೆ ಸಾಲುತ್ತೆ ಸಂಬಳ’ ಅಂತ‌ ಹಾಡುತ್ತ‌, ವಾಮಮಾರ್ಗಕ್ಕೆ  ಅನಿವಾರ್ಯತೆಯಿಂದ ಇಳಿಯುತ್ತಾರೆ.  ನಂತರ, `ನೀರಿಗಿಳಿದವನಿಗೆ  ಛಳಿಯೇನು ಮಳೆಯೇನು’ ಅನ್ನುತ್ತ ಭ್ರಷ್ಟಾಚಾರದಲ್ಲೇ ಮುಳುಗಿಬಿಡುತ್ತಾರೆ.  ಅಲ್ಲಾ, ಪೋಲೀಸರು ಮಹಾಭ್ರಷ್ಟರು  ಅಂತ ಘಂಟಾಘೋಷವಾಗಿ ಹೇಳುತ್ತೀವಲ್ಲಾ, ನಾವುಗಳು ಸಾಚಾನೇ ಸ್ವಾಮೀ? ಹೆಲ್ಮೆಟ್ ಇಲ್ಲದೇ ಸ್ಟೈಲಾಗಿ ಹೋಗ್ತೀವಲ್ಲಾ, ಅದು ತಪ್ಪಲ್ವಾ? One way ನಲ್ಲಿ ರಾಜಾರೋಷವಾಗಿ  ನುಗ್ತೀವಲ್ಲಾ, ಅದು ಸರೀನಾ? ದುಡ್ಡು ಉಳಿಸೋಕ್ಕೆ ಒಂದೇ ಆಟೋನಲ್ಲಿ 5-6 ಜನ ತುಂಬ್ಕೊಂಡು ಹೋಗ್ತೀವಲ್ಲಾ, ಅದು ತಪ್ಪಲ್ವಾ?  ಪೋಲೀಸರಲ್ಲಿನ ಭ್ರಷ್ಟಾಚಾರದ ಬಯಕೆಗೆ ನೀರೆರೆದು ಪೋಷಿಸಿ (ನಮ್ಮ ತಪ್ಪನ್ನು ಮರೆಮಾಚಿ) ಅವರನ್ನು  ಕಳ್ಳರೆನ್ನುವುದು  ಸರಿಯಾ? ಕ್ಷಮಿಸಿ, ನಾನಿಲ್ಲಿ ಪೋಲೀಸರ ಭ್ರಷ್ಟಾಚಾರವನ್ನು ಸಮರ್ಥಿಸುತ್ತಿಲ್ಲ.  ನಾವೂ ಅದರಲ್ಲಿ ಸಮಭಾಗೀದಾರರು ಅನ್ನುತ್ತಿದ್ದೀನಷ್ಟೇ.

ಪೋಲೀಸರ ನಾಯಿಪಾಡು, ಸಾರ್ವಜನಿಕರಿಗೆ, ಹಿಂದೆಂದಿಗಿಂತಲೂ ಇಂದು ಜಾಸ್ತಿ ಗೋಚರವಾಗುತ್ತಿದೆ. ಯಾ ಅವರ ಅರಿವಿಗೆ ಬರುತ್ತಿದೆ.  ಸತ್ಯವನ್ನು ಸಾರ್ವಜನಿಕರೆದುರು ತಂದ ಕೀರ್ತಿ ಕೆಲ ಪತ್ರಿಕಾ ಮಾಧ್ಯಮಗಳಿಗೆ ಸಲ್ಲುತ್ತದೆ. ಹಾಗಾಗಿಯೇ, ಇತ್ತೀಚೆಗೆ ಸುದ್ಧಿಯಾದ `ಪೋಲೀಸ್ ಪ್ರತಿಭಟನೆ’ ಗೆ  ಸಾಕಷ್ಟು ಸಾರ್ವಜನಿಕ ಬೆಂಬಲ ದೊರಕಿತು.  ಸರ್ಕಾರದ ಆಶ್ವಾಸನೆ ಹಾಗೂ ಬೆದರಿಕೆಗಳಿಂದ ಪ್ರತಿಭಟನೆಯನ್ನು ಅವರು ಹಿಂಪಡೆದರೂ, ಜನರ ದೃಷ್ಟಿಯಲ್ಲಿ ಹೀರೋಗಳಾದವರು ಪೋಲೀಸರೇ.

ಪೋಲೀಸರ ಇಂದಿನ  ನಾಯಿಪಾಡಿನ ಪರಿಸ್ಥಿತಿಗೆ  ಬಹಳ ಆಯಾಮಗಳಿವೆ.  ಅವುಗಳಲ್ಲಿ  ಪ್ರಮುಖವಾದದ್ದು ಪೋಲೀಸರ ಲಭ್ಯತೆ.  ನ್ಯಾಯವಾಗಿ  ಇರಬೇಕಾದ  ಪರಿಮಾಣಕ್ಕಿಂತ ಬಹಳ ಕಡಿಮೆ ಪ್ರಮಾಣದಲ್ಲಿ  ಪೋಲೀಸ್ ಸಂಖ್ಯೆಯಿದ್ದು, ಇರುವವರೇ ಅಷ್ಟೂ ಕೆಲಸದ ಭಾರವನ್ನು ಹೊರಬೇಕಾದ  ಪರಿಸ್ಥಿತಿ ಇದೆ.  ಮೊದಲೇ ಒತ್ತಡದಲ್ಲಿ  ನಿರ್ವಹಿಸುವಂಥ ಕಾರ್ಯ, ಜೊತೆಗೆ ಕಾರ್ಯಬಾಹುಳ್ಯ ! ದಿನದ  12 ರಿಂದ 14 ಘಂಟೆ  ಕಾರ್ಯನಿರ್ವಹಣೆ ಪೋಲೀಸರ ಸಾಮಾನ್ಯ ದಿನಚರಿಯಾದರೆ, ಕೆಲವೊಮ್ಮೆ  ಪರಿಸ್ಥಿತಿಯ ದೆಸೆಯಿಂದಾಗಿ  ಅವರು ಸತತವಾಗಿ  2-3 ದಿನ ಕಾರ್ಯನಿರ್ವಹಿಸಬೇಕಾಗುತ್ತದೆ ! ಅವರೂ ಮನುಷ್ಯರಲ್ಲವೇ? ಮನುಷ್ಯ ಇಷ್ಟೊಂದು  ಒತ್ತಡದಲ್ಲಿದ್ದಾಗ, ಅವರಿಂದ  ಯಾವಾಗಲೂ ಸೌಜನ್ಯ ನಿರೀಕ್ಷಿಸುವುದು ತಪ್ಪಾಗುತ್ತದೆ.  ತುಂಬಾ ಒತ್ತಡದಲ್ಲಿ ಕುಕ್ಕರ್ ಕೂಡಾ ಸಿಡಿಯುತ್ತದೆ – ನೆನಪಿರಲಿ.  ಅಪರೂಪಕ್ಕಿರಬೇಕಾದ ಬಹುವಾದ ಒತ್ತಡ, ಪ್ರತಿದಿನವೂ  ಇರುವುದರಿಂದಲೇ ಪೋಲೀಸರು  ಅಷ್ಟು ಕಟುವಾಗಿ ವರ್ತಿಸುತ್ತಾರೆಂದು ನಿರ್ಣಯಿಸಲು  ನಾವು ಮನಶ್ಶಾಸ್ತ್ರಜ್ಞರೇ ಆಗಬೇಕೆಂದಿಲ್ಲ‌.

ಇನ್ನೊಂದು ಆಯಾಮ, ನಾನು  ಮೊದಲೇ  ಹೇಳಿದಂತೆ, ಪೋಲೀಸರ  ಕಡಿಮೆ ಸಂಬಳ.  ಅವರು  ಮಾಡುವ ಕೆಲಸದ‌ 10%ಗೂ ಕಡಿಮೆ  ಕೆಲಸ ಮಾಡುವ ಸರ್ಕಾರೀ ನೌಕರರಿಗೆ  ಅವರ 2-3 ಪಟ್ಟು ಜಾಸ್ತಿ ಸಂಬಳವಿದೆ. ಸಕಾರಣವಿದ್ದರೂ ಪೋಲೀಸರು ಪ್ರತಿಭಟನೆ  ನಡೆಸಕೂಡದು ಅನ್ನುವ ಸರ್ಕಾರ, ಅವರ  ಸ್ಥಿತಿಗತಿಗಳು ಅವರು ಮಾಡುವ  ಕೆಲಸಕ್ಕೆ ತಕ್ಕುದಾಗಿರಬೇಕೆಂದು ಯೋಚಿಸದಿರುವ ಹಿಂದೆ ಯಾವ ಹುನ್ನಾರವಿದೆಯೋ ತಿಳಿಯದು.   ಯಾವುದೇ ಪಕ್ಷದ ಸರ್ಕಾರವಿದ್ದರೂ  ಪೋಲೀಸರ ಗತಿ ಮಾತ್ರ  ಅಧೋಗತಿಯೇ ಸೈ.  ರಾಜಕಾರಣಿಗಳಿಗೆ ಜೀತದಾಳಿನಂತಹ ಪೋಲೀಸಪ್ಪ ಬೇಕು. ತಮ್ಮ ತಾಳಕ್ಕೆ  ತಕ್ಕಂತೆ ಕುಣಿಯಬಲ್ಲಂಥವರೇ ಅವರಿಗೆ ಬೇಕು. ಅಂಥವರನ್ನೇ ತಮ್ಮ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ.  ತಮ್ಮ ಕ್ಷೇತ್ರದಲ್ಲಿ `ಯಾವುದೇ ರೀತಿ’ಯಲ್ಲಿಯಾದರೂ ತಮ್ಮ ಮಾತೇ ನಡೆಯಬೇಕೆಂಬ  ಜಹಗೀರ್ದಾರೀ ನಡವಳಿಕೆ.  ತಮ್ಮ ಮಾತಿಗೆ  ಕವಡೆ ಕಿಮ್ಮತ್ತು  ಕೊಡದ ಅಧಿಕಾರಿಗೆ  ವರ್ಗಾವಣೆ ಶಿಕ್ಷೆ.  ಅನುಪಮಾ ಶೆಣೈ, ಒರ್ವ‌ ದಕ್ಷ‌ DYSP, ಪರಮೇಶ್ವರ ನಾಯ್ಕ ಅನ್ನುವ ಕ್ಷುಲ್ಲಕ ರಾಜಕಾರಣಿಯ ಕಾಟ‌ ತಾಳಲಾರದೇ ತಾನೇ ರಾಜೀನಾಮೆ ಬಿಸಾಕಿದ್ದು?
ರಾಜಕಾರಣಿಗಳು ಪೋಲೀಸರನ್ನು ಜೀತದಾಳಿನಂತೆ ನೋಡುತ್ತಾರೆ ಅಂದೆನಲ್ಲವೇ?  ಶಾಂತಂ ಪಾಪಂ, ತಪ್ಪು ತಪ್ಪು.  ಪಾಪ ಪೋಲೀಸರು  ತಮ್ಮ ಹಿರೀಕರಿಗೆ  ಜೀತದಾಳಾಗಿ  ದುಡಿಯಬೇಕಾದ ಅನಿವಾರ್ಯತೆಯನ್ನು, `ಆರ್ಡರ್ಲೀ’ ಪದ್ಧತಿ  ತಂದಿಟ್ಟಿದೆ. ಅಧಿಕೃತವಾಗಿ, ರಾಜಾರೋಷವಾಗಿ  ನಡೆಯುವ ಈ ಜೀತ ಪದ್ಧತಿಯನ್ನು ಕೊನೆಗಾಣಿಸಲು ಯಾವ ಪಕ್ಷದ ಸರ್ಕಾರವೂ ಮುಂದಾಗದಿರುವುದನ್ನು ನೋಡಿದರೆ, ನಾವಿರುವುದು ಪ್ರಜಾಪ್ರಭುತ್ವದಲ್ಲಿಯಾ ಅನ್ನುವ ಅನುಮಾನ ಯಾರಿಗಾದರೂ  ಬಾರದಿರದು.  ಮೇಲ್ದರ್ಜೆ ಪೋಲೀಸ್ ಹಾಗೂ ರಾಜಕಾರಣಿಗಳ ನಡುವಿನ  ಒಳ ಒಪ್ಪಂದದ  ಬಲಿಪಶುಗಳು ಯಾವಾಗಲೂ  ಈ ಕೆಳಹಂತದ‌ ಪೋಲೀಸರೇ.  ಸ್ವಂತದ `ಯಾವುದೇ’ ಕೆಲಸಕ್ಕೆ ಪೋಲೀಸರನ್ನು ಬಳಸಲು ಅನುಕೂಲ ಮಾಡಿರುವ  ಈ ಪದ್ಧತಿಯನ್ನು ಸದಾ ಮುಂದುವರೆಸುತ್ತಿದ್ದಾರೆ, ನಮ್ಮ ರಾಜಕಾರಣಿಗಳು. `ಅನುಕೂಲ’ಗಳನ್ನು ಅವರಾದರೂ  ಅನಾಯಾಸವಾಗಿ  ಯಾಕೆ ಬಿಟ್ಟಾರು?!

ನನ್ನ ಪ್ರಕಾರ, ಪೋಲೀಸರ  ಇಂದಿನ ಈ  ಹೀನಾಯ  ಪರಿಸ್ಥಿತಿಗೆ, ಅವರ ನೇಮಕಾತಿಯಲ್ಲಿನ  ವ್ಯಾಪಕ ಭ್ರಷ್ಟಾಚಾರವೇ ಮೂಲ ಕಾರಣ.  ಈಗಂತೂ ಪೋಲೀಸ್ ಇಲಾಖೆಯಲ್ಲಿ ಅರ್ಹತೆ ಆಧಾರದಲ್ಲಿ ಆಯ್ಕೆಯಾಗುವುದು ಕನ್ನಡಿಯ ಗಂಟು. ದುಡ್ಡು ಕೊಟ್ಟೋ, ವಶೀಲಿ ಬಾಜಿ ನಡೆಸಿಯೋ  ಆಯ್ಕೆಯಾದ  ಪೋಲೀಸರು,  ಸದಾ ಅವರ ಮರ್ಜಿಯಲ್ಲಿಯೇ  ಇರುತ್ತಾರೆ.  ದಕ್ಷತೆಯಿಂದ  ಕೆಲಸ ಮಾಡುವ ಪೋಲೀಸರಿಗೆ, ಸರ್ಕಾರದಿಂದ  `ವರ್ಗಾವಣೆ’ ಶಿಕ್ಷೆ ಯಾವಾಗಲೂ ಕಾದಿರುತ್ತದೆ.  ಹಾಗಾಗಿ, ಪರಿಹಾರವಿಲ್ಲದಂತೆ ಶಿಕ್ಷೆ ಅನುಭವಿಸುವ ಬದಲು, ಅಂಥ ರಾಜಕಾರಣಿಯ  ತಾಳಕ್ಕೆ ತಕ್ಕಂತೆ ಕುಣಿಯುವುದೇ ಲೇಸೆನ್ನಿಸಿಬಿಡ್ತದೆ, ಪೋಲೀಸರಿಗೆ. ಇಷ್ಟರ ಜೊತೆ ಮೇಲಧಿಕಾರಿಗಳ ಒತ್ತಡವೂ ಸೇರಿ, ಪೋಲೀಸರು  ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಅವರನ್ನು ಸೌಜನ್ಯರಹಿತರನ್ನಾಗಿಸಿ ಬಿಡುತ್ತದೆ, ಪರಿಸ್ಥಿತಿ.

ಹಿಂದೆ ರಾಜನಿಗೆ ಸೈನ್ಯದ ಬಲವಿದ್ದಂತೆ, ಈಗ ಸರ್ಕಾರಕ್ಕೆ ಪೋಲೀಸ್ ಬಲ.  ಹಾಗಾಗಿ ಪೋಲೀಸರು  ಆಳುವ ಪಕ್ಷದ ಅನಧಿಕೃತ ಕಾರ್ಯಕರ್ತರು ! ಬೀಜೇಪಿ ಸರ್ಕಾರದಡಿ ಕಾರ್ಯ ನಿರ್ವಹಿಸುವ  ದೆಹಲಿ ಪೋಲೀಸರಿಗೆ  ಬರೀ ಆಪ್ ಗುಂಡಾಗಳಷ್ಟೇ ಸಿಗುತ್ತಾರೆ.  ಕರ್ನಾಟಕದಲ್ಲಿನ‌ ಕಾಂಗ್ರೆಸ್ ಪೋಲೀಸರಿಗೆ ಬೀಜೇಪಿ, ಜೇಡೀಎಸ್ ಗೂಂಡಾಗಳಷ್ಟೇ ಕಾಣುತ್ತಾರೆ. ಆಳುವ ಪಕ್ಷದ  ಮರ್ಜಿಯಲ್ಲಿಯೇ ಅವರು ಮಾಡುವ ತನಿಖೆಗಳೂ ಕೂಡ. ತನಿಖೆಯ ಅಂತಿಮ ವರದಿಯನ್ನು ನಾವು ಊಹಿಸಬಹುದು – ಆಳುತ್ತಿರುವ ಪಕ್ಷದ ಆಧಾರದ ಮೇಲೆ!! ಹೀಗೆ ರಾಜಕಾರಣಿಗಳು ಸಕಲ ರೀತಿಯಲ್ಲಿಯೂ ಪೋಲೀಸರ ಮೇಲೆ ಒತ್ತಡವನ್ನು ಹೇರುತ್ತಿರುತ್ತಾರೆ. ಇದು ಮಿತಿ ಮೀರಿದಾಗ DYSP ಗಣಪತಿಯಂಥವರ ಜೀವನ ಆತ್ಮಹತ್ಯೆಯಲ್ಲಿ ಪರ್ಯವಸಾನವಾಗುತ್ತದೆ.

ಎಂಥದೇ ಪರಿಸ್ಥಿತಿಯಲ್ಲಿಯೂ ರಜೆಯಿಲ್ಲದಂತೆ ದುಡಿಯಬೇಕಾದಂಥ ಅನಿವಾರ್ಯತೆಗೆ ತುಳಿಯಲ್ಪಟ್ಟಂಥ ಪೋಲೀಸರಿಗೆ ಇದೇ ಕಾರಣಕ್ಕಾಗಿಯೇ ಹೆಣ್ಣುಗಳು ಸಿಗುವುದು ದುಸ್ತರವಾಗಿಬಿಟ್ಟಿದೆ. ಅವರ ವಸತಿ ಗೃಹಗಳಂತೂ ಸ್ಲಂಗಳಿಗಿಂತ ಕೆಳ ಸ್ಥಿತಿಯಲ್ಲಿವೆ. ಪೋಲೀಸರ ಈ ಹೀನಾಯ ಸ್ಥಿತಿಗಳಿಗೆ ಕಾರಣಗಳು ಹಾಗೂ ಪರಿಹಾರ ಹುಡುಕುವ ಕಾರ್ಯಗಳು ‘ಧರ್ಮವೀರ ಆಯೋಗ’ದಂತೆ ಬಹಳಷ್ಟು ಆಯೋಗಗಳಿಂದ ಆಗಿವೆ.  ಆದರೆ ಪ್ರಯೋಜನವೇನು? ಸರ್ಕಾರವೇ ಕಿವುಡಾಗಿ ಕುಳಿತಾಗ?!! ನ್ಯಾಯವಾಗಿ ಇರಬೇಕಾದಷ್ಟು ಪ್ರಮಾಣದಲ್ಲಿ ಪೋಲೀಸರ ನೇಮಕಾತಿ ಆದಲ್ಲಿ ಅವರ ಈ ಪಾಡು ಸ್ವಲ್ಪವಾದರೂ ಸುಧಾರಿಸೀತು!

ಇಂತಿಪ್ಪ‌ ಪೋಲೀಸರಲ್ಲಿ ನನ್ನದೊಂದು ಮನವಿ. ನಿಮ್ಮ  ಈ ಪರಿಪಾಟಲು ಕಂಡ  ಸಾರ್ವಜನಿಕರು  ನಿಮ್ಮೊಂದಿಗಿದ್ದಾರೆ.  ಖಿನ್ನತೆಯಿಂದ ಆತ್ಮಹತ್ಯೆಯಂತಹ `ಅಂತಿಮ ನಿರ್ಧಾರ’ಗಳನ್ನು ದುಡುಕಿ ತೆಗೆದುಕೊಳ್ಳಬೇಡಿ. ಸಮಾಜ ನಿಮ್ಮೊಂದಿಗಿದೆಯೆನ್ನುವ ಧನಾತ್ಮಕ ಆಲೋಚನೆಯಿದ್ದಾಗ, ಖಿನ್ನತೆ ನಿಮ್ಮ ಬಳಿಯೂ  ಸುಳಿಯುವುದಿಲ್ಲ. ಇನ್ನು ಮುಂದಾದರೂ ಪೋಲೀಸರ ಪರಿಸ್ಥಿತಿ  ಸುಧಾರಿಸೀತು ಅಂತ ಆಶಿಸುತ್ತಾ, ಎಲ್ಲ ಪೋಲೀಸರಿಗೆ ಇದೋ ನನ್ನ ಸಲಾಂ.

ದೃಷ್ಟಿಕೋನ

           ದೃಶ್ಯ-1
ಈ ಹಾಳು ಬೆಂಗಳೂರಿನಲ್ಲಂತೂ  ಕೆಲಸಕ್ಕಿಂತ  ಜಾಸ್ತಿ  ಆಯಾಸ traffic ನಿಂದ ಆಗುತ್ತೆ.  ಹಾಗೆ, ಕೆಟ್ಟ ಬಾಸ್‍ನಿಂದ  ಹೇರಲ್ಪಟ್ಟ ಜಾಸ್ತಿ ಕೆಲಸ ಮುಗಿಸಿ, ಹಾಳು  ಟ್ರಾಫಿಕ್‍ನಲ್ಲಿ ಕೊಸರಾಡಿ  ಮನೆಗೆ ಬಂದ್ರೆ, ಮನದನ್ನೆ  ನಗುಮೊಗದಿ, ಅಮೃತಬಿಂದುವಿನಂಥ ಕಾಫಿ ಕೊಟ್ಟಾಳೇ  ಅಂತ ಮನಸ್ಸಿಗೊಂದಾಸೆ.  ಆದರೆ,  ಕಾಫಿ ಮನೆ ಹಾಳಾಗ್ಲಿ, ‘ಕಾಫೀ ಸೇವನೆಯ ದುಷ್ಪರಿಣಾಮಗಳು’ ಅನ್ನುವ ವಿಷಯದ ಬಗ್ಗೆ ಉದ್ದುದ್ದ ಭಾಷಣ ಮನದನ್ನೆ ಕೊರೆದರೆ ನನ್ನ ಪಾಡೇನಾದೀತು?  ಒಂದು ತೊಟ್ಟು  ಕಾಫೀಗೂ  ಬೇಡಬೇಕಾದಂಥ ಪರಿಸ್ಥಿತಿ  ಯಾವ ಬೇಡನಿಗೂ  ಬೇಡ! (ಬೇಡಿದರೂ ಸಿಕ್ಕೀತೆಂಬ  ಖಾತ್ರಿ ಇಲ್ಲ.  ಆಗ್ಲೂ  ಉತ್ತರ `ಬೇಡ’ ಅಂತ್ಲೇ!) ಕಾಫಿ ಬೇಡವೆನಿಸಿಕೊಂಡ ಬಾಡಿ `ಉತ್ಸಾಹಹೀನಃ ಪಶುಭಿಃ ಸಮಾನಃ’  ಅಂತ revised  ಸುಭಾಷಿತವನ್ನು ನೆನೆಸಿಕೊಂಡು ಮರಗಟ್ಟಿ ಬಿಡುತ್ತೆ.  ಆಫೀಸಿನಲ್ಲಿ  ತೋರುವ ಉತ್ಸಾಹ  ಮನೆಯಲ್ಲಿ ತೋರಬಾರ್ದೇ ಅನ್ನುವ ತಿವಿತ ಬೇರೆ! ಅದಕ್ಕೆ  ಕಾರಣಕರ್ತೆ ತಾನೇ ಅನ್ನುವುದನ್ನು ಯಾವತ್ತೂ ಒಪ್ಪುವುದಿಲ್ಲ‌. ಏನ್ಸಾರ್ ಎಲ್ಲ ಹೆಂಡಿರೂ ಹಿಂಗೇನಾ?
* * * * * *
ನಮ್ಮವರಂತೂ ದಿನದ ಅರ್ಧಕ್ಕಿಂತ  ಜಾಸ್ತಿ  ಸಮಯ ನಿದ್ರೆಯಲ್ಲಿ  ಕಾಲಕಳೆಯುತ್ತಾರೆ. ಉಳಿದ ಎದ್ದಿರುವ ಸಮಯದಲ್ಲೂ ¾ ಪಾಲು ಆಫೀಸಿನಲ್ಲಿ ಆಗುತ್ತದೆ.  ಉಳಿದ ಸ್ವಲ್ಪ  ಸಮಯದಲ್ಲಾದರೂ ನನ್ನೊಂದಿಗೆ  ಸರಸವಾಗಿ ಮಾತಾಡಿಕೊಂಡಿರಬಹುದೆಂದು ಅದ್ಕೊಂಡ್ರೆ, ಬರುತ್ತಲೇ `ಕಾಫಿ, ಕಾಫಿ’, ಅಂತ   ಒಂದೇ ಸಮನೇ ವರಾತ  ಶುರು ಹಚ್ಕೋತಾರೆ! ಆಫೀಸಿನಲ್ಲಿ ಏನಿಲ್ಲಾಂದ್ರೂ  20-25 ಸರ್ತಿ ಕಾಫಿ ಸಮಾರಾಧನೆ ಆಗಿರುತ್ತೆ. ಮತ್ತೆ ಮನೆಯಲ್ಲಿಯೂ  ಒಂದು ಕೊಳಗ  ಕಾಫಿ ಕುಡಿದರೆ, ಅದೇನು ಹೊಟ್ಟೆಯೋ  ಕಸದ ಬುಟ್ಟಿಯೋ? ನಾನವರ ಆರೋಗ್ಯದ ಬಗ್ಗೆ  ಕಾಳಜಿ  ತೊಗೊಳ್ಳೋದು ಹಾಳಾಗ್ಲಿ, ವೈದ್ಯರ ಮಾತಿಗೂ  ಬೆಲೆ ಇಲ್ವೇ?! ಮಕ್ಕಳು ಹಠ ಹಿಡಿಯುತ್ವೇ ಅಂತ ಕೇಳಿದ್ದನ್ನೆಲ್ಲ  ಕೊಡೋಕಾಗುತ್ತಾ?  ಹೀಗೆ ಹಠ ಹಿಡಿದ್ರೆ, ಮಕ್ಕಳಿಗಾದ್ರೂ ಸರಿ, ಗಡವಗಳಿಗಾದ್ರೂ  ಸರಿ, ನಾನಂತೂ  ಕೊಡುವವಳಲ್ಲ! ಆಮೇಲೆ ಇದನ್ನೇ ನೆಪ ಮಾಡಿಕೊಂಡು, ನಮ್ಮವರು ತೊಪ್ಪೆ ತರಾ ಕೂತುಬಿಡ್ತಾರೆ ! ನಾನು  ಅಂದುಕೊಂಡ  ಯಾವ ಕೆಲಸಗಳೂ ಆಗೋಲ್ಲ. ಕೆಸರಲ್ಲಿ ಬಿದ್ಕೊಂಡಿರೋ  ಎಮ್ಮೆಗಳನ್ನು ಎಬ್ಬಿಸಬಹುದು, ಇವರನ್ನಲ್ಲ! ಏನ್ರೀ ನಿಮ್ಮ‌ ಗಂಡಂದ್ರೂ ಹೀಗೇನಾ?
* * * * * *
ದೃಶ್ಯ – 2
ಎಲ್ಲರ ಮನೆಯಂತೆ, ನಮ್ಮಲ್ಲಿಯೂ ನಮ್ಮೆಲ್ಲರ  ರಿಮೋಟ್  ನಮ್ಮಾಕೆ ಕೈಲಿ. ಹಾಗಂತ T.V. ರಿಮೋಟ್ ಕೂಡಾ ಯಾವಾಗ್ಲೂ ಅವಳ ಕೈಲೇನಾ?  ಮನದನ್ನೆಯ ನಸುನಗುವನ್ನು ಆಶಿಸಿ ಆಫೀಸಿನಿಂದ  ಮನೆಗೆ ಕಾಲಿಟ್ರೆ, ಯಾವ್ದೋ ಸೀರಿಯಲ್ಲಿನ  ಅತ್ತೆಯ ಖಳನಗೆಯ ಸ್ವಾಗತ  ದೊರಕಿದರೆ  ಮನಸ್ಸಿಗೆ ಏನನ್ನಿಸೀತು?  ಆ ಹಾಳು ಸೀರಿಯಲ್ಲುಗಳೋ,  1000 ಎಪಿಸೋಡುಗಳು ಮುಗಿದರೂ  ಒಂದಿನಿತೂ ಕಥೆ ಮುಂದುವರೆದಿರುವುದಿಲ್ಲ – ಅವರುಗಳ ಗೋಳು ತೀರೋದಿಲ್ಲ? ಈ ಗೋಳಿಗಾ ನಾವು ತಿಂಗಳಿಗೆ 500 ರೂ. ಪೀಕೋದು? ಕಥೆ  ಒಂದೇ, (ಅದಿದ್ದದ್ದೇ ಆದ್ರೆ!)  ಪಾತ್ರ ಮಾತ್ರ ಬದಲು  ಆಗಿರುವಂಥ ಎಲ್ಲ ಸೀರಿಯಲ್ಲುಗಳನ್ನೂ ಬೆಳಗ್ಗಿನಿಂದ ಸಂಜೇವರ್ಗೂ ಭಕ್ತಿಯಿಂದ ವೀಕ್ಷಿಸುವ  ನನ್ನಾಕೆ, ನಾನು IPL  ಮ್ಯಾಚ್  ಹಾಕಿದರಂತೂ  ಭದ್ರಕಾಳಿಯಾಗಿಬಿಡ್ತಾಳೆ! ಎಂದೂ ಮುಗಿಯದ `ಗೋಳಾಟ’ದ  ಬದಲು ಅಪರೂಪಕ್ಕಾದರೂ  ನಾನು IPL `ಬಾಲಾಟ’ ಹಾಕಿಕೊಳ್ಳುವುದಕ್ಕೂ ರಿಮೋಟಿಗಾಗಿ ಕಾದಾಟವೇ? (ರಿಮೋಟ್ ಸಿಗೋದೂ remote chance ಬಿಡಿ!) ಹೇಳಿ ಸಾರ್,  ನಿಮ್ಹೆಂಡ್ರೂ ಹೀಗೇನಾ?
* * * * * *
ಆಫೀಸಿನಲ್ಲಿ ದುಡಿದರೆ ವಾರಕ್ಕೆ ಒಂದು ದಿವಸವಾದ್ರೂ ರಜೆ ಸಿಗುತ್ತೆ.  ಆದರೆ,  ಈ ಮನೆ ಕೆಲಸ ಭಗವಂತನಷ್ಟೇ  ಸಾರ್ವಕಾಲಿಕ ! ನ್ಯೂಸ್  ಚಾನೆಲ್ಲಿನವರು ಹೇಳಿಕೊಳ್ಳುವಂತೆ, ಆದರೆ  ನಿಜವಾಗಿ 24 X 7  ಗಾಣದೆತ್ತಿನಂತೆ  ದುಡಿಯುವ ನಾವು, ಎಲ್ಲೋ  ಸಿಕ್ಕ ಒಂದು ಸಣ್ಣ ಅವಕಾಶವಾದ ಸಂಜೆಯಲ್ಲಿ T.V. ನೋಡೋಕ್ಕೆ ಕೂತ್ರೆ, ಅದೇ ಸಮಯಕ್ಕೆ ವಕ್ಕರಿಸ್ತಾರೆ ನಮ್ಮವರು! ಅವರು ಕ್ರಿಕೆಟ್ಟು ಅಂತ T.V.ಯನ್ನು  ಆಕ್ರಮಿಸಿದರೆ, ನಮಗೇನೂ entertainment ಬೇಡವೇ? ಈ ಕೆಟ್ಟಾಟ ಕ್ರಿಕೆಟ್ಟಾಟವೆಲ್ಲಾ ಮ್ಯಾಚ್ ಫಿಕ್ಸಿಂಗ್‍ನಲ್ಲಿ ಗಬ್ಬೆದ್ದು ನಾಥ ಹೊಡೀತಿದ್ರೂ ಇವರಿಗೆ  ಮಾತ್ರ ಅದೇನು  ಥ್ರಿಲ್ ಸಿಗುತ್ತೋ ಆ ದೇವರೇ ಬಲ್ಲ ! ಈ ಪ್ರಾಣಿಯಂತೂ,  ನನಗೆ ಸೀರಿಯಲ್ಲು ನೋಡಲಿಕ್ಕೆ ಬಿಡಬಾರದೆನ್ನುವ ಏಕೈಕ  ದುರುದ್ದೇಶದಿಂದ, ಕಂಡು ಕೇಳರಿಯದ  ದೇಶಗಳ ನಡುವಿನ ಕ್ರಿಕೆಟ್ ಮ್ಯಾಚನ್ನು ಬಿಟ್ಟ ಕಣ್ಣು ಮುಚ್ಚದಂತೆ ನೋಡ್ತಾರೆ. (ಅಥವಾ ಆ ಥರಾ ನಾಟಕಾ ಆಡ್ತಾರೆ !) ಯಾಕೀ ಸ್ವಾರ್ಥ ಗಂಡು ಪ್ರಾಣಿಗಳಿಗೆ ? ಹೇಳಿ ನಾರೀಮಣಿಗಳೇ, ನಿಮ್ಮ‌ ಗಂಡಂದ್ರೂ ಹೀಗೇನಾ?
* * * * * *
ದೃಶ್ಯ – 3
ಅಪ್ಪಿತಪ್ಪಿಯೂ ಸೀರೆ ಖರೀದಿಗೆಂದು ಮನೆಯಾಕೆಯ ಜೊತೆ ಹೋಗ್ಬಾರ್ದಪ್ಪಾ. ಅದರಂಥ ಶಿಕ್ಷೆ ಇನ್ನೊಂದಿಲ್ಲ‌. ಜುಜುಬಿ  ರೂ. 100-200 ಬೆಲೆಯ ಒಂದು ಸೀರೆ ಖರೀದಿಗೆ  ಸಾವಿರಾರು ಸೀರೆಗಳನ್ನು ತೆಗಿಸ್ತಾರಲ್ಲಾ, ಅವರಿಗೆ ಏನೂ ಅನ್ನಿಸಲ್ವೆ? Guilty feeling  ಅಥವಾ ಅಪರಾಧೀಭಾವ ಬರೋದಿಲ್ವೇ? ತಮ್ಮ ತಪ್ಪಿನ  ಅರಿವೇ ಅವರಿಗಾಗಲ್ವೇ? ಅವಳ ಈ `ಕುಕೃತ್ಯ’ ದಿಂದಾಗಿ ನನಗೇ ನಾಚಿಕೆಯಾಗಿ, ಕಾಲು ಸುಟ್ಟ ಬೆಕ್ಕಿನಂತೆ, ಅಂಗಡಿಯಿಂದ ಹೊರಗೂ ಒಳಗೂ  ಓಡಾಡುತ್ತಿರ್ತೇನೆ.  ಕಾಲ ಕಳೆಯಲಾಗದೇ  whatsapp ಮೆಸೇಜ್ ಓದೋಣಾಂದ್ರೆ ನನ್ನ ಸ್ನೇಹಿತರು ಕಳಿಸುವ ಮೆಸೇಜುಗಳಾವುವೂ ಮುಕ್ತ ವಾತಾವರಣದಲ್ಲಿ ನೋಡಲು `ಯೋಗ್ಯ’ ವಾದದ್ದಲ್ಲ !! (ಅಂಥಾ ಸ್ನೇಹಿತರು / groups !)  ತಾಳ್ಮೆ ತಪ್ಪಿ  ಅಂಗಡಿಯಾತ ಎಲ್ಲಿ ಬೈದು,  ನನಗಿರೋ ಅಲ್ಪ ಸ್ವಲ್ಪ ಮಾನವೂ  ಹರಾಜಾಗ್ತದೋ ಅಂತ ಪ್ರತಿ ನಿಮಿಷ ನನ್ನ ಬಿ.ಪಿ.  ಏರ್ತಿರ್ತದೆ.  ಭರ್ಜರಿ 3 ಘಂಟೆ ಜಾಲಾಡಿ,  ಒಂದೂ ಸೀರೆ  ಖರೀದಿಸದೇ  ಬರೋದೂ ಇರ್ತದೇ ! ಆಗ ಮಾತ್ರ  ನನಗೆ, ಸೀತಾಮಾತೆಗಾದಂತೆ ಭೂಮಿ ಬಾಯ್ಬಿಡಬಾರದೇ ಅಂತನ್ನಿಸುವುದು ಸುಳ್ಳಲ್ಲ‌. ಹೇಳಿ ಸಾರ್, ಹೇಳಿ, ನಿಮ್ಮಾಕೆಯೂ ಹೀಗೇನಾ?
* * * * * *
ನೀವೇ ಹೇಳಿ, ನಾನು ಸೀರೆ ತೊಗೊಳ್ಳೋಕೆ, ಇವರನ್ನಲ್ಲದೇ ಪಕ್ಕದ್ಮನೆಯವರನ್ನು ಕರ್ಕೊಂಡು ಹೋಗೋಕಾಗುತ್ತಾ? ಅಪರೂಪಕ್ಕೆ ಕರೆದ್ರೂ ದುರ್ದಾನ  ತೆಗೆದುಕೊಂಡಿರುವವರಂತೆ ಬರ್ತಾರೆ ! ಇವರ  ವತಿಯಿಂದ ವರ್ಷಕ್ಕೊಂದು ಸೀರೆ ಸಿಕ್ರೆ ಅದೇ ಭಾಗ್ಯ – ಅದಕ್ಕೇ ಭರ್ಜರಿ  ಬೈಗುಳಗಳ ಬೋನಸ್  ಬೇರೆ! ಏನೋ ತವರಿನವರ ಪ್ರೀತಿ ಇದ್ದಿದ್ದಕ್ಕೆ ಸಾಕೆನ್ನುವಷ್ಟು ಸೀರೆ ಬರ್ತದೆ.  ನೀವೇನೇ ಹೇಳಿ, ಯಾವುದೇ  ವಿಚಾರದಲ್ಲಿ ನಾವು, ಹೆಂಗಸರು,  Perfectionists – dress ವಿಚಾರದಲ್ಲಿಯಂತೂ ಕೇಳೋದೇ ಬೇಡ.  ಈ ಸದ್ಗುಣ ಅವರಲ್ಲಂತೂ ಇಲ್ಲ – ನಮ್ಮಲ್ಲಿರೋದಕ್ಕೆ  ಹೊಗಳಬಾರದೇ! ಬಿಡಿ, ಪುರುಷ ಪ್ರಧಾನ ಶೃಂಖಲೆಯಲ್ಲಿ  ಇದರ ಯೋಚನೆಯೇ ಅಸಾಧ್ಯ.  ಅದಕ್ಕೇ  ನಾನು, ನನಗೊಪ್ಪುವ ಸೀರೆ ಸಿಗೋವರ್ಗೂ   compromise  ಆಗೋ ಮಾತೇ ಇಲ್ಲ! ಅಲ್ಲಾ ರೀ, ಅಂಗಡಿಯವನೇ ಆರಾಮವಾಗಿ ಸೀರೆ ತೋರಿಸುತ್ತಿದ್ದರೂ, ಇವರಿಗ್ಯಾಕೆ B.P. ಏರತ್ತೋ ನಾನಂತೂ ಕಾಣೆ ! ಇವರ ಈ ಪರದಾಟದ `ಪರದೆ ಆಟ’ ದಿಂದ ನನ್ನ ಮೂಡೂ ಆಫಾಗಿ ಬಿಡುತ್ತೆ ಎಷ್ಟೋ ಸಲ ! ಅದಕ್ಕೇ ಸೀರೆ ಖರೀದಿಗೆ, ಈ ಗಂಡಸರನ್ನು ಕರ್ಕೊಂಡೇ ಹೋಗ್ಬಾರ್ದು, ನಮ್ಮ ಟೋಳಿಯಲ್ಲೇ ಹೋಗ್ಬೇಕು, ಏನಂತೀರಾ ! ಅಂದ್ಹಾಗೆ, ನಿಮ್ಮ‌ ಗಂಡಂದ್ರೂ ಹೀಗೇನಾ?
* * * * * *
ದೃಶ್ಯ -4
ದೇವರಿಂದ ಆರೋಗ್ಯ ಭಾಗ್ಯ ವರವನ್ನು ಪಡೆದಂಥ ನನ್ನಾಕೆಗೆ, ನಮ್ಮಣ್ಣ ಅತ್ತಿಗೆ ಬಂದರೆ ಸಾಕು, ಎಲ್ಲಿಂದಲೋ ಬಂದು ಭೀಷಣ ಭೀಕರ `ತಲೆನೋವು’ ಪ್ರತ್ಯಕ್ಷವಾಗಿ ಬಿಡುತ್ತೆ ! ಅದೇ ವಾರದ ಹಿಂದೆ  ಅವಳ ಅಣ್ಣ ಬಂದಾಗ ಅವಳ ಸಂಭ್ರಮವೇನು? ಹಾರಾಟವೇನು? ಅವಳ `ತಲೆನೋವು’ ಇದ್ದೂ ಇಲ್ಲದಂತಾಗುತ್ತದೆ ! (ಅದು ನನಗೆ ವರ್ಗಾವಣೆಯಾಗಿರುತ್ತಲ್ಲಾ!) ಅವರಿಗೆ ಇಡೀ ಬೆಂಗಳೂರು ದರ್ಶನ  ಮಾಡಿಸಿ, ಮನೆಯಲ್ಲಿ ಮೃಷ್ಟಾನ್ನ ಉಪಚಾರ ಕೂಡಾ.  ನನಗೂ ಆಫೀಸಿನಿಂದ ಬೇಗ ಬರಲು ತಾಕೀತು  ಬೇರೆ!  (ಇವಳ ತಾಕೀತು ನನಗೆಲ್ಲಿ ತಾಕೀತು? !) ಅದೇ ನಮ್ಮಣ್ಣ  ಬಂದಾಗ ಸೀನೇ ಛೇಂಜು ! ‘ಮಾಮೂಲಿ  ಅನ್ನ-ಸಾರು  ಮಾಡಿ ಬಡಿಯೋದಕ್ಕೇನೆ, ಒಂದು ಸಿಹಿ ಸೇರಿಸಿ  ಮಾಡೇ’  ಅಂದ್ರೆ ಸಿಡಿಮಿಡಿ. ಅಡಿಗೇನ ಹೇಗೆಲ್ಲ ಕೆಡಿಸಬಹುದು ಅನ್ನೋದರ ಸಾಕ್ಷಾತ್ ಪ್ರಾತ್ಯಕ್ಷಿಕೆ,  ನಮ್ಮ ಅನುಭವಕ್ಕೆ ಬರುತ್ತೆ.  ಇದರ ಬದಲು ಹೋಟೆಲ್‍ಗೆ  ತೆರಳಿ ಊಟ  ಮಾಡೋದೇ ವಾಸಿ  ಅನ್ನುವದರ‌  ಪರೋಕ್ಷ  ಸೂಚನೆ ಅದು. ಅವರು ಏನೆಂದು  ಕೊಂಡಾರೆಂಬ   ಕನಿಷ್ಠ ಯೋಚನೆಯೂ ಇವಳಿಗಿಲ್ವೇ? ಸ್ವಾಮೀ, ನಿಮ್ಮೋರೂ ಹೀಗೇನಾ?
* * * * * *
`ಇವರ’  ಕಡೇ ನೆಂಟರಿಗೆ  ದೇವರು ಅದೇನು ಸರ್ವದರ್ಶೀ ಅಂತಃಚಕ್ಷುಗಳನ್ನು ಕೊಟ್ಟಿದಾನೋ ತಿಳಿಯದು – ಯಾವಾಗಲೂ ನನಗೆ ಅನಾರೋಗ್ಯ ಇದ್ದಾಗಲೇ  ಇವರು ವಕ್ಕರಿಸೋದು ! ಇವರು ಹಾಳಾಗ್ಲಿ, ನಮ್ಮೋರಿಗೂ ಇದು ಅರ್ಥ ಆಗಲ್ವಲ್ಲ ಅಂತ ನನಗೆ ಬೇಜಾರು. ಆ ಮಕ್ಕಳೋ, ಒಬ್ಬೊಬ್ಬರೂ  ಸೈಂಧವ ಸಂತತಿಯವರು.  ಅವರು ಹೋದ ಮೇಲೆ, ಮನೆಯನ್ನು ಮತ್ತೆ ಮುಂಚಿನ ಸ್ಥಿತಿಗೆ  ತರಲು ನನಗೆ 1 ತಿಂಗಳು ಬೇಕಾಗುತ್ತೆ! (ಅಷ್ಟರಲ್ಲಿ ಅವರು ಮತ್ತೆ  ಬಂದ್ರೂ ಬಂದ್ರೇ !)  ನನಗೋ  ಹುಷಾರಿಲ್ದೇ ಅನ್ನ-ಸಾರು ಮಾಡ್ಲೀಕೇ ತತ್ವಾರ – ಅದರ  ನಡುವೆ,  ಇವರ ದೊಡ್ಡ  ಲಿಸ್ಟ್, ಅಡುಗೇಗಂತ ! ಆ   ಲಿಸ್ಟ್  ನೋಡಿದ್ರೆ  ಇವರು ಯಾವುದೋ ಬಫೆಗೋ  ಸಂತರ್ಪಣೆಗೋ ಒಪ್ಕೊಂಡು ಬಂದ್ಬಿಟ್ಟಿದ್ದಾರಾ  ಅನ್ನೋ  ಅನುಮಾನ ಬಂದ್ಬಿಡುತ್ತೆ ! ಇಷ್ಟೆಲ್ಲಾ  ಬೇಕಾದ್ರೆ  ಎಲ್ಲರೂ ಹೋಟಲಿಗೇ  ಹೋಗ್ಬಹುದಲಾ. ಮನೇನ‌ಲ್ಯಾಕೆ ? ಇವರುಗಳಿಗಂತೂ ಎಷ್ಟು ಮಾಡಿ ಹಾಕಿದ್ರೂ  ತೃಪ್ತಿ ಅನ್ನೋದೇ ಇಲ್ಲ !  ಹೇಳ್ರೀ, ನಿಮ್ಮ ಗಂಡಂದ್ರೂ ಹೀಗಾ?
ದೃಶ್ಯ – 5
ನಾನು ನಲವತ್ತಕ್ಕೆ ಕಾಲಿಟ್ಟಿದ್ದೇ ತಪ್ಪಾಯ್ತು. ಅದಕ್ಕೇ ಕಾಯ್ತಿದ್ದವಳಂತೆ  ನನ್ನಾಕೆ, ಉಪ್ಪು, ಸಕ್ಕರೆ, ಊಟ-ತಿಂಡಿ, ಎಲ್ಲದಕ್ಕೂ  ಭಯಂಕರ ಕಡಿವಾಣ ಹಾಕಿ ಬಿಟ್ಟಿದ್ದಾಳೆ.  ನಂದೋ ಮುಂಚಿಂದ್ಲೂ ಚಾರ್ವಾಕ ಸಿದ್ಧಾಂತ – ಬಿ.ಪಿ. , ಶುಗರ್,  ಬಂದಾಗ  ಪಥ್ಯ ಮಾಡಿದ್ರಾಯ್ತು,  ಈಗಲೇ  ವೈರಾಗ್ಯ ಏಕೆ ಅಂತ. ಆದ್ರೆ  ಯಜಮಾನ್ತಿ  ಕೇಳ್ಬೇಕಲ್ಲ !  ಸಪ್ಪೆ ಊಟವೇ ಗತಿ – ಸರ್ಕಾರ ಪಡಿತರ  ಖೋತಾ ಮಾಡಿದಂತೆ,  ತಿಂಡಿ ಪ್ರಮಾಣದಲ್ಲೂ ಕಡಿತ ! ಜೀವನದ  ನಾಲ್ಕು ಆಶ್ರಮಗಳ  ಬಗ್ಗೆ ನಾನು ತಲೆ ಕೆಡಿಸಿಕೊಳ್ಳದಿದ್ರೂ, ಅನಾಯಾಸವಾಗಿ  ಗೊತ್ತಿಲ್ಲದಂತೆಯೇ ನಾನು ವಾನಪ್ರಸ್ಥಾಶ್ರಮದಿಂದ‌  ಸನ್ಯಾಸಾಶ್ರಮಕ್ಕೆ ಶಿಫ್ಟ್ ಆಗಿ ಬಿಟ್ಟೆ ! ಗಾಯದ ಮೇಲೆ  ಉಪ್ಪು ಸವರಿದಂತೆ, ಇದರ ಜೊತೆ  Exercise  ಕೂಡಾ ಮಾಡ್ಬೇಕಂತೆ !  ನಾನೇನು ಶಾರುಖ್ ಖಾನ್  ಥರಾ ಫಿಲ್ಮ್ ಮಾಡೋದಿದ್ಯಾ ?  ಹೇ ಭಗವಂತ, ನನ್ನ ಮೇಲೆ ಯಾಕಿಷ್ಟು ನಿಷ್ಕರುಣಿಯಾಗಿಬಿಟ್ಟೆ ?! ಹೇಳಿ ಸಾರ್  ಹೇಳಿ, ನಿಜ ಹೇಳಿ, ನಿಮ್ಮಾಕೇನೂ ಹಿಂಗೇನಾ ?
* * * * * *
ಈಗಂತೂ  ಎಲ್ಲೆಲ್ಲೂ  `ಹೃದಯಾಘಾತ’ದ್ದೇ ಸುದ್ದಿಗಳು.  ನನಗೆ ಗೊತ್ತಿರೋ 8-10 ಇಸುಮುಗಳು ಯಾವುದೇ  ದುಶ್ಚಟಗಳಿಲ್ಲದೆಯೇ ನಲವತ್ತೈದರ ಆಜೂಬಾಜೀನಲ್ಲಿ ಶಿವನ ಪಾದ ಸೇರಿವೆ. ನಲವತ್ತರ  ನಂತರ ಬಿ.ಪಿ., ಶುಗರ್ ಸಾಮಾನ್ಯ ಅಂತಾರೆ, ವೈದ್ಯ ಭಾನುಗಳು. ಇವರೋ, ಅಫೀಸಿನಲ್ಲಿ  ಕೆಲಸದೊತ್ತಡ ಭಾರೀ ಜಾಸ್ತಿ  ಅಂತ ಬೇರೆ ಹೇಳ್ತಿರ್ತಾರೆ.  ಪರಿಸ್ಥಿತಿ  ಇಂತಿಪ್ಪರೆ, ಒಂದು ಆನೆಹಿಂಡಿಗೆ ಸಾಲುವಷ್ಟು  ಉಪ್ಪು ಸಕ್ಕರೆಯನ್ನು ಇವರು ಸೇವಿಸುವುದನ್ನು ನಾನು ನೋಡಿ ಸುಮ್ಮನಿರಲಾದೀತೇ ? ‘ಉಪ್ಪು ಸ್ವಲ್ಪ ಕಡಿಮೆ ಮಾಡಿ’ ಅಂತ ಹೇಳಿದ್ರೇ ರೇಗಾಡೋದನ್ನ ನೋಡಿದ್ರೆ  ಇವರಿಗೆ ಬಿ.ಪಿ. ಇರೋದಂತೂ  ಖಚಿತ !  ನಾನೇನು ಮೃಷ್ಟಾನ್ನ  ಮಾಡಿಕೊಂಡು  ತಿಂದು, ಇವರನ್ನ ಉಪವಾಸ ಕೆಡವ್ತಿದ್ದೀನಾ? ನನ್ನ ಜಿಹ್ವಾಕಾಂಕ್ಷೆಗಳಿಗೆ ಕಡಿವಾಣ ಹಾಕಿ, ನನ್ನ ವಯಸ್ಸು ನಲವತ್ತಕ್ಕೆ ಬಹಳ  ಕಡಿಮೆಯಿದ್ರೂ,  ಇವ್ರಿಗೆ  ಮಾಡಿದ ಅಡಿಗೇನೇ ಊಟ ಮಾಡ್ತಿಲ್ವೇ ?! –  ಮಾಡಿದ್ದುಣ್ಣೋ ಮಹರಾಯ ಅಂತ !  ಆರೋಗ್ಯವಾಗಿ  ಬಹುಕಾಲ  ಬದುಕಲಿ ಅಂತ ಯೋಗ, ವ್ಯಾಯಾಮ  ಮಾಡಿ ಅಂತ  ಹೇಳಿದ್ರೂ ತಪ್ಪಾ? ಕೆಟ್ಟದಾಗಿ  ಹೊಟ್ಟೆ ಬಿಟ್ಕೊಂಡ ನಮ್ಮವರೊಂದಿಗೆ ನಾನು ವಾಕಿಂಗ್  ಹೋಗ್ತಿದ್ರೆ ಜನ ನನಗೆ `ಯಾವಾಗ ಬಂದ್ರು ನಿಮ್ಮ ತಂದೆ’ ಅಂತ ಕೇಳಿದಾಗ  ಅವರಿಗೆ ತಾನೇ ಅವಮಾನ ಆಗೋದು ! ಈಗ ಹೇಳ್ರೀ, ನಂದೇನಾದ್ರೂ ತಪ್ಪಿದೆಯಾ ಇದರಲ್ಲಿ. ಹೀಗೇ ಮಾತಿಗೆ  ಕೇಳ್ತೀನಿ, ಮೇಡಂ, ನಿಮ್ಮನೆಯವರೂ ಹೀಗೇನಾ?
* * * * * *
ನೋಡಿ,  ಗಂಡ ಹೆಂಡಿರ ದೃಷ್ಟಿಕೋನ  ಹೇಗೆ ಭಿನ್ನ ಭಿನ್ನ ಅಂತ ! ಅದಕ್ಕೇರೀ ಅವರನ್ನ ಗಂಡ-ಹೆಂಡತಿ ಅನ್ನೋದು !     ಈ ಮೇಲಿನ ಐದು ದೃಶ್ಯಗಳಲ್ಲಿ ಕನಿಷ್ಠ‌ ಒಂದಾದರೂ ನಿಮ್ಮಲ್ಲಿ  ಆಗಿರಬಹುದು.  ಒಂದೂ ಆಗಿಲ್ಲವೆಂದರೆ, ನಿಮ್ಮ ದಾಂಪತ್ಯ  `ಆದರ್ಶ ದಾಂಪತ್ಯ (!)’ ಕ್ಕೆ ಮೀರಿದ್ದು.  ಇದು ನಾನು  ಹೇಳಿದ್ದಲ್ಲ – `ಅಖಿಲ  ಭಾರತ ಆದರ್ಶ ದಂಪತಿಗಳ ಸಮಾನ ದುಃಖಿಗಳ ಕೂಟ’ ದ  ಅಧ್ಯಕ್ಷ / ಅಧ್ಯಕ್ಷಿಣಿ ನುಡಿದದ್ದು !

* * * *

 

ಆರೋಗ್ಯಕ್ಕಾಗಿ ಸರ್ಕಸ್

ಜನ ಹಿಂದಿನಂತಿಲ್ಲ. ಎಚ್ಚೆತ್ತಿದ್ದಾರೆ. ತಮ್ಮ ಸುದೃಢ ಆರೋಗ್ಯಕ್ಕಾಗಿ, ಅವರೀಗ ಯಾವುದೇ ಸರ್ಕಸ್‍ಗೆ  ತಯಾರು. ಬೊಜ್ಜು, ಬಿ.ಪಿ., ಮಧುಮೇಹಗಳಿಂದ  ಅನುಭವಿಸಿದ್ದು ಸಾಕಾಗಿ, ಅವುಗಳ ಮೇಲೆ ಅಂತಿಮ ಯುದ್ಧ ಸಾರಿದ್ದಾರೆ. ಎಲ್ಲರ ಕಿವಿಯಲ್ಲಿಯೂ ವಿವೇಕಾನಂದರ ವಾಣಿ ಮೊಳಗುತ್ತಿದೆ – `ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ’. ಉದ್ಯಾನವನಗಳಲ್ಲಿ  ಜಾಗಿಂಗ್  ನಡೆಸಿರುವ ಬೊಜ್ಜಿಗರನ್ನು ನೋಡಿದಾಗ, ಇದು ನಿಜವೆನ್ನಿಸುವುದು ಸಹಜ.  ನನ್ನಂಥ  ನಿದ್ದಂಡಿಗಳಿಗೆ, ಮುಂಜಾನೆ ಐದಕ್ಕೇ ಜಾಗಿಂಗ್  ನಡೆಸುವ ಮಂದಿ, `ಬುದ್ಧ’ರಿವರೇನೋ ಎನಿಸುತ್ತದೆ – `ಜಗವೆಲ್ಲ ಮಲಗಿರಲು  ಇವನೊಬ್ಬನೆದ್ದ’ ಉಕ್ತಿಯನುಸಾರ‌. ಈ ಅಂತಿಮ ಯುದ್ಧದಲ್ಲಿ ಗೆಲ್ಲುವರಾರೆಂದು  ಮುಂಚೆಯೇ  ತಿಳಿಯುವ ಕೆಟ್ಟ ಕುತೂಹಲ ನನಗೆ.  ಆದರೆ , ಈ `ಯುದ್ಧ’ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ.  ಬೊಜ್ಜಿಗರು  ಹಠವ್ರತ  ಕೈಗೊಂಡು ಜಾಗಿಂಗ್‍ನಲ್ಲಿ ಒಂದೊಂದು ರೌಂಡ್ ಜಾಸ್ತಿ  ಮಾಡಿದಷ್ಟೂ, ಅವರು  ಒಂದೊಂದು ರೌಂಡ್ ಹಿಗ್ಗುತ್ತಿದ್ದಾರಾ ಅನ್ನುವ ಅನುಮಾನ ಎನಗೆ! ಮನುಜನ ಆರೋಗ್ಯಕ್ಕಾಗಿ ಇಂಥಹ ಸರ್ಕಸ್  ಮುಗಿಯುವುದೆಂದು?

ಜನರಲ್ಲಿ  health consciousness ಮೂಡಿದುದರ ಪರಿಣಾಮವೇ ಈ ಸರ್ಕಸ್.  ನಿಮ್ಮ ಆರೋಗ್ಯದ ಗುಟ್ಟು ನಿಮ್ಮ ಕೈಯಲ್ಲಿಯೇ ಇದೆ ಅನ್ನುವ ಘೋಷವಾಕ್ಯವನ್ನಿಟ್ಟುಕೊಂಡು  ನಮ್ಮನ್ನು ಮರಳು ಮಾಡಿ ಬದುಕುವ ದೊಡ್ಡ `ಮಾಫಿಯಾ’ ಇದರ ಹಿಂದೆ  ಇದೆಯೆಂದರೆ  ನಿಮಗೆ  ಆಶ್ಚರ್ಯವಾಗಬಹುದು.  ಅದರ ಬಗ್ಗೆ ಮುಂದೆ ಚರ್ಚಿಸುತ್ತೇನೆ.  `ನಮ್ಮ ನಡೆ, ಆರೋಗ್ಯದ ಕಡೆ’ ಎಂಬ ದಿಢೀರ್ ಜ್ಞಾನೋದಯವಾದದ್ದೇ ತಡ, ಜನಗಳ ವಿಧ‌ ವಿಧ‌ದ ಸರ್ಕಸ್  ಅವಿರತವಾಗಿ  ನಡೆಯುತ್ತಿದೆ.

ಬೆಂಗಳೂರಿನ ಯಾವುದೇ ಉದ್ಯಾನವನಕ್ಕೆ ಬನ್ನಿ, -ಅದು ಪಾಳು ಬಿದ್ದಿದ್ರೂ ಅಡ್ಡಿಯಿಲ್ಲ – ಬೆಳಿಗ್ಗೆ  ಪೂರ್ತಾ `ಜಾಗಿಷ್ಠ’ರಿಂದ ಜಾಮ್  ಆಗಿರುತ್ತದೆ.  ಹೊಸ ಜಾಗಿಷ್ಠರು  ಕಾಲು ಹಾಕಲೂ  ಸ್ಥಳವಿರೋದಿಲ್ಲ.  ಅದರ ಜೊತೆಗೆ, ಬರುವವರಲ್ಲಿ  ಬಹು ಸಂಖ್ಯಾತರು  ರೋಡ್‍ರೋಲರಿನ  ಮಿನಿಯೇಚರ್‍ಗಳು.  ಈ ಬೊಜ್ಜಿಗರೊಂದಿಗೆ  ಸಣಕಲರು ಢೀ  ಕೊಟ್ಟಲ್ಲಿ ಅವರ `ಬೊಜ್ಜ’ಕ್ಕೆ  ಅವರ ಮನೆಯವರು ತಯಾರಾಗಬೇಕಾದೀತು! ಇಂಥ ಕೆಲ ವಜ್ರಕಾಯದ ಹೆಂಗಸರು ಜಾಗಿಂಗ್  ಮಾಡುವುದನ್ನು ನೋಡಿದಾಗ, ಕೆಲವರಿಗೆ ಹೆಣ್ಣು ಜಾತಿಯ ಮೇಲೇ ಅವಜ್ಞೆ ಮೂಡುವುದುಂಟು!  Of course, ಇದು ಗಂಡಸರಿಗೂ ಅನ್ವಯವಾಗುತ್ತದೆ.

ಜಾಗಿಂಗ್  ವಿಚಾರಕ್ಕೆ ಬಂದರೆ, ಹೀಗೂ ಹೇಳುತ್ತಾರೆ – ಉದ್ಯಾನದಲ್ಲಿ  ಒಬ್ಬಳು ಸುಂದರ ಯುವತಿ ಜಾಗ್  ಮಾಡುತ್ತಿದ್ದರೆ, ಕನಿಷ್ಠ ಹತ್ತು ಗಂಡಸರ ತೂಕ ಕರಗುತ್ತದೆ – ಅವಳ ಹಿಂದೆ  ಸುತ್ತುತ್ತಾ ತಾವೆಷ್ಟು ರೌಂಡ್ ಜಾಗ್ ಮಾಡಿದೆವೆಂಬ  ಪರಿಜ್ಞಾನವೂ ಇರದೇ! ಯುವತಿಯರು,  zero  size ಗಾಗಿ, ಯುವಕರು, ಉತ್ತಮ ದೇಹ ದಾರ್ಢ್ಯ‌ಕ್ಕೆ, ಬೊಜ್ಜಿಗರು  ಬಳಕುವ (?) ಮೈ ಹೊಂದಲು  – ಹೀಗೇ ಒಬ್ಬೊಬ್ಬರು ಒಂದೊಂದು ಕಾರಣಕ್ಕಾಗಿ  ಜಾಗಿಂಗ್  ಮಾಡುತ್ತಾರೆ.  ಈ ಎಲ್ಲಾ ಸರ್ಕಸ್  ಯಾಕಾಗಿ? ಉತ್ತಮ ಆರೋಗ್ಯಕ್ಕಾಗಿ, ಸ್ವಾಮೀ ಉತ್ತಮ ಆರೋಗ್ಯಕ್ಕಾಗಿ.

 

ಜಾಂಗಿಂಗರಿಗರಲ್ಲೂ  ಬಹಳ ವಿಧ‌ವುಂಟು. ಕೆಲವರು, ಹರ್ಕ್ಯುಲಸ್‍ನಂತೆ ಇಡೀ ಜಗತ್ತಿನ ಭಾರ ಹೊತ್ತಂತೆ ಮುಖ ಮಾಡಿರುತ್ತಾರೆ.  `ಇಂದೇ ಜಗತ್ಪ್ರಳಯ’ ವೆಂಬ, ವರ್ಷಕ್ಕೆ  ಮೂರು ಸರ್ತಿ ಬರುವ ಕಾರ್ಯಕ್ರಮವನ್ನು  ನೋಡಿ, ನಂಬಿ ಬಂದವರಂತೆ ಕೆಲವರ  ಧಾವಂತದ  ಜಾಗಿಂಗ್. ಜಾಗಿಂಗರಿಗರಲ್ಲಿ  ಬಹು ಪಾಲು ಜನ ಕಿವಿಗೆ  ಇಯರ್ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಜಾಗ್ ಮಾಡುವುದುಂಟು – entertainment  ಹಾಗೂ  jogging ಒಟ್ಟಿಗೆ ಮುಗಿಸುವಾ ಅಂತ.  ಇನ್ನು ಕೆಲವರು ಚಪ್ಪಾಳೆ ತಟ್ಟುತ್ತಾ,  ಕೆಲವರು ಸುತ್ತಲೂ ಕೈ ಬೀಸುತ್ತಾ (ಮತ್ತಾರೂ ಹತ್ತಿರ ಬರದಿರಲೆಂದೇ?!)  ಜಾಗುವುದುಂಟು. ಹಿಂದಿಯ `ಜಾಗೇ’ ಇಲ್ಲದ – ಅಂದರೆ ಎದ್ದೇ ಇಲ್ಲದ – ಪುಟ್ಟ ಮಕ್ಕಳನ್ನು ಹಿಡಿದೆಳೆಯುತ್ತ ಜಾಗ್ ಮಾಡುವ ಅಪ್ಪ/ಅಮ್ಮಂದಿರೂ ಇದ್ದಾರೆ.  ಆವಾಗ, ಬರಲೊಲ್ಲದ ಕುರಿಯನ್ನು ಬಲವಂತವಾಗಿ ಎಳೆಯುತ್ತಿರುವ ಕುರುಬನ ಚಿತ್ರಣ ನನ್ನ ಮನಃಪಟಲದಲ್ಲಿ ಮೂಡಿದರೆ ನನ್ನ ತಪ್ಪೇ?

ಸಾಮಾನ್ಯತಃ ಇಷ್ಟೆಲ್ಲ  work out ಮಾಡಿದರೂ ಬೊಜ್ಜು ಮಾತ್ರ ಕರಗದಿರಲು  ಕಾರಣವೇನು? ಕಾರಣ ಬಹಳ ಸರಳ.  ಸಾಮಾನ್ಯವಾಗಿ ನಾವು ಹೊಸದಾಗಿ  ಜಾಗಿಂಗ್  ಶುರು ಮಾಡಿದಾಗ, ಜಾಗಿಂಗ್ ಮಾಡಿ ಮುಗಿಸಿ ಬೆವರೊರೆಸಿಕೊಂಡು, ಪಕ್ಕದಲ್ಲಿನ  ಚಹದಂಗಡಿಯಲ್ಲಿ ಚಹಾ ಕುಡಿದು ಹೋಗುವಾ ಎಂಬ ಒಳಮನದ ದನಿಗೆ ಓಗೊಟ್ಟು, ಚಹಾ ಕುಡಿಯಲು  ಶುರು ಮಾಡುತ್ತೇವೆ. ಕ್ರಮೇಣ ಇದು ದೊಡ್ಡದಾಗುತ್ತ  light tiffin ಗೆ ಬಂದು, ಕೊನೆಗೆ  Heavy breakfast ಗೆ  ನಿಲ್ಲುತ್ತೆ!  ಜಾಗಿಂಗ್‍ನಲ್ಲಿ  ಕರಗಿಸಿದ ಕೊಬ್ಬಿನ ಎರಡರಷ್ಟು ಕೊಬ್ಬನ್ನು ತಿಂದು ಬಂದಲ್ಲಿ, ಬೊಜ್ಜು ಕರಗುವುದಾದರೂ ಎಂತು? ಅದಕ್ಕೇ ನೋಡಿ, ಸಂಜೆ chats  ತಳ್ಳುಗಾಡಿಗಳಂತೆಯೇ, ಬೆಳಿಗ್ಗೆ ಉದ್ಯಾನವನದ ಹತ್ತಿರ ‘ಮಾಮೂ’ ಚಾಯ್ ಅಂಗಡಿಗಳು ಜಾಸ್ತಿಯಾಗಿವೆ. ನಿಮ್ಮ ಉದ್ದೇಶ ಈಡೇರಲಿ ಬಿಡಲಿ, ಅವರ ಬಿಸಿನೆಸ್ಸಂತೂ ಧಂಡಿಯಾಗಿ  ಬೆಳೆಯುತ್ತಿದೆ. ಇದಕ್ಕೆ  ಅತ್ಯುತ್ತಮ  ಉದಾಹರಣೆಯೆಂದರೆ MTR  ಹೋಟೆಲ್. ಅದು ಉದ್ಧಾರ ಆಗಿದ್ದೇ ಲಾಲ್‍ಬಾಗ್‍ಗೆ  ಬರುವ ಜಾಗಿಂಗರಿಗರಿಂದ!

ನೀವೇ ಹೇಳಿ, ಈ  ಸರ್ಕಸ್‍ಗಳಿಂದ ಅವರ ಉದ್ದೇಶ  ಈಡೇರುತ್ತಾ?  ಖಂಡಿತಾ ಇಲ್ಲ. ನಮ್ಮ `ಆರೋಗ್ಯ ಭಾಗ್ಯ’ ಕ್ಕೆ (ಸಿದ್ರಾಮಣ್ಣಂದಲ್ಲ!) ಈ ಸರ್ಕಸ್‍ಗಳಿಗಿಂತ, ನಮ್ಮ ಜೀವನ ಶೈಲಿಯನ್ನು  ಬದಲಿಸಿಕೊಳ್ಳುವುದು ಉತ್ತಮ ವಿಕಲ್ಪವಾಗುತ್ತದೆ.  ಅಥವಾ ಉಳಿದಿರುವ  ಏಕಮೇವ ವಿಕಲ್ಪವಾಗುತ್ತದೆ.

ಒಮ್ಮೆ ಯೋಚಿಸಿ, ಈ ಹಿಂದೆ ನಮ್ಮ ತಾತಂದಿರು  ಸುಖವಾಗಿ,  ಆರೋಗ್ಯವಾಗಿ ಬಾಳಿತ್ತಿಲ್ಲವೇ? ಹಾಗಂತ ಅವರೇನೂ  ನಮ್ಮಂತೆ ತುಪ್ಪ, ಎಣ್ಣೆ, ಕಾಯಿ, ಹೀಗೇ ಎಷ್ಟೆಷ್ಟೋ ಪದಾರ್ಥಗಳನ್ನು ವರ್ಜಿಸಿ diet  ಮಾಡ್ತಿತ್ತಿಲ್ಲವಲ್ಲ. ಎಲ್ಲವನ್ನೂ, -ಮತ್ತೆಲ್ಲವನ್ನೂ-  ಭರ್ಜರಿಯಾಗಿ  ನಮಗಿಂತ  ಜಾಸ್ತಿ ಸೇವಿಸಿಯೇ  ಆರೋಗ್ಯವಾಗಿದ್ದು ಹೇಗೆ? ಇದರ ಗುಟ್ಟು  ಅವರ ಜೀವನ ಶೈಲಿ. ಅವರು ಯಾವತ್ತೂ  ಮೂಲೆ ಅಂಗಡಿಗೆ ಸ್ಕೂಟಿಯಲ್ಲಿ ಹೋಗುತ್ತಿರಲಿಲ್ಲ.  ಬೆರ್ಚಪ್ಪಗಳಂತೆ  ಕೂತಲ್ಲೇ ಕೂತು ಕೆಲಸ ಮಾಡುತ್ತಿರಲಿಲ್ಲ.  ಅವರು ಶ್ರಮಜೀವಿಗಳಾಗಿದ್ದರು.  ಆದರೆ ನಾವು . . .?

ನಮಗೆ ಸೈಕಲ್ ತುಳಿಯೋದು ಕಷ್ಟ ಅಂತ, ಬೈಕು, ಕಾರು ಅಂತ ಹೋಗ್ತೀವಿ.  ಇದರಿಂದ ಬೊಜ್ಜು ಬರತ್ತೆ.  ವೈದ್ಯರ ಹತ್ತಿರ ಹೋಗ್ತೀವಿ.  ಅವರು ಬೊಜ್ಜು ಕರಗಿಸಲಿಕ್ಕೆ ,  gymಗೆ  ಹೋಗಿ ಸೈಕಲ್ ಮಾಡಲು ಸಲಹೆ  ನೀಡುತ್ತಾರೆ.  ನಾವು ಅಲ್ಲಿ  ಸೈಕಲ್ ಹೊಡೆದು ಕೃತಾರ್ಥರಾಗುತ್ತೇವೆ.  ಇದಲ್ಲವೇ `ಜೀವನ ಚಕ್ರ’! ಬೇಡವೆಂದು ಬಿಟ್ಟ ಸೈಕಲ್ಲೇ ಗತಿಯಾಯ್ತೇ?

ಕೃಷಿ ನಿರತರಾಗಿರುವ  ರೈತಾಪಿ ಜನರಲ್ಲಿ  ಒಬ್ಬೇ ಒಬ್ಬ ಬೊಜ್ಜಿನವನನ್ನ ತೋರಿಸಿ ನೋಡೋಣ. (ರೈತರೆಂದು ಹೇಳಿಕೊಳ್ಳುವ ರೈತ ನಾಯಕರನ್ನು  ಹೊರತು ಪಡಿಸಿ) ಕಾಣಲಸಾಧ್ಯ. ಅದೇ ನಮ್ಮ ನಗರಜೀವಿಗಳಲ್ಲಿ ಬೊಜ್ಜಿರದವರನ್ನು  ಹುಡುಕುವುದು ತ್ರಾಸದಾಯಕವಾಗುತ್ತದೆ.  ಅದರಲ್ಲೂ  ಮಧ್ಯವಯಸ್ಕರಲ್ಲಿಯಂತೂ  ಬೊಜ್ಜು, ಪ್ರಾಥಮಿಕ ಗುಣಲಕ್ಷಣವಾಗಿ ಬಿಟ್ಟಿದೆ.  ಕಾರಣ, ನಮ್ಮ ಜೀವನ ಶೈಲಿ. ನಮಗೆ ನಡೆಯೋದು ಅಂದ್ರೆ ಆಗದು.  ಕಾರಿನ ದಾಸರು ನಾವು. ಬಾವಿಯಿಂದ  ನೀರು ಸೇದಿ ನಮಗೆ ಗೊತ್ತಿಲ್ಲ.  Motor  ಉಂಟಲ್ಲ ! ಹೀಗೇ ನಮ್ಮ ಮೈ ಬಗ್ಗಿಸಿ ದುಡಿಯುವಂಥ  ಕಾರ್ಯಗಳಿಗೆಲ್ಲ  ಯಂತ್ರಗಳನ್ನು  ತಂದು, ಶ್ರಮವೆಂದರೇನು ಅಂತಲೇ ನಮಗೆ ತಿಳಿದಿಲ್ಲ.  ಹೀಗಾದಾಗ, ನಾವು ಸೇವಿಸಿದ ಕ್ಯಾಲೋರಿಗಳು   burn ಆಗುವುದು ಹೇಗೆ? ಅವು  burn ಆಗದೇ  ಮೈಯಲ್ಲಿ ಕೂತು ಬೊಜ್ಜನ್ನು ತರುತ್ತವೆ.  ಈ  ಬೊಜ್ಜೋ, ಬಹು ದೊಡ್ಡ ಕುಟುಂಬಸ್ಥ.  ತಾನು ಬರುವುದಲ್ಲದೇ,  ತನ್ನೊಂದಿಗೆ ಬಿ.ಪಿ. ಶುಗರ್ ಮತ್ತಿತರ ಹತ್ತು ಖಾಯಿಲೆಗಳನ್ನು ತರುತ್ತದೆ.  ಒಂದು ತೊಗೊಂಡ್ರೆ ಮತ್ತೊಂದು  ಉಚಿತ ಎಂದಿದ್ದಾಗ, ಮರೆಯದೇ, ಆ ವಸ್ತು -ಬೇಕಿರಲಿ, ಇಲ್ಲದಿರಲಿ-  ಕೊಳ್ಳುವ ಮಂದಿಯಲ್ಲವೇ ನಾವು?!

ಅಮೇರಿಕಾದಂಥ ಮುಂದುವರೆದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವಿಪರೀತದ  ಯಾಂತ್ರೀಕರಣದಿಂದ, ವಿಪರೀತ  ಬೊಜ್ಜುತನ  ಕಂಡು ಬರುತ್ತದೆ.  ಇಂಥದ್ದು ನೋಡಿಯೇ ಮಹನೀಯರೊಬ್ಬರು ಹೇಳಿದ್ದು – `ಮಾನವ ಬದುಕುವುದಕ್ಕಾಗಿ ತಿನ್ನಬೇಕು, ತಿನ್ನುವುದಕ್ಕಾಗಿ ಬದುಕುವುದಲ್ಲ’ ಅಂತ. ಆದರೆ,  ಈ ಜನರನ್ನು  ನೋಡಿದಾಗ, ಇವರು ಎರಡನೇ ಜಾತಿಗೆ  ಸೇರಿದವರೆಂಬುದು ಮಗುವಿಗೂ ಅರ್ಥವಾಗುತ್ತದೆ.  `ಮಾಡಿದ್ದುಣ್ಣೋ ಮಹರಾಯ’ ಅನ್ನುವ ಗಾದೆಯನ್ನು ತಪ್ಪಾಗಿ ಅರ್ಥೈಸಿ, ಮಾಡಿದ್ದೆಲ್ಲವನ್ನೂ ಉಂಡಿದ್ದರಿಂದಲೇ ಆಗಿದ್ದು, ಈ  ಪರಿಪಾಟಲು! ಇಂಥವರು  ಆರೋಗ್ಯಕ್ಕಾಗಿ  ವಿವಿಧ‌ ಸರ್ಕಸ್  ಮಾಡಲೇ ಬೇಕಾದ  ಅನಿವಾರ್ಯತೆಯಿದೆ!

* * *

ಜನಗಳ ಈ  health consciousness ನ್ನು ತಮ್ಮ  business potential ಆಗಿ ಪರಿವರ್ತಿಸಿ  ಕೊಂಡವರು  gymನವರು, ಪಥ್ಯ ವೈದ್ಯರು,  ಮಧುಮೇಹ ವೈದ್ಯರು  ಇತ್ಯಾದಿ. ಜನರ `ಆರೋಗ್ಯಕ್ಕಾಗಿ’ ಅನಾರೋಗ್ಯಕರ ಪೈಪೋಟಿ  ನಡೆಸುತ್ತ  gymನವರು  ಜನರನ್ನ ತಮ್ಮತ್ತ ಸೆಳೆಯುತ್ತಾರೆ.  ತಮ್ಮಲ್ಲಿ  work out ಮಾಡಿ, `ಸುಂದರ’ ದೇಹ ಪಡೆಯಲು ಪ್ರೇರೇಪಿಸುತ್ತಾರೆ.  ಆಯುರ್ವೇದಿಕ್  ಔಷಧಿಯವರೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ! ನಾವುಗಳೋ ಇವರುಗಳ ಮಾತಿಗೆ ಮರುಳಾಗಿ, ಆರೋಗ್ಯಕ್ಕಾಗಿ  ಎಂಥ ಸರ್ಕಸ್ಸಿಗೂ  ತಯಾರಾಗಿ ಬಿಡುತ್ತೇವೆ.  ಈ ಎಲ್ಲರ ಉದ್ಧಾರ ನಮ್ಮಿಂದ,  ನಮ್ಮ ಸರ್ಕಸ್‍ನಿಂದ!
ಒಂದೊಂದು dietician ಒಂದೊಂದು ಸಲಹೆ ಕೊಡುತ್ತಾರೆ.  ಒಬ್ಬ ದಿನಕ್ಕೆ 1 ಚಪಾತಿ, 1 ಲೋಟ ಹಾಲು – ಮಾಂಸದ ಯೋಚನೆಯನ್ನೂ ಮಾಡದೇ – ಸೇವಿಸಲು ಹೇಳಿದರೆ, ಮತ್ತೊಬ್ಬ  ಮಾಂಸ ಸೇವನೆಗೆ ಅಡ್ಡಿಯೇನಿಲ್ಲ ಅನ್ನುತ್ತಾನೆ.  (ಸಾಮಾನ್ಯತಃ ಜನ ಪಥ್ಯವನ್ನು  strict ಆಗಿ  ನಡೆಸೋದಿಲ್ಲ  ಅನ್ನುವ ನಂಬಿಕೆಯಿಂದ ಇವರು ಧೈರ್ಯವಾಗಿ ಸಲಹೆ ನೀಡುತ್ತಾರಾ?!) ಕೆಲವರು ಯೋಗ ಮಾಡಲು  ಸಲಹೆ ಮಾಡಿದರೆ, ಕೆಲವರು ಜಿಮ್‍ಗೆ, ಮತ್ತೆ ಕೆಲವರು  ಜಾಗಿಂಗ್‍ಗೆ  ಸಲಹೆ ನೀಡುತ್ತಾರೆ.  ಯಾರ ಮಾತನ್ನು  ನಂಬಬೇಕು ಹೇಳಿ! ಒಮ್ಮೆಯಂತೂ ಓರ್ವ ವೈದ್ಯ ನನಗೆ ವಾರಕ್ಕೆ ಐದು  ದಿನ ವ್ಯಾಯಾಮ ಮಾಡಿ, ಉಳಿದೆರಡು ದಿನ ಮಾಡದಿದ್ದರೂ ನಡೆದೀತು  ಎಂದಿದ್ದ!  Software ನಲ್ಲಿ ಕೆಲಸ ಸಿಗದೇ ಡಾಕ್ಟರಾಗಿದ್ದನೋ ಏನೋ ಆತ!
ಈ ಬೋಗಸ್  ಮಾತುಗಳಿಗೆ ಬಲಿ ಬೀಳದೇ ನಮ್ಮ ಜೀವನ  ಶೈಲಿಯನ್ನು ತಿದ್ದಿ ತೀಡಿಕೊಂಡರೆ, ಈ ಪಾಟಿ ಸರ್ಕಸ್‍ಗಳಿಂದ ನಮಗೆ ಮುಕ್ತಿ ಸಿಕ್ಕೀತು.
* * *
ಆರೋಗ್ಯಕ್ಕಾಗಿನ  ಕೆಲವೊಂದು ಸರ್ಕಸ್ ಅಪಾಯಕಾರಿಯೂ  ಆದೀತು.  ಬೊಜ್ಜುತನದ  ನಿವಾರಣೆಗೆ  short cut ವಿಧಾನವಾಗಿ  ಕೊಬ್ಬು ಕೊಯ್ಸಿಕೊಳ್ಳುವ ವಿಧಾನವೊಂದಿದೆಯಂತೆ. ಈ ಆಪರೇಷನ್‍ಗೆ ಸಿನಿಮಾ ರಂಗದ ಘಟಾನುಘಟಿಗಳೆಲ್ಲ ಕ್ಯೂ ನಿಂತು, ಈಗ ಆ ಬಿಸಿನೆಸ್  ಅಗಾಧ‌ವಾಗಿ  ಬೆಳೆದಿದೆಯಂತೆ.  ಇದಕ್ಕೆ ಉದಾಹರಣೆಯೆಂದರೆ, 30 ಎಮ್ಮೆಯಷ್ಟು ತೂಕವಿದ್ದ ಅಡ್ನಾನ್ ಸಾಮಿ ಎಂಬ ಗಾಯಕ ಈಗ ದೀಪಿಕಾ ಪಡುಕೋಣೆಯಂತೆ ಲತಾಂಗಿ, ಅಲ್ಲಲ್ಲ, ಲ‌ತಾಂಗನಾಗಿರುವುದು! ಆದರೆ,  ಆರತಿ ಅಗರ್‍ವಾಲ್ ಎಂಬ ತೆಲುಗಿನ `ತೂಕ’ದ ಚೆಲುವೆ, ಈ  short cut ಆಪರೇಷನ್  ವಿಫಲವಾಗಿ, ದುರ್ದೈವವಶಾತ್  ಸಾವನ್ನಪ್ಪಿದಳು.  ಹೇಳಿ,  ಈ ಸರ್ಕಸ್‍ಗಳು ನಮಗೆ ಬೇಕೇ?
ಇನ್ನಾದರೂ  ನಾವು ನಮ್ಮ ಜೀವನ ಶೈಲಿಯನ್ನು  ಬದಲಿಸಿಕೊಳ್ಳಲು  ಪ್ರಯತ್ನ ಪಡೋಣವೇ? ಒಂದೆರಡು ಕಿ.ಮೀ. ದೂರದ ಯಾವುದೇ  ಗಮ್ಯಸ್ಥಾನಕ್ಕೆ -ಆಫೀಸ್, ಅಂಗಡಿ, ಸಿನಿಮಾ ಯಾವುದಕ್ಕೇ ಆಗಲಿ- ಬೈಕ್ ಯಾ  ಕಾರು ಉಪಯೋಗಿಸದೇ ನಡೆದೇ ಹೋಗುವುದನ್ನು ಅಭ್ಯಾಸ ಮಾಡೋಣವೇ? ಮಿಕ್ಸಿ,  vaccume cleaner  ಮುಂತಾದ gadget ಗಳನ್ನು ಮೂಲೆಗೊತ್ತಿ, ಕನಿಷ್ಠ  ಕೆಲವೊಂದು  ದೈಹಿಕ ಶ್ರಮದ ಕೆಲಸಗಳನ್ನು ಮಾಡೋಣವೇ?  ಹಿತ-ಮಿತದಲ್ಲಿ ಆಹಾರವನ್ನು ಸೇವಿಸೋಣವೇ? ನಮ್ಮ ಕುಟುಂಬ ವೈದ್ಯರ ಮಾತಿನಲ್ಲೇ ಹೇಳುವುದಾದರೆ – `ಎಲ್ಲೀವರೆಗೆ ನೀವು ತಿನ್ನೋ ಕ್ಯಾಲೋರಿಗಳನ್ನು ಪೂರಾ  burn  ಮಾಡಿ (ಅಂದರೆ ದೈಹಿಕ  ಶ್ರಮದಲ್ಲಿ ಅವುಗಳನ್ನು ಸಂಪೂರ್ಣ ಉಪಯೋಗಿಸಿ)  ಮುಗಿಸುತ್ತೀರೋ, ಅಲ್ಲೀವರೆಗೆ ನೀವು ಬೊಜ್ಜಿನಿಂದ  ದೂರವಿರುತ್ತೀರಿ – ತನ್ಮೂಲಕ  ಅದರ after effectಗಳಾದ ಬಿ.ಪಿ. ಶುಗರ್‍ಗಳಿಂದಲೂ  ಮುಕ್ತಿ ಹೊಂದುತ್ತೀರಿ.  ಆರೋಗ್ಯಕ್ಕಾಗಿ ಬೇರಾವ ಸರ್ಕಸ್‍ನ ಅಗತ್ಯವೂ ಇಲ್ಲ.’ ಆದರಿದು  ನಮ್ಮಿಂದ ಸಾಧ್ಯ‌ವೇ?  ಇಲ್ಲವಾದ್ದರಿಂದಲೇ, ಈ `ಆರೋಗ್ಯಕ್ಕಾಗಿ ಸರ್ಕಸ್’  ಮುಂದುವರೆಯುತ್ತಲೇ ಇರುತ್ತದೆ – ಅವಿರತವಾಗಿ.
* * *

 

Dantha Lahari

ಜಗತ್ತಿನಲ್ಲಿ  ಯಾರಿಗೆ ನಗು / ನಸುನಗು ಇಷ್ಟ ಇಲ್ಲ ಹೇಳಿ. ನಸುನಗು ಯಾರನ್ನಾದರೂ  mesmerise ಮಾಡುತ್ತದೆ. ಅದರಲ್ಲೂ  ಮಗುವಿನ ನಗುವಂತೂ ಎಂಥ ರಾಕ್ಷಸನನ್ನೂ ಮಂತ್ರಮುಗ್ಧನನ್ನಾಗಿಸುತ್ತದೆ.  ಈ ನಗುವಿಗೆ  ಬೆನ್ನೆಲುಬಾಗಿ support  ಕೊಡುವುದೇ ದಂತಪಂಕ್ತಿ -ಹಲ್ಲಿನ ಸಾಲು. ಹಲ್ಲು ಭೌತಿಕವಾಗಿ ಮಾತ್ರ ತುಟಿಯಂಚಿನ  ನಗೆಗೆ supportive ಆಗಿಲ್ಲ – ಸೌಂದರ್ಯ ಪ್ರಜ್ಞಾನುಸಾರವಾಗಿಯೂ ನಗೆಗೆ supportive ಆಗಿದೆ.  ಕೇವಲ ಸೌಂದರ್ಯದ  ದೃಷ್ಟಿಯಿಂದಷ್ಟೇ ನೋಡಿದಾಗ, ನೀವು ಆನಂದಿಸುವುದು ಸುಂದರ ದಂತಪಂಕ್ತಿಯ ನಗುವನ್ನೋ, ಅಥವಾ ಬೊಚ್ಚುಬಾಯಿಯ‌ ನಗುವನ್ನೋ? ನಗುವಿಗೂ ಹಲ್ಲಿಗೂ ಅವಿನಾಭಾವ ಸಂಬಂಧವಿದೆಯೆಂದು ಈಗಲಾದರೂ ಒಪ್ಪುತ್ತೀರಾ?

ಈ ಮೇಲೆ ಹೇಳಿದ್ದಕ್ಕೆ ಮಗುವಿನ ಬೊಚ್ಚು ಬಾಯಿಯ ನಗು ಅಪವಾದ ‍- ‍‍‍ಮಗುವಿನ ನಗುವೇನು, ಅದರ ಯಾವುದೇ ಚರ್ಯೆ ನಮಗೆ ಆನಂದ‌ದಾಯಕ. ಆಗಷ್ಟೇ ಒಂದೋ ಎರಡೋ ಹಲ್ಲು ಬಂದ ಮಗುವಿನ ನಗು ನಮಗೆ ಒಂದು ninety ಹಾಕಿದಷ್ಟು  ಮತ್ತೇರಿಸುವುದು ಸಹಜ.  ಕೆಲವು ಬಾರಿ ಈ ninety ಅಪಾಯಕಾರಿಯೂ ಆದೀತು. ಆ ಮಗು ಮುಗ್ಧವಾಗಿ, ನಮ್ಮನ್ನು ಅದರ `ಆಹಾರ’ ವೆಂದೆಣಿಸಿ, ಕಚ್ಚಿದಾಗ‌!

ಕವಿವರೇಣ್ಯರನ್ನು ಕೇಳಿ, ಮುಖ ಸೌಂದರ್ಯದಲ್ಲಿ (ಮುಖ ಸೌಂದರ್ಯದಲ್ಲಿ ಮಾತ್ರ!) ಅವರು ಮೊದಲ ಪ್ರಾಶಸ್ತ್ಯ ನೀಡುವುದು ಕಣ್ಣುಗಳಿಗೆ.  ಆದರೆ, ಮುಖದ ಸುರೂಪ ಚಿಕಿತ್ಸಕರ  ಪ್ರಥಮ ಆಯ್ಕೆ, ಹಲ್ಲುಗಳು-ಸುಂದರ ದಂತಪಂಕ್ತಿ. ಕಡಿಮೆ ಅಪಾಯದಲ್ಲಿ ಇವುಗಳನ್ನು ತಿದ್ದಿ ತೀಡಬಹುದೆಂಬುದು ಇದರ ಹಿಂದಿನ ಮರ್ಮವಿದ್ದರೂ ಇದ್ದೀತೇ ! ಎಲ್ಲ ಪೂಜೆಗಳ ಮುಂಚೆ ಗಣೇಶ ಪೂಜೆ ಮಾಡಿದಂತೆ,  ಮುಖ ಸುರೂಪ ಚಿಕಿತ್ಸೆಯಲ್ಲಿ ಸುದಂತಪಂಕ್ತೀಕರಣಕ್ಕೆ ಅಗ್ರಪೂಜೆ.

ರಾಜಕಾರಣಿಗಳು, ಓಟಿಗಾಗಿ ಜೇಬಿಗೆ ಕೈ ಹಾಕುತ್ತಿದ್ದುದು  ಈವರೆಗೆ ಸಾಮಾನ್ಯವಾಗಿತ್ತು.  ಆದ್ರೆ ನಂ ಸಿದ್ರಾಮಣ್ಣ  ಹಲ್ಲಿಗೇ ಕೈ ಹಾಕಿದ್ದಾರೆ –  `ದಂತಭಾಗ್ಯ’  ನೀಡುವ ಮೂಲಕ! (ಕೈ ಪಕ್ಷದವರಾಗಿದ್ದಕ್ಕೆ ಅವರು ಹಲ್ಲಿಗೆ `ಕೈ’ ಹಾಕಿದ್ದಾ  ಗೊತ್ತಿಲ್ಲ)  ಅಂತೂ  `ಕೈ’ ಯಿಂದ `ದಂತಭಾಗ್ಯ’ (ಅಂದ್ರೆ  ಕಪಾಲಮೋಕ್ಷ!) ಈ `ದಂತಭಾಗ್ಯ’ ಎಲ್ಲರಿಗಲ್ಲ – ಅಹಿಂದ ಬೊಚ್ಚು ಬಾಯಿಗಳಿಗೆ ಮಾತ್ರ.

ಲಗಾಮಿಲ್ಲದ ಬಿಚ್ಚುಬಾಯಿಯಿಂದಾಗಿ,  ಬೊಚ್ಚು ಬಾಯಿಯ ಭಾಗ್ಯವೊದಗುವುದು ಜೀವನ ಧರ್ಮ.  ಜನರ ಕೋಪಕ್ಕೆ ಮೊದಲ ಬಲಿಯಾಗುವುದೇ ಹಲ್ಲು. ಅದಕ್ಕೇ `ಹಲ್ಲುದಿರಿಸಿ ಬಿಡ್ತೀನಿ’  ಅನ್ನೋದು ಜನರ ಆಪ್ಯಾಯಮಾನವಾದ ಬೈಗುಳ. ಧರ್ಮವೋ, ಅಧರ್ಮವೋ, ಸಮಾಜದಲ್ಲಿ  ಏನಾದರೂ, ಹಲ್ಲು ಉದುರುವುದು ಮಾತ್ರ ಬಡವರದ್ದೇ. ಅದಕ್ಕೇ ಹುಟ್ಟಿರೋದು ಈ ಗಾದೆಗಳು – `ಬಡವಾ, ನೀ ಮಡಗ್ಧ್ಹಂಗಿರು’  `ಬಡವನ ಕೋಪ, ದವಡೆಗೆ ಮೂಲ !’.

ನಮ್ಮೆದುರಿದ್ದವನನ್ನು ಮಾತಿನಲ್ಲಿ ಸೋಲಿಸಲಾಗದ ಅಸಹಾಯಕತೆಯಲ್ಲಿ, ಕೋಪ  ನೆತ್ತಿಗೇರಿ, ದೈಹಿಕ ಹಲ್ಲೆಗೆ ಶರಣಾಗುತ್ತೇವಲ್ಲಾ, ಅದರ ಮೊದಲ ಮೆಟ್ಟಲೇ ಕಪಾಲಮೋಕ್ಷ.  ಆದರಿದಕ್ಕೆ ಬಲಿಯಾಗುವುದು ಮಾತ್ರ ಹಲ್ಲೇ (ಅದಕ್ಕೇ ಇರಬೇಕು, ಇದಕ್ಕೆ ನಾವು ಹೇಳುವುದು ‘ಹಲ್ಲೆ!’)  ಹಳೆಯ ಚಲನಚಿತ್ರಗಳಲ್ಲಿ ಗಂಡ ಹೆಂಡಿರ ಜಗಳ ಸಮಾಪ್ತಿಯಾಗುತ್ತಿದ್ದುದೇ ಗಂಡನಿಂದ  ಹೆಂಡತಿಗೆ ಕಪಾಲಮೋಕ್ಷದಲ್ಲಿ.  ಈಗ ಕಾಲ ಬದಲಾಗಿದೆ ಬಿಡಿ–ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ!  ಪಾತ್ರ  ತಿರುವು ಮುರುವಾದರೂ, ಹಲ್ಲೆಯಾಗುವುದು ಹಲ್ಲಿಗೇ – ಆಗ ಹೆಂಡಿರ ಹಲ್ಲು, ಈಗ ಗಂಡಂದಿರ ಹಲ್ಲು!

* * *

ಪ್ರಣಯದ  ಪ್ರಥಮ ಸೋಪಾನವಾದ `ಚುಂಬನ’ ದಲ್ಲಿ ತುಟಿಯೇ hero ಆದರೂ, ಹಲ್ಲು ಅಂಬೋ support charecter ಇಲ್ಲದೇ `ಕಾರ್ಯಸಿದ್ಧಿ’ ಆಗದು –ಇದನ್ನು  ರಸಿಕರಾಗಲೀ, ಅರಸಿಕರಾಗಲೀ ಯಾರಾದರೂ ಒಪ್ಪುವಂಥದೇ.  ಅದಕ್ಕೇ ಹೇಳಿದ್ದು `ಅನುಭವಸ್ಥ’ರು – `ಪ್ರಥಮ ಚುಂಬನಂ ದಂತ ಭಗ್ನಂ’  ಅಂತ.

ಈ ಗಾದೆಯನ್ನು ರಾಸಿಕ್ಯಾನುಸಾರ ಎರಡು ರೀತಿ ಅರ್ಥೈಸಿಬಹುದೆಂಬುದು ನನ್ನ ಅಂಬೋಣ.  ತಪ್ಪಿದ್ದಲ್ಲಿ ಕ್ಷಮೆಯಿರಲಿ.

`ಅಗ್ನಿಕಾರ್ಯ ಬಾರದ ಬ್ರಾಹ್ಮಣ‌ ಗಡ್ಡ ಸುಟ್ಕೊಂಡ’ ಅನ್ನೋ ಗಾದೆಯಂತೆ, ಪ್ರೀತಿಯನ್ನು ಸರಿಯಾಗಿ ಹ್ಯಾಂಡಲ್ ಮಾಡಲಾಗದೇ, ಅವಸರಪಟ್ಟು, ಪ್ರೇಮಿ ಚುಂಬನದ stage ಗೆ  ಹೋಗಿ ಹೊಡೆತ ತಿನ್ನುವುದು ಒಂದರ್ಥ.

ಈ ಗಾದೆ ಧ್ವನಿಸಬಹುದಾದ ಇನ್ನೊಂದರ್ಥಕ್ಕೆ ಸಾಂಪ್ರದಾಯಕರ ಕ್ಷಮೆಯಿರಲಿ. ಚುಂಬನದ ಮಧುರಾನುಭೂತಿಯನ್ನು ತಪ್ಪಂದಾಜಿಸಿ ವಾತ್ಸ್ಯಾಯನನ ಕಾಮಸೂತ್ರದ `ದಂತಕ್ಷತ’ದ ಅವಾಸ್ತವಿಕ ಪ್ರಯೋಗಗಳಿಂದಲೂ ಹೀಗಾಗುವುದುಂಟು! `ಹೀಗೂ ಉಂಟೇ?!’ ಅನ್ನಬೇಡಿ– ಅದು  `ಅವರವರ ಭಾವಕ್ಕೆ, ಅವರವರ ಭಕುತಿಗೆ!’

`ಚುಂಬನದಲ್ಲಿ ಹಲ್ಲಿನ ಪಾತ್ರ’ ಅನ್ನುವ ವಿಷಯದಲ್ಲಿ Phd ಮಾಡಿದಲ್ಲಿ ನನಗೆ ಓದುಗರು ಸಹಾಯ ನೀಡಿಯಾರು ಎನ್ನುವ ಆಶಾಭಾವನೆ. `ಮಾಹಿತಿ’ಗಾಗಿಯಷ್ಟೇ ಸ್ವಾಮಿ, `ಅನುಭವ’ಕ್ಕಾಗಿ ಅಲ್ಲ ! ನೋಡಿ, ಇಲ್ಲೂ ಉದುರುವುದು ನನ್ನ ಹಲ್ಲೇ!!

* * *

ಹಿಂದೂ ಧರ್ಮಾಚರಣೆಯಲ್ಲಿ ಪ್ರಮುಖವಾದ ತಳಹದಿಯೆಂದರೆ – ಪುನರ್ಜನ್ಮದಲ್ಲಿನ  ನಂಬಿಕೆ.  ಹಿಂದಿನ  ವೇದವಕ್ತಾರರ ಈ ನಂಬಿಕೆಗೆ ನಮ್ಮ ಹಲ್ಲುಗಳೇ ಕಾರಣವೋ ಎಂಬುದು ನನ್ನ ಶಂಕೆ. ಯಾಕಂತಿರೋ, ಈ ಹಲ್ಲುಗಳೂ ನಮ್ಮ ಶೈಶವಾವಸ್ಥೆಯಲ್ಲಿ ಒಮ್ಮೆ ಬಿದ್ದು ಮತ್ತೆ ಹುಟ್ಟುತ್ತವಷ್ಟೇ ? ದವಡೆ ಹಲ್ಲು ಬಿಟ್ಟು ಉಳಿದೆಲ್ಲವೂ ಒಮ್ಮೆ ಬಿದ್ದು ಹುಟ್ಟುತ್ತವೆ.

ಮಕ್ಕಳ ಹಲ್ಲು ಬರುವಿಕೆ  ತಾಯಂದಿರ  ಸಂಭ್ರಮಕ್ಕೆ ಕಾರಣವಾಗುತ್ತದೆ. (ಪಾಪ ಮೊದಲ ಸಲ ಹಲ್ಲು ಹುಟ್ಟಿದಾಗ ಆ ಮಗು ಬೇಧಿಯಿಂದ  ತೊಳಲಾಡುತ್ತಿದ್ದರೂ ಕೂಡಾ !)  ಹಲ್ಲು ಬರೋದು ಸ್ವಲ್ಪ ತಡವಾದರೂ ಸಾಕು, ಸಕಲ  ಬೇರುಗಳಿಂದ ಮಗುವಿನ ಸೂಕ್ಷ್ಮ ವಸಡನ್ನುಜ್ಜಿ, ಸಿಸೇರಿಯನ್ ಮಾಡಿ, ಹಲ್ಲನ್ನು ಹೊರ ಮೂಡಿಸುವ  ಅಮ್ಮಂದಿರೂ ಇದ್ದಾರೆ.  ದೊಡ್ಡವರ ಹಲ್ಲುಗಳ ವಿಕೃತಿ ಸಹ್ಯವಾಗೋಲ್ಲ – ಆದರೆ,  ಮಕ್ಕಳಲ್ಲಿ ಹಲ್ಲು ಹೇಗಿದ್ದರೂ  ಚೆಂದ.  ಒಂದೊಂದೂ  ಒಂದೊಂದು ರೂಪ. ಮಕ್ಕಳೇ ಹಾಗೆ.

ಹುಲುಮಾನವರಂತೆ ಹಲ್ಲುಗಳಲ್ಲೂ ಜಾತಿ ಭೇದವಿದೆ – ಬಾಚೀಹಲ್ಲು, ಕೋರೆಹಲ್ಲು, ದವಡೇ ಹಲ್ಲುಗಳೆಂಬ ಪ್ರಭೇದಗಳು. (ಪುಣ್ಯ, ಇವು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆಯಷ್ಟೇ, ಶಿವಾಯಿ, ನಮ್ಮಂತೆ ಒಬ್ಬರ ಮೇಲೊಬ್ಬರು `ಹಲ್ಲು’ ಮಸೆಯುವುದಿಲ್ಲ). ಇವುಗಳಲ್ಲಿ ಕೋರೆಹಲ್ಲು `ಕ್ರೂರತನದ ಸಂಕೇತ’ ದ ಪೇಟೆಂಟ್ ಹೊಂದಿದೆ.  ಕೋರೆಹಲ್ಲಿಲ್ಲದೇ ಯಾವುದೇ ರಾಕ್ಷಸನ ಚಿತ್ರ ಪೂರ್ಣಗೊಳ್ಳುವುದೇ ಇಲ್ಲ ! ಆಹಾರವನ್ನು ಸಿಗಿಯುವ  ಕಾರ್ಯಕಾರಣದಿಂದಲೇ ಕೋರೆಹಲ್ಲಿಗೆ ಈ ಪ್ರಾಮುಖ್ಯ.

ಹಿಂದಿನ ಪೌರಾಣಿಕ ಚಲನಚಿತ್ರಗಳಲ್ಲಿ ರಾಕ್ಷಸರನ್ನು portrait ಮಾಡಲು ಕೋರೆಹಲ್ಲನ್ನು ಬಳಸುತ್ತಿದ್ದಂತೆಯೇ, ಈಗಿನ ಚಲನಚಿತ್ರಗಳಲ್ಲಿ ವಿದೂಷಕರನ್ನು  ಕುರೂಪಿಗಳನ್ನಾಗಿ ಬಿಂಬಿಸಲು `ಹಲ್ಲುಬ್ಬ’ನ್ನು ಬಳಸಲಾಗುತ್ತಿದೆ. ಏನೋ ಸ್ವಲ್ಪ  ಹಲ್ಲುಬ್ಬಾಗಿದ್ದರೆ ಸಾಕು, ಜನ ಅವರಿಗೆ `ತುರಿಮಣೆ’ ಎನ್ನುವ ಅಭಿನಾಮದಿಂದ ಕರೆಯಲಾರಂಭಿಸುತ್ತಾರೆ ! ಅಂಥವರಿಗೆ ಕಾಯಿ ತುರಿಯುವುದು ಕಷ್ಟವಾಗೋದಿಲ್ಲ ಅನ್ನುವ ಕಾರಣಕ್ಕೆ. ರಸಿಕರು, ಈ ಹಲ್ಲುಬ್ಬು ಚುಂಬನದ ವೇಳೆ ತ್ರಾಸದಾಯಕ ಎಂದರೂ, ಇದು  ವೈಜ್ಞಾನಿಕವಾಗೇನೂ ದೃಢಪಟ್ಟಿಲ್ಲ ! ಈ ಹಲ್ಲುಬ್ಬನ್ನು ನಿವಾರಿಸಿಕೊಳ್ಳಲೋಸುಗ  ದಂತವೈದ್ಯರಿಗೆ  ಒಂದಿಷ್ಟು  ದುಡ್ಡು ಪೀಕಿ, `ತಂತಿಬೇಲಿ’ ಹಾಕಿಸಿಕೊಂಡು, ಸುರೂಪ ಚಿಕಿತ್ಸೆ ಪಡೆಯುವುದೂ ಉಂಟು.

ಸೌಂದರ್ಯದ ಖನಿ – ರೂಪದರ್ಶಿಗಳ ಪ್ರಮುಖ ಆಕರ್ಷಣೆಯೇ ಮುಖ ಸೌಂದರ್ಯ (ಕೆಲ ಬರಗೆಟ್ಟ ರಸಿಕರನ್ನು ಹೊರತು ಪಡಿಸಿ ! ). ಅದರಲ್ಲೂ ಅವರ  ಸುಂದರ ದಂತಪಂಕ್ತಿಗೆ ಮೊದಲ ಪ್ರಾಶಸ್ತ್ಯ. ಹಾಗಾಗಿಯೇ ಅವರ ದಂತಪಂಕ್ತಿ –  ಕವಿವಾಣಿಗನುಗುಣವಾಗಿ, ದಾಳಿಂಬೆ ಕಾಳ್ಗಳಂತೆ ! ಇದಕ್ಕಾಗಿ  ರೂಪದರ್ಶಿಗಳು ಎಂಥ ಸುರೂಪಿ ಚಿಕಿತ್ಸೆಗೂ ತಯಾರು.

ದಂತಪಂಕ್ತಿ ದಾಳಿಂಬೆ ಕಾಳುಗಳ ತರಹ ಇದ್ದರಷ್ಟೇ ಚಂದ ಅನ್ನುವುದು ಸುಳ್ಳು.  ಈ ಹಿಂದೆ ಮೌಸಮೀ ಚಟರ್ಜಿ ಎನ್ನುವ ನಟೀಮಣಿಗೆ ಒಂದು ಉಬ್ಬು ಹಲ್ಲಿತ್ತು. ಅದೇ ಆಕೆಯ ಸೌಂದರ್ಯದ  ರಹಸ್ಯವಾಗಿತ್ತು.  ನನ್ನ ಕಾಲದವರಾದ್ರೆ  ಇದಕ್ಕೆ ಹ್ಞೂ ಅಂದೀರಿ, ಇಲ್ಲವಾದರೆ ನನ್ನ ಮೇಲೆ ಹಲ್ಲು ಮಸೆದೀರಿ !

* * *

ಇಬ್ಬರ ನಡುವಿನ ಜಗಳದಲ್ಲಿ, ಕಾವೇರುವುದೇ ಒಬ್ಬ ಇನ್ನೊಬ್ಬನಿಗೆ `ಹಲ್ಲು ಮುರೀತೀನಿ ನೋಡು’  ಎನ್ನುವದರಿಂದ. ಚಲನಚಿತ್ರಗಳಲ್ಲಿ, ಹೀರೋ ಮೊದಮೊದಲು  ವಿಲನ್ ಕಡೆಯವರಿಂದ ಹೊಡೆತ  ತಿಂದರೂ, ಅವ ತನ್ನ ಅಸಲಿಯತ್ತನ್ನು ತೋರಿಸಲು,  ಅವನ ಒಂದು ಹಲ್ಲು  ಬಲಿಯಾಗಿ  ಒಂದು ತೊಟ್ಟು ರಕ್ತ ಒಸರಬೇಕಾಗುತ್ತದೆ.  ನೋಡಿ, ತನ್ನ  ಹಲ್ಲಿಗೆ ಪೆಟ್ಟಾಗುವುದನ್ನು ಯಾವ ಹೀರೋನೂ ಸೈರಿಸಲಾರ ! ನಂತರ ಆತ, ತನ್ನ  ಹಲ್ಲಿಗೆ  ಕೈ ಹಾಕಿದಾತ  ಫಡ್ಚ ಆಗೋವರೆಗೂ  ವಿರಮಿಸೋದಿಲ್ಲ.

ಇದಾದ very next ಸೀನಿನಲ್ಲಿ ನಾಯಕ-ನಾಯಕಿಯರ ಚುಂಬನ-ಪ್ರಣಯದ  ಹಾಡು ! ನೋಡಿ, ಸಿದ್ಧಸೂತ್ರದ ಚಲನಚಿತ್ರವೊಂದರಲ್ಲಿ ಎಲ್ಲಾ ಸೀನಿನಲ್ಲೂ `ಹಲ್ಲಿನ’ role  ಉಂಟು ! Support character Award ಅದಕ್ಕೇ ದಕ್ಕಬೇಕಲ್ಲವೇ ?!

ಪುರಾಣಗಳಲ್ಲಿಯೂ ಹಲ್ಲಿನಿಂದಾಗಿ  ಕದನಗಳಾಗಿವೆ. ಬಿದ್ದು ಹಲ್ಲು ಮುರ್ದಿದ್ದಕ್ಕೆ ತಾನೇ ಗಣಪ ಚಂದ್ರನಿಗೆ  ಶಾಪ ಕೊಟ್ಟಿದ್ದು !  ಕೃಷ್ಣನಿಗೆ  ಅಪವಾದ ಬಂದು `ಶ್ಯಮಂತಕ ಮಣಿ’  ಕಥೆ ನಡೆದದ್ದು. ಇದರಿಂದಲೇ  ಕೃಷ್ಣ -ಜಾಂಬವತೀ ಪರಿಣಯವಾಗಿ, ನಂತರದ  ಸಂಸಾರದ ಜಗಳ ಶುರು ಆಗಿದ್ದು  ಅಂಬೋದು  ಇಹ-ಸಂಸಾರಿಗರ ಕುಹಕವಷ್ಟೇ.

* * *

ಹಲ್ಲುನೋವು ಎಂದಾಗ, ಎಷ್ಟು ಜನರ  ಮೈ ಜುಂ  ಎನ್ನುತ್ತದೆ – ಖುಷಿಯಿಂದಲ್ಲ ! – ನೋವಿನ ಅನುಭವದ ನೆನಪಿನಿಂದ ! ನರಕದಲ್ಲಿನ ಕುಂಭೀಪಾಕದ ನೋವನ್ನಾದರೂ  ಸಹಿಸಿಯೇನು, ಈ ಹಲ್ಲುನೋವು ನನ್ನಿಂದ ಸಹಿಸಲಾಗದು ಎಂದು ನಾವೆಲ್ಲರೂ  ಸಮಾನಮನಸ್ಕರಾಗಿ  ಅನುಭವಿಸಿದ್ದಿದೆ. ಮನೆ ವೈದ್ಯದನುಗುಣವಾಗಿ  ಲವಂಗ, ಪುಟಾಣಿ, ಹತ್ತಿ ಮತ್ತಿತರ  ಎಲ್ಲ ಆಯುಧಗಳಿಗೂ  ಹಲ್ಲುನೋವು ಬಗ್ಗದಿದ್ದಾಗ, ಹಲ್ಲುನೋವಿಗೆ  ಸೋತು ಶರಣೆಂದು, ದಂತವೈದ್ಯರ ಬಳಿ ಸಾಗುತ್ತೇವೆ. ಹಲ್ಲು ನೋವಿದ್ದಾಗ,  ಹಸಿವಾದರೂ  ತಿನ್ನಲಾಗದ ಸಂಕಟ ! ಅಂಥ ಸಮಯದಲ್ಲೇ ಮನೆಯಲ್ಲಿ  ಚಕ್ಕುಲಿ, ಕೋಡುಬಳೆ ಮಾಡುವುದು ಕಾಕತಾಳೀಯವಷ್ಟೇ. ಸಂತೆಯಲ್ಲಿಯೂ ನಿದ್ರೆ ಮಾಡಬಲ್ಲಂಥ ಶಕ್ತಿಯುಳ್ಳ ನಾನೂ, ಹಲ್ಲು ನೋವಿದ್ದಾಗ ನಿದ್ರಿಸಲಾಗದೇ ಸೋತಿದ್ದಿದೆ. ಹಲ್ಲು ನೋವಿನಿಂದಾಗಿ, `ದೇವರೇ ನನ್ನನ್ನು ಹಲ್ಲಿಲ್ಲದವನನ್ನಾಗಿ ಮಾಡಪ್ಪಾ’ ಎಂದು  ಬೇಡಿಕೊಳ್ಳುತ್ತೇವೆ – ತಾತ್ಕಾಲಿಕ  ಸಿಟ್ಟಿನಿಂದ. ಈ ಹಲ್ಲು ನೋವಿನಲ್ಲಿ  ನಾವು `ಹಲ್ಲು ಕಿತ್ತ ಹಾವಿನಂತೆ’  ಅಸಹಾಯಕರಾಗಿರುತ್ತೇವೆ.

ಹಲ್ಲಿನ ತೊಂದರೆಯ ಇನ್ನೊಂದು ರೂಪ  sensitivity. ತಣ್ಣನೆಯದು, ಬಿಸಿಯಾದ್ದು, ಖಾರವಾದ್ದು ಏನು ತಾಕಿದರೂ,  mild shock  ಹೊಡೆದಂತೆ, ಮೈ ಎಲ್ಲಾ ಜುಂ ಅನ್ನಿಸುವ ಅನುಭವ.  ಐಸ್ ಕ್ರೀಮಿನ ವ್ಯಾಮೋಹ, ಬಿಸಿಯೂಟ (ಶಾಲೆಗಳದ್ದಲ್ಲ, ಮನೆಯ  ಹದವಾಗಿ ಹಬೆಯಾಡುತ್ತಿರುವ ಮೃಷ್ಟಾನ್ನ) ದ  ಆನಂದ‌ ಎಲ್ಲವನ್ನೂ ತ್ಯಜಿಸಿ  ಸನ್ಯಾಸೀ ಜೀವನ ನಡೆಸಬೇಕಾದ ನಿರ್ಭರತೆ !  ಈ ದುರ್ಭರ  ಬಾಳಿಗೆ ಬೆಳಕು ನೀಡಲೆಂದೇ ದಂತವೈದ್ಯರ  ಸೇವಾ ನಿಲಯ‌ಗಳು. ಈಗಂತೂ  ಬೆಂಗಳೂರಿನಂಥ‌ ನಗರಗಳಲ್ಲಿ  ಕುಟುಂಬಕ್ಕೊಂದರಂತೆ ದಂತ ಚಿಕಿತ್ಸಾಲಯಗಳಿವೆ ಎನ್ನುವುದು ಕೇವಲ ಕುಹಕದ ಮಾತಷ್ಟೇ !

* * *

ದಂತ ಪುರಾಣದಲ್ಲಿ ಇಷ್ಟೆಲ್ಲಾ ಆದ ಮೇಲೆ, ದಂತಮಾರ್ಜನದ ಬಗ್ಗೆ ಹೇಳದಿದ್ದರೆ  ಹೇಗೆ? ಮುಂಚೆ, ಸುಮ್ಮನೆ ಹಾಯಾಗಿ  ಬೇವಿನ ಕಡ್ಡಿ, ಇಜ್ಜಲು ಪುಡಿ ಉಪಯೋಗಿಸಿ  ದಂತಮಾರ್ಜನ ಮುಗಿಸುತ್ತಿದ್ದೆವು.  ಆಗ ಯಾವಾಗಾದರೂ ನಾವು ತೊಂದರೆ ಅನುಭವಿಸಿದ್ದುಂಟಾ? ಇಲ್ಲ. ಆದರೆ, ದಂತ  ಸಂರಕ್ಷಣೆಯ ಮೇಲೆ ಪುಂಖಾನುಪುಂಖವಾಗಿ  Phd ಮಾಡಿ, ಇರುವ, ಇರಲಾರದ, ಇರಬಾರದ ತೊಂದರೆಗಳನ್ನೆಲ್ಲಾ ಪಟ್ಟಿ ಮಾಡಿ, ಅವುಗಳಿಗೆ ಏಕಮೇವಾದ್ವಿತೀಯ ಪರಿಹಾರ ತಮ್ಮಿಂದಷ್ಟೇ ಸಾಧ್ಯ ಅನ್ನುತ್ತ ಸಾವಿರದೆಂಟು  tooth paste  ಕಂಪನಿಗಳು ನಮ್ಮ ಮೇಲೆ  ದಾಂಗುಡಿಯಿಟ್ಟಾಗ ನಿಜವಾದ ತೊಂದರೆಗಳು ಆರಂಭವಾದವು.  ಹಲ್ಲಿನ ಸಂಪೂರ್ಣ ಸುರಕ್ಷೆಯ  ಈ ಗುತ್ತಿಗೆದಾರರು , ಇಜ್ಜಲು ಪುಡಿಯ  ಉಪಯೋಗವನ್ನು ಅನಾಗರೀಕವೆಂದು  ಬಿಂಬಿಸಿ, ನಮ್ಮನ್ನು  ಟೂತ್‍ಪೇಸ್ಟ್ ಬಳಕೆಗೆ ಒಗ್ಗಿ ಹೋಗುವಂತೆ ಮಾಡಿದರು.  ಅದೇ ಜನರು ಈಗ, `ನಿಮ್ಮ ಟೂತ್‍ಪೇಸ್ಟಿನಲ್ಲಿ ಬೇವಿನಂಶ ಇದೆಯೇ, ಇಜ್ಜಲಿನಂಶ ಇದೆಯೇ’ ಎಂದು ಜಾಹೀರಾತು  ಹಾಕುತ್ತಿದ್ದಾರೆ.  ಇದೊಂಥರಾ, ಬೀಜೇಪಿಯ `ಘರ್ ವಾಪ್ಸಿ’ ಯಂತಿದೆ ! ಇದನ್ನು ಮೆಚ್ಚಬೇಕೋ, ಅಥವಾ ನಮ್ಮ ಅಜ್ಞಾನಕ್ಕೆ ಬೈದುಕೊಳ್ಳಬೇಕೋ ತಿಳೀವಲ್ದಾಗಿದೆ ! ಈಗಂತೂ  ನಮ್ಮ ಟೂತ್‍ಪೇಸ್ಟ್‍ಗಳಲ್ಲಿ ಉಪ್ಪು, ಜೀರಿಗೆ ಮತ್ತಿನ್ನೇನನ್ನೋ ಸೇರಿಸಿ `ಮಸಾಲಾ ಛಾಟ್’ ನಂತಾಗಿಸಿರುವುದು,  whatsapp ನಲ್ಲೆಲ್ಲ ಹರಿದಾಡ್ತಿದೆ.

* * *

ಒಟ್ಟಿನಲ್ಲಿ ಹಲ್ಲು ಮುಖದ identification.  (ಈ ಮಾತು ಅಪರಾಧ ಶಾಸ್ತ್ರ ಅಭ್ಯಸಿಸುವವರಿಗೆಲ್ಲ ವೇದವಾಕ್ಯ).  ಈ ಹಿಂದೆ ಕಮಲಹಾಸನ್‍ನ  `ಮೈಕೇಲ್ ಮದನ್ ಕಾಮರಾಜನ್’  ಅನ್ನುವ ತಮಿಳು ಚಲನಚಿತ್ರದಲ್ಲಿ, ಆತ ಮಾಡಿದ್ದ  ನಾಲ್ಕು ಪಾತ್ರಗಳ Identification, ಹಲ್ಲುಗಳ  ಮೂಲಕ ಎನ್ನುವುದು ಅದರ ವಿಶೇಷವಾಗಿತ್ತು.  ಅಷ್ಟೇಕೆ, ಹಲ್ಲಿನ ಸೆಟ್ ಉಪಯೋಗಿಸುವ ಮಂದಿಯನ್ನು, ಹಲ್ಲಿನ ಸೆಟ್ ಹಾಕಿಕೊಳ್ಳದಾಗ, ನಾವು ಸರಿಯಾಗಿ ಗುರ್ತಿಸಲಾರೆವು ! ಅಷ್ಟು ಪ್ರಾಮುಖ್ಯ ಈ ಹಲ್ಲಿಗೆ. ಕೆಲವೊಮ್ಮೆ ದೇವರ ಗುರ್ತಿಸುವಿಕೆಗೂ  ಹಲ್ಲಿನ ಅಭಿದಾನ ನೆರವಾಗುತ್ತದೆ. ಯಾಕೆ, ನಮ್ಮ `ಏಕದಂತ’ ಇಲ್ಲವೇ? ಏನಂತೀರಿ ?!

* * *

SAMARAMBHAGALU

ಸಾಹಿತ್ಯಕ್ಕೆ ಸಂಬಂಧಪಟ್ಟದ್ದಾಗಲೀ ಯಾ ಇನ್ನಾವುದೇ ಸಮಾರಂಭಗಳು, ನಮ್ಮ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗಗಳು.  ನಮ್ಮ ಸಂಸ್ಕೃತಿ, ಕಲೆಗಳನ್ನು ಉಳಿಸಿಕೊಳ್ಳುವ ಹಾಗೂ ಬೆಳೆಸಿಕೊಳ್ಳುವ ಸಾಮಾಜಿಕ ಚರ್ಯೆ.  ಆದರೆ, ಇತ್ತೀಚಿನ ಸಮಾರಂಭಗಳಲ್ಲಿ ಯಾಂತ್ರಿಕತೆಯೇ ಮೇಲುಗೈ ಹೊಂದಿ, ನಮ್ಮ ಭಾರತೀಯ ಸಂಸ್ಕೃತಿಗೆ  ಮಾರಕವಾಗುತ್ತಿದೆಯೇನೋ ಎಂಬ ಅನುಮಾನ ಮೂಡಿದೆ, ನನಗೆ. ಇದಕ್ಕೆ, ನನಗನ್ನಿಸುವ  ಮಟ್ಟಿಗೆ, ಮೂಲ ಕಾರಣ, ದೂರದರ್ಶನ.  ಈ ಟಿ.ವಿ.ಯಲ್ಲಿ ಬಿತ್ತರಗೊಳ್ಳುವ ರಿಯಾಲಿಟಿ ಶೋ, ಅಸೀಮ ಅನಂತ ಧಾರಾ ಧಾರಾವಾಹಿಗಳ ಹೊಡೆತಕ್ಕೆ ನಮ್ಮ ಅಭಿರುಚಿಗಳೇ ದಿಕ್ಕು ಪಾಲಾಗಿ ಹೋಗಿವೆ.  ಈ ಕಾರಣಗಳಿಗಾಗಿಯೇ, ಸಭಿಕ, ಸಭಾಧ್ಯಕ್ಷ, ಅತಿಥಿ ಹಾಗೂ  ಕಾರ್ಯಕ್ರಮದ ಮುಖ್ಯ ಹೂರಣಗಳ ನಡುವೆ ಸಂಪರ್ಕವೇ ಇಲ್ಲದೆ ಯಾಂತ್ರಿಕವಾಗಿ ಸಮಾರಂಭಗಳು ನಡೆಸಲ್ಪಡುತ್ತವೆ.  ಇಂಥ ಯಾಂತ್ರಿಕ  ಸಮಾರಂಭಗಳ ಅಸಂಬದ್ಧತೆಗಳ ಬಗ್ಗೆ ನನ್ನ ಒಂದೆರಡು ಮಾತು.
ನೀವು ಯಾವುದೇ ಸಮಾರಂಭಕ್ಕೆ ಅತಿಥಿಯಾಗಿ ಹೋಗುವ ಮುನ್ನ ಆ ಸಭೆ ರಾಜಕೀಯದ್ದೋ ರಾಜಕೀಯೇತರವೋ ಎನ್ನುವುದನ್ನು ನೋಡಿ ಹೋಗಿ. ರಾಜಕೀಯದ್ದಾದಲ್ಲಿ ಅದರಲ್ಲಿ `ಸಮಯ’ ಕ್ಕೆ ಕನಿಷ್ಠ ಪ್ರಾಧಾನ್ಯ. ಬೆಳಿಗ್ಗೆ 10ಕ್ಕೆ ನಿಗದಿಯಾದ ಕಾರ್ಯಕ್ರಮ  ಮಧ್ಯಾಹ್ನ 2ಕ್ಕೆ ಪ್ರಾರಂಭವಾದ್ರೆ ನಿಮ್ಮ ಪುಣ್ಯ. “ಮಾನ್ಯ ———— ರು,  ಇನ್ನೇನು ಐದು ನಿಮಿಷಗಳಲ್ಲಿ ಬರಲಿದ್ದಾರೆ.  ದಯಮಾಡಿ ಸಹಕರಿಸಿ” ಎಂಬ ಸಂಘಟಕರ ಕೂಗು ಪ್ರತಿ ಐದು ನಿಮಿಷಕ್ಕೊಮ್ಮೆ ಮೊಳಗುತ್ತಿರುತ್ತದೆ.  ಹೀಗೆ 3 – 4 ತಾಸಾದ ನಂತರ, ಆ ರಾಜಕಾರಣಿ ಬಂದಾನು. ಇಲ್ಲದಿದ್ದರೆ, ತನ್ನ `ಮೇಘ (!) ಸಂದೇಶ’ವನ್ನು ಕೊಟ್ಟಿರುತ್ತಾನೆ‍_ ಜನರ  `ಜ್ಞಾನವರ್ಧನೆ’ ಗೆಂದು.  ಅವನ ಅನುಪಸ್ಥಿತಿಯಲ್ಲಿ ಯಾವನೋ ಮರಿಪುಡಾರಿ 1-2 ಘಂಟೆಗಳ ಆ `ಚಿಕ್ಕ ಸಂದೇಶ’ವನ್ನು  ಸಭೆಗೆ ತಿಳಿಸುತ್ತಾನೆ.  ಇನ್ನೂ ಕೆಲವೊಮ್ಮೆ ರಾಜಕಾರಣಿಯ ಅಣತಿಯ ಮೇರೆಗೆ, ಸಮಾರಂಭ ಪ್ರಾರಂಭವಾಗಿರುತ್ತದೆ.  ಪ್ರಾರ್ಥನೆಯೋ ಅತಿಥಿ ಭಾಷಣವೋ ಸಾಗುತ್ತಿರುತ್ತದೆ.  ಆಗ ಅವನ ಆಗಮನವಾಗುತ್ತದೆ. ತಕ್ಷಣ ಸಂಘಟನಾ ಕಾರ್ಯದರ್ಶಿ, ಪ್ರಾರ್ಥನೆ  ಮಾಡುತ್ತಿದ್ದವರಿಂದ ಯಾ ಅತಿಥಿಯಿಂದ, ಮೈಕ್ ಕಸಿದುಕೊಂಡು, ರಾಜಕಾರಣಿಯ ಉಧೋಕಾರ ಶುರು ಹಚ್ಚುತ್ತಾನೆ! ಅವಮಾನ ಎಂದೆಣಿಸಿದಿರೋ, ಕೆಟ್ಟಿರಿ. ಅವರ `ಅಭಿಮಾನ ಬಳಗ’ದ  ಧರ್ಮದೇಟಿಗೆ ತುತ್ತಾಗಬೇಕಾದೀತು, ಏನೂ ಅನ್ನಿಸಲಿಲ್ಲವೇ, ನೀವೂ ರಾಜಕಾರಣಿಯಾಗಲು ತಯಾರಿದ್ದೀರೆಂದೇ ಅರ್ಥ.

ಇನ್ನು ರಾಜಕೀಯೇತರ ಸಮಾರಂಭಗಳಲ್ಲಿ ಅತಿಥಿಯಾಗುವುದು ಸುಲಭ ಎಂದೆಣಿಸಿದರೋ, ತಪ್ಪು ಸ್ವಾಮಿ ತಪ್ಪು. ಇಲ್ಲಿಯೂ ನೀವು ನೋಡಬೇಕಾಗಿರುವುದು, ಸಭಾ ಕಾರ್ಯಕ್ರಮದ ನಂತರದ ಸಾಂಸ್ಕೃತಿಕ  ಕಾರ್ಯಕ್ರಮವೇನು ಎಂಬುದನ್ನು. ಅತಿಥಿ ಭಾಷಣದ ನಂತರ, ಯಾವುದೋ ಪ್ರಸಿದ್ಧ ಗಾಯಕ ಯಾ, ನಟ ಯಾ, ರಾಕ್‍ಸ್ಟಾರ್‍ನ ಕಾರ್ಯಕ್ರಮವಿದ್ದಲ್ಲಿ, ನಿಮ್ಮ ಭಾಷಣಕ್ಕೆ 1- 2 ನಿಮಿಷಗಳು ದಕ್ಕುವುದೂ ಕಷ್ಟ. ಭಾಷಣಕ್ಕೆ ತಯಾರಾಗುತ್ತಿದ್ದಂತೆ, ಹಿಂದಿನ ಸಾಲಿನಿಂದ ಬರತೊಡಗುತ್ತವೆ_ ಮಾತಿನ ಕೂರಂಬುಗಳು_ `ಸಾಕು ನಿಲ್ಲಸಲೇ ಮಗನ, ನಮಗೆ ಬೇಕಿರೋದು ಸ್ಟಾರ್‍ನ ಗಾನಾ, ನಿನ್ನ ಬಜಾನಾ ಅಲ್ಲ’ . ಇದು  ಬೇಕೇ?
ಭಾಷಣಕಾರ, ಸಭಿಕರಲ್ಲೂ ವರ್ಗೀಕರಣ ಉಂಟು. ಅಲ್ಲಿಯೂ  ನಾವು ಬಹಳ ಎಚ್ಚರ ವಹಿಸಬೇಕಾಗುತ್ತೆ. ಕೆಲವು ಭಾಷಣಕಾರರಿಗೆ  ಮೈಕ್ ಸಿಕ್ಕರೆ ಬಿಡೋದೇ ಇಲ್ಲ.  ರಾಜಕಾರಣಿಗಳಿಗೆ ಕುರ್ಚಿ ವ್ಯಾಮೋಹ ಇದ್ದಂತೆ ಇವರಿಗೆ ಮೈಕ್ ವ್ಯಾಮೋಹ. ಇಂಥವರೊಂದಿಗೆ `ಚೀಟಿ’  ವ್ಯವಹಾರ (ಭಾಷಣ ಕೊನೆಗೊಳಿಸಲು ಸಾಫ್ಟ್ ಆಗಿ ಹೇಳುವ ರೀತಿ) ಪ್ರಯೋಜನವಿಲ್ಲ, ಪಿಸಿಕಲ್ ಆಗಿ ಕಿತ್ಕೊಂಡಿರೋ, ದೈಹಿಕ ದೌರ್ಜನ್ಯವೆಂದು ಮರುದಿವಸ ಪತ್ರಿಕಾಗೋಷ್ಠಿ ಕರೆಯುತ್ತಾರೆ!
ಶತಶತಮಾನಗಳಿಂದ ಸಿಕ್ಕ ಏಕೈಕ ಅವಕಾಶವೋ ಎಂಬಂತೆ ಮಾತನಾಡುವ‌ ಇವರ‌ ಭಾಷಣದ‌ ಒಂದೇ ಏಟಿಗೆ  ತತ್ತರಿಸಿದ ಸಭಿಕರು  ಜೀವಂತ ಉಳಿದಾರೆಯೇ ಅನ್ನುವುದೂ ಅವರಿಗೆ ಬೇಕಿರುವುದಿಲ್ಲ. ಬಹಳಷ್ಟು  ರಾಜಕಾರಣಿಗಳು ಈ ವರ್ಗದ ಪ್ರಮುಖ ಬಹು ಸಂಖ್ಯಾತರು, ಇವರಿಗೆ ಮಾತನಾಡಲು  ವಿಷಯವೇ ಬೇಡ. ಆದರೂ 1–2  ಘಂಟೆಗಳಷ್ಟು ಅದರ‌ ಬಗ್ಗೆ ಕೊರೆಯುತ್ತಾರೆ.  ಯಾವುದೇ ವಿಷಯವಿರಲಿ ಅದನ್ನು ಪ್ರಸ್ತುತ ರಾಜಕೀಯಕ್ಕೆ ತಂದು, ತಮ್ಮ ಕೆಟ್ಟ ಮುಖದ ಒಳ್ಳೆಯ ಪರಿಚಯ ಮಾಡಿಕೊಡುತ್ತಾರೆ !
ಇನ್ನು ಕೆಲವು ಕೇಸುಗಳು ಉಲ್ಟಾ. ಇಲ್ಲಿ ಭಾಷಣಕಾರರ ಮೇಲೆ ಸಭಿಕರ ಸವಾರಿ. ಸಾಹಿತಿ, ವಿಜ್ಞಾನಿ, ಯಾ ಸಾಮಾಜಿಕ ಸಂಘಟನೆಯಾತ ತಮ್ಮ ದತ್ತ ವಿಷಯದ ಬಗ್ಗೆ ವಿಷಯ  ಜ್ಞಾನದ ವಾಙ್ಮಯವನ್ನು ತೋರುತ್ತಿದ್ದಾಗ, ಸಭಿಕರು  ಅದಕ್ಕೆ ಸರಿಯಾಗಿ ಸ್ಪಂದಿಸುವುದಿರಲಿ, ದಿವ್ಯ ನಿರ್ಲಕ್ಷದಿಂದ, ತಮ್ಮಲ್ಲೇ ಪ್ರಸ್ತುತ ರಾಜಕೀಯದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದರೆ, ಉತ್ತಮ ವಾಗ್ಮಿಗೆ ಇದಕ್ಕಿಂತ‌ ಬೇರೆ ಅಪಮಾನ ಬೇಕೇ? ಕೆಲ ಕಿಡಿಗೇಡಿ ಸಭಿಕರು ಅಂಥವರ ಭಾಷಣಕ್ಕೆ ನಿರಂತರ ತಡೆಯೊಡ್ಡುವುದೂ ಉಂಟು. ಅದಕ್ಕೇ ಹಿಂದೆ ಒಬ್ಬ ಕವಿ ಅಲವತ್ತು ಕೊಂಡಿದ್ದು `ಅರಸಿಕೇಷು ಕವಿತ್ವ ನಿವೇದನಂ, ಶಿರಸಿ ಮಾ ಲಿಖ, ಮಾ ಲಿಖ!’ ಹಾಗಾಗಿ ನೀವು ಅತಿಥಿಗಳಾಗಲು ಒಪ್ಪಿಕೊಳ್ಳುವ ಮುಂಚೆ, ಏನೇನು ಎಚ್ಚರ ವಹಿಸಬೇಕೆಂದು ತಿಳಿಯಿತೇ?
ಇನ್ನು ಸಮಾರಂಭಗಳ ನಡಾವಳಿ. ರಣಾಂಗಣವೇನೋ ಎನ್ನುವಂತೆ, ಇಲ್ಲಿ ಸಂಸ್ಕೃತಿ- ಸಾಹಿತ್ಯದ್ದ‌ಷ್ಟೇ ಅಲ್ಲ, ಭಾಷೆಯ ಕೊಲೆಯೂ ನಡೆಯುತ್ತದೆ.  ಎಂ.ಸಿ., ಅರ್ಥಾತ್, ನಿರೂಪಕ ಎಂಬುವವನ ಮೇಲೆ ಇಡೀ ಸಮಾರಂಭದ ಭಾರ!  ಅವನ ಭಾಷಾ ಸಂವಹನದ ಪರಿಮಿತಿ ಸಮಾರಂಭದ ಸುಸೂತ್ರತೆಯನ್ನು ಕಾಯ್ದುಕೊಳ್ಳುತ್ತದೆ.  ಸಾಕಷ್ಟು ಸರ್ತಿ, ಈ ನಿರೂಪಕರು, `ಅ’ ಕಾರ `ಹ’ ಕಾರ ಸಮೀಕರಣ, ಭಾಷಾ ಪ್ರಯೋಗ ಇತ್ಯಾದಿ ಎಲ್ಲ ಮಾದರಿಯ  ಅತ್ಯಾಚಾರ ಎಸಗಿ ಕನ್ನಡವನ್ನು ಕೊಲೆಗೈಯುತ್ತಾರೆ.  ತಮ್ಮ ಹೆಸರಿಗೆ ತಕ್ಕಂತೆ (Master of Ceremony) ಆಗುವುದುಂಟು, `Ceremony’ ಪದವನ್ನು ನಾವು `ತಿಥಿ’  ಅನ್ನುವುದಕ್ಕೂ ಬಳಸುವುದುಂಟು! ಹಾಗಾಗಿ ಆತ `ತಿಥಿಕರ್ತ’ -ಕನ್ನಡ ಭಾಷೆಯದ್ದು ಮತ್ತು ನಮ್ಮ ಸಂಸ್ಕೃತಿಯದ್ದು!  ಇಂಥವರಿಂದ ಹಾಸ್ಯದ ಹೆಸರಲ್ಲಿ ಅಪಹಾಸ್ಯವಾಗುವುದೇ ಜಾಸ್ತಿ.
ಕೆಲ ಸಮಾರಂಭಗಳಲ್ಲಿ ಸಭಿಕರಿಗಿಂತ ಜಾಸ್ತಿ, `ಅತಿಥಿ’ಗಳೆಂದು ಕರೆಯಿಸಿಕೊಳ್ಳುವ ಭಾಷಣಕಾರರು ಇರುತ್ತಾರೆ. ಅದಕ್ಕೇ ಇರಬೇಕು, ಇತ್ತೀಚೆಗೆ, ಇವರುಗಳ `ಭಾರ’ ತಾಳಲಾರದೇ, ವೇದಿಕೆ ಕುಸಿಯುವುದು ಸಾಮಾನ್ಯ ಆಗಿ ಬಿಟ್ಟಿದೆ! (ಇದೇನು ಮಹಾ, ಬಿಡಿ ನಮ್ಮ ಘನ ಇಂಜಿನೀಯರ್‍ಗಳು ಕಟ್ಟಿದ ಸೇತುವೆಗಳೇ, ಕಟ್ಟಿ ಮುಗಿದ 1 – 2 ದಿನಗಳಲ್ಲೇ ಬೀಳುವಾಗ, ಈ ವೇದಿಕೆಗಳು ಬೀಳೋದ್ರಲ್ಲಿ ವಿಶೇಷವೇನಿದೆ?!) ಇಂಥ ಕಾಳಿಂಗ  ಸರ್ಪದುದ್ದನೆಯ ಪಟ್ಟಿಯ ಅತಿಥಿಗಳ ಸಮಾರಂಭಗಳಲ್ಲಿ ಸ್ವಾಗತ ಭಾಷಣವೇ ಸಮಾರಂಭದ 50% ತೆಗೆದುಕೊಂಡು ಬಿಡುತ್ತೆ. ಕೆಲ ಛಲದಂಕ ಮಲ್ಲ ಭಾಷಣಕಾರರು, ವಿಷಯ ರಾಹಿತ್ಯವಿದ್ದರೂ, ಮೇಜು ಕುಟ್ಟಿ ಕುಟ್ಟಿ, ಮಲಗಿದ್ದ ಸಭಿಕರನ್ನೆಬ್ಬಿಸುತ್ತ ತಮ್ಮ ಓತಪ್ರೋತ ವಾಗ್ಝರಿಯಿಂದ, ತಮ್ಮ ಭಂಡ ವಿಚಾರಗಳ ಮಂಡನೆ ಮಾಡುತ್ತಾರೆ.  ಅಂಥ ಒಂದೆರಡು  ಭಾಷಣಕಾರರಿದ್ದರಂತೂ  ಮುಗೀತು‍‍ ‍_ ಸಭೆಯ ಲಯವೇ ತಪ್ಪಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೊಟಕಾಗುವುದೂ ಉಂಟು! ನಿರೂಪಕ ಬಲಶಾಲಿಯಿದ್ದಾಗ, ಭಾಷಣಕಾರರ ಮೈಕ್ ಕಸಿದು, ಉಳಿದ ಕಾರ್ಯಕ್ರಮಗಳಿಗೆ ಸಮಯ `ಹೊಂದಿಸು’ವುದೂ ಉಂಟು.  ಒಟ್ಟಾರೆ, ಈ ಸಭೆ ಸಮಾರಂಭಗಳು ಮುಖ್ಯ ವಿಷಯವನ್ನು ನೇಪಥ್ಯಕ್ಕೆ ಸರಿಸಿ, ನಿರೂಪಕ ಹಾಗೂ ಭಾಷಣಕಾರರ ನಡುವಿನ ಪರೋಕ್ಷ ಬಲಪ್ರದರ್ಶನದ ಅಖಾಡಾಗಳಾಗಿ ಬಿಟ್ಟಿವೆ.  ಟಿ.ವಿಯಲ್ಲಿನ ಕೆಲ ಸಂದರ್ಶನಗಳನ್ನಿಲ್ಲಿ ಉದಾಹರಿಸಬಹುದು.  ಅಲ್ಲಿಯೂ ಸಂದರ್ಶಕ, ತನ್ನ ಜ್ಞಾನ ಪ್ರದರ್ಶನ ಮಾಡುತ್ತಿರುತ್ತಾನೆಯೇ ಹೊರತಾಗಿ, ಸಂದರ್ಶಿತನ ಮಾತುಗಳಿಗೆ ಅವಕಾಶವನ್ನೇ ಕೊಡದೇ `ಸಂದರ್ಶನ’ಕ್ಕೆ ಅರ್ಥವೇ ಇಲ್ಲದಂತೆ ಮಾಡುತ್ತಾನೆ! ಇದಿ ನ್ಯಾಯಮಾ ಶ್ರೀ ರಾಮಚಂದ್ರ ?!
ಒಮ್ಮೆ ಸಮಾರಂಭವೊಂದರಲ್ಲಿ ನನ್ನನ್ನೂ ಮುಖ್ಯ ಅತಿಥಿಯನ್ನಾಗಿ ಮಾಡಿದ್ದರು.  ಸ್ವಾಗತ ಭಾಷಣದಲ್ಲಿ ನನ್ನ ಹೆಸರನ್ನೇ ತಪ್ಪು ತಪ್ಪಾಗಿ  ಹೇಳಿದರು.  ಸೂಕ್ಷ್ಮವಾಗಿ  ಹೇಳಿ, ಸ್ವಾಗತ ಭಾಷಣ ಕರ್ತನನ್ನು ತಿದ್ದಿದೆ.  ನನ್ನ ಪರಿಚಯದಲ್ಲಿ ನನ್ನ qualification ಗೂ  ಗಂಡಾಂತರ ಬಂತು, ಸಾಯಲಿ, ನನ್ನ ಉದ್ಯೋಗಕ್ಕೂ ಧಕ್ಕೆ ಬರಬೇಕೇ? ಬಂದ ಸಿಟ್ಟನ್ನೆಲ್ಲ ನುಂಗಿ, ನಮ್ರನಾಗಿ, ಸ್ವಾಗತ ಕರ್ತನೆಡೆ ತಿರುಗಿ ನುಡಿದೆ_ “ಅಯ್ಯಾ ತಪ್ಪು ತಪ್ಪಾಗಿ ಹೇಳಬೇಡ, ನಿಜವಾಗಿ ನನ್ನ —” ಅಷ್ಟನ್ನುತ್ತಿದ್ದಂತೆಯೇ, ನನ್ನ ಮಾತನ್ನು ಆತ, ಅರ್ಜುನನಂತೆ, ಅರ್ಧದಲ್ಲಿಯೇ ತುಂಡರಿಸಿ “ಸ್ವಲ್ಪ ಸುಮ್ನಿರ್ತಿರಾ? ಜನ ಬಂದಿರೋದು ನಿಮ್ಮ ಮೂತಿ ನೋಡಲಿಕ್ಕಲ್ಲ. ನಂತರದ ಐಟಂ  ಡ್ಯಾನ್ಸ್ ಕಾಂಪಿಟಿಷನ್‍ಗೆ ತಿಳೀತಾ? ಏನೋ ಸಭೆಯ ಸಂಪ್ರದಾಯಕ್ಕೇ ಅಂತ ಅತಿಥಿಗಳನ್ನು ಕರೆದ್ರೆ —” ಅಂದ! ನನ್ನ ಅದೃಷ್ಟ ಚೆನ್ನಾಗಿತ್ತು, ಆತ ಬಯ್ಯುವಾಗ ಮೈಕ್ ಮುಚ್ಚಿದ್ದ. ಸಂಘಟಕರು, ಕಾರ್ಯವಾಸೀ ಕತ್ತೆ ಕಾಲು ಕಟ್ಟಿ, ಅತಿಥಿಗಳನ್ನು ಕರೆ ತಂದಿರ್ತಾರೆ, ನಿರೂಪಕರಿಗೇನು ಮುಲಾಜು ಹೇಳಿ?!
ಸಭಿಕರಿಗೇನು ಬೇಕು ಎನ್ನುವ ನಾಡಿಮಿಡಿತವನ್ನು ನಿರೂಪಕರು ಈಗ ಚೆನ್ನಾಗಿ ಅರಿತಿದ್ದಾರೆ. ಅದಕ್ಕಾಗಿಯೇ ಈಗ `ವಂದನಾರ್ಪಣೆ’ ಕಾರ್ಯಕ್ರಮ, ಸಮಾರಂಭದ ಕೊನೆಯಲ್ಲಿರುವುದಿಲ್ಲ.  ಸಾಂಸ್ಕೃತಿಕ  ಕಾರ್ಯಕ್ರಮ ಯಾ ಭೋಜನ ಕಾರ್ಯಕ್ರಮದ ಮುನ್ನವೇ ವಂದನಾರ್ಪಣೆಯನ್ನು ಮುಗಿಸಿ ಬಿಡುತ್ತಾರೆ. ಇಲ್ಲವಾದಲ್ಲಿ ವಂದನಾರ್ಪಣೆ ಕಾರ್ಯಕ್ರಮಕ್ಕೆ ಸಭಿಕರು ಪೂರಾ ಖಾಲಿಯಾಗಿ, ಮಾಡುವಾತನಿಗೂ ಬೇಜಾರು, ಉಳಿದವರಿಗೂ ಬೋರು!
ಭಾಷಾ ಅಧ್ಯಯನ ಮಾಡುವವರು, ಕ್ಲೀಷಾಲಂಕಾರಕ್ಕೆ ಉದಾಹರಣೆ  ಬೇಕಿದ್ದಲ್ಲಿ ಸಮಾರಂಭವೊಂದಕ್ಕೆ ಹೋದರೆ ಸಾಕು. ಅವರಿಗೆ ಸಾಕು ಬೇಕಿನಿಸುವಷ್ಟು ಸಿಕ್ಕಾವು. ಸ್ವಾಗತಕರ್ತ ಮುಖ್ಯ ಅತಿಥಿಯನ್ನು ಪರಿಚಯಿಸುವಾಗ, ಅವರ ಬಗ್ಗೆ ಏನೆಲ್ಲಾ ಹೇಳಿ (ಅತಿಥಿಗಳಿಗೆ, ಆ ಪರಿಚಯ ತಮ್ಮದೋ ಅಥವಾ ಬೇರೆಯವರದ್ದೋ ಎಂದು ಗೊಂದಲ ಮೂಡಿಸಿ), “ಮಾನ್ಯರು ಎಷ್ಟೆ busy ಇದ್ದರೂ, ನಮ್ಮ ಕರೆಗೆ ಓಗೊಟ್ಟು, ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಇಲ್ಲಿಗೆ ಬಂದಿರುತ್ತಾರೆ” ಎಂದೇ ಹೇಳುವಾತ. ಅತಿಥಿಯಾಗಿ  ಬಂದಾತನಿಗೆ  ಕೆಲಸದ ಮೇಲೆ ನಿಷ್ಠೆ ಇಲ್ಲ ಅಂತ ಪರೋಕ್ಷವಾಗಿ ಹೇಳುವುದಾ ಇದು?  ಇನ್ನು ಪತ್ರಿಕಾ ವರದಿಗಳೂ ಇದಕ್ಕೆ ಭಿನ್ನವೇನಿಲ್ಲ.  ಕೆಲ ಪತ್ರಿಕಾ  ವರದಿಗಳು ಪತ್ರಿಕಾ  ಗೋಷ್ಠಿಗೆ ಮುನ್ನವೇ ತಯಾರಿರುತ್ತವೆಯೆನ್ನುವುದು ಸುಳ್ಳೇನಲ್ಲ.  `ಸಭೆಗೆ ಕಳೆ ಕಟ್ಟಿತ್ತು’ ‘ಎಂದು ಹೇಳಲು ಮರೆಯಲಿಲ್ಲ” “ಅವರು ತರಾಟೆಗೆ ತೆಗೆದುಕೊಂಡರು — ಇವರು ಎದಿರೇಟು ನೀಡಿದರು —- “ಅವರ ಸಾವಿನಿಂದ ತುಂಬಲಾರದ ನಷ್ಟ” ಇಂಥ  ಕ್ಲೀಷಾಲಂಕಾರ  ಇಲ್ಲದ ಪತ್ರಿಕಾ ವರದಿಯನ್ನೊಮ್ಮೆ ತೋರಿಸಿ ನೋಡೋಣ. ಇವೆಲ್ಲ `ಪತ್ರಿಕಾ ಭಾಷೆ’ ಆಗಿ ಬಿಟ್ಟಿದೆ.  ಹಾಗಾಗಿಯೇ, ಒಮ್ಮೆ ನಾನು ಅತಿಥಿಯಾಗಿದ್ದ ಸಭೆಯ ಪತ್ರಿಕಾ ವರದಿ ನನಗೇ ಹೊಸತು ಆಗಿತ್ತು!   ನಾನು ಹೇಳಿದ್ದೆಲ್ಲ  ಬಿಟ್ಟು, ತಾನು ಹೇಳಬೇಕಾಗಿದ್ದನ್ನವೆಲ್ಲ ನನ್ನ ಬಾಯಿಂದ ಉದುರಿಸಿದ್ದ,  ಆ ವರದಿಗಾರ ಮಹಾಶಯ! ನಾನು ತಾನೇ ಏನು ಮಾಡಿಯೇನು?
ನೋಡಿ, ದಾರ ಪೋಣಿಸಿದ ಮಣಿಗಳಂತಿರದೇ, ಚೆಲ್ಲಾಪಿಲ್ಲಿಯಾದ ಮಣಿಗಳಂತೆ ಸಂಘಟಕ,  ನಿರೂಪಕ, ಅತಿಥಿ ಹಾಗೂ ಸಭಿಕರು ಒಬ್ಬೊರಿಗೊಬ್ಬರು unconnect ಆಗಿರುವುದರ ಪರಿಣಾಮವೇ ಈ ಯಾಂತ್ರಿಕ ಸಭೆ-ಸಮಾರಂಭಗಳು